ಭೂಕಂಪಗಳು

 

ಭೂ ಮೇಲ್ಮೈಯಲ್ಲಿ ಉಂಟಾಗುವ ನಡುಗುವಿಕೆ, ಕಂಪನ ಹಾಗೂ ಕಂಪನಗಳ ಸರಣಿಯನ್ನು ಭೂಕಂಪವೆಂದು ಕರೆಯುವರು. ಭೂಕಂಪ ಕುರಿತ ವೈಜ್ಞಾನಿಕ ಅಧ್ಯಯನವನ್ನು ಭೂಕಂಪಶಾಸ್ತ್ರ (Seismology) ಎನ್ನುವರು. ಭೂಕಂಪ ಅಲೆಗಳ ಆರಂಭ ಸ್ಥಳ, ವೇಳೆ, ವೇಗ ಹಾಗೂ ದಿಕ್ಕನ್ನು ದಾಖಲಿಸುವ ಉಪಕರಣವನ್ನು ಭೂಕಂಪಮಾಪಕ (Seismograph) ಎನ್ನುವರು.

ಭೂಕಂಪನಗಳು ಉಂಟಾಗಲು ಕಾರಣಗಳು


ಭೂರಚನಾ ಕಾರಣಗಳು


ಭೂಕವಚವು ಹಲವಾರು ದೊಡ್ಡ ಮತ್ತು ಸಣ್ಣ ಶಿಲಾಫಲಕಗಳಿಂದ ಕೂಡಿದೆ. ಈ ಭೂ ಫಲಕಗಳ ಅಂಚುಗಳು ಚಲಿಸುವ ಭಾಗಗಳಾಗಿದ್ದು, ಇವು ಭೂಕಂಪಗಳುಂಟಾಗುವ ಮೂಲಸ್ಥಳಗಳಾಗಿವೆ. (ಪೆಸಿಫಿಕ್ ಸಾಗರದ ಸುತ್ತಮುತ್ತಲಿನ ವಲಯ).

ಜ್ವಾಲಾಮುಖಿ ಸ್ಫೋಟಗಳು


ಜ್ವಾಲಾಮುಖಿಗಳಲ್ಲಿ ಅನಿಲಗಳ ಸ್ಫೋಟದಿಂದ ಭೂಕಂಪಗಳು ಉಂಟಾಗುತ್ತವೆ. (ಕ್ರಕಟೋವ ಜ್ವಾಲಾಮುಖಿ).

ಮಾನವ ನಿರ್ಮಿತ ಅಂಶಗಳು


ಪ್ರಕೃತಿಯೊಡನೆ ಮಾನವನು ನಡೆಸುವ ಅತಿಯಾದ ಕಾರ್ಯಾಚರಣೆಗಳು ಸಹ ಭೂಕಂಪಗಳುಂಟಾಗಲು ಕಾರಣಗಳಾಗಿವೆ. ಅವುಗಳೆಂದರೆ ಗಣಿಗಾರಿಕೆ, ಬೃಹತ್ ಅಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣ ಮತ್ತು ಅಣುಪರೀಕ್ಷೆಗಳು ಇತ್ಯಾದಿ

ಭೂಕಂಪಗಳ ಪರಿಣಾಮಗಳು


ಅಲುಗಾಡುವಿಕೆ ಮತ್ತು ನೆಲದ ಬಿರಿಯುವಿಕೆ


ಅಲುಗಾಡುವಿಕೆ ಮತ್ತು ನೆಲದ ಬಿರಿಯುವಿಕೆಯು ಭೂಕಂಪಗಳಿಂದ ಸೃಷ್ಟಿಯಾದ ಮುಖ್ಯ ಪರಿಣಾಮಗಳಾಗಿವೆ. ಇದರಿಂದಾಗಿ ಕಟ್ಟಡಗಳು ಮತ್ತು ಇತರ ಗಡುಸಾದ ರಚನೆಗಳಿಗೆ ಹೆಚ್ಚೂ ಕಮ್ಮಿ ತೀವ್ರಸ್ವರೂಪದ ಹಾನಿಯುಂಟಾಗುತ್ತದೆ.

ಭೂಕುಸಿತಗಳು ಮತ್ತು ಹಠಾತ್ ವಿಪತ್ತುಗಳು


ಭೂ ಕಂಪನಗಳಿಂದಾಗಿ ಭೂ ಕುಸಿತ ಉಂಟಾಗುವುದರಿಂದ ಮನೆಗಳು, ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳು ಕುಸಿದು ಬೀಳುತ್ತವೆ. ಇದರಿಂದಾಗಿ ಅಪಾರವಾದ ಸಾವು-ನೋವು ಸಂಭವಿಸುತ್ತವೆ. ಹಾಗೂ ಅಪಾರ ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗುತ್ತದೆ.

ಮಣ್ಣಿನ ದ್ರವೀಕರಣ


ಅಲುಗಾಟದ ಕಾರಣದಿಂದಾಗಿ, ನೀರು-ತುಂಬಿಕೊಂಡ ಕಣಕಣದಂತಿರುವ ಮಣ್ಣು ತಾತ್ಕಾಲಿಕವಾಗಿ ತನ್ನ ಬಲವನ್ನು ಕಳೆದುಕೊಂಡು, ಘನ ಸ್ಥಿತಿಯಿಂದ ದ್ರವ ಸ್ಥಿತಿಗೆ ರೂಪಾಂತರಗೊಂಡಾಗ ಮಣ್ಣಿನ ದ್ರವೀಕರಣ ಕಂಡುಬರುತ್ತದೆ. ಮಣ್ಣಿನ ದ್ರವೀಕರಣದಿಂದಾಗಿ ಕಟ್ಟಡಗಳು ಅಥವಾ ಸೇತುವೆಗಳಂತಹ ಗಡುಸಾದ ರಚನೆಗಳು ದ್ರವೀಕೃತ ಸಂಚಯಗಳೊಳಗೆ ಬಾಗಿಕೊಳ್ಳಬಹುದು ಅಥವಾ ಮುಳುಗಬಹುದು.

ಸುನಾಮಿ


ಸಮುದ್ರ ಮತ್ತು ಸಾಗರ ತಳದಲ್ಲಿ ಉಂಟಾಗುವ ಭೂಕಂಪನಗಳಿಂದ ಸಾಗರಗಳಲ್ಲಿ ಅತಿ ಎತ್ತರವಾದ ದೈತ್ಯ ಅಲೆಗಳು ತೀರಕ್ಕೆ ಅಪ್ಪಳಿಸುತ್ತವೆ. ಇವುಗಳನ್ನು ಸುನಾಮಿ ಎಂದು ಕರೆಯುವರು.ಒಂದು ಭೂಕಂಪ ಅಥವಾ ಸಮುದ್ರಾಂತರ ಭೂಕುಸಿತದ ಕಾರಣದಿಂದ ಹುಟ್ಟಿಕೊಂಡ ಬೃಹತ್ ಅಲೆಗಳು ಕೇವಲ ಕೆಲವೇ ನಿಮಿಷಗಳಲ್ಲಿ ಹತ್ತಿರದ ಕರಾವಳಿ ಪ್ರದೇಶಗಳನ್ನು ಪ್ರವಾಹದಲ್ಲಿ ಮುಳುಗಿಸಬಲ್ಲವು. ಸುನಾಮಿಗಳು ಮುಕ್ತ ಸಾಗರದಾದ್ಯಂತ ಸಾವಿರಾರು ಕಿಲೋಮೀಟರುಗಳವರೆಗೆ ಸಂಚರಿಸಬಲ್ಲವು ಮತ್ತು ತಮ್ಮ ಸೃಷ್ಟಿಗೆ ಕಾರಣವಾದ ಭೂಕಂಪಗಳು ಸಂಭವಿಸಿದ ಕೆಲವೇ ಗಂಟೆಗಳ ನಂತರ ದೂರದ ತೀರಪ್ರದೇಶದ ಮೇಲೆ ನಷ್ಟಗಳನ್ನು ಉಂಟುಮಾಡಬಲ್ಲವು.