ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟ (1857)
 
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತದ ಉಪಖಂಡದ ಮೇಲೆ ಬ್ರಿಟಿಷ್ ಆಕ್ರಮಣದ ವಿರುದ್ಧ ಉತ್ತರ ಮತ್ತು ಮಧ್ಯ ಭಾರತಗಳಲ್ಲಿ ಭುಗಿಲೆದ್ದ ಶಸ್ತ್ರಸಜ್ಜಿತ ಬಂಡಯವಾಗಿದೆ. ಇದನ್ನು ವಿವಿಧ ರೀತಿಯಾಗಿ ‘ಸಿಪಾಯಿ ದಂಗೆ’ ಮತ್ತು ‘1857 ರ ಭಾರತೀಯ ದಂಗೆ ಎಂದು ಕರೆಯಲಾಗುತ್ತದೆ. ಈ ಸಂಗ್ರಾಮದ ಪರಿಣಾಮವಾಗಿ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಪ್ರಾರಂಭವಾಯಿತು. ಈ ದಂಗೆಯು ಭಾರತ ಸೈನಿಕರು ಮತ್ತು ಅವರ ಬ್ರಿಟಿಷ್ ಅಧಿಕಾರಿಗಳ ನಡುವಿನ ಜನಾಂಗೀಯ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳ ಫಲವಾಗಿತ್ತು.
ದಂಗೆಗೆ ಕಾರಣಗಳು
1857 ರ ಸಿಪಾಯಿ ದಂಗೆಗೆ ಹಲವಾರು ಕಾರಣಗಳಿದ್ದು, ಅವುಗಳನ್ನು ಕ್ರಮವಾಗಿ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ಸೈನಿಕ ಕಾರಣಗಳೆಂದು ವಿಂಗಡಿಸಲಾಗಿದೆ.
ರಾಜಕೀಯ ಕಾರಣಗಳು
• ಬ್ರಿಟಿಷರು ಸಹಾಯಕ ಸೈನ್ಯ ಪದ್ದತಿ ಹಾಗೂ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಅನುಸರಿಸಿದ್ದರಿಂದ ಭಾರತೀಯ ಸಂಸ್ಥಾನಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯಿತು. ಸಹಜವಾಗಿ ಇದು ದೇಶಾದ್ಯಂತ ಆತಂಕದ ವಾತಾವರಣವನ್ನು ಸೃಷ್ಟಿಸಿತು. ಲಾರ್ಡ್ ಡಾಲ್ಹೌಸಿಯು ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯನ್ನು ಅನುಸರಿಸಿ ಭಾರತೀಯ ಪ್ರಮುಖ ಪ್ರದೇಶಗಳಾದ ಸತಾರ, ಉದಯಪುರ ಸಂಬಲ್ಪುರ. ಝಾನ್ಸಿ, ಜೈಪುರ ಹಾಗೂ ನಾಗ್ಲುರಗಳನ್ನು ವಶಪಡಿಸಿಕೊಂಡನು. ಅಷ್ಟೇಅಲ್ಲದೇ ದುರಾಡಳಿತದ ನೆಪ ಒಡ್ಡಿ ಔಧ್ ಪ್ರದೇಶವನ್ನು ವಶಪಡಿಸಿಕೊಂಡನು.
• ಲಾರ್ಡ್ ಡಾಲ್ ಹೌಸಿಯು ದುರಾಡಳಿತದ ನೆಪವೊಡ್ಡಿ ತಂಜಾವೂರು, ಕರ್ನಾಟಿಕ್ನ ನವಾಬ್ರ ರಾಜ ಪದವಿಗಳನ್ನು ರದ್ದು ಮಾಡಿದನು. ಪೇಶ್ವೆ 2ನೇ ಬಾಜೀರಾವ್ ದತ್ತು ಪುತ್ರನಾದ ನಾನಾಸಾಹೇಬನ ವರ್ಷಾಸನವನ್ನು ತಡೆಹಿಡಿದನು.
• ಈ ಹಿಂದೆ ಭಾರತವನ್ನು ಆಕ್ರಮಸಿದಂತಹ ಮೊಘಲ್ರು, ಟರ್ಕರು ಭಾರತದಲ್ಲಿ ನೆಲೆಸಿ, ಭಾರತೀಯರಾದರು. ಇಲ್ಲಿ ವಸೂಲಿ ಮಾಡಿದ ಕಂದಾಯವನ್ನು ಇಲ್ಲಿಯೇ ಉಪಯೋಗಿಸಿದರು. ಆದರೆ ಬ್ರಿಟಿಷರು ಮಾತ್ರ ದೂರದಿಂದಲೇ ಭಾರತವನ್ನು ಆಳ್ವಿಕೆ ಇಲ್ಲಿಯ ಸಂಪತ್ತನ್ನು ದೋಚುತ್ತಿದ್ದರು. ಎಂಬ ಭಾವನೆ ಭಾರತೀಯರಲ್ಲಿ ಮೂಡಿತು. ಇದು 1857 ರ ಘಟನೆಗೆ ಪ್ರೇರಕವಾಯಿತು.
• ಈಸ್ಟ್ ಇಂಡಿಯಾ ಕಂಪೆನಿಯು ದೇಶಿಯ ವ್ಯಾಪಾರದಲ್ಲಿ ಏಕಸ್ವಾಮ್ಯ ಸ್ಥಾಪಿಸಿ, ದೇಶೀಯ ವ್ಯಾಪಾರಿಗಳ ಹಕ್ಕು ಬಾಧ್ಯತೆಗಳನ್ನು ನಿರ್ಬಂಧಿಸಲಾಯಿತು. ಕ್ರಮೇಣ ಅವರ ಸ್ಥಾನದಲ್ಲಿ ಭಾರತೀಯ ವ್ಯಾಪಾರಿಗಳನ್ನು ಬ್ರಿಟಿಷ್ ಏಜೆಂಟರ್ ಸ್ಥಾನಕ್ಕೆ ಇಳಿಸಲಾಯಿತು.
• ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕಂದಾಯ ಪಾವತಿಯ ಅಸಮರ್ಥತೆ, ಹೆಚ್ಚಿನ ಕಂದಾಯ ವಸೂಲಿಗೆ ಒತ್ತಾಯ ಮುಂತಾದ ಅನೀತಿಯ ಮಾರ್ಗಗಳಿಂದ ಬ್ರಿಟಿಷರು ಜಮೀನುಗಳನ್ನು ನೇರವಾಗಿ ತಮ್ಮ ಅಧೀನಗೊಳಿಸಿ ಕೊಂಡರು.
• ಸಣ್ಣ ಹಾಗೂ ಗೃಹ ಕೈಗಾರಿಕೆಗಳಿಗೂ ಪ್ರೋತ್ಸಾಹಧಾಯಕವಾಗದ ಬ್ರಿಟಿಷರ ನೀತಿಗಳಿಂದ ನಷ್ಟ ಸಂಭವಿಸಿ ಇವರ ವಿರೋಧಿಗಳಾದರು. ಜನರ ಅಸಮಾಧಾನ ಹಾಗೂ ರಾಜಕೀಯ ಅಸಂತೃಪ್ತ ದಂಗೆಯ ರೂಪದಲ್ಲಿ ಹೊರಹೊಮ್ಮಿ 1857ರ ದಂಗೆಗೆ ಕಾರಣವಾಯಿತು.
ಆರ್ಥಿಕ ಕಾರಣಗಳು
• ಬ್ರಿಟಿಷರು ತಮ್ಮ ಹಿತದೃಷ್ಟಿಯಿಂದ ಭಾರತದಲ್ಲಿನ ಸಂಪತ್ತನ್ನು ದೋಚಿ ಜನತೆಯನ್ನು ಶೋಷಣೆಗೆ ಈಡುಮಾಡಿದುದು ಜನತೆಯ ಆರ್ಥಿಕ ಅತೃಪ್ತಿಗೆ ಪ್ರಮುಖ ಕಾರಣವಾಯಿತು. ಬ್ರಿಟಿಷರು ಭಾರತದಲ್ಲಿ ಸಾರ್ವಭೌಮ ಅಧಿಕಾರವನ್ನು ಹೊಂದಿದ್ದರು. ಅದು ಇಂಗ್ಲೇಡನ ಸಿಂಹಾಸನಕ್ಕೆ ಅಧೀನವಾಗಿತ್ತು. ಇಲ್ಲಿನ ಸಂಪತ್ತೆಲ್ಲ ಇಂಗ್ಲೆಂಡಗೆ ಹರಿದು ಹೋಗಲಾರಂಭಿಸಿತು.
• ಭಾರತೀಯ ಸಂಸ್ಥಾನಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ತನ್ನ ವಶಕ್ಕೆ ತೆಗೆದುಕೊಂಡಿರುವುದರಿಂದ ಭಾರತದಲ್ಲಿನ ಶ್ರೀಮಂತರೆಲ್ಲರೂ ತಮ್ಮ ಅಧಿಕಾರ ಹಾಗೂ ಸ್ಥಾನಗಳಿಂದ ವಂಚಿತರಾಗಬೇಕಾಯಿತು. ಸಿವಿಲ್ ಹಾಗೂ ಮಿಲಿಟರಿ ಕ್ಷೇತ್ರದಲ್ಲಿನ ಎಲ್ಲ ಪ್ರಮುಖ ಉನ್ನತ ಹುದ್ದೆಗಳು ಕೇವಲ ಇಂಗ್ಲೀಷರಿಗೆ ಮಾತ್ರ ಮೀಸಲಾಗಿದ್ದವು, ಭಾರತೀಯನು ಮಿಲಿಟರಿ ಸೇವೆಯಲ್ಲಿ ಕೇವಲ ಸುಬೇದಾರನ ಹುದ್ದೆಯನ್ನು ಗಳಿಸಬಹು ದಾಗಿತ್ತು. ಹೀಗೆ ಭಾರತೀಯರಿಗೆ ಕೆಳಸ್ಥರದ ಹುದ್ದೆಗಳು ಮಾತ್ರ ಸೀಮಿತವಾಗಿದ್ದವು. ಉನ್ನತ ಹುದ್ದೆಗಳನ್ನೆಲ್ಲ ಬ್ರಿಟಿಷರು ತಮ್ಮ ಹತ್ತಿರವೇ ಇಟ್ಟುಕೊಂಡಿದ್ದರು. ಇದರಿಂದಾಗಿ ಭಾರತೀಯರಲ್ಲಿ ತಮ್ಮನ್ನು ಬ್ರಿಟಿಷರು ಕಷ್ಟದ ಕೆಲಸ ಮಾಡುವ ಸ್ಥಿತಿಗೆ ತಲುಪಿಸಿದರೆಂಬ ಭಾವನೆ ಭಾರತೀಯ ಸೈನಿಕರಲ್ಲಿ ಮೂಡಿತು.
• ಕೈಗಾರಿಕಾ ಕ್ರಾಂತಿಯ ಫಲವಾಗಿ ಇಂಗ್ಲೆಂಡ್ ಜಗತ್ತಿನ ಪ್ರಮುಖ ಕಾರ್ಯಾಗಾರವಾಗಿ ಮಾರ್ಪಾಟುಗೊಂಡಿತು. ನಿರ್ಮಾಣದ ವಸ್ತುಗಳಿಗೆ ಮಾರುಕಟ್ಟೆಗಳು ಹಾಗೂ ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳು ಬ್ರಿಟಿಷರ್ ಪ್ರಮುಖ ಅವಶ್ಯಕತೆಗಳಾಗಿದ್ದುದರಿಂದ ಈ ಅವಶ್ಯಕತೆಗಳನ್ನು ಪೂರೈಸಲು ಭಾರತದಲ್ಲಿ ಬ್ರಿಟಿಷ್ ನೀತಿ ಅನುಸರಿಸಲಾಯಿತು. ಒಂದು ಕಾಲದಲ್ಲಿ ಅತಿ ಉನ್ನತ ಹಂತದಲ್ಲಿದ್ದ ಭಾರೆತೀಯ ಕೈಗಾರಿಕೆಗಳು ಬ್ರಿಟಿಷರ ಪೈಪೋಟಿ ಹಾಗೂ ಇಲ್ಲಿಯ ಕೈಗಾರಿಕೆಗಳ ಬಗ್ಗೆ ಅವರಲ್ಲಿದ್ದ ಅನಾಸಕ್ತಿಯಿಂದಾಗಿ ಭಾರತೀಯ ಕೈಗಾರಿಕೆ ನಾಶಗೊಂಡು ಆರ್ಥಿಕ ದು:ಸ್ಥಿತಿ ಉಂಟಾಯಿತು.
• ಭಾರತದಲ್ಲಿನ ಕೈಗಾರಿಕಾ ಅವನತಿಯು ಕೃಷಿಯ ಮೇಲಿನ ಅವಲಂಬನೆಯನ್ನು ಹೆಚ್ಚಿಸಿತು. ಭಾರತ ತದನಂತರ ಬಳಕೆ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಹಾಗೂ ಕಚ್ಚಾ ವಸ್ತುಗಳನ್ನು ರಪ್ತು ಮಾಡುವ ಪ್ರಮುಖ ದೇಶವಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಭಾರತಕ್ಕೆ ಸಾಕಷ್ಟು ಬ್ರಿಟಿಷ್ ಬಂಡವಾಳ ಹರಿದು ಬಂದಿತು ಹಾಗೂ ಅದು ತನ್ನೊಂದಿಗೆ ಬಡ್ತಿ ಮತ್ತು ಲಾಭಗಳನ್ನೆರಡೂ ತೆಗೆದುಕೊಂಡು ಹೋಗುವಂತಾಯಿತು.
ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳು
• ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಮುಖ ಕಾರಣಗಳಾಗಿದ್ದವು. ಬ್ರಿಟಿಷರು ಭಾರತೀಯ ಸಮಾಜದಲ್ಲಿ ಜಾರಿಗೆ ತಂದಿದ್ದ ವಿಧವಾ ವಿವಾಹ ಪ್ರೋತ್ಸಾಹ, ಬಾಲ್ಯ ವಿವಾಹ ನಿಷೇಧ ಹಾಗೂ ಸತಿ ಸಹಗಮನ ನಿಷೇಧ ಇವನ್ನು ಕಂಡ ಭಾರತೀಯರು ತಮ್ಮ ಧರ್ಮದ ವಿರುದ್ಧ ಆಂಗ್ಲರ ನೀತಿಯನ್ನು ಕಂಡು ಕೋಪಗೊಂಡರು.
• ಬ್ರಿಟಿಷರು ಭಾರತೀಯ ಧರ್ಮ ಹಾಗೂ ಸಂಪ್ರದಾಯಗಳನ್ನು ಮೌಢ್ಯವೆಂದು ತಿಳಿಸಿದರು. ಇಲ್ಲಿನ ವಿವಾಹ ಉತ್ತರಾಧಿಕಾರ ಹಾಗೂ ಇತರೆ ಧಾರ್ಮಿಕ ವಿಷಯಗಳಲ್ಲಿ ಪಾಶ್ಚಿಮಾತ್ಯ ಸಂಪ್ರದಾಯಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ಕ್ರೈಸ್ತ ಮತ ಪ್ರಚಾರಕರು ಹಿಂದೂ ದೇವ –ದೇವತೆಯರನ್ನು ಬಹಿರಂಗವಾಗಿ ಅಪಹಾಸ್ಯ ಮಾಡುತ್ತಿದ್ದು, ಅದಕ್ಕೆ ಸರ್ಕಾರಿ ಅಧಿಕಾರಿಗಳ ಬೆಂಬಲವಿತ್ತದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು
• ಬ್ರಿಟಿಷರು ಭಾರತದಲ್ಲಿ ಒದಗಿದ ಕ್ಷಾಮ ಹಾಗೂ ಬರಗಾಲಗಳ ಕಾಲದಲ್ಲಿ ಅನೇಕ ಬಡ ಜನತೆ ಆಹಾರದ ಕೊರತೆಯಿಂದ ನರಳುತ್ತಿದ್ದ ಸಂದರ್ಭವನ್ನು ಉಪಯೋಗಿಸಿಕೊಂಡು ಅವರನ್ನು ಕ್ರೈಸ್ತರನ್ನಾಗಿ ಮತಾಂತರ ಮಾಡಲಾಯಿತು.
ಸೈನಿಕ ಕಾರಣಗಳು
• ಬ್ರಿಟಿಷರು ತಮ್ಮ ಸೈನ್ಯದಲ್ಲಿ ನೇಮಿಸಿಕೊಂಡಿದ್ದ ಭಾರತೀಯ ಸೈನಿಕರಿಗೆ ತಾರತಮ್ಯದ ಮೇಲೆ ಸಂಬಳವನ್ನು ನೀಡುವುದರ ಜೊತೆಗೆ ಯಾವುದೇ ರೀತಿಯಾದಂತಹ ಬಡ್ತಿಯನ್ನು ನೀಡುತ್ತಿರಲಿಲ್ಲ. ಸೈನಿಕನಾದ ಭಾರತೀಯನು ಸೈನಿಕನಾಗಿಯೆ ನಿವೃತ್ತಿ ಹೊಂದಬೇಕಿತ್ತು.
• ಭಾರತೀಯ ಸಿಪಾಯಿ ಸುಬೇದಾರನಾಗಿ ಪಡೆಯುತ್ತಿದ್ದ ಹೆಚ್ಚಿನ ಸಂಬಳವು ಆಗತಾನೇ ಸೈನ್ಯಕ್ಕೆ ಸೇರಿದ ಬ್ರಿಟಿಷ್ ಸಿಪಾಯಿಗಿಂತ ಅತಿ ಕಡಿಮೆಯದಾಗಿತ್ತು. ಭಾರತೀಯ ಸಿಪಾಯಿಗಳ ಮೇಲೆ ಬ್ರಿಟಿಷ್ ಸರ್ಕಾರಕ್ಕೆ ನಂಬಿಕೆ ಇರಲಿಲ್ಲ. ಇದು ಭಾರತೀಯ ಸಿಪಾಯಿಗಳ ಸ್ವಗೌರವಕ್ಕೆ ಯಾವಾಗಲೂ ಧಕ್ಕೆ ಉಂಟಾಗುತ್ತಿದ್ದಿತು.
• ಭಾರತೀಯ ಸಿಪಾಯಿಗಳು ಹೊರ ಪ್ರಾಂತ್ಯಗಳಿಗೂ ಹೋಗಿ ಬ್ರಿಟಿಷರ ಪರ ಹೋರಾಡಬೇಕಾಗಿದ್ದಿತ್ತು. ಉದಾಹರಣೆಗೆ 1854ರ ಕ್ರಿಮಿಯಾ ಯುದ್ದದಲ್ಲಿ ರಷ್ಯಾದ ವಿರುದ್ದ ಹೋರಾಡುತ್ತಿದ್ದ ಇಂಗ್ಲೆಂಡ್ ಅಪಾಯದ ಸ್ಥಿತಿಯಲ್ಲಿದ್ದಾಗ ಭಾರತೀಯ ಸಿಪಾಯಿಗಳನ್ನು ಅಲ್ಲಿಗೆ ಕಳಿಸಲಾಯಿತು.
• ಬ್ರಿಟಿಷ್ ಅಧಿಕಾರಿಗಳ ವಿರುದ್ದ ಭಾರತೀಯ ಸಿಪಾಯಿಗಳ ದಂಗೆಗಳು ಆಗಾಗ್ಗೆ ನಡೆಯುತ್ತಿದ್ದವು. ತಮ್ಮ ಮೇಲಾಧಿಕಾರಿಗಳ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಸಿಪಾಯಿಗಳು ಸಮಯ ಕಾಯುತ್ತಿದ್ದರು. ಜೂನ್ 23, 1857ರಂದು ಒಂದೇ ಬಾರಿಗೆ ಭಾರತದಾದ್ಯಂತ ದಂಗೆ ಏಳುವುದು ಇವರ ಆಲೋಚನೆಯಾಗಿತ್ತು.