ಆಮ್ಲಗಳು ಮತ್ತು ಪ್ರತ್ಮ್ಯಾಮ್ಲಗಳು (Acids & Bases)

 

ವಿವಿಧ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ಸಂಯುಕ್ತ ಎನ್ನುವರು. ಸಂಯುಕ್ತವು ಎರಡು ಅಥವಾ ಹೆಚ್ಚು ಧಾತುಗಳ ಸಂಯೋಗದಿಂದ ಉಂಟಾಗುತ್ತದೆ. ಅಥವಾ ಎರಡು ಅಥವಾ ಹೆಚ್ಚು ಧಾತುಗಳು ನಿರ್ದಿಷ್ಟ ಅನುಪಾತದಲ್ಲಿ ರಾಸಾಯನಿಕವಾಗಿ ಸಂಯೋಗಗೊಂಡು ಸಂಯುಕ್ತ ಉಂಟಾಗುತ್ತದೆ. ಸಂಯುಕ್ತಗಳು ಘನ, ದ್ರವ, ಅನಿಲಗಳಾಗಿರಬಹುದು.
*ಉದಾ:*
1.ಹೈಡ್ರೋಜನ್ ಮತ್ತು ಆಕ್ಸಿಜನ್ ನಿರ್ದಿಷ್ಟ ಅನುಪಾತದಲ್ಲಿ ರಾಸಾಯನಿಕವಾಗಿ ಸಂಯೋಗವಾಗಿ ಉಂಟಾಗುವ ಸಂಯುಕ್ತವೇ ನೀರು.
2. ಸೋಡಿಯಮ್ + ಕ್ಲೋರಿನ್ = ಸೋಡಿಯಮ್ ಕ್ಲೋರೈಡ್ ಒಂದು ಸಂಯುಕ್ತ.
3. ಹೈಡ್ರೋಜನ್ + ಗಂಧಕ + ಆಕ್ಸಿಜನ್ = ಸಲ್ಫೂರಿಕ್
ರಾಸಾಯನಿಕ ಸಂಯುಕ್ತಗಳನ್ನು ವಿಶಾಲವಾಗಿ ಮೂರು ಗುಂಪುಗಳನ್ನಾಗಿ ಮಾಡಬಹುದು, ಅವುಗಳೆಂದರೆ.
1. ಆಮ್ಲಗಳು
2. ಪ್ರತ್ಯಾಮ್ಲಗಳು
3. ಲವಣಗಳು

ಆಮ್ಲಗಳು (Acids)


• ಆಮ್ಲ ಎಂಬ ಪದವು ಲ್ಯಾಟಿನ್ ಭಾಷೆಯ 'ಆಸಿಡಸ್' ಎಂಬ ಪದದಿಂದ ಬಂದಿದೆ. ಆಸಿಡಸ್ ಎಂದರೆ ಹುಳಿ ಎಂದರ್ಥವಿದೆ.

• ಆಮ್ಲ ಎಂದರೆ ಜಲಜನಕದ ಅಯಾನನ್ನು ಇನ್ನೊಂದು ಸಂಯುಕ್ತಕ್ಕೆ ವರ್ಗಾಯಿಸುವ ಒಂದು ಸಂಯುಕ್ತ ವಸ್ತು.

• ಹೆಚ್ಚಿನ ಎಲ್ಲಾ ಆಮ್ಲಗಳು ಹುಳಿ ರುಚಿಯನ್ನು ಹೊಂದಿದ್ದು, ಸಂಪರ್ಕಕ್ಕೆ ಬಂದಲ್ಲಿ ಚರ್ಮವನ್ನು ಸುಡುತ್ತದೆ.

• ಹೆಚ್ಚಿನ ಲೋಹಗಳು ಆಮ್ಲಗಳಲ್ಲಿ ಕರಗುತ್ತದೆ. ನೀಲಿ ಲಿಟ್ಮಸ್ನ್ನು ಕೆಂಪಾಗಿಸುತ್ತದೆ. ಕ್ಷಾರಗಳು ಆಮ್ಲಗಳನ್ನು ಸ್ಥಿರಗೊಳಿಸುತ್ತವೆ.

