ಸ್ವತಂತ್ರ ಭಾರತ
 
• 1945ರಲ್ಲಿ ಇಂಗ್ಲೆಂಡ್ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿತು. ಆ ಪಕ್ಷದ ನಾಯಕ ಆಟ್ಲಿ ಭಾರತದ ಆರಂಭದಿಂದಲೂ ಅನುಕಂಪ ಹೊಂದಿದ್ದರು. ಆದ್ದರಿಂದ ಮೌಂಟ್ ಬ್ಯಾಟನ್ ವರದಿಯನ್ನು ಆಧರಿಸಿ 1947ರ ಜೂನ್ 3ರಂದು ಬ್ರಿಟಿಷ್ ಸರ್ಕಾರ ಮಾಡಿದ ಘೋಷಣೆಯು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳ ಅಸ್ತಿತ್ವಕ್ಕೆ ಕಾರಣವಾಯಿತು.
• ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ 4 ಜುಲೈ 1947ರಂದು ಭಾರತೀಯ ಸ್ವಾತಂತ್ರ್ಯ ಶಾಸನವನ್ನು ಮಾಡಲಾಯಿತು. ಆದರೆ 1947ರ ಆಗಸ್ಟ್ 15 ರಂದು ಭಾರತದ ಸರ್ವಸ್ವತಂತ್ರ ರಾಷ್ಟ್ರವಾಯಿತು.
• ರಾಜಧಾನಿ ನವದೆಹಲಿಯಲ್ಲಿ ಡೊಮಿನಿಯನ್ ಭಾರತದ ಮೊಟ್ಟಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅಧಿಕಾರರೂಢರಾದರು.
• ಲಾರ್ಡ್ ಮೌಂಟ್ ಬ್ಯಾಟನ್ನ್ನು ಸ್ವತಂತ್ರ ಡೊಮಿನಿಯನ್ ಭಾರತದ ಮೊದಲ ಗವರ್ನರ್ ಜನರಲ್ನನ್ನಾಗಿ ನೇಮಕ ಮಾಡಲಾಯಿತು.
• ಭಾರತದ ಸ್ವಾತಂತ್ರ್ಯದ ಜೊತೆಯಲ್ಲೇ ಹಲವಾರು ಜ್ವಲಂತ ಸಮಸ್ಯೆಗಳು ರೂಪ ಪಡೆದವು. ಲಕ್ಷಾಂತರ ನಿರಾಶ್ರಿತರ ಸಮಸ್ಯೆ, ಕೋಮುಗಲಭೆಗಳು, ದೇಶೀಯ ಸಂಸ್ಥಾನಗಳ ವಿಲೀನೀಕರಣ, ಆಹಾರದ ಉತ್ಪಾದನೆ, ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ನಿವಾರಿಸಬೇಕಾಗಿತ್ತು.
ನಿರಾಶ್ರಿತರ ಸಮಸ್ಯೆ
ಭಾರತದಿಂದ ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಲಕ್ಷಾಂತರ ಜನ ತಮ್ಮ ತಮ್ಮ ಹುಟ್ಟಿದ ಊರುಗಳನ್ನು, ಬೆಳೆದ ಪರಿಸರವನ್ನು, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಬೇರೆ ಪ್ರದೇಶಗಳಿಗೆ ವಲಸೆ ಹೋಗಬೇಕಾಯಿತು. ಈ ರೀತಿಯಾಗಿ ನಿರಾಶ್ರಿತರಾದ ಜನರಿಗೆ ವಸತಿ, ಉದ್ಯೋಗ, ಭೂಮಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ವಾತಾವರಣ ಎಲ್ಲವನ್ನೂ ನಿರ್ಮಿಸಿಕೊಡಬೇಕಾದ ಬೃಹತ್ ಜವಾಬ್ದಾರಿ ನೆಹರು ಸರ್ಕಾರದ ಮೇಲೆ ಬಿದ್ದಿತು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದವು.
ಮತೀಯ ಗಲಭೆಗಳು
ಬ್ರಿಟಿಷರ ಕುತಂತ್ರದಿಂದ ವಿಭಿನ್ನ ಧರ್ಮಗಳ ಜನರ ನಡುವೆ ಇದ್ದ ಸೌಹಾರ್ದತೆಯ ಕೊಂಡಿ ಸಡಿಲವಾಗಿತ್ತು. ಒಟ್ಟಿಗೆ ಬಾಳಿದವರ ನಡುವೆ ಮತೀಯ ದ್ವೇಷ ಉಲ್ಬಣಿಸಿ ಸಾಮಾನ್ಯ ಜನರು ಅಪಾರವಾದ ಕಷ್ಟ-ನಷ್ಟಗಳನ್ನು ಅನುಭವಿಸಿದರು. ಜನರ ಮತ್ತು ದೇಶದ ಐಕ್ಯತೆಯನ್ನು ನಾಶ ಮಾಡುವ ಮತೀಯ ಗಲಭೆಗಳನ್ನು ನಿಯಂತ್ರಣಕ್ಕೆ ತರಬೇಕೆಂದು ಮಹಾತ್ಮ ಗಾಂಧಿಯವರು ಬಹಳಷ್ಟು ಶ್ರಮಿಸಿದರು. ಎರಡೂ ದೇಶಗಳ ಜನರಲ್ಲಿ ಭಾವೋದ್ರೇಕದಿಂದ ಉಂಟಾಗಿದ್ದ ಆಕ್ರೋಶವು ವಿಮೋಚನೆಗೊಳ್ಳಬೇಕೆಂದು ಗಾಂಧಿಯವರು ಕಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಾ ಉಪವಾಸವನ್ನು ಕೈಗೊಂಡರು.
