ದೆಹಲಿ ಸುಲ್ತಾನರು

 

ಟರ್ಕರು ವಶಪಡಿಸಿಕೊಂಡಿದ್ದ ಭೂ ಭಾಗಗಳಲ್ಲಿ ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳಲು ಪ್ರಾರಂಭಿಸಿದರು. ಈ ಗುಲಾಮರಲ್ಲಿ ಮಹಮ್ಮದ್ನ ವಿಶ್ವಾಸಕ್ಕೆ ಪಾತ್ರನಾಗಿ, ಅವನಿಗೆ ತೀರ ಹತ್ತಿರದಲ್ಲಿದ್ದ ಕುತ್ಬುದ್ದೀನ್ ಐಬಕ್ ಚೌವ್ಹ್ಹಾಣರ ರಾಜಧಾನಿಯಾದ ದೆಹಲಿಯನ್ನು ಹಿಡಿದು ಅದನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡನು. ಭಾರತದಲ್ಲಿದ್ದ ಇನ್ನಿತರ ಟರ್ಕ್ ಸೇನಾಧಿಪತಿಗಳು ಕುತ್ಬುದೀನ್ ಐಬಕ್ನನ್ನು ಸುಲ್ತಾನನೆಂದು ಒಪ್ಪಿಕೊಂಡರು, ಕುತ್ಬುದ್ದೀನ್ ಐಬಕ್ ಗುಲಾಮಿ ಸಂತತಿಯ ಸ್ಥಾಪಕನಾದನು. ಐಬಕ್ನಿಂದ ದೆಹಲಿಯಲ್ಲಿ ಆರಂಭವಾದ ಟರ್ಕರ ಆಳ್ವಿಕೆಯನ್ನು ಖಿಲ್ಜಿ, ತುಘಲಕ್, ಸೈಯದ್ ಮತ್ತು ಲೂಧಿ ಮನೆತನಗಳು ಮೊಘಲರ ಆಗಮನದವರೆಗೂ ಮುಂದುವರೆಸಿದವು.

ಗುಲಾಮಿ ಸಂತತಿ


ಮಹಮ್ಮದ್ ಘೋರಿ ಗೆದ್ದಿದ್ದ ಭಾರತದ ಭೂ ಭಾಗಗಳಲ್ಲಿದ್ದ ಅವನ ಉತ್ತರಾಧಿಕಾರಿಗಳೆಲ್ಲರೂ ಗುಲಾಮರೇ ಆಗಿದ್ದರು. ದೆಹಲಿಯಲ್ಲಿ ಟರ್ಕರ ಅಧಿಪತ್ಯ ಸ್ಥಾಪಿಸಿದ ಕುತ್ಬುದ್ದೀನ್ ಐಬಕ್ಸಹ ಗುಲಾಮನೇ ಆಗಿದ್ದನು. ಇವನ ಉತ್ತರಾಧಿಕಾರಿಗಳೂ ಗುಲಾಮರಾಗಿದ್ದರು. ಆದುದರಿಂದ ಇವರ ಆಡಳಿತ ಕಾಲವನ್ನು ಗುಲಾಮಿ ಸಂತತಿಯ ಆಳ್ವಿಕೆ ಎನ್ನುವ ಹೆಸರಿನಿಂದ ಕರೆಯಲಾಗಿದೆ. ಈ ಗುಲಾಮಿ ಮನೆತನದ ಸುಲ್ತಾನರಲ್ಲಿ ಐಬಕ್ನಲ್ಲದೆ, ಇಲ್ತಮಶ್, ರಜಿಯಾ ಸುಲ್ತಾನ್ ಮತ್ತು ಬಲ್ಬನ್ ಮುಖ್ಯವಾಗಿದ್ದಾರೆ.

ಕುತ್ಬುದ್ದೀನ್ ಐಬಕ್


ಈತನು ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರ ಬುನಾದಿ ಹಾಕಿದನು. ಘಜ್ನಿಯ ರಾಜ್ಯಪಾಲನಾಗಿದ್ದ ಮಹಮ್ಮದ್ ಘೋರಿ ಇವನನ್ನು ಗುಲಾಮನನ್ನಾಗಿ ಖರೀದಿಸಿದ್ದನು. ಐಬಕ್ನು ಘಜ್ನಿಯಲ್ಲಿದ್ದಾಗ ತನ್ನ ಶೌರ್ಯದಿಂದ ಮಹಮ್ಮದ್ ಘೋರಿಯ ಗಮನವನ್ನು ಸೆಳೆದನು ಎರಡನೆಯ ತರೈನ್ ಕಾಳಗದ ನಂತರ ಭಾರತದ ಮೇಲಿನ ಆಕ್ರಮಣಗಳ ಉಸ್ತುವಾರಿಯನ್ನು ಪಡೆದನು. ಐಬಕ್ನು ಮಹಮ್ಮದ್ ಘೋರಿಯ ಕಾಲದಲ್ಲಿ ಉತ್ತರ ಭಾರತದ ಉತ್ತರಾಧಿಕಾರಿಯಾದನು. ಘೋರಿಯ ಮರಣಾ ನಂತರ ಸ್ವತಂತ್ರನಾಗಿ ಆಳಿದನು.
ಐಬಕನು ದೆಹಲಿಯಲ್ಲಿ ಕುತುಬ್ ಮಿನಾರ್ ನಿರ್ಮಿಸಲು ಪ್ರಾರಂಭಿಸಿದನು. ಕುತುಬ್ ಮಿನಾರ್ ದೆಹಲಿಯಲ್ಲಿರುವ ಭಾರತದ ಅತ್ಯಂತ
ಎತ್ತರದ ಗೋಪುರ. ಇದನ್ನು ಕುತುಬುದ್ದೀನ್ ಐಬಕ್ ನಿರ್ಮಿಸಲು ಪ್ರಾರಂಭಿಸಿ ಇಲ್ತಮಶ್ ಪೂರ್ಣಗೊಳಿಸಿದನು.

ಇಲ್ತಮಶ್


ಇಲ್ಬರಿ ಕುಟುಂಬಕ್ಕೆ ಸೇರಿದ ಈತನು ಕುತುಬುದ್ಧೀನ್ನ ಗುಲಾಮನಾಗಿದ್ದನು. ಗ್ವಾಲಿಯರ್ನಲ್ಲಿ ಆಡಳಿತಗಾರನಾಗಿದ್ದ ಇವನು ಐಬಕ್ನ ಉತ್ತರಾಧಿಕಾರಿಯಾದನು. ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಮಂಗೋಲರು ಚೆಂಗೀಸ್ ಖಾನನ ನೇತೃತ್ವದಲ್ಲಿ ದಾಳಿ ಮಾಡಿದರು. ಇಲ್ತಮಶ್ ಅವರನ್ನು ಯಶಸ್ವಿಯಾಗಿ ಹಿಮ್ಮೆಟಿಸಿದನು. ಈ ಸಾಧನೆಗಳಿಂದಾಗಿ ಬಾಗ್ದಾದಿನ ಖಲೀಫನು ಇಲ್ತಮಶ್ನಿಗೆ ಅಧಿಕೃತ ಅಧಿಕಾರ ಸಮ್ಮತಿ ಪತ್ರ ನೀಡಿದನು. ಇಲ್ತಮಶ್ ರಾಜ್ಯವನ್ನು ಅನೇಕ ಇಕ್ತಾಗಳನ್ನಾಗಿ ವಿಂಗಡಿಸಿ. ಆಡಳಿತ ನಿರ್ವಹಣೆಗಾಗಿ ಇಕ್ತಾದಾರರನ್ನು ನೇಮಿಸಿದನು. ಆಡಳಿತದಲ್ಲಿ ಸಲಹೆ ಸೂಚನೆ ನೀಡಲು ‘ನಲವತ್ತು ಸರದಾರರ ಕೂಟ’ ನೇಮಕ ಮಾಡಿದನು. ಪ್ರಧಾನ ಮಂತ್ರಿ, ನ್ಯಾಯಾಧೀಶರು ಸುಲ್ತಾನನಿಗೆ ಸಲಹೆ ನೀಡುತ್ತಿದ್ದರು. ಇಲ್ತಮಶ್ನು ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ಚಲಾವಣೆಗೆ ತಂದನು. ಇವನು ಕುತ್ಬುದ್ದೀನನ ಕಾಲದಲ್ಲಿ ನಿರ್ಮಿಸಿಲು ಪ್ರಾರಂಭವಾಗಿದ್ದ ದೆಹಲಿಯ ಕುತುಬ್ಮಿನಾರನ್ನು ಪೂರ್ಣಗೊಳಿಸಿದನು.

ರಜಿಯಾ ಸುಲ್ತಾನಾ


ಇಲ್ತಮಶ್ನ ಪುತ್ರ ರುಕ್ಬುದ್ಧೀನ್ ಫಿರೋಜ್ ಅಸಮರ್ಥನಾದ್ದರಿಂದ ಅವನ ಪುತ್ರಿ ರಜಿಯಾ ಬೇಗಂ ಆತನ ಉತ್ತರಾಧಿಕಾರಿಯಾದಳು. ದೆಹಲಿ ಸಿಂಹಾಸನವನ್ನೇರಿದ ಪ್ರಥಮ ಮಹಿಳೆ, ಸುಲ್ತಾನಾ ಎಂಬ ಬಿರುದು ಪಡೆದು ಪುರುಷನಂತೆ ವೇಷ ಧರಿಸಿ, ಯುದ್ಧದಲ್ಲಿ ಭಾಗವಹಿಸುತ್ತಿದ್ದಳು. ಸಿಂಧ್ನಿಂದ ಬಂಗಾಳದ ವಿಶಾಲ ಪ್ರದೇಶದವರೆಗೂ ತನ್ನ ಅಧಿಕಾರವನ್ನು ಸ್ಥಾಪಿಸಿದಳು. ಇವಳ ಆಡಳಿತವನ್ನು ಸಹಿಸದ ಪ್ರಾಂತ್ಯಾಧಿಕಾರಿಗಳು ದಂಗೆಯೆದ್ದು ಅವಳನ್ನು ಹತ್ಯೆಗೈದರು.

