ಏಷ್ಯಾ ಖಂಡ(Asia continent)
 
• ಪ್ರಪಂಚದ ಭೂಖಂಡಗಳಲ್ಲಿ ಏಷ್ಯ ದೊಡ್ಡದು. ಹೀಗಾಗಿ ಅದು ಪ್ರಾಕೃತಿಕ ಲಕ್ಷಣ, ವಾಯುಗುಣ, ಸಸ್ಯವರ್ಗ, ವನ್ಯಜೀವಿ, ಮಣ್ಣಿನ ಪ್ರಕಾರ ಮೊದಲಾದವುಗಳಲ್ಲಿ ವೈವಿಧ್ಯ ಹೊಂದಿದೆ.
• ಏಷ್ಯಾ ಖಂಡದಲ್ಲಿ ಅತ್ಯಂತ ಎತ್ತರವುಳ್ಳ ಪರ್ವತ, ಪ್ರಸ್ಥಭೂಮಿ, ಫಲವತ್ತಾದ ವಿಶಾಲ ಮೈದಾನ, ಮರುಭೂಮಿ, ನದಿ ವ್ಯವಸ್ಥೆ ಮತ್ತು ಸರೋವರಗಳು ಕಂಡುಬರುತ್ತವೆ.
• ಮಲೇಷ್ಯದಿಂದ ಸ್ವಲ್ಪ ದಕ್ಷಿಣದಲ್ಲಿ ಭೂಮಧ್ಯರೇಖೆ ಹಾಗೂ ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತ ಮತ್ತು ಅರೇಬಿಯಗಳ ಮೂಲಕ ಹಾಯ್ದು ಹೋಗಿವೆ.
• ಏಷ್ಯಖಂಡದ ಒಟ್ಟು ಭೌಗೋಳಿಕ ವಿಸ್ತೀರ್ಣ ಸುಮಾರು 44 ಮಿಲಿಯನ್ ಚ.ಕಿ.ಮೀ.ಗಳು. ಇದು ಪ್ರಪಂಚದ ಮೇಲ್ಮೈ ವಿಸ್ತೀರ್ಣದಲ್ಲಿ ಶೇ.33 ರಷ್ಟು ಭಾಗ ಹೊಂದಿದೆ. ಈ ಖಂಡವು ಪೂರ್ಣವಾಗಿ ಉತ್ತರ ಗೋಳಾರ್ಧದಲ್ಲಿದೆ.
• ಏಷ್ಯಾ ಖಂಡವು ಮೂರು ಕಡೆ ಸಾಗರಗಳು ಮತ್ತು ಒಂದು ಕಡೆ ಭೂಭಾಗದಿಂದಾವರಿಸಿದೆ. ಸುತ್ತುವರಿದಿರುವ ಸಾಗರಗಳೆಂದರೆ: ಉತ್ತರದಲ್ಲಿ ಆಕ್ರ್ಟಿಕ್, ಪೂರ್ವಭಾಗದಲ್ಲಿ ಪೆಸಿಫಿಕ್ ಮತ್ತು ದಕ್ಷಿಣದಲ್ಲಿ ಹಿಂದೂಸಾಗರಗಳು. ಪಶ್ಚಿಮಕ್ಕೆ ಯೂರೋಪ್ ಖಂಡವಿದೆ.
ಪ್ರಾದೇಶಿಕ ವಿಭಾಗಗಳು
• ಇಂದು ಏಷ್ಯದಲ್ಲಿ 48 ದೇಶಗಳಿವೆ. ಅವುಗಳನ್ನು ಕೆಳಕಂಡಂತೆ ಐದು ಪ್ರಾದೇಶಿಕ ಗುಂಪುಗಳಾಗಿ ವಿಂಗಡಿಸಲಾಗಿದೆ.
1. ಪೂರ್ವ ಏಷ್ಯ: ಇದರಲ್ಲಿ ಚೀನ, ಉತ್ತರ ಮತ್ತು ದಕ್ಷಿಣ ಕೊರಿಯ, ಜಪಾನ್, ಹಾಂಕ್ಕಾಂಗ್, ತೈವಾನ್ ಮತ್ತು ಮಂಗೋಲಿಯ ದೇಶಗಳು ಸೇರಿವೆ. ಇದು ಉತ್ತರದಲ್ಲಿ ವಿಶಾಲವಾದ ರಷ್ಯ, ದಕ್ಷಿಣದಲ್ಲಿ ದಕ್ಷಿಣ ಏಷ್ಯ ಮತ್ತು ಆಗ್ನೇಯ ಏಷ್ಯಗಳ ನಡುವೆ ವಿಸ್ತರಿಸಿದೆ.
