ಭಾರತದ ಭೂ ಸ್ವರೂಪಗಳು

 

ಭಾರತವು ವಿವಿಧ ಬಗೆಯ ಭೂಸ್ವರೂಪಗಳನ್ನು ಒಳಗೊಂಡಿದೆ. ಈ ಸ್ವರೂಪಗಳು ದೇಶದ ವಿವಿಧ ಭಾಗಗಳಲ್ಲಿ ಕಂಡು ಬರುತ್ತವೆ. ಇವುಗಳ ಭೂಇತಿಹಾಸ ವಿವಿಧ ಅವಧಿಗಳಲ್ಲಿ ನಿರ್ಮಿತವಾಗಿದ್ದು, ಭೂರಚನೆ ಹಾಗೂ ಮೇಲ್ಮೈ ಲಕ್ಷಣಗಳಲ್ಲಿ ವ್ಯತ್ಯಾಸಗಳನ್ನು ಹೊಂದಿದೆ. ಇವುಗಳನ್ನು ಆಧರಿಸಿ ದೇಶವನ್ನು ನಾಲ್ಕು ಪ್ರಧಾನ ಭೂಸ್ವರೂಪ ವಿಭಾಗಳಾಗಿ ವಿಂಗಡಿಸಬಹುದು.

1) ಉತ್ತರದ ಪರ್ವತಗಳು


"ಉತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯು ಜಗತ್ತಿನಲ್ಲಿಯೇ ಅತಿ ಎತ್ತರವಾದ ಶಿಖರಗಳನ್ನು ಆಳವಾದ ಕಣಿವೆಗಳನ್ನು, ಹಿಮನದಿ ಮುಂತಾದವುಗಳನ್ನು ಹೊಂದಿದೆ. ಹಿಮಾಲಯ ಪರ್ವತ ಶ್ರೇಣಿಯು ಪಾಮಿರ್ ಗ್ರಂಥಿಯಿಂದ ಪ್ರಾರಂಭವಾಗಿ ಪೂರ್ವದಲ್ಲಿ ಅರುಣಾಚಲದವರೆಗೆ ಸುಮಾರು 2500 ಕಿಮೀ ಉದ್ದವಾಗಿ ಹಬ್ಬಿದೆ. ಈ ಮಡಿಕೆ ಪರ್ವತ ಶ್ರೇಣಿಗಳು ಮೂರು ಪ್ರಮುಖ ಶ್ರೇಣಿಗಳನ್ನು ಒಳಗೊಂಡಿದೆ. ಇವುಗಳೆಂದರೆ
ಅ) ಶಿವಾಲಿಕ್ ಶ್ರೇಣಿ : ಇದು ಹಿಮಾಲಯ ಪರ್ವತಗಳಲ್ಲಿ ಇತ್ತೀಚಿಗೆ ನಿರ್ಮಿತವಾದುದು. ಇದನ್ನು ಹಿಮಾಲಯದ ಪಾದ ಬೆಟ್ಟಗಳು ಎಂದೂ ಸಹ ಕರೆಯುವರು. ಇಲ್ಲಿ ಸಮತಟ್ಟಾದ ಕಿರಿದಾದ ಮೈದಾನಗಳಿವೆ. ಈ ಮೈದಾನಗಳನ್ನು ಡೂನ್‍ಗಳು ಎಂದು ಕರೆಯುವರು. ಉದಾ : ಡೆಹರಾ ಡೂನ್, ಕೋಟಾ, ಪಾಟ್ಲಿ ಚೌಕಾಂಬಾ, ಉದಾಂಪೂರ ಮತ್ತು ಕೋಟ್ಲಾಗಳು. ಇವು ಸಮುದ್ರದಿಂದ 600-1500 ಮಿ.ಗಳಷ್ಟು ಎತ್ತರವಾಗಿವೆ.
ಬ) ಹಿಮಾಚಲ (ಮಧ್ಯ ಹಿಮಾಲಯ) : ಇದು ಮಹಾ ಹಿಮಾಲಯ ಮತ್ತು ಶಿವಾಲಿಕ್ ಬೆಟ್ಟಗಳ ನಡುವೆ ಸುಮಾರು 3600 ಮೀ.ಗಳಿಂದ 4500 ಮೀ ಗಳಷ್ಟು ಸರಾಸರಿ ಎತ್ತರವನ್ನು ಹೊಂದಿವೆ. ಇವು 60 ರಿಂದ 80 ಕಿ.ಮೀ ಅಗಲವಾಗಿವೆ. ಇಲ್ಲಿ ಅನೇಕ ಸಮಾನಾಂತರ ಪರ್ವತ ಶ್ರೇಣಿಗಳಿವೆ. ಉದಾಹರಣೆಗೆ ಪೀರ್‍ಪಂಜಾಲ, ಮಹಾಭಾರತಶ್ರೇಣಿ, ನಾಗತಿಬ್ಬ, ಮಸ್ಸೋರಿ ಇತ್ಯಾದಿ.
ಕ) ಮಹಾ ಹಿಮಾಲಯ (ಹಿಮಾದ್ರಿ) : ಇದು ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರವಾದ ಹಾಗೂಮೊದಲು ನಿರ್ಮಿತಗೊಂಡಿರುವ ಸರಣಿಯಾಗಿದೆ. ಇದು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ಆದುದರಿಂದ ಇದನ್ನು ಹಿಮಾದ್ರಿ ಎಂದು ಕರೆಯುತ್ತಾರೆ. ಸಮುದ್ರ ಮಟ್ಟದಿಂದ ಈ ಶ್ರೇಣಿಯು 6000 ಮೀ.ದಿಂದ 8000 ಮೀ.ಗಿಂತಲೂ ಹೆಚ್ಚು ಎತ್ತರವಾಗಿದೆ. ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ (8848 ಮೀ) ನೇಪಾಳ ಮತ್ತು ಟಿಬೆಟ್ ಮಧ್ಯದಲ್ಲಿದೆ. ಈ ಸರಣಿಯಲ್ಲಿರುವ ಇತರೆ ಮುಖ್ಯ ಶಿಖರಗಳೆಂದರೆ ಕಾಂಚನ ಗಂಗಾ, ಧವಳಗಿರಿ, ನಂದಾದೇವಿ, ಗೌರಿಶಂಕರ. ಇವು ಅನೇಕ ಹಿಮನದಿಗಳನ್ನು ಹೊಂದಿವೆ. ಅವುಗಳಲ್ಲಿ ಗಂಗೋತ್ರಿ ಪ್ರಸಿದ್ಧವಾಗಿದ್ದು ಗಂಗಾನದಿಯ ಉಗಮ ಸ್ಥಾನವಾಗಿದೆ. ಇದರಲ್ಲಿ ಕಾರಾಕೋರಮ್ ಪರ್ವತಶ್ರೇಣಿ ಹಾಗೂ ಕೈಲಾಸ ಪರ್ವತಗಳಿವೆ. ಗಾಡ್ವಿನ್‍ಆಸ್ಟಿನ್ ಅಥವಾ K2 ಎಂಬುದು ಭಾರತದಲ್ಲಿ ಅತಿ ಎತ್ತರವಾದ (8611ಮೀ) ಶಿಖರವಾಗಿದೆ. "

2) ಉತ್ತರದ ಮಹಾ ಮೈದಾನ


ಉತ್ತರ ಭಾರತದ ಮಹಾ ಮೈದಾನವನ್ನು ಸಟ್ಲೇಜ್ ಗಂಗಾ ಮೈದಾನ ವೆಂತಲೂ ಕರೆಯುವರು. ಇದು ಉತ್ತರದಲ್ಲಿ ಹಿಮಾಲಯ ಪರ್ವತಗಳು ಹಾಗೂ ದಕ್ಷಿಣದಲ್ಲಿ ಪರ್ಯಾಯ ಪ್ರಸ್ಥಭೂಮಿಯ ನಡುವೆ ಕಂಡು ಬರುವುದು. ಈ ಮೈದಾನವು ಪಶ್ಚಿಮದ ಸಿಂಧೂ ನದಿಯ ಮೈದಾನದಿಂದ ಪೂರ್ವದಲ್ಲಿ ಬ್ರಹ್ಮಪುತ್ರ ಕಣಿವೆಯವರೆಗೂ ವಿಸ್ತರಿಸಿದೆ. ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 2400 ಕಿ.ಮೀ ಉದ್ದವಾಗಿರುವ ಈ ಮೈದಾನವು 70 ರಿಂದ 500 ಕಿ.ಮೀ. ಅಗಲವಾಗಿದೆ. ಈ ಮೈದಾನವು ಬಹುತೇಕವಾಗಿ ಸಮತಟ್ಟಾಗಿದೆ. ಉತ್ತರ ಭಾರತದ ಮೈದಾನವು, ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವ ಸಂಚಯನ ಮೈದಾನವಾಗಿದೆ."

3) ಪರ್ಯಾಯ ಪ್ರಸ್ಥಭೂಮಿ


ಪರ್ಯಾಯ ಪ್ರಸ್ಥಭೂಮಿಯು ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು. ಇದರ ಒಟ್ಟು ಕ್ಷೇತ್ರ ಸುಮಾರು 16 ಲಕ್ಷ ಚ.ಕಿ.ಮೀ. ಇದು ಉತ್ತರದಲ್ಲಿ ಅರಾವಳಿ ಪರ್ವತದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಹರಡಿದೆ. ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳಿಂದ ಪೂರ್ವದಲ್ಲಿ ‘ಜಾರ್ಖಂಡ್’ನ ರಾಜಮಹಲ್ ಬೆಟ್ಟ್ಚಗಳವರೆಗೆ ಸುಮಾರು 1400 ಕಿ.ಮೀ ಅಗಲವಾಗಿದೆ. ಈ ಪರ್ಯಾಯ ಪ್ರಸ್ಥಭೂಮಿಯು ತ್ರಿಕೋನಾಕೃತಿಯಲ್ಲಿದ್ದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿದೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಪೂರ್ವದಲ್ಲಿ ಬಂಗಾಳಕೊಲ್ಲಿ ಹಾಗೂ ದಕ್ಷಿಣದಲ್ಲಿ ಹಿಂದೂ ಮಹಾಸಾಗರಗಳನ್ನು ಇದು ಒಳಗೊಂಡಿದೆ. ಈ ಪ್ರಸ್ಥಭೂಮಿಯ ಉತ್ತರಭಾಗದಲ್ಲಿ ಪ್ರಮುಖವಾಗಿ ವಿಂಧ್ಯ ಪರ್ವತಗಳು, ಸಾತ್ಪುರಾ ಬೆಟ್ಟ, ಅರಾವಳಿ ಬೆಟ್ಟಗಳು, ಮಾಳ್ವಾ ಪ್ರಸ್ಥಭೂಮಿ, ಛೋಟಾನಾಗಪುರ ಪ್ರಸ್ಥಭೂಮಿಗಳಿದ್ದು ಇವುಗಳ ಮಧ್ಯದಲ್ಲಿ ನರ್ಮದಾ ಮತ್ತು ತಪತಿ ನದಿ ಹಾಗೂ ದಾಮೋದರನದಿಗಳಲ್ಲದೇ ಅನೇಕ ಚಿಕ್ಕ ನದಿಗಳು ಹರಿಯುತ್ತವೆ. ಇವುಗಳ ದಕ್ಷಿಣದಲ್ಲಿ ದಖನ್ ಪ್ರಸ್ಥಭೂಮಿಯಿದ್ದು, ಮಹಾದೇವ, ಮೈಕಲ ಶ್ರೇಣಿ, ಅಮರಕಂಟಕ ಬೆಟ್ಟಗಳು, ರಾಜಮಹಲ ಬೆಟ್ಟಗಳು ಇದರ ಉತ್ತರದಲ್ಲಿವೆ. ಅಣ್ಣಾಮಲೈ ಸರಣಿಯ ‘ಅನೈಮುಡಿ’ (2665 ಮೀಟರ) ಶಿಖರ ದಕ್ಷಿಣ ಭಾರತದಲ್ಲಿಯೇ ಅತ್ಯುನ್ನತ ಪ್ರದೇಶವಾಗಿದೆ. ದಖನ್ ಪ್ರಸ್ಥಭೂಮಿಯ ಪೂರ್ವಕ್ಕೆ ಪೂರ್ವಘಟ್ಟಗಳಿವೆ. ಅವು ಪಶ್ಚಿಮ ಘಟ್ಟಗಳನ್ನು ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ. ಪೂರ್ವ ಘಟ್ಟಗಳು ಹೆಚ್ಚು ಎತ್ತರವಾಗಿಲ್ಲ ಮತ್ತು ನಿರಂತರವಾಗಿಯೂ ಇಲ್ಲ. ಈ ಘಟ್ಟಗಳು ನದಿ ಕಣಿವೆಗಳಿಂದ ಅಲ್ಲಲ್ಲಿ ಪ್ರತ್ಯೇಕಿಸಲ್ಪಟ್ಟಿವೆ. ಈ ಪರ್ಯಾಯ ಪ್ರಸ್ಥಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಏಕೆಂದರೆ ಇಲ್ಲಿ ಅಪಾರವಾದ ಖನಿಜ ಸಂಪನ್ಮೂಲಗಳಿವೆ. ಇಲ್ಲಿನ ನದಿಗಳು ಜಲಪಾತಗಳಿಂದ ಕೂಡಿರುವುದರಿಂದ ಜಲವಿದ್ಯುಚ್ಛಕ್ತಿಯ ಉತ್ಪಾದನೆಗೆ ಅನುಕೂಲವಾಗಿವೆ.

4) ಕರಾವಳಿ ಮೈದಾನಗಳು


ಭಾರತವು ದ್ವೀಪಗಳನ್ನು ಹೊರತುಪಡಿಸಿ 6100 ಕಿ.ಮೀ ಉದ್ದ ಕರಾವಳಿಯನ್ನು ಹೊಂದಿದೆ. ಇದು ಪಶ್ಚಿಮದಲ್ಲಿ ಗುಜರಾತಿನ ಕಛ್ ಪ್ರದೇಶದಿಂದ ಪೂರ್ವದಲ್ಲಿ ಗಂಗಾ ನದಿಯ ಮುಖಜಭೂಮಿಯವರೆಗೂ ವಿಸ್ತರಿಸಿದೆ. ತೀರ ಪ್ರದೇಶದ ಉದ್ದಕ್ಕೂ ಕಂಡು ಬರುವ ಕಿರಿದಾದ ಮೈದಾನವನ್ನು ಕರಾವಳಿ ಮೈದಾನವೆಂದು ಕರೆಯುವರು. ಭಾರತದ ಕರಾವಳಿಯನ್ನು ‘ಪಶ್ಚಿಮ ಕರಾವಳಿ’ ಮತ್ತು ‘ಪೂರ್ವ ಕರಾವಳಿ’ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಪಶ್ಚಿಮ ಕರಾವಳಿಯು ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ ಗುಜರಾತಿನ ಕಛ್‍ನಿಂದ ಕನ್ಯಾಕುಮಾರಿ ಭೂಶಿರದವರೆಗೆ 1500 ಕಿ.ಮೀ.ಗಳಷ್ಟು ಉದ್ದವಾಗಿದೆ. ಇದನ್ನು ಕೇರಳದಲ್ಲಿ ಮಲಬಾರ್ ತೀರ, ಕರ್ನಾಟಕದಲ್ಲಿ ಕರ್ನಾಟಕ ಅಥವಾ ಕೆನರಾತೀರ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಕೊಂಕಣತೀರಮತ್ತು ಗುಜರಾತಿನಲ್ಲಿ ಗುಜರಾತ್ ತೀರ ಎಂದು ವಿಂಗಡಲಿಸಲಾಗಿದೆ. ಮುಂಬೈ, ಮಾರ್ಮಗೋವಾ,ಕೊಚ್ಚಿನ್, ಕಾಂಡ್ಲಾ, ಕಾರವಾರ, ಮಂಗಳೂರು ಇಲ್ಲಿನ ಮುಖ್ಯ ಬಂದರುಗಳಾಗಿವೆ. ಕನ್ಯಾಕುಮಾರಿಯಿಂದಉತ್ತರದಲ್ಲಿ ಗಂಗಾನದಿ ಮುಖಜ ಭೂಮಿಯವರೆಗೆ ಪೂರ್ವ ಘಟ್ಟಗಳು ಹಬ್ಬಿವೆ. ಪೂರ್ವ ಘಟ್ಟಹಾಗೂ ಬಂಗಾಳಕೊಲ್ಲಿಯ ನಡುವೆ ಪೂರ್ವ ಕರಾವಳಿ ಮೈದಾನವಿದೆ. ಈ ಕರಾವಳಿಯ ಮೈದಾನವುಹೆಚ್ಚು ಅಗಲ ಮತ್ತು ಒಂದೇ ರೀತಿ ಸಮತಟ್ಟಾಗಿದೆ. ಇದು ಮಹಾನದಿ, ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳ ಮುಖಜ ಭೂಮಿಗಳನ್ನು ಒಳಗೊಂಡಿದೆ. ಪೂರ್ವ ತೀರದಲ್ಲಿ ಸಮುದ್ರದ ಉಪ್ಪು ನೀರಿನಿಂದ ನಿರ್ಮಿತವಾದ ಕೆಲವು ಸರೋವರ ಅಥವಾ ಲಗೂನ್‍ಗಳಿವೆ. ಇವುಗಳಲ್ಲಿ ಒಡಿಸ್ಸಾದ ಚಿಲ್ಕಾ, ತಮಿಳುನಾಡಿನ ‘ಪುಲಿಕಾಟ್’ ಸರೋವರಗಳು ಮುಖ್ಯವಾಗಿವೆ. ಪೂರ್ವ ಕರಾವಳಿಯನ್ನು ಉತ್ಕಲ ತೀರ ಮತ್ತು ಕೋರಮಂಡಲ ತೀರ ಎಂದು ವಿಂಗಡಿಸಲಾಗಿದೆ.