ಘಿಯಾಸ್-ಉದ್-ದೀನ್ ಬಲ್ಬನ್


ದೆಹಲಿಯ ಇಲ್ತಮಶ್ನಿಗೆ ಗುಲಾಮನಾಗಿದ್ದ ಬಲ್ಬನ್ ತನ್ನ ಸ್ವಾಮಿನಿಷ್ಠೆ, ಬುದ್ಧಿಮತ್ತೆ, ಸದ್ಗುಣಗಳಿಂದ ಟರ್ಕಿ ಗುಲಾಮರ ಕೂಟದ ಸದಸ್ಯನಾದನು. ರಜಿಯಾ ಸುಲ್ತಾನಳ ಆಸ್ಥಾನದಲ್ಲಿ ಅಮೀರ್-ಇ-ಶಿಕಾರ್ ಎಂಬ ಹುದ್ದೆಗೆ ನೇಮಿಸಲ್ಪಟ್ಟನು. ರಜಿಯಾ ಸುಲ್ತಾನಳ ಹತ್ಯೆಯ ನಂತರ ಸಂಭವಿಸಿದ್ದ ರಾಜಕೀಯ ಪ್ರಕ್ಷುಬ್ದ ಸನ್ನಿವೇಶದಲ್ಲಿ ಟರ್ಕರ ಸರದಾರರು ಬಲ್ಬನ್ನನ್ನು ಬೆಂಬಲಿಸಿದರು. ಬಲ್ಬನ್ನನ್ನು ದೆಹಲಿ ಸಿಂಹಾಸನವೇರಿ ಸುಲ್ತಾನನಾದನು.

ಮಂಗೋಲರ ದಾಳಿಯನ್ನು ತಡೆಗಟ್ಟಿ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿದನು. ದಕ್ಷ ಆಡಳಿತಗಾರನಾಗಿದ್ದ ಬಲ್ಬನ್ನನ ನಂತರ ಕೈಕುಬಾದನು ಸುಲ್ತಾನನಾದನು. ಆದರೆ ತನ್ನ ವಜೀರನಿಂದ ಕೊಲೆಯಾದನು. ಅಲ್ಲಿಗೆ ಗುಲಾಮ ಸಂತತಿಯ ಆಡಳಿತ ಅಂತ್ಯಗೊಂಡಿತು.

ಖಿಲ್ಜಿ ಸಂತತಿ (ಸಾ. ಶ. 1290-1320)


ಖಿಲ್ಜಿ ಸಂತತಿಯನ್ನು ಜಲಾಲುದ್ಧೀನನು ಸ್ಥಾಪಿಸಿದನು. ಇವನು ಮೃದುಸ್ವಭಾವ, ಕ್ಷಮಾಶಿಲತೆ ಗುಣಗಳನ್ನು ಹೊಂದಿದ್ದನು. ಇದರಿಂದ ಸರದಾರರು ಪ್ರಬಲರಾಗಿ ಒಳಸಂಚು ನಡೆಸಿದರು. ಮುಂದೆ ಈತನನ್ನು ಅಲ್ಲಾವುದೀನನು ಕೊಲೆ ಮಾಡಿ ದೆಹಲಿ ಸುಲ್ತಾನನಾದನು

ಅಲ್ಲಾವುದ್ದೀನ್ ಖಿಲ್ಜಿ


ಈತನು ಬಾಲ್ಯದಲ್ಲಿ ಜಲಾಲುದ್ದೀನ್ನ ಆಶ್ರಯದಲ್ಲಿ ಬೆಳೆದನು. ಶೂರ ಯೋಧನಾದ ಇವನು ರಾಜ್ಯಪಾಲನಾಗಿ ಹಾಗೂ ದಂಡನಾಯಕನಾಗಿ ಸೇವೆ ಸಲ್ಲಿಸಿದನು. ದಂಡನಾಯಕನಾಗಿ ಮಾಳ್ವ, ಭಿಲ್ಸಾ ಮತ್ತು ದೇವಗಿರಿ ಮೇಲಿನ ದಾಳಿಗಳಲ್ಲಿ ಅಪಾರ ಸಂಪತ್ತು ಲೂಟಿ ಮಾಡಿದನು. ತನ್ನ ಮಾರ್ಗದರ್ಶಕ,ಪೆÇೀಷಕ ಜಲಾಲುದ್ದೀನ್ನನ್ನು ಕೊಲೆ ಮಾಡಿದನು. ಹೀಗೆ ಕೊಲೆ ಮತ್ತು ಲೂಟಿ ಮಾರ್ಗವನ್ನು ಅನುಸರಿಸಿ ಅಲ್ಲಾವುದ್ದೀನ್ ದೆಹಲಿಯ ಸುಲ್ತಾನನಾದನು.

ಇವನ ಕಾಲದಲ್ಲಿ ದಕ್ಷಿಣ ಭಾರತದ ದಂಡೆಯಾತ್ರೆ ಯಶಸ್ವಿಗೊಳಿಸಿದ ಕೀರ್ತಿ ಈತನ ದಂಡನಾಯಕ ಮಲಿಕ್ಕಾಫರ್ನಿಗೆ ಸಲ್ಲುತ್ತದೆ. ದೇವಗಿರಿ, ವಾರಂಗಲ್, ದ್ವಾರಸಮುದ್ರ ಮತ್ತು ಮಧುರೈಗಳ ಮೇಲೆ ದಾಳಿ ನಡೆಸಿ ಅವುಗಳ ಅವನತಿಗೆ ಕಾರಣನಾದನು. ಆದರೆ ಗೆದ್ದ ರಾಜ್ಯಗಳನ್ನು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳದೆ ಕೇವಲ ಸಂಪತ್ತನ್ನು ಮಾತ್ರ ಲೂಟಿ ಮಾಡಿದನು. ಆತನ ಮೂರನೆಯ ಮಗ ಕುತುಬುದ್ದೀನ್ ಮುಬಾರಕ್ ನಾಲ್ಕು ವರ್ಷ ಅಧಿಕಾರ ನಡೆಸಿ ಖುಸ್ರು ಎಂಬ ಸೈನಿಕನಿಂದ ಕೊಲ್ಲಲ್ಪಟ್ಟನು. ಮುಂದೆ ಘಾಜಿ ಮಲಿಕ್ (ಘಿಯಾಸುದ್ದೀನ್ ತುಘಲಕ್) ಖುಸ್ರುವನ್ನು ಕೊಂದು ತುಘಲಕ್ ಸಂತತಿ ಸ್ಥಾಪಿಸಿದನು.

ತುಘಲಕ್ ಸಂತತಿ (ಸಾ. ಶ. 1320-1399)


ತುಘಲಕ್ ಸಂತತಿಯನ್ನು ಘಿಯಾಸುದ್ಧೀನ್ ಸ್ಥಾಪಿಸಿದನು. ಘಿಯಾಸುದ್ದೀನನು ಕೆಲವು ಉದಾರ ಆಡಳಿತಾತ್ಮಕ ನೀತಿಯ ಮೂಲಕ ದೆಹಲಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪಿಸಿದನು. ಮಂಗೋಲರ ದಾಳಿ ತಡೆಗಟ್ಟಲು ಗಡಿ ಭದ್ರಪಡಿಸಿದನು. ಈ ಸಂತತಿಯ ಇನ್ನುಳಿದ ಪ್ರಮುಖ ಸುಲ್ತಾನರೆಂದರೆ ಮಹಮ್ಮದ್ ಬಿನ್ ತುಘಲಕ್ ಮತ್ತು ಫಿರೋಜ್ ತುಘಲಕ್ರು.

ಮಹಮ್ಮದ್ ಬಿನ್ ತುಘಲಕ್


ಈತನು ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದನು. ಗಣಿತ, ಭೌತವಿಜ್ಞಾನ, ವೈದ್ಯಶಾಸ್ತ್ರ, ಪರ್ಶಿಯನ್ ಕಾವ್ಯ, ಖಗೋಳಶಾಸ್ತ್ರ ಮುಂತಾದ ವಿಷಯಗಳಲ್ಲಿ ಪರಿಣಿತಿ ಪಡೆದಿದ್ದನು. ಅಪಾರ ಜ್ಞಾನ ಹೊಂದಿದ್ದರೂ, ಆತನ ವ್ಯಕ್ತಿತ್ವದಲ್ಲಿ ಕೆಲವು ಅಸಹಜತೆಗಳಿದ್ದವು. ಮಹಮ್ಮದ್ ಬಿನ್ ತುಘಲಕ್ನು ತನ್ನ ಕಾಲಕ್ಕಿಂತ ಹಲವು ಶತಮಾನಗಳಷ್ಟು ಮುಂದೆ ನಿಂತು ಯೋಚಿಸುತ್ತಿದ್ದನು. ಆದರೆ ಅವನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಪಕ್ವತೆಯಾಗಲಿ, ಪ್ರಾಮಾಣಿಕತೆಯಾಗಲಿ ಅಧಿಕಾರಿಗಳಿಗೆ ಇರಲಿಲ್ಲ.

ಆಡಳಿತಾತ್ಮಕ ಸುಧಾರಣೆಗಳು:


ಕಂದಾಯ ಸುಧಾರಣೆ


ಸಾಮ್ರಾಜ್ಯದ ಭೂಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ಎಲ್ಲ ವಿವರಗಳನ್ನು ಒಳಗೊಂಡ ಅಧಿಕೃತ ದಾಖಲೆಗಳಿರುವ ಪುಸ್ತಕವನ್ನು ಜಾರಿಗೊಳಿಸಿದನು. ಕೃಷಿ ಇಲಾಖೆಯನ್ನು ಸ್ಥಾಪಿಸಿದನು. ರೈತರಿಗೆ ಆರ್ಥಿಕ ನೆರವು ನೀಡಲು ತಕಾವಿ ಸಾಲ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದನು. ಆದರೂ ದೋ-ಅಬ್ ಪ್ರದೇಶದ ರೈತರು ಇವನ ಕಾಲದಲ್ಲಿ ಹೆಚ್ಚು ಭೂ ಕಂದಾಯವನ್ನು ಕಟ್ಟಬೇಕಾಯಿತು.

ರಾಜಧಾನಿಯ ವರ್ಗಾವಣೆ


ಮಹಮ್ಮದ್ ಬಿನ್ ತುಘಲಕ್ ತನ್ನ ರಾಜಧಾನಿಯನ್ನು ದೆಹಲಿಯಿಂದ ಮಧ್ಯ ಭಾರತದಲ್ಲಿದ್ದ ದೇವಗಿರಿಗೆ ವರ್ಗಾಯಿಸಿದನು. ಇದರ ಮುಖ್ಯ ಉದ್ದೇಶ ವಿಶಾಲವಾದ ಸಾಮ್ರಾಜ್ಯಕ್ಕೆ ರಾಜಧಾನಿ ಕೇಂದ್ರಭಾಗದಲ್ಲಿರಬೇಕು ಹಾಗೂ ಪರಕೀಯ ದಾಳಿಗಳಿಂದ ರಕ್ಷಿಸಲು ಅನುಕೂಲವಾಗಿರಬೇಕೆಂಬುದಾಗಿತ್ತು. ಯೋಜನೆ ಉತ್ತಮವಾಗಿದ್ದರೂ ಸ್ಥಳಾಂತರಕ್ಕೆ ಸೂಕ್ತ ಏರ್ಪಾಡುಗಳನ್ನು ಕೈಗೊಂಡಿರಲಿಲ್ಲ. ಅಸಂಖ್ಯಾತ ಜನರು ಸಂಕಷ್ಟಕ್ಕೀಡಾದರು.

ಸಾಂಕೇತಿಕ ನಾಣ್ಯ ಪ್ರಯೋಗ


ನಾಣ್ಯಗಳ ಮೌಲ್ಯಗಳನ್ನು ತನ್ನ ಕಾಲದ ಬಂಗಾರ ಮತ್ತು ಬೆಳ್ಳಿಯ ಮೌಲ್ಯಕ್ಕೆ ಸರಿಹೊಂದುವಂತೆ ಮಾಡಿದನು. ‘ದಿನಾರ’ ಎಂಬ ಬಂಗಾರದ ಹಾಗೂ ‘ಅದಲಿ’ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದನು. ಅವುಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದನು. ಕೆಲವು ವರ್ಷಗಳ ನಂತರ ತಾಮ್ರ ಮತ್ತು ಹಿತ್ತಾಳೆಯ ಸಾಂಕೇತಿಕ ನಾಣ್ಯಗಳ ಚಲಾವಣೆಗೆ ತಂದನು.

ಸುಲ್ತಾನನ ಅನುಮತಿ ಪಡೆಯದೆ ಅಗತ್ಯಕ್ಕಿಂತ ಹೆಚ್ಚು ನಾಣ್ಯಗಳನ್ನು ಟಂಕಿಸಿದ್ದರಿಂದ ಅವ್ಯವಸ್ಥೆ ಉಂಟಾಯಿತು. ಅಧಿಕ ವೆಚ್ಚದಾಯಕ ಆಡಳಿತಾತ್ಮಕ ಪ್ರಯೋಗಗಳು, ಭೀಕರ ಬರಗಾಲ, ರಾಜಧಾನಿಯ ಸ್ಥಳಾಂತರ ಮತ್ತು ಪುನರ್ ಸ್ಥಳಾಂತರ, ಮುಂತಾದವುಗಳಿಂದ ರಾಜ್ಯದ ಖಜಾನೆ ಬರಿದಾಯಿತು.

ದಖನ್ ನೀತಿ


ದಖ್ಖನ್ ನೀತಿಯಲ್ಲಿ ಖಿಲ್ಜಿಯನ್ನರಿಗಿಂತ ಭಿನ್ನವಾಗಿದ್ದ ಮಹಮ್ಮದ್ ಬಿನ್ ತುಘಲಕ್ ದಖನ್ನಲ್ಲಿ ಗೆದ್ದ ಪ್ರದೇಶಗಳಲ್ಲಿ ನೇರವಾಗಿ ತನ್ನ ಆಡಳಿತವನ್ನು ಜಾರಿಗೊಳಿಸಿದನು. ಹೀಗೆ ಭಾರತದಲ್ಲಿ ವಿಶಾಲ ಸಾಮ್ರಾಜ್ಯ ಸ್ಥಾಪಿಸಿದ ದೆಹಲಿ ಸುಲ್ತಾನರಲ್ಲಿ ಮಹಮ್ಮದ್ ಬಿನ್ ತುಘಲಕ್ ಮೊದಲಿಗನು. ಮಹಮ್ಮದ್ ಬಿನ್ ತುಘಲಕ್ ದೊಡ್ಡ ಸೈನ್ಯವನ್ನು ಸಂಘಟಿಸಿದನು. ಈತನ ಕೊನೆಯ ಹನ್ನೊಂದು ವರ್ಷಗಳ ಆಡಳಿತಾವಧಿಯಲ್ಲಿ ದಕ್ಷಿಣ ಭಾರತದಲ್ಲಿ ಇಪ್ಪತ್ತೇಳು ದಂಗೆಗಳು ನಡೆದು ವಿಜಯನಗರ ಮತ್ತು ಬಹಮನಿ ರಾಜ್ಯಗಳ ಉದಯಕ್ಕೆ ಕಾರಣವಾಯಿತು.

ನಂತರದ ತುಘಲಕರು


ಮಹಮ್ಮದ್ ಬಿನ್ ತುಘಲಕ್ ನಂತರ ಬಂದ ಫಿರೋಜ್ ಷಾ ತುಘಲಕ್ ಕಾಲದಲ್ಲಿ ಅನೇಕ ಪ್ರಜಾಹಿತ ಕಾರ್ಯಗಳು ಜಾರಿಗೆ ಬಂದವು. ಪ್ರಜೆಗಳಿಗೆ ನೆರವು ನೀಡುವ ಉದ್ದೇಶದಿಂದ ತಕಾವಿ ಸಾಲ ಮನ್ನಾ ಮಾಡಿದನು & ಸುಮಾರು ಇಪ್ಪತ್ತು ತೆರಿಗೆಗಳನ್ನು ರದ್ದುಪಡಿಸಿದನು.

ಸಯ್ಯದ್ ಸಂತತಿ ( ಸಾ.ಶ. 1414-1451)


ತುಘಲಕರ ನಂತರ ಸಯ್ಯದ್ ಸಂತತಿ ಪ್ರವರ್ದಮಾನಕ್ಕೆ ಬಂದಿತು. ಮುಲ್ತಾನದ ರಾಜ್ಯಪಾಲನಾಗಿದ್ದ ಖಿಜರ್ಖಾನ್ಸಯ್ಯದ್ ದೆಹಲಿಯನ್ನು ವಶಪಡಿಸಿಕೊಂಡು ಈ ಸಂತತಿಯ ಆಡಳಿತಕ್ಕೆ ಬುನಾದಿ ಹಾಕಿದನು. ದೋಅಬ್, ಬಿಯಾನ್ ಮತ್ತು ಗ್ವಾಲಿಯರ್ಗಳಲ್ಲಿ ಅಧಿಕಾರ ಸ್ಥಾಪಿಸಿದನು ಹಾಗೂ ಅನೇಕ ದಂಗೆಗಳನ್ನು ಅಡಗಿಸಿ ಶಾಂತಿ, ಸುವ್ಯವಸ್ಥೆ ಮತ್ತು ಭದ್ರತೆಯನ್ನು ನೆಲೆಗೊಳಿಸಿದನು. ಮಹಮ್ಮದ್ ಷಾ, ಅಲ್ಲಾ-ಉದ್-ದೀನ್ ಹಾಗೂ ಅಲಂಷಾ ಈ ಸಂತತಿಯ ಇತರೆ ಪ್ರಮುಖ ಸುಲ್ತಾನರು. ಅಲಂ ಷಾನನ್ನು ಬಹಲೋಲ್ ಲೋಧಿ ಸೋಲಿಸಿ ಸಯ್ಯದ್ ಸಂತತಿಯ ಆಡಳಿತವನ್ನು ಅಂತ್ಯಗೊಳಿಸಿದನು.

ಲೋದಿ ಸಂತತಿ (ಸಾ.ಶ. 1451-1526)


ಇದು ದೆಹಲಿಯನ್ನಾಳಿದ ಕೊನೆಯ ಸುಲ್ತಾನ ಸಂತತಿ. ಬಹುಲೋಲ್ ಲೋದಿ ಸಿಕಂದರ್ ಲೋದಿ ಮತ್ತು ಇಬ್ರಾಹಿಂ ಲೋದಿ ಈ ಸಂತತಿಯ ಸುಲ್ತಾನರು. ಸಿಕಂದರ್ ಲೋದಿಯು ಬಿಹಾರ, ಬಂಗಾಳ, ಧೋಲಪುರ್ ಮತ್ತು ಚಂದೇರಿಗಳನ್ನು ವಶಪಡಿಸಿಕೊಂಡನು. ದೆಹಲಿಯಲ್ಲಿ ಶಾಂತಿ ನೆಲೆಸುವಂತೆ ಕ್ರಮ ತೆಗೆದುಕೊಂಡನು.

ಈತನ ಉತ್ತರಾಧಿಕಾರಿಯಾದ ಇಬ್ರಾಹಿಂ ಲೋದಿಯು ಅದಕ್ಷನಾಗಿದ್ದನು. ಭಾರತದ ಮೇಲೆ ದಾಳಿ ಮಾಡುವಂತೆ ರಾಜ್ಯಪಾಲರಾದ ಆಲಂಖಾನ್ ಮತ್ತು ದೌಲತ್ಖಾನ್ ಮೊಘಲರಿಗೆ ಆಮಂತ್ರಣ ನೀಡಿದರು. ಅದರಂತೆ ಬಾಬರ್ ಭಾರತದ ಮೇಲೆ ದಾಳಿ ಮಾಡಿ ಸಾ.ಶ. 1526ರಲ್ಲಿ ನಡೆದ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿ ಮೊಘಲರ ಆಳ್ವಿಕೆ ಪ್ರಾರಂಬಿಸಿದನು.