2. ಆಗ್ನೇಯ ಏಷ್ಯ: ಇದು ಮಯನ್ಮಾರ್, ಲಾವೋಸ್, ವಿಯೆಟ್ನಾಂ, ಥೈಲೆಂಡ್, ಕಾಂಬೋಡಿಯಾ, ಮಲೇಷ್ಯ, ಇಂಡೊನೇಷ್ಯ, ಸಿಂಗಾಪುರ, ಬ್ರುನ್ಹೆ ಮತ್ತು ಫಿಲಿಪ್ಪೈನ್ಸ್ ದೇಶಗಳನ್ನೊಳಗೊಂಡಿದೆ. ಇದೊಂದು ಪರ್ಯಾಯ ದ್ವೀಪ. ದ್ವೀಪ ಸಮೂಹಗಳ ಪ್ರದೇಶ. ಉದಾ: ಸುಮಾತ್ರ, ಜಾವ, ಸುಲಾವೇಶಿ, ಬೋರ್ನಿಯೊ, ಪಾಪುವ ಇತ್ಯಾದಿ. ಇದರ ಪಶ್ಚಿಮಕ್ಕೆ ಹಿಂದೂಸಾಗರ ಮತ್ತು ಪೂರ್ವಕ್ಕೆ ಪೆಸಿಫಿಕ್ ಸಾಗರಗಳಿವೆ.
3. ದಕ್ಷಿಣ ಏಷ್ಯ: ಇದು ಭಾರತ, ಬಾಂಗ್ಲಾದೇಶ, ಭೂತಾನ, ನೇಪಾಲ, ಪಾಕಿಸ್ತಾನ, ಶ್ರೀಲಂಕ ಮತ್ತು ಮಾಲ್ಡೀವ್ಸ್ಗಳನ್ನು ಒಳಗೊಂಡಿದೆ. ಇವುಗಳಲ್ಲಿ ಭಾರತ ಅತಿ ದೊಡ್ಡದು. ಇದನ್ನು ದಕ್ಷಿಣದಲ್ಲಿ ಹಿಂದೂಸಾಗರ ಮತ್ತು ಅದರ ಉಪಭಾಗಗಳಾದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳು ಸುತ್ತುವರಿದಿವೆ. ಉತ್ತರದಲ್ಲಿ ಹಿಮಾಲಯ ಪರ್ವತ ಸರಣಿ, ಪೂರ್ವಕ್ಕೆ ಮಯನ್ಮಾರ್ ಮತ್ತು ಪಶ್ಚಿಮಕ್ಕೆ ಅಪ್ಘಾನಿಸ್ತಾನಗಳಿವೆ.
4. ನೈಋತ್ಯ ಏಷ್ಯ: ಅಫ್ಘಾನಿಸ್ತಾನ, ಬಹ್ರೇನ್, ಸೈಪ್ರಸ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಓಮನ್, ಕಟಾರ್, ಸಿರಿಯ, ಪ್ಯಾಲೆಪ್ಟೈನ್, ಸೌದಿಅರೇಬಿಯ, ಅರಬ್ ಎಮಿರೇಟ್ಸ್, ಯೆಮನ್ ಮತ್ತು ಟರ್ಕಿ ದೇಶಗಳು ಈ ವಿಭಾಗದಲ್ಲಿ ಸೇರುತ್ತವೆ. ಈ ವಿಭಾಗವು ಕಪ್ಪುಸಮುದ್ರದ ದಕ್ಷಿಣ ಭಾಗದಲ್ಲಿದ್ದು, ಪಶ್ಚಿಮಕ್ಕೆ ಮೆಡಿಟರೇನಿಯನ್ ಸಮುದ್ರ ಮತ್ತು ಪೂರ್ವಕ್ಕೆ ಭಾರತಗಳ ನಡುವೆ ವಿಸ್ತರಿಸುತ್ತದೆ. ಇದು ಬಹಳವಾಗಿ ಮರುಭೂಮಿ ಮತ್ತು ಅರೆಮರುಭೂಮಿಗಳಿಂದ ಆವರಿಸಿದ್ದರೂ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳಿಂದ ಸಮೃದ್ಧವಾಗಿದೆ.
5. ಮಧ್ಯ ಏಷ್ಯ: ಇದು ಪಶ್ಚಿಮ ಕ್ಯಾಸ್ಪಿಯನ್ ಸಮುದ್ರದಿಂದ ಪೂರ್ವದಲ್ಲಿ ಚೀನದವರೆಗೆ ಹಾಗೂ ಉತ್ತರದಲ್ಲಿ ಕಜಕಿಸ್ತಾನದಿಂದ ದಕ್ಷಿಣದಲ್ಲಿ ಇರಾನ್-ಅಪ್ಘಾನಿಸ್ತಾನಗಳವರೆಗೆ ವಿಸ್ತರಿಸಿದೆ. ಈ ಭಾಗದ ಪ್ರಮುಖ ದೇಶಗಳೆಂದರೆ: ಕಜಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ಟಕ್ರ್ಮೇನಿಸ್ತಾನ ಮತ್ತು ಉಜ್ಬೇಕಿಸ್ತಾನ ಹಾಗೂ ಸೈಬೀರಿಯ(ರಷ್ಯ)ಗಳು.
ಪ್ರಾಕೃತಿಕ ಲಕ್ಷಣಗಳು
ಭೂರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನಾಧರಿಸಿ ಏಷ್ಯಖಂಡವನ್ನು ಐದು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಬಹುದು:
1. ವಾಯವ್ಯ ತಗ್ಗು ಮೈದಾನಗಳು: ಇವು ಬೇರಿಂಗ್ ಜಲಸಂಧಿಯಿಂದ ಕ್ಯಾಸ್ಪಿಯನ್ ಸಮುದ್ರದವರೆಗೆ ವಿಸ್ತರಿಸಿದೆ.. ಈ ಮೈದಾನದ ಮೂಲಕ ಕೆಲವು ನದಿಗಳು ಹರಿಯುತ್ತವೆ. ಉದಾ: ಲೀನ, ಓಬ್ ಮತ್ತು ಯೆನ್ಸಿ. ಇವು ಉತ್ತರದ ಕಡೆಗೆ ಹರಿದು ಆಕ್ರ್ಟಿಕ್ ಸಾಗರವನ್ನು ಸೇರುತ್ತವೆ.
2. ಪರ್ವತ ಸರಣಿಗಳು: ಮಧ್ಯ ಏಷ್ಯದಲ್ಲಿರುವ ಪರ್ವತ ಸರಣಿಗಳನ್ನು `ಕೇಂದ್ರದ ಎತ್ತರ ಭಾಗಗಳು’ ಎನ್ನುವರು. ಇದು ಏಷ್ಯ ಮೈನರ್ನಿಂದ ಬೇರಿಂಗ್ ಜಲಸಂಧಿವರೆಗೂ ವಿಸ್ತರಿಸಿದೆ. ಇಲ್ಲಿ ಅನೇಕ ಪರ್ವತ ಸರಣಿಗಳು ಪಾಮಿರ್ ಗ್ರಂಥಿಯಿಂದ ಎಲ್ಲೆಡೆಗೂ ಹಬ್ಬಿವೆ. ಪೂರ್ವದಿಕ್ಕಿನ ಸರಣಿಗಳಲ್ಲಿ ಹಿಮಾಲಯ, ಕುನ್ಲುನ್, ಕಾರಾಕೋರಂ, ಟಿಯೆನ್ಶಾನ್, ಆಲ್ಟಾಯ್, ಸಯಾನ್, ಯಬ್ಲೋನಿ, ಕಿಂಗಾನ್ ಮತ್ತು ಸ್ಟಾನ್ವಾಯ್ ಪರ್ವತಗಳು ಮುಖ್ಯವಾದವು. ಪಶ್ಚಿಮದ ಸರಣಿಗಳಲ್ಲಿ ಹಿಂದುಕುಶ್, ಕಿರ್ತಾರ್, ಸುಲೈಮಾನ್, ಎಲ್ಬರ್ಜ್, ಜಾಗ್ರೋಸ್, ಕಕಾಸಸ್, ಮತ್ತು ತಾರಸ್ ಪರ್ವತಗಳು ಸೇರಿವೆ.ಮಡಿಕೆ ಪರ್ವತಗಳಾದ ಹಿಮಾಲಯದ ಮೌಂಟ್ ಎವರೆಸ್ಟ್ ಸರಣಿಯು ಪಾಮಿರ್ ಗ್ರಂಥಿಯಿಂದ ಆಗ್ನೇಯಕ್ಕೆ ಹಬ್ಬಿವೆ.
3. ದಕ್ಷಿಣ ಪ್ರಸ್ಥಭೂಮಿಗಳು: ಇವು ಕಠಿಣ ಮತ್ತು ಸ್ಫಟಿಕ ಶಿಲೆಗಳಿಂದ ರಚನೆಗೊಂಡ ಪುರಾತನ ಪ್ರಸ್ಥಭೂಮಿಗಳು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅರೇಬಿಯ, ದಖನ್ (ಭಾರತ), ಯುನ್ನಾನ್ (ಚೀನ) ಮತ್ತು ಶಾನ್ (ಮಯನ್ಮಾರ್) ಪ್ರಸ್ಥಭೂಮಿ.
4. ನದಿಗಳ ಮಹಾ ಮೈದಾನಗಳು: ಹಿಂದೂ ಸಾಗರ ಅಥವಾ ಪೆಸಿಫಿಕ್ ಸಾಗರಗಳಿಗೆ ಸೇರುವ ಏಷ್ಯದ ನದಿಗಳ ಮೈದಾನಗಳನ್ನೊಳಗೊಂಡಿದೆ. ಇಲ್ಲಿ ಹರಿಯುವ ನದಿಗಳು ಮೆಕ್ಕಲು ಮಣ್ಣನ್ನು ಸಂಚಯ ಮಾಡುವುದರೊಂದಿಗೆ ಫಲವತ್ತಾದ ಮೈದಾನಗಳನ್ನು ನಿರ್ಮಿಸಿವೆ. ಈ ವಿಭಾಗದ ಪ್ರಮುಖ ಮೈದಾನಗಳೆಂದರೆ: ಸಿರಿಯ ಮತ್ತು ಇರಾಕ್ನ ಟೈಗ್ರಿಸ್-ಯುಪ್ರಟೀಸ್, ಭಾರತ-ಪಾಕಿಸ್ತಾನಗಳ ಸಿಂಧೂ-ಗಂಗ ಮೈದಾನಗಳು, ಮಯನ್ಮಾರಿನ ಇರವಾಡಿ, ಇಂಡೊಚೀನದ ಮೀನಾಮ್ ಮತ್ತು ಮೀಕಾಂಗ್, ಚೀನದ ಚಿಯಾಂಗ್ಜಿಯಾಂಗ್ (ಯಾಂಗ್ಟ್ಸೆ), ಸಿಕಿಯಾಂಗ್ ಮತ್ತು ಹ್ವಾಂಗ್ಹೊ ನದಿ ಮೈದಾನಗಳು.
5. ದ್ವೀಪ ಸಮೂಹ: ಪ್ರಮುಖ ದ್ವೀಪ ಸಮೂಹಗಳೆಂದರೆ: ಕ್ಯೂರೈಲ್, ಜಪಾನ್, ಲಾಚು, ಫಿಲಿಪ್ಪೈನ್ಸ್ ಮತ್ತು ಬೋರ್ನಿಯೊ. ಇವುಗಳಲ್ಲಿ ಬಹಳಷ್ಟು ಜ್ವಾಲಾಮುಖಿ ಜನಿತವಾದವು. ಜೊತೆಗೆ ಫಲವತ್ತಾದ ಮಣ್ಣು, ಆಳವಾದ ಕಣಿವೆ ಮತ್ತು ಶಂಖಾಕೃತಿ ಪರ್ವತಗಳನ್ನು ಹೊಂದಿವೆ.
ಏಷ್ಯದ ನದಿ ವ್ಯವಸ್ಥೆ
1. ಹಿಂದೂ ಸಾಗರ ಸೇರುವ ನದಿಗಳು: ಈ ಗುಂಪಿಗೆ ಸೇರಿದ ಮುಖ್ಯ ನದಿಗಳೆಂದರೆ: ಸಿರಿಯ ಹಾಗೂ ಇರಾಕ್ ದೇಶಗಳ ಟೈಗ್ರಿಸ್ ಮತ್ತು ಯುಪ್ರಟೀಸ್ ನದಿಗಳು ಪರ್ಷಿಯ ಖಾರಿಯನ್ನೂ, ಪಾಕಿಸ್ತಾನ ಮತ್ತು ಭಾರತದ ಸಿಂಧೂ, ಗಂಗ ಮತ್ತು ಬ್ರಹ್ಮಪುತ್ರ ನದಿಗಳು ಹಿಮಾಲಯದಲ್ಲಿ ಉಗಮಿಸಿ ದಕ್ಷಿಣಕ್ಕೆ ಹರಿದು ಹಿಂದೂ ಸಾಗರವನ್ನು ಸೇರುತ್ತವೆ. ಮಯನ್ಮಾರಿನ ಸಿಟ್ಯಾಂಗ್, ಸಾಲ್ವೀನ್ ಮತ್ತು ಇರವಾಡಿ ನದಿಗಳು ಬಂಗಾಳ ಕೊಲ್ಲಿಗೆ ಸೇರುವವು.
2. ಪೆಸಿಫಿಕ್ ಸಾಗರ ಸೇರುವ ನದಿಗಳು: ಈ ಗುಂಪಿನಲ್ಲಿ ರಷ್ಯದ ಅಮುರ್, ಚೀನದ ಹ್ವಾಂಗ್ ಹೊ, ಚಿಯಾಂಗ್ ಜಿಯಾಂಗ್ (ಯಾಂಗ್ಟ್ಸೆ) ಮತ್ತು ಸಿಕಿಯಾಂಗ್ ನದಿಗಳು ಪೂರ್ವದ ಕಡೆಗೆ ಹರಿಯುತ್ತಾ ಕ್ರಮವಾಗಿ ಓಖೋಟಸ್ಕ, ಹಳದಿ ಸಮುದ್ರ ಮತ್ತು ಚೀನ
ಸಮುದ್ರಗಳನ್ನು ಸೇರುತ್ತವೆ. ಇಂಡೋಚೀನದ ಮೀನಾಮ್ ಮತ್ತು ಮೀಕಾಂಗ್ ನದಿಗಳು ದಕ್ಷಿಣ ಚೀನ ಸಮುದ್ರವನ್ನು ಸೇರುತ್ತವೆ.
3. ಆಕ್ರ್ಟಿಕ್ ಸಾಗರ ಸೇರುವ ನದಿಗಳು: ಓಬ್, ಯೆನ್ಸಿ ಮತ್ತು ಲೀನ ಎಂಬುವವು ಈ ಗುಂಪಿನ ಪ್ರಮುಖ ನದಿಗಳು. ಇವು ಕೇಂದ್ರದ ಉನ್ನತ ಭಾಗಗಳಲ್ಲಿ ಉಗಮಹೊಂದಿ ಉತ್ತರಕ್ಕೆ ಹರಿದು ಆಕ್ರ್ಟಿಕ್ ಸಾಗರವನ್ನು ಸೇರುತ್ತವೆ.
4. ಒಳನಾಡಿನ ನದಿಗಳು: ಈ ಗುಂಪಿಗೆ ಸೇರಿದ ನದಿಗಳು ಒಳನಾಡಿನ ಸಮುದ್ರಗಳಿಗೆ ಸೇರುವವು. ಉದಾ: ವೋಲ್ಗ ಮತ್ತು ಯೂರಲ್ ನದಿ ಕ್ಯಾಸ್ಪಿಯನ್ ಸಮುದ್ರವನ್ನು ಮತ್ತು ಅಮುದರಿಯ ಮತ್ತು ಸಿರ್ದರಿಯಾ ನದಿಗಳು ಅರಲ್ ಸಮುದ್ರವನ್ನೂ ಸೇರುತ್ತವೆ.
ವಾಯುಗುಣ
ವಾಯುಗುಣ: ಏಷ್ಯ ವಿಶಾಲವಾದ ಭೂಖಂಡ. ಅದು ದಕ್ಷಿಣದಲ್ಲಿ ಭೂಮಧ್ಯ ರೇಖೆಯಿಂದ ಧ್ರುವೀಯ ಪ್ರದೇಶದವರೆಗೂ ವಿಸ್ತರಿಸಿದೆ. ಪರಿಣಾಮವಾಗಿ ಈ ಖಂಡದ ವಿವಿಧ ಪ್ರದೇಶಗಳಲ್ಲಿ ವಿವಿಧ ವಾಯುಗುಣದ ಪರಿಸ್ಥಿತಿಯಿದೆ. ಏಷ್ಯದಲ್ಲಿ ಕೆಲವು ಭಾಗಗಳು ಪ್ರಪಂಚದಲ್ಲೇ ಅತ್ಯಂತ ಶೀತ(ಧ್ರುವೀಯ)ವಾದ ಪರಿಸ್ಥಿತಿಯನ್ನು ಹೊಂದಿದ್ದರೆ ಮತ್ತೆ ಕೆಲವು ಭಾಗಗಳು ಅತಿ ಉಷ್ಣತೆಯುಳ್ಳವು (ಕೇಂದ್ರ ಮತ್ತು ನೈಋತ್ಯ). ಹಾಗೆಯೇ ಅತಿಶುಷ್ಕ ಮತ್ತು ಅಧಿಕ ಮಳೆ ಬೀಳುವ ಸ್ಥಳಗಳೂ ಸಹ ಇಲ್ಲಿ ಕಂಡುಬರುತ್ತವೆ. ಏಷ್ಯದ ವಿವಿಧ ವಾಯುಗುಣದ ಸ್ಥಿತಿಗೆ ಹಲವು ಅಂಶಗಳು ಕಾರಣವಾಗಿವೆ
ಸ್ವಾಭಾವಿಕ ಸಸ್ಯವರ್ಗ
1. ಟಂಡ್ರ ಸಸ್ಯವರ್ಗ: ಈ ಸಸ್ಯವರ್ಗವು ಆಕ್ರ್ಟಿಕ್ ಕರಾವಳಿಯ ಉದ್ದಕ್ಕೂ ಕಿರಿದಾದ ಭಾಗದಲ್ಲಿ ಕಂಡುಬರುತ್ತದೆ. ಇದು ಬಹುವಾಗಿ ನೀರ್ಗಲ್ಲು ಮತ್ತು ಹಿಮದಿಂದಾವರಿಸಿರುತ್ತದೆ. ಹೀಗಾಗಿ ಸಸ್ಯ ಬೆಳವಣಿಗೆ ಪಾಚಿ ಮತ್ತು ಶಿಲಾವಲ್ಕಗಳಿಗೆ ಸೀಮಿತಗೊಂಡಿದೆ.
2. ಟೈಗ ಅರಣ್ಯಗಳು: ಟಂಡ್ರ ಪ್ರದೇಶದಲ್ಲಿ ಹಂಚಿಕೆಯಾಗಿವೆ. ಫರ್, ಸ್ಪ್ರೂಸ್, ಲಾರ್ಚ್ ಮತ್ತು ಪೈನ್ ಎಂಬುವವು ಇಲ್ಲಿ ಬೆಳೆಯುವ ಮುಖ್ಯ ಮರಗಳು. ಅವು ಮೃದು ಮರದ ತಿರುಳಿನ ಮರಗಳಾಗಿರುತ್ತವೆ.
3. ಸಮಶೀತೋಷ್ಣವಲಯದ ಹುಲ್ಲುಗಾವಲು (ಸ್ಟೆಪ್ಪೀಸ್): ಮಧ್ಯ ಏಷ್ಯ ಮತ್ತು ಮರುಭೂಮಿ ಮತ್ತು ಅರೆಮರುಭೂಮಿಗಳ ಅಂಚುಗಳಲ್ಲಿ ಕಂಡುಬರುತ್ತದೆ. ಕಡಿಮೆ ಮಳೆಯಿಂದಾಗಿ ಇಲ್ಲಿ ಕಡಿಮೆ ಎತ್ತರವುಳ್ಳ ಹುಲ್ಲು ಬೆಳೆಯುತ್ತದೆ.
4. ಮರುಭೂಮಿ ಸಸ್ಯವರ್ಗ: ಇದು ಏಷ್ಯದ ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳ ಮರುಭೂಮಿಗಳಲ್ಲಿ ಕಂಡುಬರುತ್ತದೆ. ಉದಾ: ಅರೇಬಿಯ, ಇರಾನ್, ಥಾರ್ ಮರುಭೂಮಿ ಇತ್ಯಾದಿ. ಇಲ್ಲಿ ಮುಳ್ಳಿನ ಗಿಡಗಂಟಿ, ಕುರುಚಲು ಸಸ್ಯ ಮತ್ತು ಹುಲ್ಲುಗಳು ಮಾತ್ರ ಬೆಳೆಯುವವು.
5. ಮಾನ್ಸೂನ್ ಅರಣ್ಯಗಳು: ದಕ್ಷಿಣ, ಆಗ್ನೇಯ ಮತ್ತು ಪೂರ್ವ ಏಷ್ಯ ಭಾಗಗಳಲ್ಲಿ ಕಂಡುಬರುತ್ತವೆ. ಇಲ್ಲಿ ಹೆಚ್ಚು ಶಾಖ ಮತ್ತು ಮಳೆ ಬೀಳುವುದರಿಂದ ಕಾಡುಗಳಿರುತ್ತವೆ. ತೇಗ, ಸಲೆ, ಆಲ, ಬಿದಿರು, ಶ್ರೀಗಂಧ ಹಾಗೂ ಇನ್ನೂ ಹಲವು ಗಟ್ಟಿ ಮರಗಳು ಇಲ್ಲಿ ಬೆಳೆಯುತ್ತವೆ.
6. ಸಮಭಾಜಕ ವೃತ್ತ ಪ್ರದೇಶದ ಅರಣ್ಯಗಳು: ಹೆಚ್ಚಾಗಿ ಸದಾ ಹಸಿರು ಮತ್ತು ಎತ್ತರಕ್ಕೆ ಬೆಳೆಯುವ ಮರಗಳಿಂದ ಕೂಡಿರುತ್ತವೆ. ಮಹಾಗನಿ, ಎಬೋನಿ, ರಬ್ಬರ್, ಬಿದಿರು, ಬೀಟೆ ಇಲ್ಲಿ ಬೆಳೆಯುವ ಪ್ರಮುಖ ಮರಗಳು.
7. ಮೆಡಿಟರೇನಿಯನ್ ಸಸ್ಯವರ್ಗವು ಏಷ್ಯದ ನೈಋತ್ಯ ಭಾಗಗಳಲ್ಲಿ ಕಂಡುಬರುವುದು. ಇಲ್ಲಿ ಆಲಿವ್, ಫಿಗ್, ಓಕ್ ಮರಗಳು ಮತ್ತು ಕುರುಚಲು ಸಸ್ಯ ಬೆಳೆಯುತ್ತವೆ.
ಪ್ರಮುಖ ಖನಿಜಗಳು
ಏಷ್ಯ ಹೆಚ್ಚು ವಿಸ್ತಾರವಾದ ಭೂಖಂಡವಾಗಿದ್ದು ಇದರಲ್ಲಿ ವಿವಿಧ ಖನಿಜಗಳ ಬೃಹತ್ ನಿಕ್ಷೇಪಗಳು ಕಂಡುಬರುತ್ತವೆ. ಪ್ರಮುಖ ಖನಿಜಗಳು ಈ ಕೆಳಕಂಡಂತಿವೆ:
1. ಕಬ್ಬಿಣ: ಅಪಾರ ಕಬ್ಬಿಣದ ಅದಿರು ಹೊಂದಿದೆ ಮತ್ತು ಪ್ರಪಂಚದ ಶೇ.30 ಭಾಗದಷ್ಟು ಕಬ್ಬಿಣದ ಅದಿರು ನಿಕ್ಷೇಪ ಈ ಖಂಡದಲ್ಲಿದೆ. ಚೀನ ಅಧಿಕ ಕಬ್ಬಿಣದ ಅದಿರು ಉತ್ಪಾದಿಸುವ ದೇಶ. ಭಾರತ, ಟರ್ಕಿ, ಫಿಲಿಪ್ಪೈನ್ಸ್, ಮಲೇಷ್ಯ, ಥೈಲೆಂಡ್, ಇಂಡೊನೇಷ್ಯ, ಮಯನ್ಮಾರ್, ವಿಯೆಟ್ನಾಂ, ಕಜಕಿಸ್ತಾನ ಮತ್ತು ಪಾಕಿಸ್ತಾನ ಇತರೆ ಪ್ರಮುಖ ಉತ್ಪಾದಕರು.
2. ಮ್ಯಾಂಗನೀಸ್: ಪ್ರಮುಖ ಮಿಶ್ರಲೋಹ ಖನಿಜ. ಉತ್ತಮ ಉಕ್ಕು ತಯಾರಿಕೆಗೆ ಇದು ಅತ್ಯಾವಶ್ಯಕ. ಏಷ್ಯ ಖಂಡವು ಅಧಿಕ ಪ್ರಮಾಣದ ಮ್ಯಾಂಗನೀಸ್ ನಿಕ್ಷೇಪವನ್ನು ಹೊಂದಿದೆ. ಅದು ಟ್ರಾನ್ಸ್ ಕಕಾಸಸ್, ಮಧ್ಯ ಏಷ್ಯ, ಸೈಬೀರಿಯ, ಚೀನ ಮತ್ತು ಭಾರತಗಳಲ್ಲಿ ಹೆಚ್ಚು ಹಂಚಿಕೆಯಾಗಿದೆ.
3. ಬಾಕ್ಸೈಟ್: ಇದು ಕಬ್ಬಿಣೇತರ ಲೋಹ. ಖನಿಜ ಮತ್ತು ಅಲ್ಯೂಮಿನಿಯಂ ತಯಾರಿಸುವುದಕ್ಕೆ ಅಗತ್ಯವಾದುದು. ಏಷ್ಯ ಅಪಾರವಾದ ಬಾಕ್ಸೈಟ್ ನಿಕ್ಷೇಪವುಳ್ಳ ಖಂಡ. ಅದು ಹೆಚ್ಚಾಗಿ ಕಜಕ್ಸ್ತಾನ ಮತ್ತು ದಕ್ಷಿಣ ಕೇಂದ್ರ ಸೈಬೀರಿಯಾಗಳಲ್ಲಿ ದೊರೆಯುತ್ತದೆ. ಅಲ್ಲದೆ ಭಾರತ ಇಂಡೊನೇಷ್ಯ, ಟರ್ಕಿ, ಮಲೇಷ್ಯ ಹಾಗೂ ಚೀನ ದೇಶಗಳಲ್ಲಿಯೂ ಸಾಕಷ್ಟು ಬಾಕ್ಸೈಟ್ ದೊರೆಯುತ್ತದೆ.
4. ಕಲ್ಲಿದ್ದಲು: ಇದು ಪಳಯುಳಿಕೆ ಇಂಧನ ಖನಿಜ. ಒಂದು ಪ್ರಮುಖ ಶಕ್ತಿಯ ಮೂಲ. ಏಷ್ಯದಲ್ಲಿ ಅಪಾರವಾದ ಕಲ್ಲಿದ್ದಲು ದೊರೆಯುತ್ತದೆ. ಅತ್ಯಧಿಕ ಪ್ರಮಾಣದ ಕಲ್ಲಿದ್ದಲು ನಿಕ್ಷೇಪವು ಚೀನ, ಭಾರತ, ಇಂಡೊನೇಷ್ಯ, ಸೈಬೀರಿಯ ಮತ್ತು ಮಧ್ಯ ಏಷ್ಯ ದೇಶಗಳಲ್ಲಿ ಕಂಡುಬರುತ್ತದೆ. ಪ್ರಪಂಚದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಮತ್ತು ಉತ್ಪಾದನೆ ಎರಡರಲ್ಲೂ ಚೀನ ದೇಶ ಮೊದಲನೆಯದು. ಚೀನದ ಎಲ್ಲಾ ಪ್ರಾಂತ್ಯಗಳಲ್ಲೂ ಕಲ್ಲಿದ್ದಲು ಲಭ್ಯವಿದೆ. ಭಾರತವು ಏಷ್ಯದ ಎರಡನೆಯ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ದೇಶ.
5. ಪೆಟ್ರೋಲಿಯಂ: ಇದೊಂದು ತೈಲ ಇಂಧನ. ಸ್ವಯಂಚಾಲಿತ ವಾಹನಗಳು, ರೈಲು, ಹಡಗು ಮತ್ತು ವಿಮಾನಗಳಿಗೆ ಬೇಕಾಗುವ ಶಕ್ತಿಸಾಧನವಾಗಿದೆ. ಅದು ಹೆಚ್ಚಾಗಿ ಸೌದಿ ಅರೇಬಿಯ, ಇರಾನ್, ಇರಾಕ್, ಕುವೈತ್, ಬಹ್ರೇನ್, ಕಟಾರ್ ಮತ್ತು ಸಂಯುಕ್ತ ಅರಬ್ ಎಮಿರೇಟೀಸ್ ಗಳಲ್ಲಿ ಕಂಡುಬರುವುದು. ಸೌದಿ ಅರೇಬಿಯ ಪ್ರಪಂಚದಲ್ಲೇ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ದೇಶ. ಮಧ್ಯ ಏಷ್ಯದ ಟಕ್ರ್ಮೇನಿಸ್ತಾನ, ಉಜ್ಬೇಕಿಸ್ತಾನ, ಕಜಕಿಸ್ತಾನ ಮೊದಲಾದ ಭಾಗಗಳಲ್ಲಿಯೂ ಸಾಕಷ್ಟು ಪೆಟ್ರೋಲ್ ಲಭ್ಯವಿದೆ.
ಏಷ್ಯದ ಜನಸಂಖ್ಯೆ
• ಏಷ್ಯಖಂಡದಲ್ಲಿ ಸುಮಾರು 4.2 ಬಿಲಿಯನ್ ಜನಸಂಖ್ಯೆಯಿದೆ.
• ಏಷ್ಯ ಖಂಡದ ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿ.ಮೀ.ಗೆ 96 ಜನರು.
• ಏಷ್ಯ ಖಂಡದಲ್ಲಿ ವಿವಿಧ ಜನಾಂಗದವರು ವಾಸಿಸುತ್ತಿದ್ದಾರೆ. ಪೂರ್ವ ಮತ್ತು ಆಗ್ನೇಯ ಏಷ್ಯಗಳಲ್ಲಿ ಹಳದಿ ವರ್ಣದ ಜನ(ಮಂಗೋಲರು)ರಿದ್ದಾರೆ.
• ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯದ ಚಿಕ್ಕದೇಶ ಮಾಲ್ಡೀವ್ಸ್.
• ಏಷ್ಯಾದಲ್ಲಿ ಮತ್ತು ಪ್ರಪಂಚದಲ್ಲಿ ಚೀನಾ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ.
• ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಏಷ್ಯದ ಇತರ ಭಾಗಗಳಲ್ಲಿ ಕಂದು ವರ್ಣದ ಜನರಿದ್ದಾರೆ.
• ನೈಋತ್ಯ ಏಷ್ಯದ ಭಾಗಗಳಲ್ಲಿ ಅರಬ್ಬರು, ಟರ್ಕರು, ಪರ್ಷಿಯನ್ನರು, ಆಪ್ಘನ್ನರು ಮೊದಲಾದವರು ವಾಸಿಸುವರು. ಮಧ್ಯ ಏಷ್ಯ ಭಾಗಗಳಲ್ಲಿ ಕಜಕ್ ಮತ್ತು ಕಿರ್ಘಿಜರಿದ್ದಾರೆ. ಇದೇ ರೀತಿ ವಿವಿಧ ಧರ್ಮಿಯರೂ ಸಹ ಏಷ್ಯದಲ್ಲಿದ್ದಾರೆ.