“ಭಯೋತ್ಪಾದನೆ ಭಾರತ ಮತ್ತು ವಿಶ್ವ”
ಭಯೋತ್ಪಾದನೆ ಎಂಬುದು ಪ್ರಸ್ತುತ ಮಾನವ ಜಗತ್ತು ಎದುರಿಸುತ್ತಿರುವ ಜ್ವಲಂತ ಸಾಮಾಜಿಕ ಪಿಡುಗು, ಇದು ಕಾಳ್ಗಿಚ್ಚಿನಂತೆ ವ್ಯಾಪಿಸಿಕೊಳ್ಳುತ್ತಾ ಮಾನವ ಸಮಾಜವನ್ನು ತನ್ನ ತಕ್ಕೆಗೆ ತೆಗೆದುಕೊಳ್ಳುವ ಮೂಲಕ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವಷ್ಟು ತೀವ್ರತೆಯನ್ನು ಪಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.
ವ್ಯವಸ್ಥಿತ ಬೆದರಿಕೆ ಮತ್ತು ಹಿಂಸಾತ್ಮಕ ಕೃತಗಳ ಮೂಲಕ ಸಮುದಾಯದಲ್ಲಿ ಆತಂಕ ಮೂಡಿಸುವುದನ್ನು ಭಯೋತ್ಪಾದನೆ ಎನ್ನಬಹುದು. ಇದರ ಪ್ರಮುಖ ಗುರಿಯು ರಾಜಕೀಯ ಅಥವಾ ಸಾಮಾಜಿಕ ಪರಿವರ್ತನೆಯನ್ನು ಬಯಸುವುದಾಗಿರುತ್ತದೆ. ಆದರೆ ತಮ್ಮ ಗುರಿಸಾಧನೆಗಾಗಿ ಭಯೋತ್ಪಾದನೆಯನ್ನೆ ಪ್ರಮುಖ ಅಸ್ತ್ರವಾಗಿ ಆಯ್ಕೆ ಮಾಡಿಕೊಳ್ಳಲು ಇರುವ ಮೂಲ ಕಾರಣವಾದರೂ ಏನು? ಎನ್ನುವುದು ಪ್ರಸ್ತುತ ನಮ್ಮ ಮುಂದಿರುವ ಸವಾಲು.
ತಾನು ಮಾಡುತ್ತಿರುವ ಕಾರ್ಯವು ಪವಿತ್ರವಾದುದು ಎಂಬ ದೃಢ ನಿಶ್ಚಯ ಮುಂತಾದ ನಿಷ್ಠೆ ಹುತಾತ್ಮನಾಗುವ ಹುಚ್ಚು ನಿರಂಕುಶ ಆಳ್ವಿಕೆಯ ಪ್ರಜ್ಞೆ ಹಣಕಾಸು ಮತ್ತು ಅಸ್ತ್ರಗಳ ಸಹಾಯ ಮುಂತಾದವುಗಳು ಭಯೋತ್ಪಾದನಾ ಅಸ್ತ್ರದ ಆಯ್ಕೆಗೆ ಇರುವ ಪ್ರಮುಖ ಮೂಲ ಕಾರಣಗಳೆಂದು ಗುರ್ತಿಸಬಹುದಾದರೂ ಇದು ಅಷ್ಟು ಸರಳವಾಗಿಲ್ಲ ಇದಕ್ಕಿರುವ ಐತಿಹಾಸಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಮುಂತಾದ ಕಾರಣಗಳು ಹತ್ತು ಹಲವು. ಭಯೋತ್ಪಾದನೆಯ ಮೂಲವನ್ನು ಪ್ರಮುಖವಾಗಿ ಆಧುನಿಕ ನಾಗರೀಕತೆ ಮತ್ತು ಕೈಗಾರೀಕರಣದಲ್ಲಿ ಗುರ್ತಿಸಬಹುದಾಗಿದೆ. ಇದು ಕ್ರಮೇಣ ಬಲಗೊಳ್ಳಲು ಸಂವಹನ ಸಾಧನಗಳು,
ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಹಣಕಾಸು, ಸಂಕೀರ್ಣ ಸಮಾಜ, ಮಾಧಕ ಪದಾರ್ಥಗಳ ಕಳ್ಳಸಾಗಣೆ, ಅಲ್ಪಸಂಖ್ಯಾತ ಅರಿವು ಮತ್ತು ಮೂಲಭೂತವಾದಗಳು ಕಾರಣವಾಗಿವೆ.
ಭಯೋತ್ಪಾದನೆಯನ್ನು ಐತಿಹಾಸಿಕ, ರಾಜಕೀಯ, ಸಮಾಜಶಾಸ್ತ್ರೀಯ ಮತ್ತು ಶಾಸನ ಸಮ್ಮತ ದೃಷ್ಟಿಕೋನಗಳಿಂದ ಅಧ್ಯಯನ ಮಾಡಲಾಗುತ್ತಿದೆ. ಭಯೋತ್ಪಾದನೆಯು ಸೀಮಿತ ಜನರ ಒಲವನ್ನುಗಳಿಸಿಕೊಂಡಿದ್ದು ತನ್ನದೇ ಆದ ತರಬೇತಿ ವ್ಯವಸ್ಥೆಯನ್ನು ಹೊಂದಿರುವಂತದ್ದಾಗಿದೆ.ಭಯೋತ್ಪಾದನೆಯ ಗುಣಲಕ್ಷಣಗಳನ್ನು ಈ ಕೆಳಗಿನಂತೆ ಗುರ್ತಿಸಬಹುದಾಗಿದೆ.
• ಭಯೋತ್ಪಾದನೆಯ ಸಮುದಾಯ ವಿರೋಧಿ
• ರಾಜಕೀಯ ಉದ್ದೇಶಗಳನ್ನು ಹೊಂದಿರುತ್ತದೆ.
• ಕಾನೂನು ಉಲ್ಲಂಘನೆ
• ಬೌದ್ಧಿಕ ವಿವೇಚನಾ ವಿರೋಧಿ
• ಜನಸಾಮಾನ್ಯರಲ್ಲಿ ಮತ್ತು ಆಳುವ ವರ್ಗದಲ್ಲಿ ಆತಂಕವನ್ನುಂಟು ಮಾಡುವುದು.
• ಮಾಡು ಇಲ್ಲವೇ ಮಡಿ ರೂಪದ್ದು.
ಅಮಾನವೀಯವಾದ ಭಯೋತ್ಪಾದನೆಯ ರೂಪಗಳು ಹಲವಾರು ಅದರ ಸರ್ವಸಾಮಾನ್ಯ ಮೂಲಭೂತ ಗುರಿಯನ್ನು ಗುರ್ತಿಸಬಹುದಾಗಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಸರ್ಕಾರ ಅಥವಾ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡುವುದು, ಜನಸಾಮಾನ್ಯರ ಮನಗೆಲ್ಲಲು ಯತ್ನಿಸುವುದು, ಎದುರಾಳಿಗಳನ್ನು ಸದೆಬಡಿಸುವುದು ಮತ್ತು ಎಲ್ಲರ ವಿಧೇಯತೆಯನ್ನು ನಿರೀಕ್ಷಿಸುವುದು, ಆತಂರಿಕ ಭದ್ರತೆಯನ್ನು ಅಸ್ಥಿರಗೊಳಿಸುವುದು ಮುಂತಾದವು.
ಪ್ರಸ್ತುತ ವಿಶ್ವದಲ್ಲಿನ ರಾಷ್ಟ್ರಗಳ ನಡುವಿನ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ, ಶ್ರೀಮಂತ ರಾಷ್ಟ್ರಗಳ ದೌರ್ಜನ್ಯ, ಸರ್ಕಾರಗಳ ವೈಫಲ್ಯ, ಭ್ರಷ್ಟಾಚಾರ, ಶಿಕ್ಷಣದ ಕೊರತೆ, ನಿರುದ್ಯೋಗ, ಬಡತನ, ಮತಾಂಧತೆ, ಸ್ವಹಿತಾಸಕ್ತ ದೋಷಪೂರಿತ ನಿರ್ದೇಶನ ಮುಂತಾದವುಗಳು ಭಯೋತ್ಪಾದನೆಯು ಇಷ್ಟು ತೀವ್ರವಾಗಿ ವಿಶ್ವವ್ಯಾಪಿಯಾಗಲು ಪ್ರಮುಖ ಕಾರಣಗಳೆನಿಸಿವೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಭಯೋತ್ಪಾದನೆಯು ಜಿಹಾದ್ ಮುಂತಾದ ಮುಖವಾಡಗಳಲ್ಲಿ ಧಾರ್ಮಿಕ ಆಯಾಮವನ್ನು ಪಡೆಯುತ್ತಿರುವುದು ಆತಂಕದ ವಿಷಯವೇ ಸರಿ.
ಭಾರತದಲ್ಲಿ ಭಯೋತ್ಪಾದನೆ
ಭಾರತದಲ್ಲಿನ ಭಯೋತ್ಪಾದನೆಯು ಪ್ರಮುಖವಾಗಿ ರಾಜಕೀಯ ಮೂಲದ್ದಾಗಿದ್ದು, ಇದನ್ನು 4 ಮಾದರಿಗಳಾಗಿ ಗುರ್ತಿಸಬಹುದಾಗಿದೆ.
• ಖಲಿಸ್ತಾನ ಕೇಂದ್ರಿತ ಪಂಜಾಬ್ ಭಯೋತ್ಪಾದನೆ
• ಕಾಶ್ಮೀರದ ಸೈನಿಕ ಮಾಧರಿ ಭಯೋತ್ಪಾದನೆ
• ಬೆಂಗಾಲ್, ಬಿಹಾರ್, ಆಂಧ್ರಪ್ರದೇಶಗಳ ನಕ್ಸಲೈಟ್ ಮಾದರಿ ಭಯೋತ್ಪಾದನೆ
• ಅಸ್ಸಾಮಿನ ULFA ಮಾದರಿ ಭಯೋತ್ಪಾದನೆ
ಭಾರತದಲ್ಲಿ ಇತ್ತೀಚೆಗೆ ಸಂಭವಿಸಿದ ಕಾರ್ಗಿಲ್ ಯುದ್ಧ ಸಂಸತ್ ಮೇಲೆ ದಾಳಿ, ಅಕ್ಷರಧಾಮ ಪ್ರಕರಣ, ಚಂದ್ರಬಾಬುನಾಯ್ಡು ಮೇಲಿನ ಹತ್ಯಾ ದಾಳಿ ಮುಂತಾದವುಗಳು ಈ ಹೊತ್ತಿನ್ಲಲಿಯೂ ಭಾರತವು ಎದುರಿಸುತ್ತಿರುವ ಭಯೋತ್ಪಾದನೆಯ ತೀವ್ರತೆಗೆ ಸಾಕ್ಷಿಗಳಾಗಿವೆ. ಇತ್ತೀಚಿನ ಅಧ್ಯಯನಗಳಿಂದ ತಿಳಿದು ಬಂದ ಒಂದು ಆಶಾದಾಯಕ ಅಂಶವೆಂದರೆ ಭಯೋತ್ಪಾದನಾ ಸಂಬಂಧಿ ಹತ್ಯೆಗಳ ಪ್ರಮಾಣದಲ್ಲಿ ಇಳಿಮುಖವಾಗಿರುವುದು. ಕಳೆದ ನವೆಂಬರ್ ವರೆಗೆ ಆಂಧ್ರ, ಆಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಮುಂತಾದೆಡೆಗಳಲ್ಲಿ ಸಂಭವಿಸಿದ ಹತ್ಯೆಗಳ ಪ್ರಮಾಣ 856. ಇದು 1999 ರ ನಂತರದ ಅತ್ಯಂತ ಕಡಿಮೆ ವಾರ್ಷಿಕ ಸಾವಿನ ಪ್ರಮಾಣವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಈ ವರ್ಷಾಂತ್ಯಕ್ಕೆ. ಸು-2000 ಸಾವುಗಳು ಸಂಭವಿಸಿದ್ದು ಪ್ರಸ್ತುತ ಭಾರತ ಅಸ್ಥಿರತೆಯನ್ನು ಆತಂಕವನ್ನು ಎದುರಿಸುವಂತಾಗಿದೆ.
ಪಾಕ್ ಪ್ರಯೋಜಿತ ಭಯೋತ್ಪಾದನೆಯು ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ದಶಕಗಳ ಹಿಂದೆ ಅದು ಜಮ್ಮು-ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿತ್ತು, ಆದರೆ ಈಗ ಜೈಷ-ಇ-ಮೊಹಮದ್,
ಲಷ್ಕರ್-ಇ-ತೊಯಿಬಾದಂತಹ ನೂರಾರು ಮುಸ್ಲಿಂ ಭಯೋತ್ಪಾದಕ ಸಂಘಟನೆಗಳು ಭಾರತಕ್ಕೆ ಹೊಂದಿಕೊಂಡಿರುವ ಪಾಕ್ ಮತ್ತು ಬಾಂಗ್ಲಾಗಡಿಗರು ಕಾರ್ಯನಿರತವಾಗಿದೆ. ಜಿಹಾದ್ ತರಬೇತಿ ಕೇಂದ್ರಗಳನ್ನು ತೆರೆದು ಸಾವಿರಾರು ಭಯೋತ್ಪಾದಕರಿಗೆ ತರಬೇತಿ, ಹಣಕಾಸು ಮತ್ತು ಆಧುನಿಕ ಅಸ್ತ್ರಗಳನ್ನು ನೀಡುವ ಮೂಲಕ ದುಷ್ಟಜಾಲವನ್ನು ರಾಷ್ಟ್ರವ್ಯಾಪಿಯಾಗಿಸಿಕೊಂಡಿದೆ. ಇದರ ಜೊತೆಗೆ ಕರಾಚಿ ಕೇಂದ್ರಿತ ದಾವೂದ್ ಇಬ್ರಾಹಿಂ ಮುಂತಾದ ಮಾಫೀಯಾ ದೊರೆಗಳು ತಮ್ಮ ದುಷ್ಕ್ರುತ್ಯಗಳಲ್ಲಿ ತೊಡಗಿರುವುದು ಪ್ರಸ್ತುತ ಭಾರತದ ದೊಡ್ಡ ಸವಾಲು ಎನ್ನಬಹುದು.
