ಬಹಮನಿ ರಾಜ್ಯ
 
ಸಾ.ಶ. 14ನೆಯ ಶತಮಾನದಲ್ಲಿ ಕಂಡುಬಂದ ಮತ್ತೊಂದು ಬದಲಾವಣೆಯೇ ಬಹಮನಿ ರಾಜ್ಯದ ಉದಯ. ಸಾ.ಶ. 1347ರಲ್ಲಿ ಅಲ್ಲಾಉದ್ದೀನ್ ಹಸನ್‍ಗಂಗು ಬಹಮನ್ ಷಾನು ಇದನ್ನು ಸ್ಥಾಪಿಸಿದನು. ಸಾ.ಶ. 1347 ರಿಂದ 1527ರವರೆಗೆ ಬಹಮನಿ ಹಾಗೂ 1686ರವರೆಗೆ ಶಾಹಿ ಮನೆತನಗಳು ಆಳ್ವಿಕೆ ಮಾಡಿದವು. ಈ ಮನೆತನದಲ್ಲಿ ಮಹಮ್ಮದ್ ಷಾ, ಫಿರೋಜ್ ಷಾ, ಯೂಸೂಫ್ ಅಲಿ ಖಾನ್, ಒಂದನೇ ಇಬ್ರಾಹಿಂ ಆದಿಲ್ ಷಾ, ಪ್ರಮುಖರು.
ಮಹಮ್ಮದ್ ಗವಾನ(1411-1481)
ಸಾ.ಶ. 1347 ರಿಂದ ಸಾ.ಶ. 1426 ರವರೆಗೆ ಗುಲ್ಬರ್ಗ ಬಹಮನಿಯರ ರಾಜಧಾನಿಯಾಗಿತ್ತು. ಈ ಪ್ರಧಾನ ಮಂತ್ರಿಯಾಗಿ ಬಹಮನಿ ರಾಜ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದನು.ಕೈರೋದಲ್ಲಿ ಇಸ್ಲಾಂ ಮತಶಾಸ್ತ್ರ ಮತ್ತು ಕಾನೂನು ಅಭ್ಯಸಿಸಿ, ಅರಬ್ಬೀ, ಪಾರಸೀ ಭಾಷೆಗಳಲ್ಲಿ ಪಾಂಡಿತ್ಯವನ್ನು ಗಳಿಸಿದನು. ಬಹಮನಿ ಸುಲ್ತಾನರಾದ ಹುಮಾಯೂನ್, ನಿಜಾಂ ಷಾ ಹಾಗೂ ಮೂರನೇ ಮಹಮದ್ಷಾನ ಆಳ್ವಿಕೆಯ ಕಾಲದಲ್ಲಿ ಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದನು. ಇವನು ತನ್ನ ದಿಗ್ವಿಜಯಗಳು ಹಾಗೂ ಅಚ್ಚುಕಟ್ಟಾದ ಆಡಳಿತ ಕ್ರಮದಿಂದ ಬಹಮನಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದನು. ಗವಾನನು ಕೊಂಕಣ, ಗೋವ ಮತ್ತು ಬೆಳಗಾವಿಯನ್ನು ವಶಪಡಿಸಿಕೊಂಡನು. ನಂತರ ಓರಿಸ್ಸಾದ ಮೇಲೆ ದಾಳಿ ಮಾಡಿ, ಅಲ್ಲಿಂದ ಕೊಂಡವೀಡು ಪ್ರದೇಶವನ್ನು ವಶಪಡಿಸಿಕೊಂಡನು. ಸಾ.ಶ. 1481ರಲ್ಲಿ ಕಂಚಿಯ ಮೇಲೆ ದಾಳಿ ಮಾಡಿ ಅಪಾರ ಸಂಪತ್ತನ್ನು ಲೂಟಿ ಮಾಡಿದನು.ಬಹಮನಿ ರಾಜ್ಯದಲ್ಲಿ ಆಂತರಿಕ ಕಲಹಗಳು ಹೆಚ್ಚಾಗಿ ಗವಾನನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ರಾಜನ ಬಳಿ ಅವರ ಶತ್ರುಗಳು ಮಾಡಿದರು. ಅವರ ಕುತಂತ್ರದ ರಾಜಕೀಯ ಗವಾನನು ರಾಜ ದ್ರೋಹದ ಆರೋಪವನ್ನು ಎದುರಿಸಬೇಕಾದ ಸಂದರ್ಭ ಬಂದಿತು. ಇದರ ಪರಿಣಾಮವಾಗಿ ರಾಜನ ಆಜ್ಞೆಯಂತೆ ಅವನ ಶಿರಚ್ಛೇದನವಾಯಿತು. ಇವನ ಮರಣದ ನಂತರ ಬಹಮನಿ ರಾಜ್ಯವು ದುರ್ಬಲಗೊಂಡು
ಐದು ಭಾಗಗಳಲ್ಲಿ ಒಡೆದುಹೋಯಿತು.
ಬಹುಮನಿಯು ಐದು ರಾಜ್ಯಗಳಾಗಿ ವಿಂಗಡನೆ
1. ಅಹಮದ್ ನಗರ - ನಿಜಾಮ್ ಷಾಹಿ
2. ಬಿಜಾಪುರ - ಆದಿಲ್ ಷಾಹಿ
3. ಬಿರಾರ್ - ಇಮಾದ್ ಷಾಹಿ
4. ಬೀದರ್ - ಬರೀದ್ ಷಾಹಿ
5. ಗೋಲ್ಕೊಂಡ - ಕುತ್ಬ್ ಷಾಹಿ
ಎರಡನೇ ಇಬ್ರಾಹಿಂ ಆದಿಲ್ ಷಾ
ಆದಿಲ್ ಶಾಹಿಗಳಲ್ಲಿ ಶ್ರೇಷ್ಠ ದೊರೆಯಾದ ಎರಡನೇ ಇಬ್ರಾಹಿಂನು ತನ್ನ ಒಂಬತ್ತನೆಯ ವಯಸ್ಸಿನಲ್ಲಿ ಸಿಂಹಾಸನಾರೋಹಣ ಮಾಡಿದನು. ಈತನು ರಾಜಕೀಯವಾಗಿ ವಿಜಯಾಪುರವನ್ನು ವೈಭವದ ಉತ್ತುಂಗ ಶಿಖರಕ್ಕೆ ಏರಿಸಿ, ದಕ್ಷ ಆಡಳಿತವನ್ನು ನೀಡಿ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದನು.“ಕಿತಾಬ್-ಏ-ನವರಸ” ಎಂಬ ಗ್ರಂಥದಲ್ಲಿ ಈತನು ಸರಸ್ವತಿ, ಗಣೇಶ ಮತ್ತು ನರಸಿಂಹರ ಸ್ತುತಿಯೊಂದಿಗೆ
ಆರಂಭಿಸಿದ್ದು ಇದರ ವೈಶಿಷ್ಟ್ಯವಾಗಿದೆ. ಇದರಲ್ಲಿ ಮಹಮ್ಮದ್ ಪೈಗಂಬರರ ಬಗ್ಗೆಯೂ ಸ್ತುತಿಗಳಿವೆ. ಈ ಗ್ರಂಥವು ಇಬ್ರಾಹಿಂನ ವಿದ್ವತ್ತು, ಘನತೆ ಹಾಗೂ ಮತೀಯ ಉದಾರತೆಗೆ ಸಾಕ್ಷಿಯಾಗಿದೆ.
ಕೊಡುಗೆಗಳು
ಆಡಳಿತ
ಆಡಳಿತದಲ್ಲಿ ಕೇಂದ್ರ, ಪ್ರಾಂತೀಯ ಹಾಗೂ ಗ್ರಾಮ ಆಡಳಿತವೆಂಬ ಮೂರು ಭಾಗಗಳಿದ್ದವು. ಇವುಗಳಲ್ಲಿ ಕಂದಾಯ ನ್ಯಾಯ ಮತ್ತು ಸೈನ್ಯ ಆಡಳಿತಗಳಿದ್ದವು. ಕೇಂದ್ರ ಸರ್ಕಾರದಲ್ಲಿ ಸುಲ್ತಾನನೇ ಆಡಳಿತದ ಮುಖ್ಯಸ್ಥನಾಗಿರುತ್ತಿದ್ದ. ಮಂತ್ರಿಮಂಡಲಕ್ಕೆ ‘ಮಜ್ಲಿಸ್-ಇ-ಇಲ್ವಿತ್’ ಎಂದು
ಕರೆಯುತ್ತಿದ್ದರು. ಉನ್ನತ ಅಧಿಕಾರಿಗಳು, ದಂಡನಾಯಕರು, ಉಲೇಮರು, ಅಮೀರರು ಸುಲ್ತಾನನ ಆಪ್ತರು ಮತ್ತು ಸಂಬಂಧಿಗಳು ಆಗಿದ್ದರು.
