ಆಸ್ಟ್ರೇಲಿಯ ಖಂಡ(Australia Continent)
 
• ಆಸ್ಟ್ರೇಲಿಯ ಖಂಡವು ಪೂರ್ಣವಾಗಿ ದಕ್ಷಿಣ ಮತ್ತು ಪೂರ್ವ ಗೋಳಾರ್ಧದಲ್ಲಿದೆ.
• ವಿಸ್ತೀರ್ಣ ಮತ್ತು ಜನಸಂಖ್ಯೆಗಳೆರಡರಲ್ಲೂ ಆಸ್ಟ್ರೇಲಿಯವು ಪ್ರಪಂಚದಲ್ಲಿ ಚಿಕ್ಕ ಭೂಖಂಡ.
• ತಾಸ್ಮೇನಿಯ ದ್ವೀಪವೂ ಸೇರಿದಂತೆ ಇದರ ಒಟ್ಟು ವಿಸ್ತೀರ್ಣ 76.82 ಲಕ್ಷ ಚ.ಕಿ.ಮೀ. ಗಳು.
• ಪ್ರಪಂಚದ ಏಳನೆಯ ಭೂಖಂಡವಾಗಿರುವ ಇದು ದಕ್ಷಿಣೋತ್ತರವಾಗಿ 3,940 ಕಿ.ಮೀ. ಉದ್ದ ಮತ್ತು ಪೂರ್ವಪಶ್ಚಿಮವಾಗಿ 4,350 ಕಿ.ಮೀ. ಅಗಲವಾಗಿದೆ. ಇದರ ಸಮುದ್ರ ತೀರದ ಉದ್ದ 19,310 ಕಿ.ಮೀ.ಗಳು.
ಪ್ರಾಕೃತಿಕ ಲಕ್ಷಣಗಳು
• ಆಸ್ಟ್ರೇಲಿಯವು ಮೂಲತಃ ಗೊಂಡ್ವಾನ ಭೂರಾಶಿಯ ಒಂದು ಭಾಗವಾಗಿದ್ದು ಅತ್ಯಂತ ಪುರಾತನವಾದುದು.
• ಉನ್ನತ ಪ್ರದೇಶ: ಇದು ಖಂಡದ ಪೂರ್ವಭಾಗದಲ್ಲಿದ್ದು ಉತ್ತರದಲ್ಲಿ ಯಾರ್ಕ್ ಭೂಶಿರದಿಂದ ದಕ್ಷಿಣದಲ್ಲಿ ತಾಸ್ಮೇನಿಯದ ಬಾಸ್ ಜಲಸಂಧಿಯವರೆಗೆ ವಿಸ್ತರಿಸಿದೆ. ಹೆಚ್ಚು ಕಡಿಮೆ ಪೂರ್ವ ಕರಾವಳಿಗೆ ಹೊಂದಿಕೊಂಡಂತಿರುವ ಈ ಪರ್ವತ ಸರಣಿಗಳ ಪೂರ್ವ ಭಾಗ ಕಡಿದಾಗಿಯೂ ಮತ್ತು ಪಶ್ಚಿಮ ಭಾಗವು ಇಳಿಜಾರಿನಿಂದ ಕೂಡಿದೆ.
• ಎತ್ತರವಾದ ಶಿಖರಗಳು ಚಳಿಗಾಲದಲ್ಲಿ ಹಿಮಾವೃತವಾಗಿರುತ್ತವೆ. ಈ ಭಾಗದ ಕೊಸಿಯುಸ್ಕೊ (2230 ಮೀ.) ಖಂಡದ ಅತಿ ಎತ್ತರವಾದ ಶಿಖರ.
• ಆಸ್ಟ್ರೇಲಿಯದ ಪೂರ್ವ ತೀರದಿಂದಾಚೆ ದಕ್ಷಿಣೋತ್ತರವಾಗಿ "ಗ್ರೇಟ್ ಬ್ಯಾರಿಯರ್ ರೀಫ್'' ಎಂಬ ಹವಳ ದಿಣ್ಣೆಗಳು (2000 ಕಿ.ಮೀ.) ಹಬ್ಬಿವೆ.
• 2. ಮಧ್ಯದ ತಗ್ಗುಮೈದಾನ: ಉತ್ತರದಲ್ಲಿ ಕಾರ್ಪೆಂಟೇರಿಯ ಕೊಲ್ಲಿಯಿಂದ ದಕ್ಷಿಣದ ಮರ್ರೆ
• ಬಯಲಿನವರೆಗೆ ಈ ತಗ್ಗು ಮೈದಾನ ಹರಡಿದೆ. ಇದು ಪೂರ್ವ ಉನ್ನತ ಭಾಗದಿಂದ ಪಶ್ಚಿಮಕ್ಕಿದ್ದು,
• ಆಂತರಿಕ ಜಲವ್ಯವಸ್ಥೆಯಿಂದ ಕೂಡಿದೆ. ಇದರ ಮಧ್ಯಭಾಗದಲ್ಲಿರುವ ಐರ್ ಸರೋವರದ ಕಡೆಗೆ
• ನದಿಗಳು ಹರಿಯುತ್ತವೆ. ಪ್ರಪಂಚದ ಪ್ರಸಿದ್ಧ ಆರ್ಟೀಸಿಯನ್ ನೀರಿನ ಬಾವಿಗಳನ್ನು ಕಾಣಬಹುದು.
• ಪಶ್ಚಿಮದ ಪ್ರಸ್ಥಭೂಮಿ: ಇದು ಕಾರ್ಪೆಂಟೇರಿಯ ಕೊಲ್ಲಿಯಿಂದ ಆನ್ಸ್ಲೊ, ಪರ್ತ್ ಮತ್ತು ಆಲ್ಬೇನಿಯವರೆಗೆ ಹರಡಿದೆ. ಆಸ್ಟ್ರೇಲಿಯದ ಮೂರನೆ ಒಂದು (1/3) ಭಾಗವನ್ನಾವರಿಸಿದ ಏರುತಗ್ಗುಳ್ಳ ಪ್ರಸ್ಥಭೂಮಿ. ಇಲ್ಲಿ ಕೆಲವು ಪ್ರಸಿದ್ಧ ಮರುಭೂಮಿಗಳಿವೆ. ಉದಾಹರಣೆಗೆ ಗ್ರೇಟ್ ಸ್ಯಾಂಡಿ ಡೆಸರ್ಟ್, ಗಿಬ್ಸನ್ ಮತ್ತು ವಿಕ್ಟೋರಿಯ ಮರುಭೂಮಿಗಳು.
ನದಿಗಳ ವ್ಯವಸ್ಥೆ
• ಮರ್ರೆ ಆಸ್ಟ್ರೇಲಿಯದ ಅತಿ ಪ್ರಮುಖವಾದ ನದಿ. ಇದು ಕೊಸಿಯುಸ್ಕೊ ಶಿಖರದ ಬಳಿ ಉಗಮ ಹೊಂದಿ ಆರಂಭದಲ್ಲಿ ಪಶ್ವಿಮ ಹಾಗೂ ನೈಋತ್ಯಕ್ಕೆ ಹರಿದು (2,590 ಕಿ.ಮೀ.) ಎನ್ಕೌಂಟರ್ ಕೊಲ್ಲಿಯನ್ನು ಸೇರುತ್ತದೆ. ಡಾರ್ಲಿಂಗ್, ಲಾಚ್ಲಾನ್ ಮತ್ತು ಮುರ್ರಂಬಿಡ್ಜ್ ಎಂಬವು ಈ ನದಿಯ ಮುಖ್ಯ ಉಪನದಿಗಳು.
• ಈಶಾನ್ಯ ಭಾಗದಲ್ಲಿನ ಮಿಟ್ಜೆಲ್, ಗಿಲ್ಬರ್ಟ್ ಮತ್ತು ಫ್ಲಿಂಡರ್ಸ್ ನದಿಗಳು ವಾಯುವ್ಯಕ್ಕೆ ಹರಿಯುತ್ತವೆ. ಮತ್ತು ಕಾರ್ಪೆಂಟರಿಯ ಕೊಲ್ಲಿಯನ್ನು ಸೇರುತ್ತವೆ.
• ಡಾಲಿ, ವಿಕ್ಟೋರಿಯ, ವೆಸ್ಟ್ ಫಿಡ್ಜರಾಯ್ ಮತ್ತು ಇತರ ನದಿಗಳು ಉತ್ತರಾಭಿಮುಖವಾಗಿ ಹರಿದು ಟಿಮೋರ್ ಸಮುದ್ರವನ್ನು ಸೇರುತ್ತವೆ.
ವಾಯುಗುಣ
ಆಸ್ಟ್ರೇಲಿಯದ ಮಧ್ಯದಲ್ಲಿ ಮಕರ ಸಂಕ್ರಾಂತಿ ವೃತ್ತವು ಹಾಯ್ದು ಹೋಗಿದೆ. ಹೀಗಾಗಿ ಆಸ್ಟ್ರೇಲಿಯದಲ್ಲಿ ಉಷ್ಣವಲಯ ಮತ್ತು ಉಪ ಉಷ್ಣವಲಯದ ವಾಯುಗುಣವಿದೆ. ಖಂಡದ ಬಹಳಷ್ಟು ಭಾಗದಲ್ಲಿ ವರ್ಷವಿಡೀ ಅಧಿಕ ಉಷ್ಣ0ಶವಿರುತ್ತದೆ.. ಪಶ್ಚಿಮ ತೀರದಲ್ಲಿ ಶೀತಸಾಗರ ಪ್ರವಾಹ ಹರಿಯುತ್ತದೆ. ಇದರಿಂದ ಆಸ್ಟ್ರೇಲಿಯದ ಪಶ್ಚಿಮ ಭಾಗ ಮರುಭೂಮಿ ಮತ್ತು ಶುಷ್ಕ ವಾಯುಗುಣವನ್ನು ಹೊಂದಿದೆ. ಉತ್ತರ ಭಾಗಗಳಲ್ಲಿ ಮಾನ್ಸೂನ್ ಮತ್ತು ದಕ್ಷಿಣ ಕರಾವಳಿಯಲ್ಲಿ ಮೆಡಿಟರೇನಿಯನ್ ಮಾದರಿ ವಾಯುಗುಣವಿದೆ.
ಸ್ವಾಭಾವಿಕ ಸಸ್ಯವರ್ಗ
• ದಟ್ಟವಾದ ಕಾಡುಗಳ ಕೊರತೆಯು ಆಸ್ಟ್ರೇಲಿಯದ ಪ್ರಮುಖ ಲಕ್ಷಣ. ಖಂಡದ ಬಹಳಷ್ಟು ಭಾಗವು ಹುಲ್ಲುಗಾವಲು, ಕುರುಚಲು ಸಸ್ಯ ಮತ್ತು ತೆರೆದ ವಿರಳವಾದ ಮರಗಳಿಂದ ಕೂಡಿದ ಸಸ್ಯವರ್ಗವನ್ನು ಹೊಂದಿದೆ.
• ಉಷ್ಣವಲಯದ ಕಾಡುಗಳು: ಹೆಚ್ಚು ಮಳೆ ಬೀಳುವ ಉತ್ತರ ಮತ್ತು ಈಶಾನ್ಯ ಕರಾವಳಿ ಪ್ರದೇಶಗಳಲ್ಲಿ ಇಂತಹ ಕಾಡುಗಳಿವೆ. ಇಲ್ಲಿ ಬೆಳೆಯುವ ಪ್ರಮುಖ ಮರಗಳೆಂದರೆ ಆ್ಯಶ್, ಸಿಡಾರ್, ಬೀಚ್ ಮತ್ತು ತಾಳೆ.
• ಸಮಶೀತೋಷ್ಣವಲಯದ ಕಾಡುಗಳು: ಇಂತಹ ಕಾಡುಗಳು ಪರ್ವತ ಮತ್ತು ಬೆಟ್ಟಗುಡ್ಡಗಳಲ್ಲಿ ಕಂಡು ಬರುತ್ತವೆ. ಅವು ಹೆಚ್ಚಾಗಿ ಕ್ವೀನ್ಸ್ಲ್ಯಾಂಡ್, ನ್ಯೂಸೌತ್ವೇಲ್ಸ್, ವಿಕ್ಟೋರಿಯ ಮತ್ತು ತಾಸ್ಮೇನಿಯಗಳಲ್ಲಿ ಹಂಚಿಕೆಯಾಗಿವೆ. ಇಲ್ಲಿನ ಪ್ರಮುಖ ಮರಗಳೆಂದರೆ ನೀಲಗಿರಿ, ಪೈನ್, ಕಳ್ಳಿ ಇತ್ಯಾದಿ.
• ಹುಲ್ಲುಗಾವಲು:ಸಮಶೀತೋಷ್ಣವಲಯದ ಹುಲ್ಲುಗಾವಲಿನಲ್ಲಿ ಪೊದೆ ಹುಲ್ಲು, ಮಿಚೆಲ್ ಮತ್ತು ಅಟ್ರೇಬಲ್ ಹುಲ್ಲು ಪ್ರಭೇದಗಳು ಕಂಡುಬರುತ್ತವೆ. ಪೊದೆ ಹುಲ್ಲುಗಾವಲು ಕುರಿ ಸಾಕಾಣೆಗೆ ಯೋಗ್ಯವಾಗಿರುವುದರಿಂದ ಇದರ ಸುತ್ತ ಅತಿ ಹೆಚ್ಚು ಕುರಿ ಸಾಕಾಣಿಕೆ ಕಂಡ ಬರುತ್ತದೆ.
• ಮರುಭೂಮಿ ಸಸ್ಯವರ್ಗ: ಪಶ್ಚಿಮ ಆಸ್ಟ್ರೇಲಿಯದ ಕೇಂದ್ರ ಮತ್ತು ಪೂರ್ವ ಭಾಗದಲ್ಲಿ ಈ ಸಸ್ಯವರ್ಗ ಹಂಚಿಕೆಯಾಗಿದೆ. ಇಲ್ಲಿ ಕಳ್ಳಿಜಾತಿ ಮರಗಳು, ಸಾಲ್ಟ್ಬುಶ್, ಕುಬ್ಜಹುಲ್ಲು ಹಾಗೂ ವಿವಿಧ ಮುಳ್ಳಿನ ಗಿಡಗಂಟಿಗಳು ಬೆಳೆಯುತ್ತವೆ
ಖನಿಜಗಳು
• ಆಸ್ಟ್ರೇಲಿಯದಲ್ಲಿ ಸಾಕಷ್ಟು ಖನಿಜ ಸಂಪತ್ತಿದೆ. ಕಬ್ಬಿಣದ ಅದಿರು, ಬಾಕ್ಸೈಟ್, ಸತು, ನಿಕ್ಕಲ್, ತಾಮ್ರ, ಮ್ಯಾಂಗನೀಸ್, ಚಿನ್ನ, ತವರ, ಸೀಸ ಮತ್ತು ಯುರೇನಿಯಂ ಪ್ರಮುಖ ಖನಿಜಗಳು.
• ಇಂಧನ ಖನಿಜಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳೂ ಸಹ ದೊರೆಯುತ್ತವೆ. ಇವುಗಳಲ್ಲಿ ಅನೇಕ ಖನಿಜಗಳು ರಫ್ತಾಗುತ್ತವೆ.
• ಆಸ್ಟ್ರೇಲಿಯ ಒಂದು ಪ್ರಮುಖ ಕಬ್ಬಿಣದ ಅದಿರು ಉತ್ಪಾದಿಸುವ ದೇಶ. ಅತ್ಯಧಿಕ ಪ್ರಮಾಣದ ಕಬ್ಬಿಣದ ಅದಿರು ಜಪಾನಿಗೆ ರಫ್ತಾಗುತ್ತದೆ. ಐರನ್ನಾಬ್, ಐರನ್ ಮಾನಾರ್ಕ್, ಐರನ್ ಬೇರನ್ಹಿಲ್, ಪಿಲ್ಬಾರ ಮತ್ತು ಯಾಂಪಿಗಳು ಪ್ರಮುಖ ಕಬ್ಬಿಣದ ಅದಿರು ಉತ್ಪಾದಕ ಪ್ರದೇಶಗಳು.
• ಪ್ರಪಂಚದಲ್ಲೆ ಹೆಚ್ಚು ಬಾಕ್ಸೈಟ್ ನಿಕ್ಷೇಪವು ಆಸ್ಟ್ರೇಲಿಯದಲ್ಲಿದೆ. ವೈಪ, ಗೋವ್, ಮಿಚೆಲ್ ಪ್ರಸ್ಥಭೂಮಿ ಮತ್ತು ಜರ್ರ್ಹಾಂಡಲೆಗಳು ಪ್ರಮುಖ ಬಾಕ್ಸೈಟ್ ಉತ್ಪಾದಿಸುವ ಭಾಗಗಳು. ಆಸ್ಟ್ರೇಲಿಯ ಪ್ರಪಂಚದಲ್ಲಿ ಅತಿ ಹೆಚ್ಚು ಬಾಕ್ಸೈಟ್ ಉತ್ಪಾದಿಸುತ್ತದೆ.
• ಪಶ್ಚಿಮ ಆಸ್ಟ್ರೇಲಿಯದ ಕೂಲ್ಗಾರ್ಡಿ ಮತ್ತು ಕಾಲ್ಗೂರ್ಲಿಗಳು ಪ್ರಸಿದ್ಧ ಚಿನ್ನ ಉತ್ಪಾದಿಸುವ ಕೇಂದ್ರಗಳಾಗಿವೆ. ನ್ಯೂಸೌತ್ವೇಲ್ಸ್, ವಿಕ್ಟೋರಿಯ ಮತ್ತು ಕ್ವೀನ್ಸ್ಲ್ಯಾಂಡಗಳಲ್ಲಿಯು ಚಿನ್ನ ದೊರೆಯುತ್ತದೆ.
• ನ್ಯೂಸೌತ್ವೇಲ್ಸ್ನಲ್ಲಿ ಹೆಚ್ಚು ತಾಮ್ರ ಉತ್ಪಾದನೆಯಾಗುತ್ತದೆ. ಹಾಗೆಯೇ ಕಾರ್ಪೆಂಟೇರಿಯ ಕೊಲ್ಲಿ ಪ್ರದೇಶವು ಮ್ಯಾಂಗನೀಸ್ ಉತ್ಪಾದನೆಯಲ್ಲಿ ಮುಂದಿದೆ.
• ಆಸ್ಟ್ರೇಲಿಯವು ಅತ್ಯಧಿಕ ಪ್ರಮಾಣದ ಯುರೇನಿಯಂ ನಿಕ್ಷೇಪವನ್ನು ಹೊಂದಿದೆ. ಅದು ಹೆಚ್ಚಾಗಿ ಕ್ವೀನ್ಸ್ಲ್ಯಾಂಡ್ ಉತ್ತರ ಪ್ರಾಂತ್ಯ (60%), ಪಶ್ಚಿಮ ಆಸ್ಟ್ರೇಲಿಯ ಮತ್ತು ದಕ್ಷಿಣ ಆಸ್ಟ್ರೇಲಿಯದಲ್ಲಿ ದೊರೆಯುತ್ತದೆ.
• ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳು ಆಸ್ಟ್ರೇಲಿಯಾದಲ್ಲಿ ಪ್ರಮುಖ ಶಕ್ತಿಸಂಪನ್ಮೂಲಗಳಾಗಿವೆ.
ಕೈಗಾರಿಕೆಗಳು
ಆಸ್ಟ್ರೇಲಿಯದ ಕೆಲವು ಪ್ರಮುಖ ಕೈಗಾರಿಕೆಗಳು ಈ ಕೆಳಕಂಡಂತಿವೆ.
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಜವಳಿ ಉದ್ಯಮ
ಸ್ವಚಾಲಿತ ವಾಹನ ಕೈಗಾರಿಕೆ
ಕಾಗದ, ರಟ್ಟು ಮತ್ತು ಮರದ ತಿರುಳು
ಹಡಗು ನಿರ್ಮಾಣ
ತೈಲ ಶುದ್ಧೀಕರಣ
ಜನಸಂಖ್ಯೆ
ಈಗಾಗಲೇ ತಿಳಿಸಿದಂತೆ ಆಸ್ಟ್ರೇಲಿಯ ಖಂಡವು ವಿಸ್ತೀರ್ಣದಲ್ಲಿ ಮಾತ್ರವಲ್ಲ ಜನಸಂಖ್ಯೆಯಲ್ಲೂ ಚಿಕ್ಕದು. ಇದರ ಒಟ್ಟು ಜನಸಂಖ್ಯೆ 20.0 ದಶಲಕ್ಷ (2012). ಇದು ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇ.0.31 ಭಾಗದಷ್ಟು ಮಾತ್ರ ಹೊಂದಿದೆ. ಪ್ರಪಂಚದ ಅತಿ ಕಡಿಮೆ ಜನಸಾಂದ್ರತೆವುಳ್ಳ ದೇಶಗಳಲ್ಲಿ ಆಸ್ಟ್ರೇಲಿಯವು ಒಂದಾಗಿದೆ. ಇದರ ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿಲೋ ಮೀಟರ್ಗೆ ಮೂರು ಜನರು ಮಾತ್ರ.