ವಿಶ್ವವ್ಯಾಪಿ ಭಯೋತ್ಪಾದನೆ
ಭಯೋತ್ಪಾದನೆಯು ಇಂದು ವಿಶ್ವವ್ಯಾಪ್ತಿಯನ್ನು ಪಡೆದುಕೊಂಡಿದ್ದು ಪೆಂಟಗಾನ್, ವಿಶ್ವವಾಣಿಜ್ಯ ಕೇಂದ್ರ ಸೇರಿದಂತೆ ಎಲ್ಲಿ ಬೇಕಾದರೂ, ಯಾವ ಬೇಕಾದರೂ, ಯಾವ ಹೊತ್ತಿನಲ್ಲಿ ಬೇಕಾದರೂ ಸಂಭವಿಸಬಹುದಾಗಿದ್ದ ವಿಶ್ವದ ಬಿಲಿಷ್ಠ ರಾಷ್ಟ್ರ ಅಮೇರಿಕದ ಆರ್ಥಿಕ ವ್ಯವಸ್ಥೆಯನ್ನು ಕ್ಷಣಾರ್ಧದಲ್ಲಿ ಬುಡಮೇಲು ಮಾಡುವ ಆ ಮೂಲ ವಿಶ್ವದ ಆರ್ಥಿಕ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುವ ತೀವ್ರತೆಯನ್ನು ಪಡೆದುಕೊಂಡಿರುವುದು ಇಂದಿನ ವಿಶ್ವದ ಸವಾಲು.
ಅಪಘಾನಿಸ್ತಾನ ಮತ್ತು ಇರಾಕ್ ಮೇಲಿನ ಯುದ್ಧಗಳಿಗೆ ಭಯೋತ್ಪಾದನೆಯೇ ಮೂಲಕಾರಣ, ಆದರೆ ಅದು ಅನಿವಾರ್ಯವೂ ಮತ್ತು ಅಮಾನವೀಯವೂ ಆಗಿತ್ತು ಎಂಬುದು ಮಾನವ ಇತಿಹಾಸದ ದ್ವಂದ್ವವೆನ್ನಬಹುದು.
ಭಯೋತ್ಪಾದನೆ ನಿವಾರಣೆಗೆ ಯತ್ನ
ಭಯೋತ್ಪಾದನೆಯ ತೀವ್ರತೆಗೆ ಇಡೀ ವಿಶ್ವವೇ ಜಾಗೃತವಾಗಿ ನಿಂತಿದೆ. ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಮತ್ತು ಅವರಿಗೆ ರಕ್ಷಣೆ ನೀಡುವ ರಾಷ್ಟ್ರಗಳು ಇಂದು ತೀವ್ರವಾದ ಪರಿಣಾಮವನ್ನು ಎದುರಿಸುವಂತಾಗಿದ್ದರೂ ಪಾಕಿಸ್ತಾನ ಮುಂತಾದ ದೇಶಗಳು ಇದಕ್ಕೆ ಅಪವಾದವೆನಿಸಿವೆ.
ವಿಶ್ವಸಂಸ್ಥೆಯೂ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಿಗ್ರಹಕ್ಕೆ ಹಲವಾರು ತೀವ್ರತರ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ವಿಶ್ವ ಭಯೋತ್ಪಾದನೆಯ ನಿಗ್ರಹದಲ್ಲಿ 3 ಮಾದರಿಗಳನ್ನು ಗುರ್ತಿಸಲಾಗಿದೆ.
1. ಭಾರತೀಯ ಮಾದರಿ
2. ಇಸ್ರೇಲ್ ಮಾದರಿ
3. ಅಮೇರಿಕ ಮಾದರಿ
ಭಾರತವು ಸುಮಾರು 1960 ರಿಂದ ಭಯೋತ್ಪಾದನೆಯ ಸಮಸ್ಯೆಯನ್ನು ಎದುರಿಸುತ್ತಿದ್ದು ಪರಸ್ಪರ ಮಾತುಕತೆ “ಆಪರೇಷನ್ ಬ್ಲೂಸ್ಟಾರ್” (ಪಂಜಾಬ್), “ಆಪರೇಷನ್ ಬ್ಲಾಕ್ ಥಂಡರ್” (ಆಸ್ಸಾಂ) ಮುಂತಾದ ಮಿಲಿಟರಿ ಕಾರ್ಯಾಚರಣೆಗಳು ಗಡಿಯಲ್ಲಿ ಬೇಲಿ, ಗೂಢಾಚಾರಿಕೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಿಕೆ, ಟಾಟಾ ಮತ್ತು ಪೋಟಾ ಮುಂತಾದ ರೀತಿಗಳಲ್ಲಿ ಭಯೋತ್ಪಾದನೆಯನ್ನು ಎದುರಿಸುವಂತ ಪ್ರಯತ್ನ ಮುಂದುವರಿಸಿದೆ.
ಪ್ಯಾಲೆಸ್ಪೈನ್ ಸುಮಾರು 4 ದಶಕಗಳಿಂದ ಭಯೋತ್ಪಾದನೆ ಸಮಸ್ಯೆಯನ್ನು ಎದುರಿಸುತ್ತಿದ್ದು ವಿಮಾನ ಮೂಲಕ ಬಾಂಬ್ ದಾಳಿ ಸೈನಿಕ ಕಾರ್ಯಾಚರಣೆ ಮುಂತಾದವುಗಳ ಮೂಲಕ “ದಾಳಿಗೆ ಪ್ರತಿದಾಳಿ’ ತಂತ್ರವನ್ನು ಅನುಸರಿಸುತ್ತಿದೆ.
ಅಮೇರಿಕಾವು ಆರ್ಥಿಕ, ತಂತ್ರಜ್ಞಾನ ಮುಂತಾದವುಗಳ ದಿಗ್ಬಂಧನ, ಭಯೋತ್ಪಾದನೆಗೆ ಪ್ರೋತ್ಸಾಹಿಸುವ ಮತ್ತು ಆಶ್ರಯ ನೀಡುವ ರಾಷ್ಟ್ರಗಳ ಮೇಲೆ ದಾಳಿ ತಂತ್ರವನ್ನು ಅನುಸರಿಸುತ್ತಿದೆ.
ಭಯೋತ್ಪಾದನೆಯನ್ನು ನಿಯಂತ್ರಿಸಲು ಕೆಲವು ಸಾಮಾನ್ಯ ನಿಯಮಗಳು
• ಸಾಮಾನ್ಯ ಜನತೆಯಲ್ಲಿ ಅರಿವು, ಪೋಲೀಸರಿಗೆ ಸಹಕಾರ
• ಹಣ, ಶಸ್ತ್ರಾಸ್ತ್ರ ಪೂರೈಕೆಗೆ ತಡೆ
• ಯಾವುದೇ ಭಯೋತ್ಪಾದಕ ಗುಂಪಿನ ಬೇಡಿಕೆ ತಿರಸ್ಕಾರ
• ಕಠಿಣ ಶಿಕ್ಷೆ
• ಸುವ್ಯವಸ್ಥಿತ ಭದ್ರತೆ, ಗೂಢಾಚಾರ ವ್ಯವಸ್ಥೆ
• ವೈಜ್ಞಾನಿಕ ತರಬೇತಿ ಮತ್ತು ಆಧುನಿಕ ತಂತ್ರಜ್ಞಾನ ಬಳಕೆ
ಭಯೋತ್ಪಾದನೆಯ ಮೂಲಕಾರಣಗಳನ್ನು ಸಾಮಾಜಿಕ – ರಾಜಕೀಯ ನೆಲೆಗಳಲ್ಲಿ ಅನ್ವೇಷಿಸಬೇಕಾದ ತುರ್ತು ಅನಿವಾರ್ಯಯಿದೆ. ಭಯೋತ್ಪಾದನೆಗೆ ಪ್ರೋತ್ಸಾಹ, ನೆಲೆ ಮತ್ತು ಸಂಪನ್ಮೂಲಗಳನ್ನು ಒದಗಿಸುವ ರಾಷ್ಟ್ರಗಳನ್ನು ಗುರ್ತಿಸಿ ಬಗ್ಗು ಬಡಿಯಬೇಕಾದ ಕಾರ್ಯವು ಇನ್ನೂ ತೀವ್ರವಾಗಬೇಕಿದೆ.