ದೆಹಲಿ ಸುಲ್ತಾನರ ಕೊಡುಗೆಗಳು


ಆಡಳಿತ ಪದ್ಧತಿ


ಬಹುತೇಕ ದೆಹಲಿ ಸುಲ್ತಾನರು ನಿರಂಕುಶ ಪ್ರಭುಗಳಾಗಿದ್ದು. ಸೈನ್ಯದ ಮುಖ್ಯಸ್ಥ ಹಾಗೂ ಮುಖ್ಯ ನ್ಯಾಯಾಧಿಶರಾಗಿದ್ದರು. ಸುಲ್ತಾನನ ಆಡಳಿತವು ಕುರಾನಿನನ್ವಯ ನಡೆಯುತ್ತಿತ್ತು. ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿತ್ತು. ಕೆಳ ಹಂತದ ಆಡಳಿತ ಘಟಕಗಳಿಗೆ ಶಿಕ್ದಾರ್, ಅಮೀನ್, ಮತ್ತು ಚೌಕಿದಾರ ಮುಖ್ಯಸ್ಥರಾಗಿದ್ದರು. ಕಂದಾಯ ಸಂಗ್ರಹಣೆ, ಶಾಂತಿ ಕಾಪಾಡುವುದು, ಶಿಕ್ಷಣ ನೀಡುವುದು, ನೈರ್ಮಲ್ಯ ಕಾಪಾಡುವುದು ಇವರ ಪ್ರಮುಖ ಕರ್ತವ್ಯಗಳಾಗಿದ್ದವು.

ಸುಲ್ತಾನರ ಕಾಲದಲ್ಲಿ ಖರಾಜ್ (ಭೂತೆರಿಗೆ), ಜಕಾತ್, ಉಶ್ರು, ಖಮ್ಸ್ (ಯುದ್ಧದಲ್ಲಿ ಲೂಟಿ ಮಾಡಿದ ಸಂಪತ್ತಿನ ತೆರಿಗೆ) ಜೆಸಿಯ, ವಾರಸುದಾರಿಲ್ಲದ ಆಸ್ತಿ ಮೇಲೆ ತೆರಿಗೆ, ಆಮದು ಸುಂಕ, ಮನೆ ತೆರಿಗೆ ಮುಂತಾದವುಗಳು ವರಮಾನದ ಪ್ರಮುಖ ಮೂಲಗಳಾಗಿದ್ದವು.

ತೆರಿಗೆಗಳ ಅರ್ಥ


1. ಖರಜ್ - ಮುಸ್ಲಿಮೇತರ ಮೇಲಿನ ಭೂ ತೆರಿಗೆ
2. ಉಶ್ರ್ - ಮುಸ್ಲಿಮರ ಮೇಲಿನ ಕೃಷಿ ತೆರಿಗೆ
3. ಜಕಾತ್ - ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆ
4. ಜೆಸಿಯಾ - ಹಿಂದೂಗಳ ಮೇಲಿನ ಧಾರ್ಮಿಕ ತೆರಿಗೆ

ಸಾಮಾಜಿಕ ವ್ಯವಸ್ಥೆ


ಸುಲ್ತಾನರ ಆಡಳಿತದಲ್ಲಿ ಮುಸ್ಲಿಂ ಮತ್ತು ಹಿಂದೂ ಸಮುದಾಯಗಳು ರೂಢಿಗತ ನಂಬಿಕೆ ಮತ್ತು ಆಚರಣೆಗಳನ್ನು ಹೊಂದಿದ್ದವು. ಹಳೆಯ ಸಾಮಾಜಿಕ ವ್ಯವಸ್ಥೆಗೆ ಹಲವಾರು ಸುಧಾರಣೆಗಳನ್ನು ಹಿಂದೂ ಭಕ್ತಿ ಸಂತರು ಮತ್ತು ಮುಸ್ಲಿಂ ಸಮಾಜದಲ್ಲಿ ಸೂಫಿ ಪಂಥದ ಸಂತರು ತಂದರು. ಗುಲಾಮಗಿರಿ ಪದ್ಧತಿಯಿತ್ತು. ಯುದ್ಧ ಕೈದಿಗಳನ್ನು ಗುಲಾಮರನ್ನಾಗಿ ನೇಮಿಸುತ್ತಿದ್ದರು. ಅರಮನೆಯಲ್ಲಿ ಅನೇಕ ಮಹಿಳಾ ಗುಲಾಮರಿದ್ದರು. ಸ್ತ್ರೀಯರ ಸ್ಥಾನಮಾನ ಉತ್ತಮವಾಗಿರಲಿಲ್ಲ. ಪರದಾ ಮತ್ತು ಬಾಲ್ಯವಿವಾಹ ಪದ್ಧತಿಗಳು ರೂಢಿಯಲ್ಲಿದ್ದವು. ಮೇಲ್ವರ್ಗದ ಮಹಿಳೆಯರು ಲಲಿತಕಲೆಗಳಲ್ಲಿ ಭಾಗವಹಿಸುತಿದ್ದರು. ಗ್ರಾಮೀಣ ಮಹಿಳೆಯರು ಕೃಷಿ, ಮನೆಗೆಲಸಗಳಲ್ಲಿ ನಿರತರಾಗುತ್ತಿದ್ದರು.