• ಆಮ್ಲದ ಕೆಲವು ಹನಿಗಳನ್ನು ನೀರಿನಲ್ಲಿ ಸೇರಿಸುವುದರಿಂದ ನೀರು ಉತ್ತಮ ವಿದ್ಯುತ್ ವಾಹಕವಾಗುತ್ತದೆ.

• ಆಮ್ಲಗಳು ನೀರಿನಲ್ಲಿ ವಿಲೀನವಾಗುತ್ತವೆ.

• ವಿಟಮಿನ್ ಸಿ ಯನ್ನು ರಾಸಾಯನಿಕವಾಗಿ ಆಸ್ಕೋರ್ಬಿಕ್ ಆಮ್ಲವೆಂದು ಕರೆಯಲಾಗುತ್ತದೆ. ನಿಂಬೆಹಣ್ಣು, ಕಿತ್ತಲೆಹಣ್ಣು, ನೆಲ್ಲಿಕಾಯಿ ಮತ್ತು ದ್ರಾಕ್ಷಿ ಹಣ್ಣಿನಂತಹ ಹಣ್ಣುಗಳು 'ವಿಟಮಿನ್ ಸಿ' ಯ ಆಕರವಾಗಿವೆ.

• ಕೆಂಪು ಇರುವೆ ಮತ್ತು ಜೇನುಹುಳುವಿನಿಂದ ಕಚ್ಚಿಸಿಕೊಂಡಾಗ ಚರ್ಮದ ಮೇಲೆ ಉರಿಯಾಗುತ್ತದೆ ಏಕೆಂದರೆ ಈ ಕೀಟಗಳು ಕಚ್ಚಿದಾಗ ವ್ಯಕ್ತಿಯ ದೇಹದ ಒಳಗೆ ಫಾರ್ಮಿಕ್ ಆಮ್ಲವನ್ನು ಸೇರಿಸುತ್ತವೆ.

• ಆಮ್ಲಗಳು ಕಬ್ಬಿಣ ಮತ್ತು ಅಲ್ಯೂಮಿನಿಯಮ್ನಂತಹ ಲೋಹಗಳನ್ನು ಸಂಕ್ಷಾರಣಗೊಳಿಸುವುದರಿಂದ ಆಮ್ಲಗಳನ್ನು ಲೋಹದ ಪಾತ್ರೆಗಳಲ್ಲಿ ಶೇಖರಿಸುವುದಿಲ್ಲ. ಅವುಗಳನ್ನು ಗಾಜಿನ ಪಾತ್ರೆಗಳಲ್ಲಿ ಶೇಖರಿಸುವುದು ಸುರಕ್ಷಿತವಾಗಿರುತ್ತದೆ.

ಆಮ್ಲದ ವಿಧಗಳು


ಆಮ್ಲಗಳನ್ನು ಜೈವಿಕ ಮತ್ತು ಖನಿಜಯುಕ್ತ ಆಮ್ಲಗಳೆಂದು ವಿಂಗಡಿಸಲಾಗಿದೆ.
1. ಜೈವಿಕ ಅಮ್ಲಗಳು (Organic Acids)
ನೈಸರ್ಗಿಕವಾಗಿ ಸಿಗುವ ಆಮ್ಲಗಳನ್ನು ಜೈವಿಕ ಆಮ್ಲಗಳೆನ್ನುವರು ಅಥವಾ ಇಂಗಾಲದ ಪರಮಾಣುಗಳನ್ನು ಹೊಂದಿರುವ ಆಮ್ಲಗಳನ್ನು ಜೈವಿಕ ಆಮ್ಲಗಳೆಂದು ಕರೆಯುತ್ತಾರೆ. ಉದಾ; ಸಿಟ್ರಿಕ್ ಆಮ್ಲ, ಟಾರ್ಟಾರಿಕ್ ಆಮ್ಲ, ಇತ್ಯಾದಿ.
2. ಅಜೈವಿಕ (inorganic Acids) ಅಥವಾ ಖನಿಜಯುಕ್ತ ಆಮ್ಲಗಳು (Minerals Acids)*
ಭೂಮಿಯಲ್ಲಿ ಸಿಗುವ ಆಮ್ಲಗಳನ್ನು ಬಳಸಿ ಖನಿಜಯುಕ್ತ ಆಮ್ಲಗಳನ್ನು ತಯಾರಿಸುತ್ತಾರೆ. ಅಥವಾ ಇಂಗಾಲದ ಪರಮಾಣುಗಳನ್ನು ಹೊಂದಿಲ್ಲದ ಅಮ್ಲಗಳನ್ನು ಅಜೈವಿಕ ಅಮ್ಲಗಳೆಂದೂ ಕರೆಯುತ್ತಾರೆ. ಅಜೈವಿಕ ಆಮ್ಲಗಳಿಗೆ ಉದಾಹರಣೆಯೆಂದರೆ, ನೈಟ್ರಿಕ್ ಆಮ್ಲ (HNO3), ಗಂಧಕಾಮ್ಲ (H2SO4), ಹೈಡ್ರೊಕ್ಲೋರಿಕ್ ಆಮ್ಲ (HCI), ಇತ್ಯಾದಿ.

ಪ್ರಮುಖ ಆಮ್ಲಗಳು


1) ನೈಟ್ರಿಕ್ ಆಮ್ಲ


• ತಾಮ್ರ, ಹಿತ್ತಾಳೆ ಅಥವಾ ಕಂಚಿನಂತಹ ಲೋಹಗಳ ಮೇಲೆ ಹೆಸರು ಅಥವಾ ವಿನ್ಯಾಸಗಳನ್ನು ರಚಿಸಲು ಬಳಸುತ್ತಾರೆ.
• ಚಿನ್ನ ಅಥವಾ ಬೆಳ್ಳಿಯಂತಹ ಬೆಲೆಬಾಳುವ ಲೋಹಗಳನ್ನು ಶುದ್ಧೀಕರಿಸಲು ಬಳಸುತ್ತಾರೆ.
• ಅದಿರುಗಳಿಂದ ಲೋಹಗಳನ್ನು ಪಡೆಯಲು ಬಳಸುತ್ತಾರೆ.
• ಕೆಲವು ಬಣ್ಣಗಳು, ಸುಗಂಧದ್ರವ್ಯಗಳು, ಪ್ಲಾಸ್ಟಿಕ್ಗಳು, ರೇಯಾನ್ (ಕೃತಕ ರೇಷ್ಮೆ)ಗಳು, ಗೊಬ್ಬರಗಳು (ಅಮೋನಿಯಮ್ ನೈಟ್ರೇಟ್), ಸ್ಫೋಟಕಗಳು (ಟ್ರೈನೈಟ್ರೋ ಟಾಲಿನ್ ಮತ್ತು ನೈಟ್ರೋ ಗ್ಲಿಸೆರಿನ್ ನಂತಹ) ಮತ್ತು ಔಷದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.

2) ಹೈಡ್ರೋಕ್ಲೋರಿಕ್ ಆಮ್ಲ (HCI)


• ಸಾಮಾನ್ಯ ಲವಣವನ್ನು ಶುದ್ಧೀಕರಿಸಲು ಬಳಸುತ್ತಾರೆ.
• ಅಂಟು (glue) ತಯಾರಿಸಲು ಬಳಸುತ್ತಾರೆ.
• ಗ್ಲೂಕೋಸ್ ಮತ್ತು ಕ್ಲೋರೈಡ್ಗಳ ತಯಾರಿಕೆಯಲ್ಲಿ ಬಳಸುತ್ತಾರೆ.
• ಬಟ್ಟೆ ಕಾರ್ಖಾನೆಗಳಲ್ಲಿ ಚೆಲುವೆಕಾರಿ (bleaching)ಯಾಗಿ ಬಳಸುತ್ತಾರೆ.
• ಲೋಹಗಳ ಲೇಪನ, ಬೆಸುಗೆ ಅಥವಾ ಗ್ಯಾಲ್ವನೀಕರಿಸುವ ಮುಂಚೆ ಅವುಗಳನ್ನು ಶುದ್ಧೀಕರಿಸಲು ಬಳಸುತ್ತಾರೆ.

3) ಸಲ್ಫೂರಿಕ್ ಆಮ್ಲ


• ಪೆಟ್ರೋಲನ್ನು ಶುದ್ಧೀಕರಿಸಲು ಬಳಸುತ್ತಾರೆ.
• ಗೊಬ್ಬರಗಳು (ಅಮೋನಿಯಮ್ ಸಲ್ಫೆಟ್, ಸೂಪರ್ ಫಾಸ್ಪೇಟ್) ಮಾರ್ಜಕಗಳು, ಮದ್ದುಗಳು, ಪ್ಲಾಸ್ಟಿಕ್ಗಳು,
• ಪೇಂಟ್ ಮತ್ತು ರಾಸಾಯನಿಕಗಳು (ತಾಮ್ರದ ಸಲ್ಫೆಟ್, ಎಪ್ಸಮ್ ಲವಣ) ತಯಾರಿಕೆಗಳಲ್ಲಿ ಬಳಸುತ್ತಾರೆ.
• ಕಾಗದ, ಚರ್ಮ, ಬಟ್ಟೆ ಮತ್ತು ಆಟೋಮೊಬೈಲ್ಗಳ ಕಾರ್ಖಾನೆಗಳಲ್ಲಿ ಬಳಸುತ್ತಾರೆ.
• ಪ್ರಯೋಗಾಲಯದಲ್ಲಿ ಕಾರ್ಬನ್ ಡೈಆಕ್ಸೈಡನ್ನು ತಯಾರಿಸಲು ಸೋಡಿಯಮ್ ಕಾರ್ಬೋನೇಟ್ ನೊಂದಿಗೆ ಸಲ್ಫೂರಿಕ್ ಆಮ್ಲದ ವರ್ತನೆಯ ಕ್ರಿಯೆಯನ್ನು ಬಳಸುವರು.
• ಸಲ್ಫೂರಿಕ್ ಆಮ್ಲವು ಅನೇಕ ಉಪಯೋಗಗಳನ್ನು ಹೊಂದಿರುವುದರಿಂದ ಇದನ್ನು ಅಮ್ಲಗಳ ರಾಜ ಎನ್ನುವರು.
• ಮೆಗ್ನೀಸಿಯಮ್ ಸಲ್ಫೇಟನ್ನು (MgSo4, 7H2O) ಎಪ್ಸಮ್ ಲವಣ ಎನ್ನುವರು. ಇದು ನೀರಿನಲ್ಲಿ ನೈಸರ್ಗಿಕವಾಗಿ ಕಾಣಸಿಗುವ ಖನಿಜ. ಇದನ್ನು ಇಂಗ್ಲೆಂಡ್ನ ಎಪ್ಸಮ್ ಎನ್ನುವ ನಗರದಲ್ಲಿ ಪ್ರಥಮವಾಗಿ ಭಟ್ಟಿ ಇಳಿಸಿದ್ದರಿಂದ ಇದಕ್ಕೆ ಆ ಹೆಸರು ಬಂದಿದೆ.
• ಚಿನ್ನ ಮತ್ತು ಪ್ಲಾಟಿನಮ್ನಂತಹ ಲೋಹಗಳ ವಿನ್ಯಾಸಗಳನ್ನು ಕೆತ್ತನೆ ಮಾಡಲು 'ಆಕ್ವಾರೇಜಿಯಾವನ್ನು' ಬಳಸುತ್ತಾರೆ.

ಪ್ರಮುಖ ವಸ್ತುಗಳು ಮತ್ತು ಅವುಗಳು ಹೊಂದಿರುವ ಆಮ್ಲಗಳು


1. ಮೊಸರು (ಹಾಲು ಮತ್ತು ಹಾಲಿನ ಉತ್ಪನ್ನಗಳು) -ಲ್ಯಾಕ್ಟಿಕ್ ಆಮ್ಲ
2. ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ-ಹೈಡ್ರೋಕ್ಲೋರಿಕ್ ಆಮ್ಲ-
3. ವಿನೆಗರ್, ಸಣ್ಣ ಕರಳು-ದುರ್ಬಲ ಅಸಿಟಕ್ ಆಮ್ಲ
4. ತಂಪು ಪಾನೀಯ-ಕಾರ್ಬೋನಿಕ್ ಆಮ್ಲ
5. ಟೊಮೆಟೊ-ಆಕ್ಸಾಲಿಕ್ ಆಮ್ಲ
6. ಹುಣೆಸೆಹಣ್ಣು-ಟಾರ್ಟಾರಿಕ್ ಆಮ್ಲ
7. ಕಾರಿನ ಬ್ಯಾಟರಿ-ಸಲ್ಫೂರಿಕ್ ಆಮ್ಲ
8. ನಿಂಬೆ ಹಣ್ಣು, ಕಿತ್ತಲೆ-ಸಿಟ್ರಿಕ್ ಆಮ್ಲ ಮತ್ತು ಆಸ್ಕೋರ್ಬಿಕ್ ಆಮ್ಲ
9. ಇರುವೆ ಕಚ್ಚಿದಾಗ-ಪಾರ್ಮಿಕ್ ಆಮ್ಲ
10. ಕೃತಕ ರಸಗೊಬ್ಬರ ತಯಾರಿಕೆ-ನೈಟ್ರಿಕ ಆಮ್ಲ
11. ಮಾನವನ ಮೂತ್ರದಲ್ಲಿರುವುದು-ಯೂರಿಕ್ ಆಮ್ಲ
12. ಪ್ರಾಣಿಗಳ ಕೊಬ್ಬು-ಸ್ಪಿಯರಿಕ್ ಆಮ್ಲ
13. ಹುಣಸೆ, ದ್ರಾಕ್ಷಿ, ಮಾವು-ಟಾರ್ಟಾರಿಕ್ ಆಮ್ಲ
14. ಈರುಳ್ಳಿ ಮತ್ತು ಬೆಳ್ಳುಳ್ಳಿ-ಸಲ್ಪೂರಿಕ್ ಆಮ್ಲ
15. ಸಸ್ಯದ ಬೇಳವಣಿಗೆ ನಿಯಂತ್ರಿಸುವ ಆಮ್ಲ-ಗಿಬ್ಲಾರಿಕ್ ಆಮ್ಲ
16. ಜಾಮ್ ಮತ್ತು ಕಾರ್ಬನಿಕ್ ದ್ರಾಕ್ಷಿ ಪಾನೀಯಗಳ ತಯಾರಿಕೆಯಲ್ಲಿ ಬಳಸುವ ಆಮ್ಲ -ಟಾರ್ಟಾರಿಕ್ ಆಮ್ಲ

ಪ್ರತ್ಯಾಮ್ಲಗಳು (Bases)


• ರಾಸಾಯನಿಕ ಸಂಯುಕ್ತದಿಂದ ವಸ್ತುವಿನ ರುಚಿ ಕಹಿಯಾಗಿರುತ್ತದೆ. ಕಹಿ ರುಚಿ ಹೊಂದಿರುವ ರಾಸಾಯನಿಕ ಸಂಯುಕ್ತಗಳನ್ನು ಪ್ರತ್ಯಾಮ್ಲಗಳು ಎನ್ನುವರು.
• ಪ್ರತ್ಯಾಮ್ಲಗಳನ್ನು ಮುಟ್ಟಿದಾಗ ಸೋಪಿನಂತೆ ಭಾಸವಾಗುತ್ತದೆ.
• ಪ್ರತ್ಯಾಮ್ಲಗಳ ದ್ರಾವಣಗಳು ಉತ್ತಮ ವಿದ್ಯುತ್ ವಾಹಕಗಳಾಗಿವೆ. ಮತ್ತು ಕೆಲವು ಪ್ರತ್ಯಾಮ್ಲಗಳು ಸಂಕ್ಷಾರಕಗಳಾಗಿವೆ.
• NaOH (Sodium hydroxide) ಅತ್ಯಂತ ಹೆಚ್ಚಿನ ಸಂಕ್ಷಾರಕ ಗುಣ ಹೊಂದಿರುವ ಪ್ರತ್ಯಾಮ್ಲ.
• ಅತ್ಯಂತ ಕಡಿಮೆ ಸಂಕ್ಷಾರಕವಾಗಿರುವ ಆಮ್ಲವೆಂದರೆ ಕಾರ್ಬಾನಿಕ್ ಆಮ್ಲ.
• ಕೆಂಪು ಲಿಟ್ಮಸ್ಗಳನ್ನು ನೀಲಿಯಾಗಿ ಪರಿವರ್ತಿಸುತ್ತವೆ.
• ಆಮ್ಲಗಳಲ್ಲಿ ಹೈಡ್ರೊಜನ್ ಭಾಗವಿದ್ದಂತೆ, ಪ್ರತ್ಯಾಮ್ಲಗಳಲ್ಲಿ ಹೈಡ್ರಾಕ್ಸಿಲ್(OH) ಭಾಗವಿರುತ್ತದೆ.
• ಒಂದು ಅಥವಾ ಹೆಚ್ಚಿನ ಹೈಡ್ರಾಕ್ಸಿಲ್ ಗುಂಪುಗಳು ಲೋಹಗಳೊಂದಿಗೆ ಸೇರುವ ಮೂಲಕ ಪ್ರತ್ಯಾಮ್ಲ ಉಂಟಾಗುತ್ತದೆ.
• ಲೋಹಗಳ ಆಕ್ಸೈಡ್ ಮತ್ತು ಹೈಡ್ರಾಕ್ಸೈಡ್ಗಳು ಪ್ರತ್ಯಾಮ್ಲಗಳಾಗಿವೆ.
• ಎಲ್ಲಾ ಪ್ರತ್ಯಾಮ್ಲಗಳು ನೀರಿನಲ್ಲಿ ಕರಗುವುದಿಲ್ಲ. ನೀರಿನಲ್ಲಿ ಕರಗುವ ಪ್ರತ್ಯಾಮ್ಲಗಳು ಹೈಡ್ರಾಕ್ಸಿಲ್ ಗುಂಪನ್ನು(OH) ಬಿಡುಗಡೆ ಮಾಡುವುದರಿಂದ ಅವುಗಳನ್ನು ಕ್ಷಾರಗಳು(alkalis) ಎನ್ನುವರು.
• ಎಲ್ಲಾ ಕ್ಷಾರಗಳು ಪ್ರತ್ಯಾಮ್ಲಗಳಾಗಿವೆ. ಆದರೆ ಎಲ್ಲಾ ಪ್ರತ್ಯಾಮ್ಲಗಳು ಕ್ಷಾರಗಳಲ್ಲ.
• ನೀರಿನಲ್ಲಿ ಕರಗುವ ಪ್ರತ್ಯಾಮ್ಲಗಳು ಕ್ಷಾರಗಳು ಉದಾ; ಸೋಡಿಯಂ ಹೈಡ್ರಾಕ್ಸೈಡ್, ಪೊಟ್ಯಾಸಿಯಮ್ ಹೈಡ್ರಾಕ್ಸೈಡ್
• ನೀರಿನಲ್ಲಿ ಕರಗದ ಪ್ರತ್ಯಾಮ್ಲಗಳು ಕ್ಷಾರಗಳಲ್ಲ. ಉದಾ; ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್, ತಾಮ್ರದ ಹೈಡ್ರಾಕ್ಸೈಡ್.

ರಾಸಾಯನಿಕ ಗುಣಗಳು


ಪ್ರತ್ಯಾಮ್ಲಗಳು, ಆಮ್ಲಗಳೊಂದಿಗೆ ವರ್ತಿಸಿ, ಲವಣ ಮತ್ತು ನೀರನ್ನು ಕೊಡುತ್ತವೆ. ಉದಾಹರಣೆಗೆ, ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್ ಎಂಬ ಪ್ರತ್ಯಾಮ್ಲವು ಸಲ್ಫೂರಿಕ್ ಆಮ್ಲದೊಂದಿಗೆ ವರ್ತಿಸಿದಾಗ, ಕ್ಯಾಲ್ಸಿಯಮ್ ಸಲ್ಫೇಟ್ ಲವಣ ಮತ್ತು ನೀರು ಉಂಟಾಗುತ್ತದೆ.
ಉದಾ;
1) ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್ + ಸಲ್ಫೂರಿಕ್ ಆಮ್ಲ → ಕ್ಯಾಲ್ಸಿಯಮ್ ಸಲ್ಫೇಟ್ + ನೀರು (ಲವಣ)
2) ಸೋಡಿಯಮ್ ಹೈಡ್ರಾಕ್ಸೈಡ್ + ಹೈಡ್ರೊಕ್ಲೋರಿಕ್ ಆಮ್ಲ → ಸೋಡಿಯಮ್ ಕ್ಲೋರೈಡ್ (ಲವಣ) + ನೀರು

ಪ್ರತ್ಯಾಮ್ಲಗಳ ಉಪಯೋಗಗಳು


ಸೋಡಿಯಮ್ ಹೈಡ್ರಾಕ್ಸೈಡ್, ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್ ಮತ್ತು ಅಮೋನಿಯಮ್ ಹೈಡ್ರಾಕ್ಸೈಡ್ಗಳು ಸಾಮಾನ್ಯವಾಗಿ ಬಳಸುವ ಪ್ರತ್ಯಾಮ್ಲಗಳಾಗಿವೆ.

1. ಸೋಡಿಯಮ್ ಹೈಡ್ರಾಕ್ಸೈಡ್(NaOH) (ಕಾಸ್ಟಿಕ್ ಸೋಡ)ನ ಉಪಯೋಗಗಳು


• ಬಟ್ಟೆ, ಪ್ಲಾಸ್ಟಿಕ್ ಮತ್ತು ಸಾಬೂನಿನ ಕಾರ್ಖಾನೆಗಳಲ್ಲಿ ಬಳಸುತ್ತಾರೆ.
• ಪೆಟ್ರೋಲಿಯಮ್ ಶುದ್ಧೀಕರಣದಲ್ಲಿ ಬಳಸುತ್ತಾರೆ.
• ರೇಯಾನ್, ಔಷಧಿಗಳು ಮತ್ತು ಕಾಗದದ ತಯಾರಿಕೆಯಲ್ಲಿ ಬಳಸುತ್ತಾರೆ.

2. ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್ (ಸುಣ್ಣದ ನೀರು)ನ ಉಪಯೋಗಗಳು


• ಗೋಡೆಗೆ ಸುಣ್ಣ ಹೊಡೆಯುವಾಗ ಬಳಸುತ್ತಾರೆ.
• ಆಮ್ಲದ ವಿಷ ಉಣಿಕೆಯಲ್ಲಿ ಪ್ರತಿ ಮದ್ದಾಗಿ ಬಳಸುತ್ತಾರೆ.
• ಚೆಲುವೆಪುಡಿ (bleaching powder), ಸಿಮೆಂಟ್, ಗಾರೆ ಮತ್ತು ಶಿಲೀಂಧ್ರನಾಶಕಗಳ ತಯಾರಿಕೆಯಲ್ಲಿ ಬಳಸುತ್ತಾರೆ.
• ಪ್ರಾಣಿಗಳ ಚರ್ಮದಿಂದ ತುಪ್ಪಳ(fur)ವನ್ನು ಬೇರ್ಪಡಿಸಲು ಬಳಸುತ್ತಾರೆ.

3. ಅಮೋನಿಯಮ್ ಹೈಡ್ರಾಕ್ಸೈಡ್ ನ ಉಪಯೋಗಗಳು


• ಬಟ್ಟೆಗಳ ಮೇಲೆ ಶಾಯಿಯಿಂದ ಉಂಟಾದ ಕಲೆಗಳನ್ನು ಮತ್ತು ಗ್ರೀಸ್ನಿಂದ ಉಂಟಾದ ಕಲೆಗಳನ್ನು ಅಳಿಸಲು ಬಳಸುತ್ತಾರೆ.
• ಅಮೋನಿಯಮ್ ನೈಟ್ರೇಟ್ನಂತಹ ಗೊಬ್ಬರಗಳು, ಬಣ್ಣ, ಪ್ಲಾಸ್ಟಿಕ್ ಹಾಗೂ ನೈಲಾನ್ನ ತಯಾರಿಕೆಯಲ್ಲಿ ಬಳಸುತ್ತಾರೆ.

ತಟಸ್ಥೀಕರಣ


• ಪ್ರತ್ಯಾಮ್ಲಗಳು ಆಮ್ಲಗಳೊಂದಿಗೆ ವರ್ತಿಸಿ ಅನುಕ್ರಮ ಲವಣ ಮತ್ತು ನೀರು ಬಿಡುಗಡೆಯಾಗುವುದನ್ನು ತಟಸ್ಥೀಕರಣ ಕ್ರಿಯೆ ಎನ್ನುವರು. ಇದರಿಂದ ಉಂಟಾದ ದ್ರಾವಣವನ್ನು ತಟಸ್ಥ ದ್ರಾವಣ ಎನ್ನುವರು.
• ಈ ದ್ರಾವಣದ ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಗಳು ಅಳಿಸಿಹೋಗಿ ತಟಸ್ಥ ದ್ರಾವಣವಾಗುವುದರಿಂದ ಇದನ್ನು ತಟಸ್ಥ ದ್ರಾವಣ ಎನ್ನುವರು.

ತಟಸ್ಥೀಕರಣದ ಅನ್ವಯಗಳು


1) ಜೇನು ಹುಳುವಿನ ಮುಳ್ಳುಗಳು ಆಮ್ಲೀಯವಾಗಿವೆ. ಆದ್ದರಿಂದ ಪ್ರತ್ಯಾಮ್ಲವಾದ ಬೇಕಿಂಗ್ ಪುಡಿ (ಸೋಡಿಯಮ್ ಬೈಕಾರ್ಬೊನೇಟ್)ಯನ್ನು ಜೇನುಹುಳು ಕುಟುಕಿದ ಭಾಗದಲ್ಲಿ ಹಚ್ಚುವುದರಿಂದ ತಟಸ್ಥೀಕರಣಗೊಂಡು ಚರ್ಮದ ಮೇಲಿನ ನೋವು ಮತ್ತು ಉರಿ ಕಡಿಮೆಯಾಗುತ್ತದೆ.
2. ಆಹಾರ ಜೀರ್ಣವಾಗಲು ಅವಶ್ಯಕವಾಗಿರುವ ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲವು ಸ್ವಲ್ಪ ಪ್ರಮಾಣದಲ್ಲಿ ನಮ್ಮ ಜಠರದಲ್ಲಿದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದಲ್ಲಿ ಅಥವಾ ಅಹಿತಕರ ಆಹಾರ ಸೇವನೆ ಮಾಡಿದಾಗ ಜಠರದಲ್ಲಿ ಹೆಚ್ಚಿನ ಆಮ್ಲ ಉತ್ಪತ್ತಿಯಾಗಿ ಅಸ್ವಸ್ಥತೆ ಉಂಟಾಗುತ್ತದೆ. ಆಮ್ಲ ರೋಧಕ (antacid)ಗಳನ್ನು (ಪ್ರತ್ಯಾಮ್ಲವಿರುವ) ಬಳಸಿ ಅಸ್ವಸ್ಥತೆ ನಿವಾರಿಸಬಹುದು. ಇದರಿಂದ ಜಠರವು ತಟಸ್ಥೀಕರಣಗೊಳ್ಳುತ್ತದೆ.
3. ರೈತರು ಆಮ್ಲೀಯ ಗುಣವಿರುವ ಮಣ್ಣಿಗೆ ಸುಣ್ಣ (ಕ್ಯಾಲ್ಸಿಯಮ್ ಆಕ್ಸೈಡ್)ವನ್ನು ಬೆರೆಸುತ್ತಾರೆ. ಏಕೆಂದರೆ ಮಣ್ಣನ್ನು ಹೀಗೆ ತಟಸ್ಥಗೊಳಿಸುವುದರಿಂದ ಗಿಡಗಳು ಬೆಳೆಯಲು ಸಹಾಯವಾಗುತ್ತದೆ. ಹೆಚ್ಚು ಆಮ್ಲವಿರುವ ಅಥವಾ ಹೆಚ್ಚು ಪ್ರತ್ಯಾಮ್ಲವಿರುವ ಮಣ್ಣಿನಲ್ಲಿ ಗಿಡಗಳು ಚೆನ್ನಾಗಿ ಬೆಳೆಯುವುದಿಲ್ಲ.