ದೇಶೀಯ ಸಂಸ್ಥಾನಗಳ ವಿಲೀನೀಕರಣ
• ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ 562 ಸಂಸ್ಥಾನಗಳಿದ್ದವು.
• 1947ರ ವಿಲೀನ ಕಾಯ್ದೆಯ ಪ್ರಕಾರ ಭಾರತ ಸರ್ಕಾರ ಎಲ್ಲಾ ದೇಶೀಯ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಆಹ್ವಾನ ನೀಡಿತು.
• ಸಂಸ್ಥಾನಗಳು ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಜುನಾಗಢ್, ಹೈದರಾಬಾದ್ ಮತ್ತು ಜಮ್ಮು ಕಾಶ್ಮೀರ, ಈ ಮೂರು ಸಂಸ್ಥಾನಗಳು ತೀವ್ರ ಪ್ರತಿರೋಧವನ್ನು ತೋರಿದವು.
• ಭಾರತದ ಪ್ರಥಮ ಗೃಹಮಂತ್ರಿ ವಲ್ಲಭ ಭಾಯಿ ಪಟೇಲರ ನೇತೃತ್ವದಲ್ಲಿ ಭಾರತದ ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುವ ಕಾರ್ಯಭಾರವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.
ಜುನಾಗಢ್
ಇದರ ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಚಿಸಿದ್ದನು. ಆಗ ಅಲ್ಲಿನ ಪ್ರಜೆಗಳು ಆತನ ವಿರುದ್ಧ ಬೀದಿಗಿಳಿದರು. ಇದನ್ನು ಎದುರಿಸಲಾಗದೆ ನವಾಬನು ರಾಜ್ಯ ಬಿಟ್ಟು ಪಲಾಯನ ಮಾಡಿದನು.ಹಾಗಾಗಿ ಜುನಾಗಢ ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೆ ಸೇರಬೇಕೇ ಎಂದು ಜನಮತ ನಡೆಸಲಾಯಿತು.ಜನಮತಗಣನೆಯಲ್ಲಿ ಅತಿ ಹೆಚ್ಚು ಜನರು ಭಾರತದ ಪರವಾಗಿ ಮತದಾನ ಮಾಡಿದ್ದರಿಂದ, 1949ರಲ್ಲಿ ಜುನಾಗಢ್ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು.
ಹೈದರಾಬಾದ್
ಈ ಸಂಸ್ಥಾನವು ನಿಜಾಮನ ಅಧೀನದಲ್ಲಿತ್ತು. ಈತನು ಸ್ವತಂತ್ರವಾಗುಳಿಯುವ ಉದ್ದೇಶದಿಂದ ಭಾರತಕ್ಕೆ ಸೇರಲು ನಿರಾಕರಿಸಿದನು. ಇದೇ ಸಂದರ್ಭದಲ್ಲಿ ಪೊಲೀಸ್ ಕಾರ್ಯಾಚರಣೆಯಿಂದ ನಿಜಾಮನನ್ನು ಸೋಲಿಸಿ ಹೈದರಾಬಾದ್ ಸಂಸ್ಥಾನವನ್ನು 1948ರಲ್ಲಿ ಭಾರತದೊಂದಿಗೆ ವಿಲೀನಗೊಳಿಸಲಾಯಿತು.
ಜಮ್ಮು-ಕಾಶ್ಮೀರ
ಜಮ್ಮು ಕಾಶ್ಮೀರಿನ ರಾಜನಾಗಿದ್ದ ಹರಿಸಿಂಗ್ನು ಸ್ವತಂತ್ರವಾಗುಳಿಯಲು ನಿರ್ಧರಿಸಿದ್ದನು. ಜಮ್ಮು ಕಾಶ್ಮೀರವು ಭಾರತಕ್ಕೆ ಸೇರಿ ಬಿಡಬಹುದೆಂಬ ಆಂತಕದಿಂದ ಪಾಕಿಸ್ತಾನವು ಕಾಶ್ಮೀರ ಕಣಿವೆಯ ಮುಸ್ಲಿಂ ಬುಡಕಟ್ಟು ಜನರನ್ನು ದಾಳಿ ಮಾಡುವಂತೆ ಪ್ರಚೋದಿಸಿ, ಕಾಶ್ಮೀರದ ವಾಯುವ್ಯ ಭಾಗವನ್ನು ವಶಪಡಿಸಿಕೊಂಡಿತು. ಇದರಿಂದ ಹೆದರಿದ ರಾಜಾ ಹರಿಸಿಂಗನು ಭಾರತ ಸರ್ಕಾರದ ಸಹಾಯವನ್ನು ಕೋರಿದನು. ಹಾಗಾಗಿ ಕಾಶ್ಮೀರ ಕೆಲವು ಷರತ್ತುಗಳೊಂದಿಗೆ ಭಾರತದೊಂದಿಗೆ ವಿಲೀನವಾಯಿತು.
ಪಾಂಡಿಚೇರಿ
ಸ್ವಾತಂತ್ರ್ಯದ ನಂತರದಲ್ಲಿ ಫ್ರೆಂಚ್ ವಸಾಹತುಶಾಹಿಗಳು ಪಾಂಡಿಚೇರಿ, ಕಾರೈಕಲ್, ಮಾಹೆ ಮತ್ತು ಚಂದ್ರನಗರಗಳ ಮೇಲಿನ ಹಿಡಿತವನ್ನು ಮುಂದುವರಿಸಿದ್ದರು. ಇವು ಭಾರತಕ್ಕೆ ಸೇರಬೇಕೆಂದು ನಡೆದ ಹೋರಾಟದ ಫಲವಾಗಿ 1954ರಲ್ಲಿ ಈ ಪ್ರದೇಶಗಳು ಭಾರತಕ್ಕೆ ಸೇರ್ಪಡೆಗೊಂಡವು.
ಗೋವಾ
ಪೋರ್ಚುಗೀಸರ ವಸಾಹತು ಆಡಳಿತದಲ್ಲಿ ಮುಂದುವರಿದ ಗೋವಾ, ಭಾರತಕ್ಕೆ ಸೇರಬೇಕೆಂದು ನಿರಂತರವಾದ ಚಳುವಳಿ ನಡೆಯಿತು. 1961ರಲ್ಲಿ ಭಾರತದ ಸೈನ್ಯ ಮಧ್ಯಪ್ರವೇಶಿಸಿ ಗೋವಾವನ್ನು ವಶಪಡಿಸಿಕೊಂಡಿತು.
ಭಾಷಾವಾರು ರಾಜ್ಯಗಳ ರಚನೆ
ಭಾರತ ಸ್ವತಂತ್ರಗೊಂಡ ನಂತರ ಕಂಡುಬಂದ ಪ್ರಮುಖವಾದ ಪ್ರಜಾಸತ್ತಾತ್ಮಕ ಚಳುವಳಿಯೆಂದರೆ ಭಾಷಾವಾರು ರಾಜ್ಯಗಳಿಗಾಗಿನ ಹೋರಾಟ. ಜನರಿಗೆ ಉತ್ತಮವಾದ ಆಡಳಿತವನ್ನು ನೀಡಲು ಜನರ ಭಾಷೆಯನ್ನು ಆಧರಿಸಿದ ಭೌಗೋಳಿಕ ಗಡಿಗಳನ್ನು ಗುರುತಿಸಬೇಕೆಂಬ ಒತ್ತಾಯ ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾಷಾವಾರು ರಾಜ್ಯಗಳನ್ನು ರಚಿಸಬೇಕೆಂಬ ಕೂಗು ತೀವ್ರವಾಗಿತ್ತು. ವಿಶಾಲಾಂಧ್ರ ರಾಜ್ಯ ರಚಿಸಬೇಕೆಂದು ಆಂಧ್ರಮಹಾಸಭಾದ ನೇತೃತ್ವದಲ್ಲಿ 1952ರಲ್ಲಿ ಪೊಟ್ಟಿ ಶ್ರೀರಾಮುಲು 58 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದ ನಂತರ ಈ ಬೇಡಿಕೆ ತೀವ್ರ ಸ್ವರೂಪವನ್ನು ಪಡೆಯಿತು. 1953ರಲ್ಲಿ ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು. ಇದರಲ್ಲಿ ಫಜಲ್ ಅಲಿ ಅಧ್ಯಕ್ಷರಾಗಿ, ಕೆ.ಎಂ.ಫಣಿಕ್ಕರ್ ಮತ್ತು ಹೆಚ್.ಎನ್.ಕುಂಜ್ರು ಸದಸ್ಯರಾಗಿದ್ದರು. ಮೊದಲ ಭಾಷಾವಾರು ರಾಜ್ಯವಾಗಿ 1953ರಲ್ಲಿ ಆಂಧ್ರಪ್ರದೇಶ ರಚನೆಯಾಯಿತು. ಈ ಆಯೋಗದ ವರದಿಯಂತೆ 1956ರಲ್ಲಿ ರಾಜ್ಯ ಪುನರ್ವಿಂಗಡಣಾ ಕಾನೂನು ಜಾರಿಗೆ ಬಂದಿತು. ಈ ಕಾನೂನಿನ ಪ್ರಕಾರ ಅಂದು ದೇಶದಲ್ಲಿ 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ರಚನೆಯಾದವು. ಇಂದು ಭಾರತದಲ್ಲಿ ಒಟ್ಟು 29 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ಹಾಗೂ ಒಂದು ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶವಾಗಿದೆ.