ಕರ್ನಾಟಕದ ಜನಸಂಖ್ಯೆ (Karnataka : Population)
 
• ಒಂದು ನಿರ್ದಿಷ್ಟವಾದ ಭೂ ಪ್ರದೇಶದಲ್ಲಿ ವಾಸಿಸುವ ಜನರ ಒಟ್ಟು ಸಮೂಹವನ್ನು ‘ಜನಸಂಖ್ಯೆ’ಎನ್ನುವರು.
• ಇದು ಆ ಪ್ರದೇಶದ ಆರ್ಥಿಕಾಭಿವೃದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಮಾನವರು ತಮ್ಮ ಬುದ್ಧಿಶಕ್ತಿ ಮತ್ತು ಕಾರ್ಯಕೌಶಲ್ಯದಿಂದ ಪ್ರಾಕೃತಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗುತ್ತಾರೆ. ಅದು ಜನಸಂಖ್ಯೆಯ ಗಾತ್ರ, ಬೆಳವಣಿಗೆಯ ದರ, ವಯೋಮಾನ ರಚನೆ, ಗುಣಮಟ್ಟ ಇತ್ಯಾದಿಗಳನ್ನು ಆಧರಿಸಿರುತ್ತದೆ.
• ಕರ್ನಾಟಕವು ವಿಸ್ತೀರ್ಣದಲ್ಲಿ ಭಾರತದ ಎಂಟನೆಯ ಸ್ಥಾನದಲ್ಲಿದೆ. ಜನಸಂಖ್ಯೆಯ ಪ್ರಮಾಣದಲ್ಲಿ ಒಂಬತ್ತನೆಯ ಸ್ಥಾನದಲ್ಲಿದೆ.
• 2011ರ ಜನಗಣತಿಯ ಪ್ರಕಾರ ಕರ್ನಾಟಕವು 6,11,30,704 ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಪುರುಷರ ಸಂಖ್ಯೆ 3,10,57,742 ಮತ್ತು ಮಹಿಳೆಯರ ಸಂಖ್ಯೆ 3,00,72,662 ಗಳಾಗಿದೆ.
• ಜನಸಂಖ್ಯೆಯ ಪ್ರಮಾಣವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದೇ ಪ್ರಮಾಣದಲ್ಲಿರುವುದಿಲ್ಲ. ಬೆಂಗಳೂರು ನಗರ ಜಿಲ್ಲೆಯು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಮೊದಲ ಸ್ಥಾನದಲ್ಲಿದೆ, ಕೊಡಗು ಜಿಲ್ಲೆಯು ಕಡೆಯ ಸ್ಥಾನದಲ್ಲಿದೆ.
• ಬೆಂಗಳೂರಿನ ನಂತರ ಬೆಳಗಾವಿ, ಮೈಸೂರು, ತುಮಕೂರು, ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಗಳು ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ.
ಜನಸಂಖ್ಯೆಯ ಬೆಳವಣಿಗೆ
• 2001 ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 5,28,50,562 ಗಳಷ್ಟಿತ್ತು.
• 2001 ರಿಂದ 2011 ರ ದಶಕದಲ್ಲಿ 80,80,142 ಜನರು ಹೆಚ್ಚುವರಿಯಾಗಿರುತ್ತಾರೆ.
• ಇದೇ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆ ದರವು ಶೇ.15.67ಗಳಾಗಿರುತ್ತದೆ. ಇದು ಭಾರತದ ಜನಸಂಖ್ಯಾ ಬೆಳವಣಿಗೆಯ (17.64%) ದರಕ್ಕಿಂತ ಕಡಿಮೆ.
ಜನಸಾಂದ್ರತೆ
• ಪ್ರತಿ ಚದರ ಕಿ.ಮೀ. ಕ್ಷೇತ್ರದಲ್ಲಿ ವಾಸಿಸುವ ಸರಾಸರಿ ಜನಸಂಖ್ಯೆಯನ್ನು ಜನಸಾಂದ್ರತೆಯೆಂದು ಕರೆಯುವರು.
• 2001 ರ ಜನಗಣತಿಯ ಪ್ರಕಾರ ನಮ್ಮ ರಾಜ್ಯದ ಜನಸಾಂದ್ರತೆಯು ಪ್ರತಿ ಚದರ ಕಿಲೋಮೀಟರ್ಗೆ 275 ಜನರು. ಅದು 2011 ರ ವೇಳೆಗೆ 319ಕ್ಕೆ ಹೆಚ್ಚಿದೆ.
• ಆದರೂ ಭಾರತದ ಸರಾಸರಿ ಜನಸಾಂದ್ರತೆಗಿಂತ(382) ಕಡಿಮೆ ಇದೆ.
• ಜಿಲ್ಲಾವಾರು ಜನಸಾಂದ್ರತೆಯನ್ನು ನೋಡಿದಾಗ ಬೆಂಗಳೂರು ನಗರ ಜಿಲ್ಲೆಯು ಅಧಿಕ ಜನಸಾಂದ್ರತೆ ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಗ್ರಾಮಾಂತರ, ಧಾರವಾಡ, ಕೋಲಾರ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿ ಬರುತ್ತವೆ.
• ಇದಕ್ಕೆ ಪ್ರತಿಯಾಗಿ ಕೊಡಗು ಜಿಲ್ಲೆ (135) ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದ ಜಿಲ್ಲೆಯಾಗಿದೆ.
ಗ್ರಾಮೀಣ ಮತ್ತು ನಗರ ಜನಸಂಖ್ಯೆ
• ಕರ್ನಾಟಕವು ಗ್ರಾಮೀಣ ಪ್ರಧಾನವಾಗಿದ್ದು, 29,340 ಹಳ್ಳಿಗಳನ್ನೊಳಗೊಂಡಿದೆ (2011) ಅವು ಒಟ್ಟು 3.75 ಕೋಟಿ ಜನಸಂಖ್ಯೆಯನ್ನು ಹೊಂದಿವೆ.
• ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ.61.4% ಗ್ರಾಮೀಣರು ಹಾಗೂ ಶೇ.38.6% ಭಾಗವು (2.35 ಕೋಟಿ) ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
• ಭಾರತದ ಸರಾಸರಿಗೆ ಹೋಲಿಸಿದಾಗ ಕರ್ನಾಟಕದ ನಗರ ಜನಸಂಖ್ಯೆ ಹೆಚ್ಚಾಗಿದೆ.
• ಬೆಂಗಳೂರು ನಗರ ಜಿಲ್ಲೆ ಅಧಿಕ ಪ್ರಮಾಣದ ನಗರ ಜನಸಂಖ್ಯೆಯನ್ನು ಹೊಂದಿದ್ದರೆ, ಕೊಡಗು ಜಿಲ್ಲೆ ಅತಿ ಕಡಿಮೆ ನಗರ ಜನಸಂಖ್ಯೆಯುಳ್ಳ ಜಿಲ್ಲೆ.
ಲಿಂಗಾನುಪಾತ
• ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆಯನ್ನು ಲಿಂಗಾನುಪಾತವೆನ್ನುವರು.
• 2001 ರಲ್ಲಿ ಕರ್ನಾಟಕದ ಸರಾಸರಿ ಲಿಂಗಾನುಪಾತವು 965 ಗಳಾಗಿತ್ತು. ಅದು 2011 ರಲ್ಲಿ 968 ಕ್ಕೆ ಏರಿದೆ.
• ಲಿಂಗಾನುಪಾತವು ಎಲ್ಲಾ ಜಿಲ್ಲೆಗಳಲ್ಲೂ ಒಂದೇ ರೀತಿಯಾಗಿಲ್ಲ. ಉಡುಪಿ, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳು ಪುರುಷರಿಗಿಂತ ಹೆಚ್ಚು ಮಹಿಳೆಯರ ಸಂಖ್ಯೆಯನ್ನು ಹೊಂದಿವೆ.
• ಉಡುಪಿ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 1093 ಸ್ತ್ರೀಯರಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಸ್ತ್ರೀಯರ ಪ್ರಮಾಣವುಳ್ಳ ಜಿಲ್ಲೆಯಾಗಿದೆ. ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳು ಅನಂತರದ ಸ್ಥಾನಗಳಲ್ಲಿವೆ.
• ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 908 ಮಹಿಳೆಯರಿದ್ದು ರಾಜ್ಯದ ಕಡೆಯ ಸ್ಥಾನದಲ್ಲಿದೆ.
ವಯೋಮಾನ ರಚನೆ
2011 ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 15 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಶೇ. 29.7 ಭಾಗದಷ್ಟಿದ್ದಾರೆ. 60 ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವೃದ್ಧರ ಸಂಖ್ಯೆ ಶೇ. 5.5 ಭಾಗದಷ್ಟಿದೆ ಮತ್ತು ದುಡಿಯುವ ವರ್ಗದ ಪ್ರಮಾಣ ಶೇ. 64.9 ಭಾಗದಷ್ಟಾಗಿರುತ್ತದೆ.
ಸಾಕ್ಷರತೆಯ ಪ್ರಮಾಣ
• ಓದು ಬರಹದ ತಿಳುವಳಿಕೆಯುಳ್ಳ ವ್ಯಕ್ತಿಯನ್ನು ಸಾಕ್ಷರ ಅಥವಾ ಅಕ್ಷರಸ್ಥನೆಂದು ಪರಿಗಣಿಸಲಾಗಿದೆ.
• ರಾಜ್ಯದ ಸರಾಸರಿ ಸಾಕ್ಷರತೆಯ ಪ್ರಮಾಣ 2011 ರಲ್ಲಿ ಶೇ. 75.6 ಭಾಗವಾಗಿತ್ತು. ಇದು ಭಾರತದ (74%) ಸರಾಸರಿಗಿಂತ ಉತ್ತಮವಾಗಿದೆ.
• ಜಿಲ್ಲಾವಾರು ಸಾಕ್ಷರತೆಯನ್ನು ಗಮನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 88.6 ಭಾಗದಷ್ಟಿದ್ದು, ಅದು ಪ್ರಥಮ ಸ್ಥಾನದಲ್ಲಿದೆ. ಅನಂತರ ಬೆಂಗಳೂರು ನಗರ ಜಿಲ್ಲೆಯು (88.5%) ದ್ವಿತೀಯ ಸ್ಥಾನದಲ್ಲಿದೆ. ಉಡುಪಿ ಮೂರನೆಯ ಸ್ಥಾನಗಳಲ್ಲಿದೆ.
• ಇದಕ್ಕೆ ಪ್ರತಿಯಾಗಿ ಯಾದಗಿರಿ (52.4%) ಅತಿ ಕಡಿಮೆ ಸಾಕ್ಷರತೆಯುಳ್ಳ ಜಿಲ್ಲೆಯಾಗಿದೆ.
• ಕರ್ನಾಟಕದ ಪುರುಷರ ಸಾಕ್ಷರತೆಯ ಪ್ರಮಾಣವು ಶೇ. 82.9, ಮಹಿಳೆಯರ ಸಾಕ್ಷರತೆ ಶೇ. 68.2 ರಷ್ಟಿರುತ್ತದೆ.
• ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಾಕ್ಷರತೆಯನ್ನು ಗಮನಿಸಿದಾಗ ಸ್ವಾಭಾವಿಕವಾಗಿ ನಗರಪ್ರದೇಶಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚು ಸಾಕ್ಷರತೆ ಕಂಡು ಬರುತ್ತದೆ.