ರಜಪೂತರು

 

ಸ್ಥಾಣೇಶ್ವರದ ವರ್ಧನರ ಮನೆತನದ ಆಳ್ವಿಕೆಯ ನಂತರ ಪಶ್ಚಿಮ ಮತ್ತು ಉತ್ತರ ಭಾರತದ ಬಹುಭಾಗಗಳನ್ನು ಮಧ್ಯಕಾಲದ ಆರಂಭದವರೆಗೆ ಗುರ್ಜರ ಪ್ರತಿಹಾರರು, ಬುಂದೇಲ್ ಖಂಡದ ಚಂದೇಲರು, ಗಹಡ್ವಾಲರು, ಸೋಳಂಕಿಯರು, ಪಾರಮಾರರು ಮತ್ತು ಚೌವ್ಹಾಣರು ರಜಪೂತ ಕುಲಗಳಿಗೆ ಸೇರಿದ ವಿವಿಧ ಮನೆತನಗಳು ಆಳ್ವಿಕೆ ಮಾಡಿದವು. 12ನೆಯ ಶತಮಾನದ ಕೊನೆಯ ವೇಳೆಗೆ ಉತ್ತರ ಭಾರತದಲ್ಲಿ ರಜಪೂತ ಮೂಲದ ಪೃಥ್ವಿರಾಜ ಚೌವ್ಹಾಣ, ಜಯಚಂದ್ರ ಗಹಡ್ವಾಲ, ಪರಮರ್ದಿದೇವ ಚಾಂದೇಲ ಪ್ರಬಲ ರಾಜರಾಗಿದ್ದರು.

ಗುರ್ಜರ ಪ್ರತಿಹಾರರು


ದೊರೆತಿರುವ ಆಧಾರಗಳು ಪ್ರಕಾರ ನಾಗಭಟ್ಟನು ಈ ವಂಶದ ಸಂಸ್ಥಾಪಕನೆಂದು ಸೂಚಿಸುತ್ತವೆ. ಕನೋಜನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಪ್ರತಿಹಾರರು ಸಿಂಧ್ ಪ್ರಾಂತ್ಯದ ಮೇಲೆ ಅಧಿಪತ್ಯ ಸ್ಥಾಪಿಸಿ ಆಗಾಗ ದಾಳಿ ಮಾಡುತ್ತಿದ್ದ ಅರಬ್ಬರನ್ನು ಎದುರಿಸಿ ಹಿಮ್ಮೆಟಿಸಿದರು. ಈ ವಂಶದಲ್ಲಿ ಬಲಶಾಲಿ ದೊರೆಗಳಾದ ಮಿಹರ ಭೋಜ ಮತ್ತು ಮಹೇಂಧ್ರಪಾಲರು ಬಂಗಾಳದ ಪಾಲರನ್ನು ಸೋಲಿಸಿ ಬಂಗಾಳದವರೆಗೂ ಪ್ರತಿಹಾರರ ಸಾಮ್ರಾಜ್ಯವನ್ನು ವಿಸ್ತರಿಸಿದರು. ಅರಬ್ ಪ್ರವಾಸಿಗನಾದ ಸುಲೈಮಾನ್ ಮಿಹರ್‍ಭೋಜನ ಆಸ್ಥಾನಕ್ಕೆ ಭೇಟಿ ನೀಡಿ ಆ ಸಾಮ್ರಾಜ್ಯದಲ್ಲಿ ಸುಖ ಶಾಂತಿಗಳು ನೆಲಸಿದ್ದವೆಂದು ಪ್ರಶಂಸಿದ್ದಾನೆ. ಮಹೇಂಧ್ರಪಾಲನ ನಂತರ ಅವನ ಮಗ ಮಹಿಪಾಲನ ಆಳ್ವಿಕೆಯ ಕಾಲದಿಂದ ಪ್ರತಿಹಾರರ ಅಧಿಪತ್ಯ ಅವನತಿ ಹೊಂದಿತು.

ಪರಮಾರರು


ಪ್ರತಿಹಾರರರ ಅವನತಿಯ ನಂತರ ಮಾಳ್ವ ಪ್ರಾಂತ್ಯದಲ್ಲಿ ರಾಜಕೀಯವಾಗಿ ಪ್ರವರ್ದಮಾನಕ್ಕೆ ಬಂದರು. ರಾಷ್ಟ್ರಕೂಟರ ಸಾಮಂತನಾಗಿದ್ದ ಉಪೇಂದ್ರ ಕೃಷ್ಣರಾಜ ಈ ಮನೆತನವನ್ನು ಸ್ಥಾಪಿಸಿದವನು. ಧಾರಾನಗರ ಇವರ ರಾಜಧಾನಿ. ಪರಮಾರ ವಂಶದ ಪ್ರಖ್ಯಾತ ದೊರೆ ಭೋಜ, ಕಲ್ಯಾಣಿ ಚಾಲುಕ್ಯರನ್ನು, ಕಳಿಂಗದ ಗಂಗರನ್ನು ಮತ್ತು ಉತ್ತರದ ಕೊಂಕಣರನ್ನು ಸೋಲಿಸಿ ಪರಮಾರರ ರಾಜ್ಯವನ್ನು ವಿಶಾಲವಾಗಿ ವಿಸ್ತರಿಸಿದನು. ಮುಂದೆ ಚಾಲುಕ್ಯರ ವಿರುದ್ಧ ಸೋಲನ್ನು ಅನುಭವಿಸಿದನು. ರಾಜಕೀಯವಾಗಿ ಸೋಲು ಗೆಲುವುಗಳೆರಡನ್ನು ನೋಡಿದ ಭೋಜ ಸಾಂಸ್ಕೃತಿಕ ಲೋಕದಲ್ಲಿ ನಿಜವಾಗಿ ಸೋಲಿಲ್ಲದ ಸಾಮ್ರಾಟ ಆಗಿದ್ದನು. ಸ್ವತಃ ಕವಿಯಾಗಿದ್ದನು. ಇವನ ನಂತರದ ಅರಸರು ದುರ್ಬಲರಾಗಿದ್ದುದ್ದರಿಂದ ಪರಮಾರವಂಶ ಅವನತಿ ಹೊಂದಿತು.

ಸೋಳಂಕಿಯರು


ಮೊದಲನೆ ಮೂಲರಾಜ ಈ ಮನೆತನದ ಸ್ಥಾಪಕ. ಈ ಮನೆತನದಲ್ಲಿ ಮೊದಲನೆ ಭೀಮ ಹೆಸರುವಾಸಿಯಾಗಿದ್ದರೂ, ಘಜ್ನಿಯಿಂದ ಸೋಮನಾಥ ದೇವಾಲಯವನ್ನು ರಕ್ಷಿಸಲಾಗಲಿಲ್ಲ. ಇವನ ನಂತರದ ಎರಡನೇ ಮೂಲರಾಜ ಮತ್ತು ವೀರಧವಳ ವಾಘೆಲರು ಸಮರ್ಥ ಅರಸರಾಗಿದ್ದರು. ಎರಡನೇ ಮೂಲರಾಜ ಮಹಮ್ಮದ್ ಘಜ್ನಿಯನ್ನು ಮೌಂಟ್‍ಅಬುವಿನ ಬಳಿ ಸೋಲಿಸಿದ. ಈ ಮನೆತನದ ಆಳ್ವಿಕೆಯಲ್ಲಿ ಖ್ಯಾತ ಜೈನ ಪಂಡಿತ ಹೇಮಚಂದ್ರ ‘ದೇಶಿಮಾಲಾ’ ಎಂಬ ನಿಘಂಟನ್ನು ಪ್ರಾಕೃತ ಭಾಷೆಯಲ್ಲಿ ರಚಿಸಿದನು. ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಅವನ ದಂಡನಾಯಕರಾದ ಉಲುಫ್‍ಖಾನ್ ಮತ್ತು ನುಸ್ರತ್‍ಖಾನ್‍ರು, ಕರ್ಣದೇವನನ್ನು ಸೋಲಿಸಿ ಸೋಳಂಕಿಯರ ರಾಜ್ಯವನ್ನು ದೆಹಲಿ ಸುಲ್ತಾನರ ಸಾಮ್ರಾಜ್ಯದೊಳಕ್ಕೆ ಸೇರಿಸಿದರು.

ಚಂದೇಲರು


ಬುಂದೇಲ್ ಖಂಡದಲ್ಲಿ ಪ್ರವರ್ಧಮಾನಕ್ಕೆ ಬಂದ ಚಂದೇಲರ ಮನೆತನದ ಪ್ರಸಿದ್ಧ ಅರಸನೆಂದರೆ ಢಂಗ. ಆರಂಭದಲ್ಲಿ ಚಂದೇಲರು ಪ್ರತಿಹಾರರ ಮಾಂಡಲಿಕರಾಗಿದ್ದರು. ಪಾರಮಾರರ ಪತನದ ನಂತರ ಢಂಗ ಸ್ವತಂತ್ರನೆಂದು ಘೋಷಿಸಿಕೊಂಡನು. ಪಾರಮಾರರ ಸಾಮ್ರಾಜ್ಯದ ಪೂರ್ವ ಭಾಗವನ್ನು ವಶಪಡಿಸಿಕೊಂಡು ಪಾಲ ಮತ್ತು ಅದ್ರರನ್ನು ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿಕೊಂಡನು. ಮಹಾ ರಾಜಾಧಿರಾಜ ಎಂಬ ಬಿರುದನ್ನು ಹೊಂದಿದ ಢಂಗ ಟರ್ಕರ ವಿರುದ್ಧ ಹೋರಾಡುತ್ತಿದ್ದ ಹಿಂದೂಷಾಯಿರಾಜ
ಜಯಚಂದ್ರನಿಗೆ ಸೈನಿಕ ನೆರವನ್ನು ನೀಡಿದನು. ಆದರೆ ರಜಪೂತ ಅರಸರಲ್ಲಿನ ಪರಸ್ಪರ ದ್ವೇಷ ಐಕ್ಯತೆಯ ಕೊರತೆಯಿಂದಾಗಿ ಈ ರಾಜ್ಯವನ್ನು ಖಿಲ್ಜಿ ಸುಲ್ತಾನರು ಗೆದ್ದುಕೊಂಡರು.

ಚೌವ್ಹಾಣರು


ಈ ಮನೆತನವೂ ರಜಪೂತ ಮನೆತನಗಳಲ್ಲಿ ಪ್ರಮುಖವಾದುದು. ಈ ಮನೆತನದ ಮೂಲ ಸಾ.ಶ.7ನೆಯ ಶತಮಾನದಲ್ಲಿಯೇ ಕಾಣಿಸಿಕೊಳ್ಳುತ್ತದೆ. ರಾಜಸ್ತಾನದ ಅಜ್ಮೀರ ಪ್ರದೇಶದಲ್ಲಿ ಈ ಮನೆತನ ತನ್ನ ಆಳ್ವಿಕೆಯನ್ನು ಆರಂಭಿಸಿತು. ಆದರೂ ಚೌವ್ಹಾಣರನ್ನು 12ನೆಯ ಶತಮಾನದ ವೇಳೆಗೆ ಪಶ್ಚಿಮ ಭಾರತದಲ್ಲಿ ಪ್ರಬಲವಾದ ರಾಜರನ್ನಾಗಿ ಪರಿಗಣಿಸುವಂತೆ ಮಾಡಿದವರು, ಅಜಯರಾಜ ನಾಲ್ಕನೇ ವಿಗ್ರಹರಾಜ ಮತ್ತು ಮೂರನೇ ಪೃಥ್ವಿರಾಜ. ಪರಾಕ್ರಮಿಯಾಗಿದ್ದ ಪೃಥ್ವಿರಾಜನು
ಬಂದೇಲ ಖಂಡದ ಚಂದೇಲರನ್ನು ಸೋಲಿಸಿ ಮಹೇಬ ಮತ್ತು ಕಾಲಿಂಜರ್‍ಗಳನ್ನು ವಶಪಡಿಸಿಕೊಂಡನು. ಘೋರ್ ಸಾಮ್ರಾಜ್ಯವನ್ನು ಸಿಂಧ್‍ಪ್ರಾಂತ್ಯದ ಕಡೆಗೆ ವಿಸ್ತರಿಸಬೇಕೆಂದಿದ್ದ
ಘೋರಿ ಮಹಮ್ಮದ್‍ನನ್ನು ಎದುರಿಸಿದ ಪೃಥ್ವಿರಾಜ ತರೈನ್ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಮಹಮ್ಮದ್‍ನನ್ನು ಸೋಲಿಸಿ ಓಡಿಸಿದನು.ಘೋರಿ ಮಹಮ್ಮದ್‍ನು ಮರುವರ್ಷ ಮತ್ತೆ ದೆಹಲಿಯ ಕಡೆಗೆ ದಂಡೆತ್ತಿ ಬಂದು ಹಿಂದೆ ಯುದ್ಧ ನಡೆದಿದ್ದ ತರೈನ್‍ನಲ್ಲಿಯೇ ಪೃಥ್ವಿರಾಜನನ್ನು ಸೋಲಿಸಿದನು. ಅದರೂ ಪೃಥ್ವಿರಾಜ ರಜಪೂತರ ಶೌರ್ಯ
ಪರಾಕ್ರಮಗಳ ಪ್ರತೀಕವಾಗಿದ್ದಾನೆ.

ರಜಪೂತರ ಕೊಡುಗೆಗಳು


ಸಾಹಿತ್ಯ


ಪ್ರಾಚೀನ ಕಾಲದ ಕೊನೆಯ ಘಟ್ಟ ಮತ್ತು ಆರಂಭಿಕ ಮಧ್ಯಕಾಲವರೆಗೂ ಇದ್ದ ರಜಪೂತ ಮನೆತನಗಳ ಅರಸರು ತಮ್ಮ ಆಳ್ವಿಕೆಯಲ್ಲಿ ಧರ್ಮ ಕಲೆ ಸಂಸ್ಕೃತಿಗಳಿಗೆ ಉದಾರವಾಗಿ ಪ್ರೋತ್ಸಾಹ ನೀಡಿದ್ದಾರೆ. ರಜಪೂತ ಅರಸರು ಸ್ವತಃ ವಿದ್ವಾಂಸರು ಆಗಿದ್ದಾರೆ. ಭೋಜ, ಮುಂಜ, ಮೊದಲಾದ ಅರಸರೇ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಮುಂಜ ರಾಜನು ಪದ್ಮಗುಪ್ತ, ಹಲಾಯುಧ ಎಂಬ ಕವಿಗಳಿಗೆ ಆಶ್ರಯ ನೀಡಿದ್ದನು. ಭೋಜ ರಾಜನ ಕಾಲದಲ್ಲಿ ಶಾಂತಿಸೇನ, ಪ್ರಭಾಚಂದ್ರ ಸೂರಿ, ಘನಪಾಲ ಎಂಬ ಜೈನ ಪಂಡಿತರು ಆಶ್ರಯ ಪಡೆದಿದ್ದರು. ಜಯದೇವನ ‘ಗೀತಗೋವಿಂದ’, ಭಾರವಿಯ ‘ಕಿರಾತಾರ್ಜುನೀಯ’, ಭರ್ತೃಹರಿಯ
‘ರಾವಣ ವಧಾ’, ಮಹೇಂದ್ರಪಾಲನ ‘ಕಾವ್ಯ ಮೀಮಾಂಸೆ’ ಕಾವ್ಯಗಳು ಇವರ ಕಾಲದಲ್ಲಿ ರಚನೆಯಾದವು. ನಾಟಕಗಳಾದ ರಾಜಶೇಖರ ರಚಿಸಿದ ‘ಬಾಲ ರಾಮಾಯಣ’ ಮತ್ತು ‘ಕರ್ಪೂರ ಮಂಜರಿ’. ಭವಭೂತಿ ರಚಿಸಿದ ‘ಮಹಾವೀರಚರಿತ’, ಹಾಗೂ ‘ಉತ್ತರರಾಮಚರಿತ’. ಐತಿಹಾಸಿಕ ಕೃತಿಗಳಾದ ಕಲ್ಹಣನ ‘ರಾಜ
ತರಂಗಿಣಿ’, ಜಯನಿಕನ ‘ಪೃಥ್ವಿರಾಜ ವಿಜಯ’ ಮತ್ತು ಹೇಮಚಂದ್ರನ ‘ಕುಮಾರಪಾಲಚರಿತ’ ಮಹತ್ವದ್ದಾಗಿವೆ.ರಜಪೂತ ಅರಸರ ಜೀವನ ಕೃತಿಗಳಾದ ‘ಪೃಥ್ವಿರಾಜ ರಾಸೋ’ವನ್ನು ಚಂದ್ ಬರದಾಯಿ ಮತ್ತು ‘ಭೋಜ ಪ್ರಬಂಧ’ವನ್ನು ಬಲ್ಲಾಳ ಎಂಬುವರು ರಚಿಸಿದರು. ಈ ಕಾಲದಲ್ಲಿ ಗುಜರಾತಿ, ರಾಜಸ್ತಾನಿ, ಹಿಂದಿ ಭಾಷೆಗಳು ಅಭಿವೃದ್ಧಿಯಾದವು.

ಶಿಲ್ಪಕಲೆ


ರಜಪೂತರು ವಿದ್ಯಾಕೇಂದ್ರಗಳಾದ ನಳಂದಾ, ಕಾಶಿ, ವಿಕ್ರಮಶಿಲ, ಉಜ್ಜಯಿನಿಗಳಿಗೆ ಪ್ರೋತ್ಸಾಹ ನೀಡಿದರು. ರಜಪೂತ ಅರಸರು ಉತ್ತರ ಭಾರತದ ಚಿತ್ತೋಡ್, ಮಾಂಡು, ರಣತಂಬೂರ್, ಜೋಧ್‍ಪುರ ಹಾಗೂ ಗ್ವಾಲಿಯರ್‍ಗಳಲ್ಲಿ ವಿಶಾಲವಾದ ಕೋಟೆಗಳನ್ನು ನಿರ್ಮಿಸಿದರು. ಜೈಪುರ, ಗ್ವಾಲಿಯರ್, ಉದಯಪುರಗಳ ಅರಮನೆಗಳು, ಮೌಂಟ್ ಅಬುದಲ್ಲಿರುವ ದಿಲಾವರ್ ದೇವಾಲಯ, ವಿಮಲಾ ವಸಾಯಿ, ಲುನಾ ವಸಾಯಿ ದೇವಾಲಯಗಳು ಸುಂದರ ಕಲಾತ್ಮಕತೆಯಿಂದ ಕೂಡಿವೆ. ಚಂದೇಲರು ಮಧ್ಯಪ್ರದೇಶದ ಖಜುರಾಹೋದ ಖಂಡರಾಯ ಮಹಾದೇವಾಲಯವನ್ನು ಕಟ್ಟಿಸಿದರು. ಮೌಂಟ್ ಅಬು ಬಸದಿ ಇವರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳಲ್ಲಿ
ಶಿವ ಮತ್ತು ವಿಷ್ಣುವಿನ ಮಂದಿರಗಳು ಹೆಚ್ಚಾಗಿವೆ.ರಜಪೂತ ಅರಸರು ಚಿತ್ರಕಲೆಗೂ ಪ್ರೋತ್ಸಾಹ ನೀಡಿದರು. ಚಿತ್ರಕಲಾ ಶೈಲಿಯನ್ನು ರಾಜಸ್ತಾನಿ ಕಲಾಶೈಲಿ ಮತ್ತು ಪಹಾರಿ ಕಲಾಶೈಲಿಯೆಂದು ವರ್ಗೀಕರಿಸಲಾಗಿದೆ. ಮೇವಾರ್, ಬುಕಾನೇರ್, ಜೋಧ್‍ಪುರ, ಜೈಸಲ್ಮೇರ್ ಮತ್ತು ಬುನಿಗಳಲ್ಲಿ ರಾಜಾಸ್ತಾನಿ ಶೈಲಿಯ ಚಿತ್ರಕಲೆಗಳನ್ನು ಕಾಣಬಹುದಾಗಿದೆ. ಖಸೋಲಿ, ಜಮ್ಮು, ಗರ್ವಾಲ್‍ಗಳಲ್ಲಿ ಪಹಾರಿ ಕಲಾಶೈಲಿಯ ಚಿತ್ರಕಲೆಗಳನ್ನು ಕಾಣಬಹುದಾಗಿದೆ. ಹೀಗೆ ಭಾರತದ ಕಲೆ ಮತ್ತು ವಾಸ್ತುಶಿಲ್ಪಗಳ ಚರಿತ್ರೆಯಲ್ಲೂ ರಜಪೂತರಿಗೆ ವಿಶೇಷ ಸ್ಥಾನವಿದೆ.