ಗವಾನನು ರಾಜ್ಯದಲ್ಲಿ ಹಿಂದೆ ಇದ್ದ ನಾಲ್ಕು ತರಫ್ (ಪ್ರಾಂತ್ಯ) ಗಳನ್ನು ಎಂಟು ಘಟಕಗಳಾಗಿ ವಿಂಗಡಿಸಿದನು. ಹಾಗೆಯೆ ಪ್ರಾಂತಗಳನ್ನು 15 ಸರ್ಕಾರಗಳಾಗಿ ವಿಂಗಡಿಸಲಾಗಿತ್ತು. ಸುಭೇದಾರ ಎಂಬ ಅಧಿಕಾರಿಯು ಸರ್ಕಾರಗಳಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿದ್ದನು. ಸರ್ಕಾರಗಳನ್ನು ಪರಗಣಗಳಾಗಿ ವಿಂಗಡಿಸಲಾಗಿತ್ತು. ಕೊತ್ವಾಲ್, ದೇಶಮುಖ ಮತ್ತು ದೇಸಾಯಿ ಎಂಬ ಅಧಿಕಾರಿಗಳು ಪರಗಣದ ಅಧಿಕಾರಿಗಳಾಗಿದ್ದರು. ಆಡಳಿತದ
ಕೊನೆಯ ಘಟಕವಾದ ಗ್ರಾಮಗಳಲ್ಲಿ ಪಟೇಲ, ಕುಲಕರ್ಣಿ ಮತ್ತು ಕಾವಲುಗಾರ ಎಂಬ ಅಧಿಕಾರಿಗಳಿದ್ದರು.ಗ್ರಾಮಾಡಳಿತ ಘಟಕಗಳು ಸ್ವಾಯತ್ತ ಸಂಸ್ಥೆಯಾಗಿದ್ದವು.ಅಮೀರ್-ಏ-ಜುಮ್ಲಾರು ಕಂದಾಯದ ಮುಖ್ಯಸ್ಥರಾಗಿದ್ದರು. ಭೂಕಂದಾಯವು ರಾಜ್ಯಾದಾಯದ ಮೂಲವಾಗಿತ್ತು. ಉತ್ಪತ್ತಿಯ 1/3
ರಿಂದ 1/2 ನೇ ಭಾಗದಷ್ಟನ್ನು ಭೂಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು.
ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು
ಕೃಷಿ ಜೀವನದ ಮುಖ್ಯ ಉದ್ಯೋಗವಾಗಿತ್ತು.ಧಾಬೋಲ್, ರಾಜಾಪುರ, ಚೌಲ ಮತ್ತು ಗೋವಾ ಈ ಕಾಲದ ಬಂದರುಗಳಾಗಿದ್ದವು. ರೇಷ್ಮೆ, ಮದ್ಯ,ಚಿನ್ನ, ಬೆಳ್ಳಿ, ತಾಮ್ರ, ತವರ, ಸೀಸ, ಗಾಜು ಮತ್ತು ಕುದುರೆಗಳು ಪ್ರಮುಖ ಆಮದುಗಳಾಗಿದ್ದವು. ವ್ಯಾಪಾರ ಹಾಗೂ ವೃತ್ತಿ ಸಂಘಗಳು ಅಸ್ತಿತ್ವದಲ್ಲಿದ್ದವು. ‘ಹೊನ್ನು’ ಎಂಬ ಬಂಗಾರದ ನಾಣ್ಯ, ‘ಲಾರಿ’, ‘ಟಂಕ’ ಎಂಬ ಬೆಳ್ಳಿ ನಾಣ್ಯಗಳು ಚಲಾವಣೆಯಲ್ಲಿದ್ದವು. ಸಮಾಜದಲ್ಲಿ ಅವಿಭಕ್ತ ಪಿತೃಪ್ರಧಾನ ಕುಟುಂಬಗಳು ಮುಂದುವರೆದವು. ಜಾತಿ ಪದ್ದತಿ ಹಾಗೂ ಬಹುಪತ್ನಿತ್ವಗಳು ರೂಢಿಯಲ್ಲಿದ್ದವು. ಭಕ್ತಿಪಂಥದ ಹರಿದಾಸರು ಮತ್ತು ಮುಸ್ಲಿಂ ಸೂಫಿ ಸಂತರು ಎರಡು ಸಮಾಜಗಳಲ್ಲೂ ಪ್ರೀತಿ ಬೆಳೆಸಲು ಪ್ರಯತ್ನಿಸಿದರು. ಮುಸ್ಲಿಂ ಸಮಾಜದಲ್ಲಿ ಸುನ್ನಿ, ಷಿಯಾ, ಸಯ್ಯದ್, ಶೇಖ್
ಮತ್ತು ಪಠಾಣ ಎಂಬ ವರ್ಗ ವಿಂಗಡಣೆಗಳಿದ್ದವು. ಮುಸ್ಲಿಂ ಸ್ತ್ರೀಯರಲ್ಲಿ ಪರದಾ ಪದ್ಧತಿ ರೂಢಿಯಲ್ಲಿತ್ತು.
ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪ
ಇವರ ಶೈಕ್ಷಣಿಕ ನೀತಿಯು ಇಸ್ಲಾಂ ಸಂಸ್ಕೃತಿಯನ್ನು ಬೆಳೆಸುವುದಾಗಿತ್ತು. ಮಕ್ತಬ ಎಂಬ ಶಾಲೆಗಳಿದ್ದವು. ಇವು ಮಸೀದಿಗಳ ನಿಯಂತ್ರಣದಲ್ಲಿದ್ದವು. ಮಕ್ತಬಗಳಲ್ಲಿ ಅಕ್ಷರ ಜ್ಞಾನ, ಮತ, ಕಾನೂನು, ಕಾವ್ಯ, ಅಲಂಕಾರಶಾಸ್ತ್ರಗಳನ್ನು ಬೋಧಿಸುತ್ತಿದ್ದರು. ಮದರಸಾಗಳು ಉನ್ನತ ಶಿಕ್ಷಣದ
ಕೇಂದ್ರಗಳಾಗಿದ್ದವು. ಸ್ವತಃ ವಿದ್ವಾಂಸನಾಗಿದ್ದ ಮಹಮ್ಮದ್ ಗವಾನ್ ಬೀದರ್‍ನಲ್ಲಿ ಇಸ್ಲಾಂ ಮತ ಮತ್ತು ಕಾನೂನಿನ ಶಿಕ್ಷಣವನ್ನು ಪ್ರೋತ್ಸಾಹಿಸಲು ಮದರಸ (ಮಹಾವಿದ್ಯಾಲಯ) ವನ್ನು ಸ್ಥಾಪಿಸಿದನು. ಇಲ್ಲಿ ಖಗೋಳಶಾಸ್ತ್ರ, ವ್ಯಾಕರಣ,ಗಣಿತ, ತತ್ವಶಾಸ್ತ್ರ, ಇತಿಹಾಸ, ರಾಜನೀತಿಗಳ ಅಧ್ಯಯನ ನಡೆಯುತ್ತಿತ್ತು. ಸುಲ್ತಾನರು ಇಂಡೋ ಸಾರ್ಸನಿಕ್ ಶೈಲಿಯ ವಾಸ್ತುಶಿಲ್ಪ ಬೆಳೆಸಿದರು. ಒಂದನೆಯ ಅಲಿ ಆದಿಲ್ ಶಹನು ನಿರ್ಮಾಣ ಮಾಡಿದ ಜಾಮಿಯ ಮಸೀದಿಯು ಈ ಕಾಲದ ಒಂದು ಮುಖ್ಯ ಸ್ಮಾರಕವಾಗಿದೆ. ಇಬ್ರಾಹಿಂ ರೋಜಾ, ಗೋಲಗುಂಬಜ್, ಗಗನ್‍ಮಹಲ್, ಅಸಾರ್ ಮಹಲ್‍ಗಳು ಇವರ ಪ್ರಮುಖ ಸ್ಮಾರಕಗಳಾಗಿವೆ. ಈ ಸ್ಮಾರಕಗಳಿಂದಾಗಿ ಆದಿಲ್ ಷಾಹಿಗಳು ವಿಶ್ವವಿಖ್ಯಾತರಾಗಿದ್ದಾರೆ. ವಿಶ್ವದ ಶ್ರೇಷ್ಠ ಕಟ್ಟಡಗಳಲ್ಲಿ ವಿಜಯಪುರದಲ್ಲಿರುವ
ಗೋಲಗುಂಬಜ್ ಒಂದಾಗಿದೆ.