ಜೀವಗೋಳ (Biosphere)
 
ಭೂಮಿಯಿಂದ ಸುಮಾರು 10K.m. ಎತ್ತರವರೆಗೂ ಮತ್ತು 11K.m. ಸಾಗರದ ಆಳದವರೆಗೂ ವ್ಯಾಪಿಸಿರುವ ಸುಮಾರು 21K.m. ದಪ್ಪವಾಗಿರುವ ಗೋಳವನ್ನು ಜೀವಗೋಳ ಎನ್ನುವರು.
ಜೀವಪರಿಸರ ಶಾಸ್ತ್ರ (Ecology)
ಜೀವಪರಿಸರ ಶಾಸ್ತ್ರವು ಜೀವಿಗಳು ಮತ್ತು ಅವುಗಳ ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಸರಗಳ ನಡುವಿನ ಸಂಬಂಧವನ್ನು ವಿವರಿಸುವ ವಿಜ್ಞಾನವಾಗಿದೆ. ಜೀವಿಗಳು ಮತ್ತು ಪ್ರಾಕೃತಿಕ ಪರಿಸರ ಹಾಗೂ ವಿವಿಧ ಪ್ರಕಾರದ ಪ್ರಾಣಿಗಳ ನಡುವೆ ಸೌಹಾರ್ದಯುತವಾದ ಹಾಗೂ ಸಮತೋಲನವಾದ ಸಂಬಂಧ ನೈಸರ್ಗಿಕವಾಗಿ ಕಂಡುಬರುವುದು. ಇದನ್ನೇ ಜೈವಿಕ ಪರಿಸರ ಸಮತೋಲನ ಎನ್ನುವರು. ಪ್ರಾಣಿವರ್ಗ ಮತ್ತು ಸಸ್ಯವರ್ಗಗಳು ತಮ್ಮ ಸುತ್ತಲಿನ ಸಜೀವ ಹಾಗೂ ನಿರ್ಜೀವ ಭಾಗಗಳ ನಡುವಿನ
ಪರಸ್ಪರ ಸಂಬಂಧವನ್ನು ‘ಜೀವಿಪರಿಸರವ್ಯವಸ್ಥೆ’ ಎನ್ನುವರು. ಅಂದರೆ ಜೀವ ಪರಿಸ್ಥಿತಿಯ ಸಮಸ್ತ ಘಟಕಗಳೂ ಸೇರಿ ಹೊಂದಾಣಿಕೆಯಿಂದಿರುವುದನ್ನು ವಿವರಿಸುತ್ತದೆ.
ಜೀವ ವೈವಿಧ್ಯತೆ
ಒಂದು ಭೂ ಭಾಗದಲ್ಲಿ ಕಂಡುಬರುವ ಎಲ್ಲಾ ಬಗೆಯ ಸಸ್ಯಗಳು ಹಾಗೂ ಪ್ರಾಣಿ ಪ್ರಭೇದಗಳನ್ನು ಅಲ್ಲಿಯ ‘ಜೀವ ವೈವಿಧ್ಯತೆ’ ಯೆಂದು ಕರೆಯುವರು. ಜೀವಿ ಪ್ರಭೇದಗಳ ಸಂಖ್ಯೆಯು ಜೀವ ವೈವಿಧ್ಯತೆಯನ್ನು ಪ್ರತಿಬಿಂಬಿಸುವುದು. ಜೀವವೈವಿಧ್ಯತೆ ಅತ್ಯಂತ ಪ್ರಮುಖವಾದುದು. ಏಕೆಂದರೆ ಇದು ಪರಿಸರದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮಾತ್ರವಲ್ಲದೆ ಮಾನವನ ಉಳಿವಿಗೂ ಸಹ ಅಗತ್ಯವಾಗಿದೆ. ಅತ್ಯಂತ ಅಪರೂಪವಾಗಿರುವ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳನ್ನು ಕಾಪಾಡಲು ಜೀವ ವೈವಿಧ್ಯತೆಯ ಸಂರಕ್ಷಣೆ ಅಗತ್ಯ. ಈ ಜೀವಿಗೆ ಅಗತ್ಯವಾದ ಒಳ್ಳೆಯ ಪರಿಸರದ ಹಿನ್ನೆಲೆಯನ್ನು ದೊರಕಿಸಿಕೊಡುವುದು ಅವುಗಳ ಸಂರಕ್ಷಣೆಯ ಮುಖ್ಯ ವಿಧಾನವಾಗಿದೆ.
ಪರಿಸರ ಮಾಲಿನ್ಯ
ನಮ್ಮ ಸುತ್ತಮುತ್ತಲಿನಲ್ಲಾಗುವ ಅನಪೇಕ್ಷಣಿಯ ಬದಲಾವಣೆಯೇ ‘ಪರಿಸರಮಾಲಿನ್ಯ’.ಇದು ಮಾನವನೂ ಸೇರಿದಂತೆ ಜೀವಿಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನುಂಟು ಮಾಡುವುದು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜೀವಮಂಡಲದ ಘಟಕಗಳನ್ನು ಬದಲಾಯಿಸುತ್ತದೆ. ಇಂದು ಪರಿಸರ ಮಾಲಿನ್ಯವು ಜೀವಪರಿಸರವು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲೊಂದಾಗಿದೆ. ಇದಕ್ಕೆ ಕಾರಣವಾದ ಅಂಶಗಳೆಂದರೆ ಅಧಿಕ ಜನಸಂಖ್ಯೆ, ಕೈಗಾರಿಕೀಕರಣ, ನಗರೀಕರಣ, ಸಂಪನ್ಮೂಲಗಳ ದುರ್ಬಳಕೆ, ಅತಿಯಾಗಿ ವಾಹನಗಳನ್ನು ಬಳಸುವುದು ಇತ್ಯಾದಿ. ಇವುಗಳು ಸಸ್ಯವರ್ಗ, ಪ್ರಾಣಿವರ್ಗ ಮತ್ತು ಮಾನವ ಜೀವಿಗಳ ಜೀವನಕ್ರಮದಲ್ಲಾಗುವ ಬದಲಾವಣೆಯ ಮೇಲೆ ಪ್ರಭಾವ ಬೀರುತ್ತವೆ.
ಮಾಲಿನ್ಯದ ವಿಧಗಳು
ಪರಿಸರ ಮಾಲಿನ್ಯದಲ್ಲಿ ಹಲವಾರು ವಿಧಗಳಿದ್ದು ಅವುಗಳನ್ನು ಮಾಲಿನ್ಯಕಾರಕಗಳು
ಮತ್ತು ಮಾಲಿನ್ಯದ ಸ್ವರೂಪದ ಆಧಾರದ ಮೇಲೆ ವಿಂಗಡಿಸಲಾಗಿದೆ. ಅವುಗಳೆಂದರೆ- ವಾಯುಮಾಲಿನ್ಯ,
ಜಲಮಾಲಿನ್ಯ ಮತ್ತು ಶಬ್ದಮಾಲಿನ್ಯ.
1. ವಾಯುಮಾಲಿನ್ಯ
ವಾಯುಮಾಲಿನ್ಯವನ್ನು ವಿಶ್ವ ಆರೋಗ್ಯ ಸಂಸ್ಥೆಯು (W.H.O) ಹೀಗೆ ಹೇಳಿದೆ. “ಮಾನವನ ವಿವಿಧ ಚಟುವಟಿಕೆಗಳಿಂದ ಸಾಂಧ್ರೀಕರಣಗೊಂಡ ಪದಾರ್ಥಗಳು ವಾಯುವಿನಲ್ಲಿ ಸೇರಿ
ಮಾನವನ ಆರೋಗ್ಯ, ವನಸ್ಪತಿ ಮತ್ತು ಆಸ್ತಿ ಪಾಸ್ತಿಗಳ ಮೇಲೆ ಪರಿಣಾಮ ಬೀರಿ ಹಾನಿಯುಂಟುಮಾಡುವುದೇ ವಾಯುಮಾಲಿನ್ಯವಾಗಿದೆ”. ವಾಯುಮಾಲಿನ್ಯಕಾರಕದ ಪ್ರಮುಖ ಮೂಲಗಳೆಂದರೆ
ಎ) ಪ್ರಾಕೃತಿಕ ಮೂಲಗಳು: ಜ್ವಾಲಾಮುಖಿಗಳು, ಕಾಡ್ಗಿಚ್ಚು, ಬಾಹ್ಯಾಕಾಶ, ದೂಳು ಇತ್ಯಾದಿ.
ಬಿ) ಮಾನವನಿರ್ಮಿತ ಮೂಲಗಳು : ಕೈಗಾರಿಕೆಗಳಿಂದ, ಗೃಹಬಳಕೆಯಿಂದ, ವಾಹನಗಳಿಂದ, ಗಣಿಗಾರಿಕೆ, ಅಣುಶಕ್ತಿ ಘಟಕಗಳಿಂದ, ಅಣುಸ್ಫೋಟನೆ ಇತ್ಯಾದಿಗಳಿಂದ ಬರುವ ಅನಿಲಗಳು.
ಬಹುಮುಖ್ಯವಾದ ವಾಯುಮಾಲಿನ್ಯಕಾರಕಗಳೆಂದರೆ: ಇಂಗಾಲದ ಡೈಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಗಂಧಕದ ಡೈಆಕ್ಸೈಡ್, ಸಾರಜನಕದ ಆಕ್ಸೈಡ್‍ಗಳು, ಕ್ಲೋರೊಪ್ಲೋರೋ ಕಾರ್ಬನ್‍ಗಳು, ಹೈಡ್ರೋಕಾರ್ಬನ್‍ಗಳು ಇದರಿಂದಾಗುವ ಪ್ರಮುಖ ಪರಿಣಾಮಗಳಾವುವೆಂದರೆ, ಹವಾಮಾನ ಮತ್ತು ವಾಯುಗುಣ ಪರಿಸ್ಥಿತಿ ವ್ಯತ್ಯಾಸ, ಓಝೋನ್, ಕ್ಷೀಣತೆ, ಹಸಿರುಮನೆ ಪರಿಣಾಮ, ಜಾಗತಿಕ ತಾಪಮಾನ ಮಾನವನ ಆರೋಗ್ಯದ ಮೇಲೆ ಪರಿಣಾಮ, ಉಸಿರಾಟ ವ್ಯವಸ್ಥೆಯಲ್ಲಿ ತೊಂದರೆ, ಸಸ್ಯಗಳು ಹಾಗೂ ಪ್ರಾಣಿವರ್ಗಗಳ ಜೀವನದ ಮೇಲೆ ದುಷ್ಪರಿಣಾಮ ಮೊದಲಾದವುಗಳು.
2. ಜಲಮಾಲಿನ್ಯ
ಜಲಮಾಲಿನ್ಯವೆಂದರೆ ಮಾನವ ಮತ್ತು ಜಲಚರಗಳ ಜೀವನೋಪಾಯದ ಮೇಲೆ ಅನರ್ಥ ಪರಿಣಾಮವನ್ನುಂಟು ಮಾಡುವಷ್ಟು ನೀರಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳ ಬದಲಾವಣೆ.
ಜಲಮಾಲಿನ್ಯದ ಪ್ರಮುಖ ಮೂಲಗಳಾವುವೆಂದರೆ, ನೈಸರ್ಗಿಕ ಮೂಲಗಳಲ್ಲಿ ಮಣ್ಣಿನ ಸವೆತ, ಭೂಕುಸಿತಗಳು ಜ್ವಾಲಾಮುಖಿ ಸ್ಫೋಟನೆ, ಸಸ್ಯಗಳು ಮತ್ತು ಪ್ರಾಣಿಗಳು ಕ್ಷಯಿಸುವ ಮತ್ತು ಕೊಳೆಸುವ ಪ್ರಕ್ರಿಯೆಗಳು ಸೇರುತ್ತವೆ. ಮಾನವ ನಿರ್ಮಿತ ಮೂಲಗಳಲ್ಲಿ ಕೈಗಾರಿಕೆಗಳ ತ್ಯಾಜ್ಯವಸ್ತು, ನಗರಗಳ ತ್ಯಾಜ್ಯವಸ್ತು, ಗೃಹತಾಜ್ಯವಸ್ತು, ಕೃಷಿತ್ಯಾಜ್ಯವಸ್ತುಗಳು, ತೈಲಸೋರುವಿಕೆ, ಅಣುತ್ಯಾಜ್ಯ, ತೈಲಬಾವಿಗಳನ್ನು ಸಾಗರವಲಯದಲ್ಲಿ ಕೊರೆಯುವುದು, ಶಾಖ ವಿದ್ಯುತ್ ಕೆಂದ್ರಗಳ ತ್ಯಾಜ್ಯವಸ್ತುಗಳು ಇತ್ಯಾದಿ ಜಲಮಾಲಿನ್ಯವನ್ನುಂಟು ಮಾಡುತ್ತವೆ.
ಜಲಮಾಲಿನ್ಯದಿಂದಾಗುವ ಪರಿಣಾಮಗಳೆಂದರೆ - ಮಲಿನ ನೀರಿನಿಂದ ಹರಡುವ ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳಾದ ಕಾಲರಾ, ಟೈಫಾಯಿಡ್, ಕ್ಷಯ, ಕಾಮಾಲೆ, ಆಮಶಂಕೆ, ಅತಿಸಾರ ಇತ್ಯಾದಿ; ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಮಲಿನಗೊಂಡ ನೀರನ್ನು ನೀರಾವರಿಗೆ ಬಳಸಿದರೆ ಬೆಳೆಗಳಿಗೆ ಹಾನಿಯಾಗುತ್ತದೆ.
3. ಶಬ್ದಮಾಲಿನ್ಯ
ಪ್ರತಿಕೂಲಕರ ಪರಿಣಾಮ ಬೀರುವ ಅನಗತ್ಯವಾದ ಶಬ್ದವು ವಾಯುಮಂಡಲದಲ್ಲಿ ಹರಡಿ ಆರೋಗ್ಯಕ್ಕೆ ಹಾನಿಯುಂಟುಮಾಡುವುದನ್ನು ಶಬ್ದಮಾಲಿನ್ಯ ಎನ್ನುವರು.
ಶಬ್ದಮಾಲಿನ್ಯದ ಮೂಲಗಳಾವುವೆಂದರೆ :
ನೈಸರ್ಗಿಕ ಮೂಲಗಳು- ಗುಡುಗು, ಸಿಡಿಲು, ಮಿಂಚು, ಅತ್ಯಧಿಕ ಮಳೆ, ಆಲಿಕಲ್ಲು ಮಳೆ, ಜಲಪಾತಗಳು, ಸಮುದ್ರದ ಅಲೆಗಳು.
ಮಾನವ ನಿರ್ಮಿತ ಮೂಲಗಳು - ಕೈಗಾರಿಕೆಗಳ ಶಬ್ದ, ವಾಹನಗಳ ಶಬ್ದ, ವಿಮಾನಗಳ ಶಬ್ದ, ಗಣಿಗಾರಿಕೆ, ನಗರಪ್ರದೇಶಗಳ ಶಬ್ದ. ಇತ್ಯಾದಿ.
ಶಬ್ದಮಾಲಿನ್ಯದ ಪರಿಣಾಮಗಳೆಂದರೆ : ತಾತ್ಕಾಲಿಕ ಅಥವಾ ಶಾಶ್ವತವಾಗಿ ಕಿವಿ ಕೇಳಿಸದಿರುವುದು. ತಲೆನೋವು, ಆಯಾಸ, ಹೃದಯ ಸಂಬಂಧಿ ಕಾಯಿಲೆಗಳು. ಮಾನಸಿಕ ಅಸ್ವಸ್ಥತೆ, ದೈಹಿಕ ಬದಲಾವಣೆ. ನಿದ್ರಾಭಂಗ.
ಶಬ್ದಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳು : ವಾಸಸ್ಥಳದಿಂದ ದೂರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು, ಕಾರ್ಖಾನೆಗಳಲ್ಲಿ ಶಬ್ದ ನಿರೋಧಕ ಗೋಡೆಗಳನ್ನು ನಿರ್ಮಿಸುವುದು, ಅನಗತ್ಯವಾಗಿ ಸೈರನ್, ಹಾರನ್ ಮತ್ತು ಶಬ್ದಮಾಡುವ ಉಪಕರಣಗಳನ್ನು ಬಳಸುವುದನ್ನು ನಿಲ್ಲಿಸುವುದು, ವಿಮಾನ ನಿಲ್ದಾಣಗಳನ್ನು ನಗರವಲಯದಿಂದ ದೂರ ನಿರ್ಮಿಸುವುದು, ಕೈಗಾರಿಕಾ ಕಾರ್ಮಿಕರುಗಳಿಗೆ ಶಬ್ದ ನಿಯಂತ್ರಕಗಳನ್ನು ಒದಗಿಸುವುದು, ಶಬ್ದವುಂಟುಮಾಡುವ ವಾಹನಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದು.