Loading [MathJax]/extensions/MathML/content-mathml.js

ವಿಜಯನಗರ ಸಾಮ್ರಾಜ್ಯದ ಕೊಡುಗೆಗಳು

 

ಆಡಳಿತ


ವಿಜಯನಗರ ಸಾಮ್ರಾಜ್ಯದ ಆಡಳಿತವು ಪಾರಂಪರಿಕವಾಗಿ ಮುಂದುವರೆಯಿತು.ರಾಜರೇ ಅಧಿಕಾರದ ಕೇಂದ್ರವಾಗಿದ್ದರು. ರಾಜರು ತಮ್ಮ ಜೇಷ್ಠ ಪುತ್ರನನ್ನೇ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡುತ್ತಿದ್ದರು. ವಿಕೇಂದ್ರಿಕೃತ ವ್ಯವಸ್ಥೆಯಿದ್ದರೂ ವಿಜಯನಗರವು ಪ್ರಬಲ ಕೇಂದ್ರಾಡಳಿತವನ್ನು ಹೊಂದಿತ್ತು. ಆಡಳಿತ ವ್ಯವಸ್ಥೆಯನ್ನು ಮಂತ್ರಿಮಂಡಲ ಸೇನಾಡಳಿತ ಮತ್ತು ಪ್ರಾಂತೀಯ ಮಾಂಡಲಿಕತ್ವವೆಂದು ವಿಂಗಡಿಸಲಾಗಿತ್ತು.ಪ್ರಾಂತೀಯ ಹಂತದಲ್ಲಿ ನಾಯಂಕರ ಅಥವಾ ಅಮರ ನಾಯಕರು (ನಾಯಕರು), ರಾಜ್ಯಮಂಡಲ, ಗ್ರಾಮಾಡಳಿತ ಹೀಗೆ ವಿವಿಧ ಬಗೆಗಳಿದ್ದವು. ತಿಮ್ಮರಸ ಮಹಾ ಪ್ರಧಾನ ಮಂತ್ರಿಯಾಗಿದ್ದನು.ಆಡಳಿತಾತ್ಮಕವಾಗಿ ಸಾಮ್ರಾಜ್ಯವು ರಾಜ್ಯ, ನಾಡು ಹಾಗೂ ಗ್ರಾಮಗಳೆಂಬ ಆಡಳಿತ ಘಟಕಗಳನ್ನು ಹೊಂದಿತ್ತು. ಅರಸನು ನ್ಯಾಯಾಂಗ ವಿಚಾರಗಳಲ್ಲಿ ಪರಮಾಧಿಕಾರವನ್ನು ಪಡೆದಿದ್ದನು. ಪ್ರಾಂತಗಳಲ್ಲಿ ಪ್ರಾಂತಾಧಿಕಾರಿಯು ನ್ಯಾಯ ತೀರ್ಮಾನ ಮಾಡುತ್ತಿದ್ದನು. ಶಿಕ್ಷೆಗಳು ಉಗ್ರವಾಗಿದ್ದವು. ಗ್ರಾಮಗಳು ಆಡಳಿತ ವ್ಯವಸ್ಥೆಯ ಕೊನೆಯ ಘಟಕಗಳಾಗಿದ್ದು, ಅಲ್ಲಿ ಗ್ರಾಮಸಭೆಗಳು ಆಡಳಿತ ನಿರ್ವಹಿಸುತ್ತಿದ್ದವು. ಗೌಡ, ಕರಣಮ್(ಶಾನುಭೋಗ), ತಳವಾರ ಗ್ರಾಮಾಡಳಿತದಲ್ಲಿ ನೆರವಾಗುತ್ತಿದ್ದರು. ನಾಡುಗಳಲ್ಲಿ ನಾಡಗೌಡರು ಮತ್ತು ಪಟ್ಟಣಗಳಲ್ಲಿ ಪಟ್ಟಣ ಸ್ವಾಮಿ ಅಥವಾ ಪಟ್ಟಣಶೆಟ್ಟಿ ಆಡಳಿತ ನೋಡಿಕೊಳ್ಳುತ್ತಿದ್ದರು. ವಿಜಯನಗರ ಸಮರ್ಥವಾದ ಸೈನ್ಯವನ್ನು ಹೊಂದಿತ್ತು. ಖಾಯಂ ತಂಡ, ಸಾಮಂತರ ಸೈನ್ಯ ಮತ್ತು ಸುಸಭ್ಯ (ಇದು ರಾಜನ ರಕ್ಷಣಾ ಪಡೆಯಾಗಿತ್ತು) ಸೇನಾ ಎಂಬ ಮೂರು ಹಂತಗಳಿಂದ ಕೂಡಿತ್ತು. ಕಾಲುದಳ, ಅಶ್ವದಳ, ಗಜದಳ ಮತ್ತು ಫಿರಂಗಿಗಳು ಸೈನ್ಯದ ಪ್ರಮುಖ ಭಾಗಗಳು. ಸಾ.ಶ. 1368 ರಿಂದ ಯುದ್ಧದಲ್ಲಿ ಫಿರಂಗಿಗಳ ಉಪಯೋಗ ಆರಂಭವಾಯಿತು. ಬೃಹದಾಕಾರದ ಆನೆಗಳು ಇದ್ದವು. ಅರಬ್ ದೇಶದ ಕುದುರೆಗಳು ವಿಜಯನಗರದ ಆಕರ್ಷಣೆಯಾಗಿದ್ದವು. ಸೈನ್ಯದಲ್ಲಿ ನೌಕಾಪಡೆಯೂ ಇತ್ತು. ಯಾವ ಜಾತಿಯವರಾದರೂ ಸೈನ್ಯದಲ್ಲಿ ಸೇರಿ ಗೌರವದ ಸ್ಥಾನಮಾನ ಹೊಂದಬಹುದಿತ್ತು. ಒಕ್ಕಲಿಗರು ಬೇಡರು ಪಾಳೆಯಗಾರರಾದರು. ಕೋಟೆ-ಕೊತ್ತಲಗಳು ಯುದ್ಧದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು.

ವಿದೇಶಿ ಪ್ರವಾಸಿಗರು


ವಿಜಯನಗರ ಕಾಲಘಟ್ಟದ ಬಗೆಗೆ ತಿಳಿಯಲು ವಿದೇಶಿ ಪ್ರವಾಸಿಗರ ಕಥನಗಳು ಮುಖ್ಯವಾಗಿವೆ. ಈ ಕಾಲಘಟ್ಟದಲ್ಲಿ ಅಸಂಖ್ಯಾತ ಪ್ರವಾಸಿಗರು ವಿಜಯನಗರಕ್ಕೆ ಭೇಟಿ ನೀಡಿದ್ದರು. ಈ ಪ್ರವಾಸಿ ಕಥನಗಳು ವಿಜಯನಗರದ ರಾಜಕೀಯ, ಆರ್ಥಿಕತೆ, ಸಮಾಜ ಮತ್ತು ಸಂಸ್ಕೃತಿ, ಸಮಕಾಲೀನ ಇತರ ರಾಜಮನೆತನಗಳ ಕುರಿತು ಮಾಹಿತಿ ನೀಡುವುವು. ವಿಜಯನಗರಕ್ಕೆ ಭೇಟಿ ನೀಡಿದ ಪ್ರಮುಖ ಪ್ರವಾಸಿಗರೆಂದರೆ,
* 1ನೆಯ ಹರಿಹರ - ಇಬನ್ ಬತೂತ (ಮೊರಾಕ್ಕೊ)
* ಪ್ರೌಢದೇವರಾಯ - ನಿಕೊಲೊ-ಡಿ-ಕೊಂತಿ(ವೆನಿಷಿಯಾ) ಅಬ್ದುಲ್ ರಜಾಕ್ (ಪರ್ಷಿಯಾ), ನಿಕಿಟನ್ (ರಷ್ಯ)
* 2ನೆ ನರಸಿಂಹ - ಲೊಡೆವಿಕೊ ದಿ ವರ್ತೆಮಾ (ಇಟಲಿ)
* ಕೃಷ್ಣದೇವರಾಯ - ಬಾರ್ಬೊಸಾ (ಪೋರ್ಚುಗೀಸ್), ಡೊಮಿಂಗೊ ಪಯಾಸ್(ಪೋರ್ಚುಗೀಸ್)
* ಅಚ್ಯುತದೇವರಾಯ - ನ್ಯೂನಿಜ್ (ಪೋರ್ಚುಗೀಸ್)

ಸಾಮಾಜಿಕ ವ್ಯವಸ್ಥೆ


ಸಮಾಜವು ಚಾತುರ್ವರ್ಣ ವ್ಯವಸ್ಥೆಯ ಮೇಲೆ ರೂಪುಗೊಂಡಿತ್ತು. ಹೀಗಿದ್ದರೂ ಅನೇಕ ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು. ಕುಶಲ ಕಲೆಗಾರರು, ಕಮ್ಮಾರರು, ಅಕ್ಕಸಾಲಿಗರು, ಕಂಚುಗಾರರು, ಬಡಗಿಗಳು, ನೇಕಾರರು, ಸಮಗಾರರು (ಚಮ್ಮಾರರು) ಅಧಿಕ ಸಂಖ್ಯೆಯಲ್ಲಿದ್ದರು. ಬಾಲ್ಯವಿವಾಹ, ಸಹಗಮನ ಮತ್ತು ದೇವದಾಸಿ ಪದ್ಧತಿಗಳು ರೂಢಿಯಲ್ಲಿದ್ದವು. ಸಾಮಾನ್ಯವಾಗಿ ಏಕಪತ್ನಿತ್ವ ರೂಢಿಯಲ್ಲಿದ್ದರೂ, ದೊರೆಗಳು ಮತ್ತು ಶ್ರೀಮಂತರು ಬಹುಪತ್ನಿಯರನ್ನು
ಹೊಂದಿರುತ್ತಿದ್ದರು. ವಿಜಯನಗರದಲ್ಲಿ ಸ್ತ್ರೀ ಜಟ್ಟಿಗಳು (ಕುಸ್ತಿಪಟುಗಳು), ಅರಮನೆ ಕಾವಲುಗಾರ್ತಿಯರು ಇದ್ದರು. ಹೋಳಿ, ದೀಪಾವಳಿ ಮತ್ತು ದಸರಾ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿತ್ತು. ದಸರಾ ಹಬ್ಬವು ಹಂಪಿಯಲ್ಲಿ ರಾಜಾಶ್ರಯದಲ್ಲಿ ವೈಭವದಿಂದ ನಡೆಯುತ್ತಿತ್ತು. ಸಂಗೀತ, ನೃತ್ಯಗಳು ಹೆಚ್ಚಿನ ಜನಮನ್ನಣೆ ಪಡೆದಿದ್ದವು.

ಆರ್ಥಿಕ ವ್ಯವಸ್ಥೆ


ವಿಜಯನಗರವು ಆರ್ಥಿಕವಾಗಿ ಸಮೃದ್ಧವಾಗಿತ್ತು.ಭೂ ಕಂದಾಯ ರಾಜ್ಯದ ಆದಾಯದ ಪ್ರಮುಖ ಮೂಲವಾಗಿತ್ತು. ಕೃಷಿಕರು ಸಾಮಾನ್ಯವಾಗಿ ತಮ್ಮ ಉತ್ಪಾದನೆಯ ನಾಲ್ಕನೆಯ ಒಂದು ಭಾಗವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದರು. ವೃತ್ತಿ ತೆರಿಗೆ, ಮನೆ ಕಂದಾಯ, ದಾರಿ ಸುಂಕ, ಸಂತೆ ಸುಂಕ, ವಾಣಿಜ್ಯ ತೆರಿಗೆ, ಆಮದು ಮತ್ತು ರಫ್ತು ತೆರಿಗೆಗಳು, ಸಾಮಂತರಿಂದ ಬರುವ ಕಪ್ಪಕಾಣಿಕೆಗಳು ರಾಜ್ಯದ ಇತರ ಆದಾಯದ ಮೂಲಗಳಾಗಿದ್ದವು. ಕೃಷಿ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿತ್ತು.ವಿಜಯನಗರದ ಅರಸರು ಬಾವಿ, ಕೆರೆ-ಕಾಲುವೆಗಳನ್ನು ಕಟ್ಟಿಸುವುದರ ಮೂಲಕ ಕೃಷಿ, ನೀರಾವರಿಯನ್ನು ಉತ್ತೇಜಿಸಿದರು. ಇವರ ಕಾಲದಲ್ಲಿ ಗೇಣಿ, ಗುತ್ತಿಗೆ, ಸಿದ್ಧಾಯ, ವಾರ ಮತ್ತು ಗಡಿ ಎಂಬ ಐದು ಬಗೆಯ ಭೂ ಹಿಡುವಳಿ ಪದ್ಧತಿಗಳಿದ್ದವು.ವಿಜಯನಗರ ಸಾಮ್ರಾಜ್ಯದ ಕಾಲವು ಕೈಗಾರಿಕೆ ಮತ್ತು ವಾಣಿಜ್ಯ
ಕ್ಷೇತ್ರದಲ್ಲಿ ಮಹತ್ತರ ಪ್ರಗತಿಯನ್ನು ಸಾಧಿಸಿತ್ತು.ಬಟ್ಟೆ ನೇಯ್ಗೆಯ ಮುಖ್ಯ ಕೈಗಾರಿಕೆಗಳು ಇದ್ದವು. ಚಿನ್ನದ ವರಹ, ಗದ್ಯಾಣ ಮತ್ತು ಪಗೋಡ, ಬೆಳ್ಳಿಯ ತಾರಾ, ತಾಮ್ರದ ಪಣ,ದುಡ್ಡು ಮತ್ತು ಕಾಸುಗಳು ಬಳಕೆಯಲ್ಲಿದ್ದವು.

ಧಾರ್ಮಿಕ ವ್ಯವಸ್ಥೆ


ವಿಜಯನಗರವು ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದ ಕೀರ್ತಿಗೆ ಪಾತ್ರವಾಗಿದೆ. ಶ್ರೀವೈಷ್ಣವ ಮತ್ತು ಜೈನ ಮತಾವಲಂಬಿಗಳು ತಮ್ಮ ತಮ್ಮ ಮತಾಭಿಪ್ರಾಯಗಳನ್ನು ಮರೆತು, ಪರಸ್ಪರ ಗೌರವದಿಂದ ಬಾಳುವಂತಹ ವಾತಾವರಣವಿತ್ತು. ವಿಜಯನಗರ ಸಾಮ್ರಾಜ್ಯವನ್ನಾಳಿದ ಆರಂಭದ ಅರಸರು ಶೈವ ಮತ್ತು ವೀರಶೈವ ಪೋಷಕರಾಗಿದ್ದರೆ, ನಂತರದವರು ವೈಷ್ಣವ ಮತದ ಉಪಾಸಕರಾಗಿದ್ದರು. ವಿಜಯನಗರದಲ್ಲಿ ಮುಸ್ಲಿಮರಿಗೆ ಮಸೀದಿಗಳನ್ನು ಕಟ್ಟಿಸಲಾಗಿತ್ತು. ಪೋರ್ಚುಗೀಸರೊಂದಿಗೆ ವ್ಯಾಪಾರ ವೃದ್ಧಿಸಿಕೊಂಡ ವಿಜಯನಗರದ ಅರಸರು ಕ್ರೈಸ್ತ ಮತಕ್ಕೂ ಪ್ರೋತ್ಸಾಹ ಕೊಟ್ಟರಲ್ಲದೆ ಚರ್ಚುಗಳನ್ನು ಕಟ್ಟಲು ಅನುಮತಿ ನೀಡಿದರು.

ಸಾಹಿತ್ಯ


ಸಾಮ್ರಾಜ್ಯದಲ್ಲಿ ಏರ್ಪಟ್ಟಿದ್ದ ಶಾಂತಿ ಮತ್ತು ಸುವ್ಯವಸ್ಥೆ, ಆರ್ಥಿಕ ಪ್ರಗತಿಯ ಪರಿಣಾಮದಿಂದ ಸಾಹಿತ್ಯವು ಹುಲುಸಾಗಿ ಬೆಳೆಯಿತು. ಕನ್ನಡ, ಸಂಸ್ಕೃತ, ತೆಲುಗು ಮತ್ತು ತಮಿಳು ಭಾಷೆಯ ಸಾಹಿತ್ಯ ಕೃತಿಗಳು ರಚನೆಯಾದವು. ರತ್ನಾಕರವರ್ಣಿ ಬರೆದ ‘ಭರತೇಶ ವೈಭವ’, ಚಾಮರಸರು ರಚಿಸಿದ ‘ಪ್ರಭುಲಿಂಗಲೀಲೆ’, ಕುಮಾರವ್ಯಾಸನ ‘ಗದುಗಿನ ಭಾರತ’ ಕನ್ನಡದ ಮುಖ್ಯ ಕಾವ್ಯಗಳಾಗಿವೆ. ವೀರಶೈವರ ವಚನಗಳ ಸಂಕಲನವಾದ ‘ಶೂನ್ಯ ಸಂಪಾದನೆ’ ರಚನೆಯಾಯಿತು.ಲಕ್ಕಣದಂಡೇಶನ ‘ಶಿವತತ್ವ ಚಿಂತಾಮಣಿ’ ಕನಕದಾಸರ ‘ಮೋಹನ ತರಂಗಿಣಿ’, ‘ನಳ ಚರಿತೆ’, ‘ಹರಿಭಕ್ತಸಾರ’ ಮತ್ತು ‘ರಾಮಧಾನ್ಯ ಚರಿತೆ’ ಮುಖ್ಯವಾದವು. ಸಂಸ್ಕೃತದಲ್ಲಿ ವಿದ್ಯಾರಣ್ಯರ ‘ಶಂಕರ ವಿಜಯ’ ಮತ್ತು ‘ಸರ್ವದರ್ಶನ ಸಂಗ್ರಹ’ ರಚನೆಗೊಂಡವು.ಕಂಪಣರಾಯನ ಮಡದಿ ಗಂಗಾದೇವಿ ‘ಮಧುರಾವಿಜಯಂ’ ಎಂಬ ಕೃತಿಯನ್ನು ರಚಿಸಿದಳು. ಇದು ಕಂಪಣನ ದಂಡಯಾತ್ರೆಯನ್ನು, ಅಲ್ಲಿನ ಪವಿತ್ರ ಸ್ಥಳಗಳ ವರ್ಣನೆಯನ್ನು ತಿಳಿಸುತ್ತದೆ. ಎರಡನೇ ದೇವರಾಯನ ಆಸ್ಥಾನ ಕವಿಯಾದ ಶ್ರೀನಾಥನು ‘ಕವಿ ಚಕ್ರವರ್ತಿ’ ಎಂಬ ಬಿರುದನ್ನು ಪಡೆದಿದ್ದನು. ಅಲ್ಲಸಾನಿ ಪೆದ್ದಣನ ‘ಮನುಚರಿತಮು’, ತಿಮ್ಮಣನ ‘ಪಾರಿಜಾತಾಪಹರಣಂ’, ತೆನಾಲಿ ರಾಮಕೃಷ್ಣನ ‘ಉಭಟಾರಾಧ್ಯ ಚರಿತಂ’ ಪ್ರಮುಖ ಕೃತಿಗಳಾಗಿವೆ.ತಮಿಳು ಕವಿಗಳಾದ ಪರಂಜ್ಯೋತಿಯರ್, ವೀರ ರಾಘವರ್, ಮಂಡಲಪುರುಷ, ಜ್ಞಾನ ಪ್ರಕಾಶ, ಹರಿಹರ ಮುಂತಾದವರು ಕೃಷ್ಣದೇವರಾಯನ ಆಸ್ಥಾನದಲ್ಲಿದ್ದರು. ಪರಂಜ್ಯೋತಿಯರ್ ಕವಿಯು ‘ತಿರುವಳಯಾಡಲ್
ಪುರಾಣಂ’ ಕೃತಿಯನ್ನು ರಚಿಸಿದನು. ವಿಜಯನಗರ ಕಾಲದಲ್ಲಿ ಸಂಸ್ಕೃತ, ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಪ್ರೋತ್ಸಾಹ ಸಿಕ್ಕಿತ್ತು.

ವಾಸ್ತುಶಿಲ್ಪ


ವಿಜಯನಗರದ ಅರಸರು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸ್ಮರಣೀಯವಾಗಿದೆ. ಇವರ ಕಾಲದಲ್ಲಿ ದೇವಾಲಯ, ಅರಮನೆ, ಕೋಟೆ, ಗೋಪುರ, ಮಹಾಮಂಟಪ, ಸಾರ್ವಜನಿಕ ಕಟ್ಟಡಗಳು, ಕೆರೆ ಕಟ್ಟೆ, ಕಾಲುವೆ, ಅಣೆಕಟ್ಟೆ ಮುಂತಾದವು ನಿರ್ಮಾಣವಾಗಿವೆ.

ಪ್ರಮುಖ ದೇವಾಲಯಗಳು



ಇವರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳನ್ನು ಹಂಪೆ, ಶೃಂಗೇರಿ, ತಿರುಪತಿ, ಕಂಚಿ, ಲೇಪಾಕ್ಷಿ, ಕಾರ್ಕಳ, ಮೂಡಬಿದ್ರಿ, ಭಟ್ಕಳ, ಚಿದಂಬರಂ, ಕಾಳಹಸ್ತಿ, ನಂದಿ, ಶ್ರೀಶೈಲ, ಕೋಲಾರ ಮುಂತಾದ ಕಡೆಗಳಲ್ಲಿ ಕಾಣಬಹುದು.ಶೃಂಗೇರಿ ವಿದ್ಯಾಶಂಕರ ದೇವಾಲಯವು ವಿಜಯನಗರ ಕಾಲದ ಆರಂಭದ ದೇವಾಲಯಗಳಲ್ಲಿ ಪ್ರಮುಖವಾಗಿದೆ. ಈ ದೇವಾಲಯದ ವಿನ್ಯಾಸವು ಭಾರತದಲ್ಲಿಯೇ ಅಪೂರ್ವ ಮಾದರಿಯದಾಗಿದೆ. ವಿಜಯನಗರದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯವೆಂದರೆ ಹಂಪಿಯ ವಿರೂಪಾಕ್ಷ ದೇವಾಲಯ. ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಾಲಯವು ಶೃಂಗಾರಮಯ ಕಲಾತ್ಮಕ ಕೆಲಸಕ್ಕೆ ಹೆಸರಾಗಿದೆ. ಕೃಷ್ಣದೇವರಾಯ ನಿರ್ಮಿಸಿದ ಮಹಾನವಮಿ ದಿಬ್ಬದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿತ್ತು.ರಾಜಧಾನಿಗೆ ಬಹಳ ದೂರದ ಪ್ರಾಂತ್ಯಗಳಿಂದಲೂ ರಾಜರು, ಮಂಡಲೇಶ್ವರರೂ ಚಕ್ರವರ್ತಿಯ ಆಜ್ಞೆಯ ಮೇರೆಗೆ ಬಂದು ಸೇರುವರೆಂದು ಪರ್ಶಿಯಾದ ರಾಯಭಾರಿ ಅಬ್ದುಲ್ ರಜಾಕ್ ಹೇಳುತ್ತಾನೆ. ಕಮಲ್ ಮಹಲ್, ಗಜಶಾಲೆ, ರಾಣಿ ಸ್ನಾನಗೃಹ ಇಂಡೋ-ಮುಸ್ಲಿಂ ಶೈಲಿಯ ಉತ್ತಮ ಕಟ್ಟಡಗಳಾಗಿವೆ. ಲಕ್ಷ್ಮೀನರಸಿಂಹ, ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ಉದ್ಧಾನ ವೀರಭದ್ರನ ಶಿಲ್ಪಗಳು ಆಕರ್ಷಕವಾಗಿವೆ.