ಆರ್ಥಿಕ ಪರಿಸ್ಥಿತಿ


ಬಡರೈತನಿಂದ ಹಿಡಿದು ಶ್ರೀಮಂತ ರೈತನೂ ಸಹ ಕಂದಾಯ ಕಟ್ಟಲೇಬೇಕೆನ್ನುವುದು ಸುಲ್ತಾನರ ಕಾಲದ ಕಂದಾಯ ನೀತಿಯಲ್ಲಿನ ಮುಖ್ಯ ಲಕ್ಷಣವಾಗಿತ್ತು. ಭಾರತದ ಕರಕುಶಲ ವಸ್ತುಗಳು ಯೂರೋಪಿನ ಮಾರುಕಟ್ಟೆಗಳಿಗೆ ಪ್ರವೇಶಿಸಿದವು.

ಸಾಹಿತ್ಯ


ವಿದೇಶಿ ಬರಹಗಾರರು ಮತ್ತು ಇತಿಹಾಸ ತಜ್ಞರು ಸುಲ್ತಾನರುಗಳ ಆಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಅವರ ಕೃತಿಗಳು ಅರೇಬಿಕ್, ಪರ್ಶಿಯನ್ ಭಾಷೆಗಳಲ್ಲಿವೆ. ಮಹಮ್ಮದ್ ಘಜ್ನಿಯ ಆಸ್ಥಾನದಲ್ಲಿ ಆಲ್ಬೆರೂನಿ ಎಂಬ ಪ್ರಸಿದ್ಧ ವಿದ್ವಾಂಸನಿದ್ದನು. ಈತನು ತತ್ವಜ್ಞಾನಿ, ಗಣಿತಶಾಸ್ತ್ರ ಮತ್ತು ಸಾಹಿತಿಯಾಗಿದ್ದನು.
ಭಾರತದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ವಿಷಯಗಳನ್ನೊಳಗೊಂಡ `ಕಿತಾಬುಲ್ ಹಿಂದ್’ ಕೃತಿಯನ್ನು ರಚಿಸಿದನು.

ಅಮೀರ್ ಖುಸ್ರು ಆರು ಪ್ರಮುಖ ಗ್ರಂಥಗಳನ್ನು ರಚಿಸಿ ಹಿಂದೂ-ಮುಸ್ಲಿಂ ಸಂಸ್ಕøತಿಯ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ಈತನನ್ನು ‘ಭಾರತದ ಗಿಳಿ’ ಎಂದು ಕರೆಯಲಾಗಿತ್ತು. ಜಿಯಾಯುದ್ದೀನ್ ಬರನಿಯು ‘ತಾರಿಖ್-ಇ-ಫಿರೋಜ್ಷಾಹಿ’ ಹಾಗೂ ಫಿರೋಜ ತುಘಲಕ್ನು ‘ಪುತುಹತ್-ಇ- ಫಿರೋಜ್ಷಾಹಿ’ ಎಂಬ ಕೃತಿಗಳನ್ನು ರಚಿಸಿದ್ದಾರೆ.

ಕಲೆ ಮತ್ತು ವಾಸ್ತುಶಿಲ್ಪ


ದೆಹಲಿ ಸುಲ್ತಾನರು ಭಾರತದಲ್ಲಿ ‘ಇಂಡೋ-ಇಸ್ಲಾಮಿಕ್’ ಎಂಬ ಹೊಸ ಶೈಲಿಯ ವಾಸ್ತುಶಿಲ್ಪವನ್ನು ಪರಿಚಯಿಸಿದರು. ಕಮಾನುಗಳು, ಗುಮ್ಮಟಗಳು ಹಾಗೂ ಮಿನಾರ್‍ಗಳು ಈ ಶೈಲಿಯ ಮುಖ್ಯ ಲಕ್ಷಣಗಳು. ದೆಹಲಿ ಸುಲ್ತಾನರು ಕೋಟೆ, ಮಸೀದಿ, ಅರಮನೆ, ಸಾರ್ವಜನಿಕ ಕಟ್ಟಡ ಮದರಸಾ, ಧರ್ಮ ಶಾಲೆಗಳನ್ನು ನಿರ್ಮಿಸಿದರು. ಇಂಡೋ-ಇಸ್ಲಾಮಿಕ್ ಶೈಲಿಗೆ ಉದಾಹರಣೆ : ದೆಹಲಿಯ ಕುವತ್-ಉಲ್-ಇಸ್ಲಾಂ ಮಸೀದಿ, ಕುತುಬ್ ಮಿನಾರ್, ಅಲೈ ದರವಾಜಾ, ಜಮೈತ್ ಖಾನಾ ಮಸೀದಿಗಳು.