ಅಂಗಾಂಶಗಳು

 

• ಒಂದೇ ಮೂಲದಲ್ಲಿ ಹುಟ್ಟಿದ ಒಂದೇ ರೀತಿ ರಚನೆಯುಳ್ಳ ಹಾಗೂ ಒಂದೇ ರೀತಿಯ ಕಾರ್ಯವನ್ನು ಮಾಡುವ ಜೀವ ಕೋಶಗಳ ಸಮೂಹಕ್ಕೆ ಅಂಗಾಂಶ ಎಂದು ಹೆಸರು.
• ಪ್ರತಿಯೊಂದು ಅಂಗಾಂಶವು ಒಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ.
• ಒಂದೇ ರೀತಿಯ ಕಾರ್ಯಗಳನ್ನು ನಿರ್ವಹಿಸುವ ಅಂಗಗಳ ಸಮೂಹಕ್ಕೆ ಅಂಗ ವ್ಯವಸ್ಥೆ ಎಂದು ಹೆಸರು.
• ಅಂಗಾಂಶಗಳ ಅಧ್ಯಯನವನ್ನು ಮಾಡುವ ಜೀವಶಾಸ್ತ್ರದ ಶಾಖೆಗೆ ಅಂಗಾಂಶ ಶಾಸ್ತ್ರ (Histology) ಎಂದು ಕರೆಯುತ್ತಾರೆ.

ಸಸ್ಯ ಅಂಗಾಂಶಗಳು


ಸಸ್ಯ ಅಂಗಾಂಶಗಳನ್ನು ಎರಡು ಮುಖ್ಯ ಬಗೆಗಳಾಗಿ ವಿಂಗಡಿಸಬಹುದು.ಅವು ಯಾವುವೆಂದರೆ .
(1) ವರ್ಧನ ಅಂಗಾಂಶ (2) ಶಾಶ್ವತ ಅಂಗಾಂಶ

1.ವರ್ಧನ ಅಂಗಾಂಶ


• ವರ್ಧನ ಅಂಗಾಂಶ ನಿರಂತರವಾಗಿ ವಿಭಜನೆಯಾಗುತ್ತಿರುವ ಭ್ರೂಣಕೋಶಗಳಿಂದ ಕೂಡಿದೆ.
• ಇದಕ್ಕೆ ಬೆಳವಣಿಗೆಯ ಅಂಗಾಂಶ ಎಂದು ಕೂಡ ಕರೆಯಲಾಗುವುದು.
• ವರ್ಧನ ಅಂಗಾಂಶದ ಜೀವಕೋಶಗಳು ಬೇರು ಹಾಗೂ ಕಾಂಡದಲ್ಲಿರುವ ನಾಳಕೂರ್ಚಗಳಲ್ಲಿಯೂ ಕಂಡು ಬರುತ್ತವೆ.
• ಸೆಲ್ಲುಲೋಸ್ ನಿಂದ ಆಗಿರುವ ತೆಳುವಾದ ಕೋಶ ಬಿತ್ತಿ ಇದೆ.
• ನಿರಂತರ ಕೋಶ ವಿಭಜನೆ ಶಕ್ತಿಯನ್ನು ಹೊಂದಿರುವ ಕೋಶಗಳನ್ನು ಹೊಂದಿದೆ.
• ಕೋಶಗಳು ಆಹಾರವನ್ನು ಸಂಗ್ರಹಣೆ ಮಾಡಿಕೊಳ್ಳುವುದಿಲ್ಲ.

2.ಶಾಶ್ವತ ಅಂಗಾಂಶಗಳು


• ಈ ಅಂಗಾಂಶಗಳು ಪ್ರೌಢಜೀವಕೋಶಗಳಿಂದ ಉಂಟಾಗಿದ್ದು, ಜೀವಕೋಶಗಳ ಕೋಶ ಭಿತ್ತಿಯು ಸೆಲ್ಯುಲೋಸ್ನಿಂದ ಕೂಡಿದೆ.
• ಸರಳ ಶಾಶ್ವತ ಅಂಗಾಂಶಗಳಲ್ಲಿ ಎಲ್ಲ ಜೀವಕೋಶಗಳು ಒಂದೇರೀತಿಯಲ್ಲಿದ್ದು, ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತವೆ.
• ಸಂಕೀರ್ಣ ಶಾಶ್ವತ ಅಂಗಾಂಶಗಳಲ್ಲಿ ಜೀವಂತ ಹಾಗೂ ನಿರ್ಜೀವ ಕೋಶಗಳೆರಡೂ ಕಂಡುಬರುತ್ತವೆ.
• ಶಾಶ್ವತ ಅಂಗಾಂಶಗಳಲ್ಲಿ ಎರಡು ವಿಧಗಳಿವೆ.

1. ಸರಳ ಶಾಶ್ವತ ಅಂಗಾಂಶಗಳು


1. ಪೇರಂಕೈಮಾ:- ಇದು ಎಳೆಯ ಸಸ್ಯಗಳ ಎಲ್ಲ ಭಾಗಗಳಲ್ಲಿ, ಪೊದೆ ಹಾಗೂ ಮರಗಳ ಮೃದು ಭಾಗಗಳಲ್ಲಿ ಕಂಡು ಬರುತ್ತದೆ. ಈ ಅಂಗಾಂಶದ ಜೀವಕೋಶಗಳು ತೆಳುವಾದ ಕೋಶಭಿತ್ತಿ ಹೊಂದಿದ್ದು,ಕೋಶ ವಿಭಜನಾ ಶಕ್ತಿಯನ್ನು ಉಳಿಸಿಕೊಂಡಿರುತ್ತವೆ.
ಕಾರ್ಯ:ಇದು ಆಹಾರವನ್ನು ಸಂಗ್ರಹಣೆ ಮಾಡಿಕೊಳ್ಳುತ್ತದೆ.
2. ಕೋಲಂಕೈಮಾ:ಈ ಅಂಗಾಂಶದ ಜೀವ ಕೋಶಗಳು ಸಜೀವ ಕೋಶಗಳಿಂದಾಗಿವೆ.ಕೋಶಗಳು ಒತ್ತಾಗಿ ಜೋಡಣೆಗೊಂಡು ಸಂಧಿಸುವ ಮೂಲೆಗಳಲ್ಲಿ ದಪ್ಪನಾಗಿರುತ್ತವೆ ಮತ್ತು ಕೋಶಭಿತ್ತಿ ಹೇಮಿ ಸೆಲ್ಯುಲೋಸ್ ಮತ್ತು ಪೆಕ್ಟಿನ್ ಎಂಬ ವಸ್ತುಗಳಿಂದ ಮಾಡಲ್ಪಟ್ಟಿರುತ್ತವೆ.

2. ಸಂಕೀರ್ಣ ಶಾಶ್ವತ ಅಂಗಾಂಶಗಳು


1. ಕ್ಸೈಲಂ :ಇದು ಬೇರಿನಿಂದ ಹೀರಲ್ಪಟ್ಟ ನೀರು ಮತ್ತು ಲವಣಗಳನ್ನು ಸಸ್ಯದ ಎಲೆಗಳಿಗೆ ಸರಬರಾಜು ಮಾಡುವುದು.ಆದ್ದರಿಂದ ಇದಕ್ಕೆ ಜಲ ವಾಹಕ ಅಂಗಾಶ ಎನ್ನುವರು.
2. ಫ್ಲೋಯಂ:ಇದು ಸಸ್ಯಗಳಿಗೆ ಆಹಾರವನ್ನು ಸಾಗಾಣಿಕೆ ಮಾಡುತ್ತದೆ. ಎಲೆಗಳಲ್ಲಿ ದ್ಯುತಿಸಂಶ್ಲೇಷಣೆಯಿಂದ ಕ್ರಿಯೆಯಲ್ಲಿ ತಯಾರಾದ ಆಹಾರವನ್ನು ಸಸ್ಯದ ಎಲ್ಲ ಭಾಗಗಳಿಗೆ ಸಾಗಾಣಿಕೆ ಮಾಡುತ್ತದೆ.
• ನಾಳ ಕೂರ್ಚಗಳು:ಕ್ಸೈಲಂ ಮತ್ತು ಫ್ಲೋಯಂ ಅಂಗಾಂಶಗಳು ಯಾವಾಗಲೂ ಜೊತೆಯಲ್ಲಿರುತ್ತವೆ.

3.ಹೊರದರ್ಮ ಅಂಗಾಂಶ ಅಥವಾ ಎಪಿ ಡರ್ಮಲ್ ಅಂಗಾಂಶ


• ಸಸ್ಯದ ವಿವಿಧ ಭಾಗಗಳಾದ ಕಾಂಡ, ಎಲೆ, ಹೂವು, ಹಣ್ಣು, ಬೀಜ ಮತ್ತು ಬೇರುಗಳ ಅತ್ಯಂತ ಹೊರ ಹೊದಿಕೆಯು ಒಂದು ರಕ್ಷಣಾತ್ಮಕ ಅಂಗಾಂಶದಿಂದ ಉಂಟಾಗಿದೆ. ಇದಕ್ಕೆ ಹೊರದರ್ಮ ಅಂಗಾಂಶ ಎಂದು ಕರೆಯಲಾಗುವುದು.
ಮುಖ್ಯ ಕಾರ್ಯಗಳು :
• ಸಸ್ಯ ದೇಹಕ್ಕೆ ರಕ್ಷಣೆ
• ನೀರು ಮತ್ತು ಲವಣಗಳನ್ನು ಹೀರಲು ಸಹಾಯಕ

ಪ್ರಾಣಿ ಅಂಗಾಂಶಗಳು


1.ಅನುಲೇಪಕ ಅಂಗಾಂಶ
• ಇದು ಅತ್ಯಂತ ಸರಳವಾದ ಅಂಗಾಂಶ. ದೇಹದ ವಿವಿಧ ಭಾಗಗಳ ಒಳಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಹೊದಿಕೆಯಾಗಿ ಇದು ಕಂಡು ಬರುತ್ತದೆ
• ಅನುಲೇಪಕ ಅಂಗಾಂಶಗಳು ಚರ್ಮದಲ್ಲಿ ತಮ್ಮ ಕೆಳಗಿರುವ ಅಂಗಾಂಶಗಳನ್ನು ರಕ್ಷಿಸುವ ಒಂದು ದಪ್ಪ ಪೊರೆಯಂತೆ ಕೆಲಸ ಮಾಡುತ್ತದೆ. ಅಲ್ಲದೆ, ಇದು ದೇಹದ ತಾಪಮಾನವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ.
2.ಸ್ನಾಯು ಅಂಗಾಂಶ
• ಸ್ನಾಯು ಅಂಗಾಂಶವು ದೇಹದ ಭಾಗಗಳ ಚಲನೆಗೆ ಕಾರಣವಾಗುತ್ತದೆ. ಇದು ನೀಳವಾದ ಜೀವಕೋಶಗಳಿಂದ ಕೂಡಿದೆ. ಹೀಗಾಗಿ ಈ ಜೀವಕೋಶಗಳಿಗೆ ಸ್ನಾಯು ತಂತುಗಳು ಎಂದು ಕರೆಯಲಾಗುತ್ತದೆ.
3.ಸಂಯೋಜಕ ಅಂಗಾಂಶ
• ದೇಹದ ವಿವಿಧ ಅಂಗಾಂಶಗಳನ್ನು ಒಂದಕ್ಕೊಂದು ಹೊಂದಿಸುವ ಹಾಗೂ ದೇಹಕ್ಕೆ ಆಧಾರ ನೀಡುವ ವಿವಿಧ ಅಂಗಾಂಶಗಳನ್ನು ಸೇರಿಸಿ ಸಂಯೋಜಕ ಅಂಗಾಂಶ ಎಂದು ಕರೆಯಲಾಗುತ್ತದೆ.
4. ನರ ಅಂಗಾಂಶ
• ನರ ಅಂಗಾಂಶವು ದೇಹದ ಬಾಹ್ಯ ಹಾಗೂ ಆಂತರಿಕ ಪ್ರಚೋದನೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ.