“ಮಹಿಳಾ ಸಬಲೀಕರಣ”
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ,ಹೆಣ್ಣಿಂದ ಜಗತ್ತಿನ ಅಸ್ತಿತ್ವ ಉಳಿಯಲು ಸಾಧ್ಯ . ಹೆಣ್ಣು - ತಾಯಿಯಾಗಿ, ಹೆಂಡತಿಯಾಗಿ,ಮಗಳಾಗಿ, ವಿವಿದ ರೀತಿಯಾಗಿ ಹೆಣ್ಣು ಪ್ರತಿಯೊಬ್ಬರ ಪಾಲಿನಲ್ಲಿ ಸಹಕಾರಿಣಿಯಾಗಿ ತನ್ನ ಜೀವವನ್ನು ಗಂಧ ತೇಯುವಂತೆ ಜೀವನವಿಡಿ ಇನ್ನೋಬ್ಬರ ಬದುಕಿಗೆ ಬೆಳಕಾಗುವ, ಮಹಾಮಹಿಳೆ ಮಹಾತಾಯಿಯಾದ ಹೆಣ್ಣು ಜಗತ್ತಿನ ಕಣ್ಣು ಎಂಬಂತೆ ಇರುವ ಮಹಿಳೆಯ ಸಂಪೂರ್ಣ ಸರ್ವತೋಮುಖ ಬದಲಾಗವುದರಿಂದ ಸಬಲೀಕರಣವಾದಿತು.
"ಪಕ್ಷಿಗೆ ಹೇಗೆ ಒಂದೇ ರೆಕ್ಕೆಯಿಂದ ಹಾರುವುದು ಅಸಾಧ್ಯವಾಗಿರುತ್ತದೋ ಹಾಗೆ ಮಹಿಳೆಯರ ಸ್ಥಿತಿಗತಿಗಳು ಉತ್ತಮ ಗೊಳ್ಳದ ಹೊರತು ಜಗತ್ತಿನ ಕಲ್ಯಾಣದ ಬಗ್ಗೆ ಚಿಂತಿಸುವುದು ಅಸಾಧ್ಯವಾಗಿರುತ್ತದೆ.
- ಸ್ವಾಮಿ ವಿವೇಕಾನಂದ
ಮಹಿಳೆಯರು ಇನ್ನು ಅಶಕ್ತರಿರುವುದರಿಂದಲೇ ಮಹಿಳಾ ಸಶಕ್ತಿಕರಣ ಎಂಬ ವಿಷಯವು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅವರು ಸಶಕ್ತರಾಗುವ ತನಕ ಮುಂದುವರೆಯುತ್ತಲೇ ಇರುತ್ತದೆ. ಮಹಿಳೆಯರನ್ನು ಇನ್ನೂ ಒಂದು ಭೋಗದ ವಸ್ತುವಾಗಿ ಉಪಯೋಗಿಸಿ ಎಸೆಯಲಾಗುತ್ತಿರುವದರಿಂದ ಸಮಾಜದ ಮುಖ್ಯ ವಾಹಿನಿಯಿಂದ ಅವಳನ್ನು ದೂರ ಇಟ್ಟು ಕಡೆಗಣಿಸಲಾಗುತ್ತಿರುವುದರಿಂದ ಪುರುಷ ಪ್ರಧಾನವಾದ ಈ ಸಮಾಜವು ಮಹಿಳೆಯರಿಗೆ ಯಾವಾಗಲೂ ಸ್ವಾತಂತ್ರ್ಯ ಸ್ವಯಂ ಆಡಳಿತವನ್ನು ನಿರಾಕರಿಸುತ್ತ ಬಂದಿದೆ. ಈ ಲಿಂಗ ತಾರತಮ್ಯವು ಮಾನವೀಯ ಮುಖವನ್ನು ವಿಕಾರಗೊಳಿಸಿದೆ. ಈ ತಾರತಮ್ಯವು ಹೆಣ್ಣು ಮಗುವಿನ ಜನನಕ್ಕೆ ಮುಂಚೆಯೇ ಪ್ರಾರಂಭವಾಗಿ ಅದು ಅವಳ ಹೆಣ್ಣುತನದ ಜೀವನದುದ್ದಕ್ಕೂ ಉಳಿದುಬಿಡುತ್ತದೆ.ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಹಿಳೆಯರಿಗೆ ಉನ್ನತ ಸ್ಥಾನ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಭಾರತದಲ್ಲಿ ಮಹಿಳೆಯರು ಒಟ್ಟು ಜನಸಂಖ್ಯೆಯ ಶೇ.50 ರಷ್ಟನ್ನು ಪ್ರತಿನಿಧಿಸುತ್ತಾರೆ. ಅನಾಧಿ ಕಾಲದಿಂದಲೂ ಭಾರತೀಯ ಮಹಿಳೆ ವೈಶೀಷ್ಟ್ಯ ಪೂರ್ಣವಾಗಿರುವಳೂ. ಸ್ನೇಹ,ಸಹನಶೀಲತೆ, ಮಮತೆ, ಮುಂತಾದ ಸದ್ಗುಣಗಳ ಖನಿಯಾಗಿರುವಳು ಮನೆಯ ಸರ್ವತೋಮುಖ ಏಳ್ಗೆಗಾಗಿ ಪರಿಶ್ರಮ ಪಡುತ್ತಾ ಆರ್ಥಿಕವಾಗಿ ಪುರುಷನ ಸಮಾನವಾಗಿ ದುಡಿಯುತ್ತಿದ್ದಾಳೆ. ಮಹಿಳೆಗೆ ಇಷ್ಟೇಲ್ಲಾ ಸ್ಥಾನಮಾನ ಅಧಿಕಾರಗಳನ್ನು ಕೊಟ್ಟಿದ್ದಾಗಿಯೂ ಭಾರತದಲ್ಲಿ ಮಹಿಳೆಯರನ್ನು ದ್ವಿತೀಯ ಹೆಜ್ಜೆಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಈ ರೀತಿ ಮಹಿಳೆಯರ ಮಹತ್ವವನ್ನು ಅರಿತೋ ಏನೋ ಪೂರ್ವಜರು ಮಾತ್ರ ಸ್ಥಾನಕ್ಕೆ ಅತ್ಯಂತ ಗೌರವವನ್ನು ಕೋರಿದ್ದಾರೆ.ನಮ್ಮ ರಾಷ್ಟ್ರೀಯತೆಯನ್ನು ಮಾತೆಗೆ ಹೋಲಿಸಿ ‘ಭಾರತ ಮಾತೇ’ ಎಂದು ಕರೆಯಲಾಗುತ್ತದೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದರಿಂದ ಭೂಮಿಯೇ ಜೀವನಾಧಾರಕ್ಕೆ ಪ್ರಮುಖ ಮೂಲವಾಗಿದೆ. ಇದನ್ನು ಕೂಡ ‘ಭೂತಾಯಿ’ ಎಂಬ ರೂಪದಲ್ಲಿ ಹೆಣ್ಣಿಗೆ ಹೋಲಿಸಲಾಗಿದೆ.
ಅಂತೆಯೇ ‘ಮಹಿಳೆಯಿಲ್ಲದ ಜೀವನವೂ ಅಪೂರ್ಣವಿದ್ದಾಗಲೂ ಕೂಡ ಮಹಿಳೆಯರನ್ನು ಜೀವನದ ಇನ್ನೋಂದು ಅರ್ಧ ಎಂದು ಯಾವಾಗಲೂ ಪರಿಗಣಿಸಿಲ್ಲಾ’ ಎಂದು ಶ್ರೀ ನಮೋನ್ ಡಿ. ಬಿವಿಯರ್ ಹೇಳುತ್ತಾರೆ. ಇತಿಹಾಸವನ್ನು ಅವಲೋಕಿಸಿದಾಗ ಮಹಿಳೆಯರ ಸಬಲೀಕರಣಕ್ಕೆ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅನೇಕ ಮಹನೀಯರ ಬಗ್ಗೆ ತಿಳಿದು ಬರುತ್ತದೆ, ಅವರಲ್ಲಿ ಪ್ರಮುಖರಾದವರೆಂದರೆ, ಬುದ್ಧ, ಆದಿಶಂಕರಾಚಾರ್ಯ, ಬಸವಣ್ಣ, ರಾಮೋಹನ್ ರಾಯ್,ಈಶ್ವರ್ ಚಂದ್ರ ವಿದ್ಯಾಸಾಗರ್, ಸ್ವಾಮಿ ವಿವೇಕಾನಂದ, ಮಹತ್ಮಾಗಾಂಧಿ, ನೆಹರು ಮುಂತಾದವರು ಇವರಲ್ಲದೆ ಬ್ರಟಿಷ್ ಸರ್ಕಾರವು ಕೂಡ ಮಹಿಳೆಯತ ಸಶಕ್ತೀಕರಣಕ್ಕೆ ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದಿತು ಆದರೆ ಮಹಿಳೆಯರನ್ನು ಸಬಲೀಕರಣಗೊಳಿಸಬೇಕೆಂದು ಇಚ್ಛೆ ಹೊಂದಿದ ಜನರಿಂದ ಮಾತ್ರ ಮಹಿಳೆಯರ ಸಶಕ್ತೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಸ್ವಂತ ತಾವೇ ಮುಂದೆ ಬಂದು ಯಾವುದೇ ಜಾತಿ, ಧರ್ಮ ಎಂದು ಭೇದ ಮಾಡದೇ ತಮ್ಮ ಸಶಕ್ತೀಕರಣದ ಕಡೆಗೆ ಒಗ್ಗಟಾಗಿ ಮುಂದೆ ಸಾಗಬೇಕು. ಸಾಮಾನ್ಯ ಮಹಿಳೆಯರು ಈಗಾಗಲೇ ಸಶಕ್ತೀಕರಣಗೊಂಡು ಮಹತ್ವದ ಸಾದನೇ ಮಾಡಿದ ಮಹಿಳೆಯರಿಂದ ಪ್ರಭಾವಿತರಾಗಿ ಅವರ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಬೇಕು. ಇಂತಹ ಪ್ರಭಾವಿ ದಿಟ್ಟ ಮಹಿಳೆಯರಲ್ಲಿ ಪ್ರಮುಖರಾದವರೆಂದರೆ ಭಾರತದ ಪ್ರಥಮ ಮಹಿಳಾ ಪ್ರಧಾನಿ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರಥಮ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್, ನೊಬೆಲ್ ಶಾಂತಿ ಪುರಸ್ಕಾರ ಪಡೆದ ಸಮಾಜ ಸೇವಕಿ ಮದರ್ ತೆರೇಸಾ,ಗಾನ ಕೋಗಿಲೆ ಸರೋಜಿನಿ ನಾಯ್ಡು, ಪ್ರಥಮ ಮಹಿಳಾ ಮುಖ್ಯಮಂತ್ರಿ ಸುಜೇತಾ ಕೃಪಲಾನಿ, ಪ್ರಥಮ ಮಹಿಳಾ ಐ.ಪಿ.ಎಸ್ ಅಧಿಕಾರಿ ಕಿರಣ್ಬೇಡಿ, ಗಗನ ಯಾತ್ರಿ ಕಲ್ಪನಾ ಚಾವ್ಲಾ, ಮೀನಾಕುಮಾರಿ, ಐಶ್ವರ್ಯ ರೈ, ಲತಾ ಮಂಗೇಷ್ಕರ್, ಸೋನಿಯಾ ಗಾಂಧಿ, ಸುಷ್ಮ ಸ್ವರಾಜ್, ಉಮಾಭಾರತಿ ಮುಂತಾದವರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಮಹಿಳೆ - ಅಂದು
ಪುರಾಣಗಳಲ್ಲಿ, ವೇದ, ಉಪನಿಷತ್ತುಗಳಲ್ಲಿ ಮಹಿಳೆಗೆ ‘ಮಾತಾ’ ಹಾಗು ‘ದೇವಿ’ ಎಂಬ ಉನ್ನತ ಪೀಠದಲ್ಲಿ ಕುಳ್ಳಿರಿಸಿ ಪುರುಷರಿಗೆ ಸರಿಸಮಾನವಾದ ಸ್ಥಾನವನ್ನು ಕೊಡಲಾಗಿತ್ತು, ಆದರೆ ನಿಜವಾಗಿಯೂ ಅವಳ ಪರಿಸ್ಥಿತಿಯು ತೃಪ್ತಿಕರವಾಗಿರಲಿಲ್ಲ. ಮನುಸ್ಕ್ರುತಿಯ ದೃಷ್ಟಿಯಲ್ಲಿ ಅವಳು ಅತ್ಯಂತ ಅಮೂಲ್ಯ ಹಾಗೂ ಗೌರವಾನ್ವಿತಳಾಗಿದ್ದಳು ಹಾಗೂ ಅವಳಿಗೆ ಮೊದಲು ತಂದೆ ರಕ್ಷಣೆ ಕೊಡಬೇಕಾಗಿತ್ತು ನಂತರ ಗಂಡ ಮತ್ತು ಕೊನೆಯದಾಗಿ ಅವಳ ಮಗ ಅವಳಿಗೆ ರಕ್ಷಣೆ ಕೊಡಬೇಕಾಗಿತ್ತು
ಮಹಿಳೆ – ಇಂದು
ಆದುನಿಕ ಯುಗದಲ್ಲಿ ಗಂಡಸು ಈ ಅಮೂಲ್ಯವಾದ ಜೀವಿಯನ್ನು ಅಮೂಲ್ಯವಾದ ಸರಕನ್ನಾಗಿ ಬದಲಿಸಿ ತನ್ನ ಸ್ವಾಧೀನಪಡಿಸಿಕೊಂಡು ತನಗೆ ಬೇಕಾದ ಹಾಗೆ ಉಪಯೋಗಿಸಿಕೊಂಡು ನಂತರ ಬಿಟ್ಟು ಬಿಟ್ಟ. ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಯಂದ ದೂರವಿಡಲಾಯಿತು. ಬಲಿಷ್ಠ ಕಾನೂನುಗಳಿದ್ದರೂ ಕೂಡ ಮಹಿಳೆಯರನ್ನು ಕ್ರೂರವಾಗಿ ಹಾಗೂ ಅನಾಗರಿಕವಾಗಿ ನಡೆಸಿಕೊಂಡು ಹಿಂಸಿಸಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ,ಬಾಲ ಕಾರ್ಮಿಕತೆ, ಬಾಲ್ಯ ವಿವಾಹ, ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಲಿಂಗ ಅಸಮಾನತೆ, ಪೀಡಿಸುವುದು,ಬಲತ್ಕಾರದ ವೇಶಾವಾಟಿಕೆ ಮುಂತಾದ ಕೂಪಗಳಲ್ಲಿ ಹಿಂಸಿಸಲಾಗುತ್ತಿದೆ. ಇಂದು ಒಬ್ಬ ಭಾರತೀಯ ವಿಧವೆಯ ಪರಿಸ್ಥಿತಿಯು ಬಹಳ ಶೋಚನೀಯವಾಗಿದೆ. ಅವಳು ತನ್ನ ಕುಟುಂಬ ವರ್ಗದವರಿಂದ ಸಮಾಜದಿಂದ ಕಡೆಗಣಿಸಲ್ಪಟ್ಟಿದ್ದಾಳೆ. ಅವಳ ಮೂಲಭೂತ ಅವಶ್ಯಕತೆಗಳನ್ನು ಜೀವನಾವಶ್ಯಕ ವಸ್ತುಗಳನ್ನು ಕಿತ್ತುಕೊಂಡು ಅವಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ. ಇದು ಪಶ್ಚಿಮ ಬಂಗಾಲ, ವಾರಾಣಾಸಿ, ಮಥುರಾ, ಎಲ್ಲಮ್ಮನ ಗುಡ್ಡ ಮುಂತಾದ ಸ್ಥಳಗಳಲ್ಲಿ ನಡೆಯುತ್ತಿದೆ, ಈ ರೀತಿ ಗುಲಾಮಳಾದ ಮಹಿಳೆ ಅವ್ಯವಸ್ಥಿತ ಜೀವನ ಸಾಗಿಸುತ್ತಿದ್ದಾಳೆ ಮತ್ತು ಅಸಹಾಯಕ ಬಲಿಪಶುವಾಗಿ ಭಯಾನಕ ಏಡ್ಸ್ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾಳೆ.
“ಇಂದಿನ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ”
ಮದುವೆಯು ಒಂದು ವ್ಯಾಪಾವಾಗಿ ಬಿಟ್ಟಿದೆ. ಇದು ವರನಿಗೆ ಲಾಭಕರವಾದರೆ ವದುವಿನ ಕಡೆಯವರಿಗೆ ಖರ್ಚಿನದ್ದಾಗಿರುತ್ತದೆ. ವಧುವು ಅಪಾರ ಪ್ರಮಾಣದ ವರದಕ್ಷಿಣೆ ಕೊಡಬೇಕಾತ್ತದೆ.ವರದಕ್ಷಿಣೆಯ ಹೆಸರಿನಲ್ಲಿ ಸಾವಿರಾರು ಹೆಣ್ಣು ಮಕ್ಕಳನ್ನು ಹಿಂಸಿಸಿ ಸಾಯಿಸಲಾಗುತ್ತಿದೆ. ರಾಷ್ಟ್ರೀಯ ಮಹಿಳಾ ಅಯೋಗ (NWC) & ಮಹಿಳಾ ಹಕ್ಕು ಆಯೋ (WRC) ದ ವರದಿಯ ಪ್ರಕಾರ ಮಹಿಳೆಯರ ವಿರುದ್ಧ ಅಪರಾಧಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ,ಅತ್ಯಾಚಾರ ಪ್ರಕರಣಗಳು ಮಹಿಳೆಯರ ವಿರುದ್ಧ ಹೆಚ್ಚುತ್ತಿವೆ, ಅಪ್ರಾಪ್ತ ಬಾಲಕಿಯರು ಇದಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಸು. 24,000 ಬಲತ್ಕಾರದ ಪ್ರಕರಣಗಳು 2015-16 ರಲ್ಲಿ ಮಾತ್ರವೇ ವರದಿಯಾಗಿವೆ. ಇನ್ನು ಕೇವಲ ಅಧಿಕಾರಿಕ ಅಂಕಿ-ಅಂಶಗಳು ಇನ್ನೂ ಅದೆಷ್ಟೊ ಪ್ರಕರಣಗಳು ಸಾಮಾಜಿಕ ಕಳಂಕದ ಹೆದರಿಕೆಯಿಂದ ವರದಿಯಾಗುವುದೇ ಇಲ್ಲ. ಇದಕ್ಕೆ ಬಲಿಯಾದ ಹೆಣ್ಣು ಮಕ್ಕಳು ಬಹಳ ವೇದನೆ ಅನುಭವಿಸುತ್ತಾರೆ. ಇವರು ಕಾನೂನಿನ ಅಮಾನವೀಯ & ಅಸಭ್ಯ ವಿಚಾರಣೆಗೆ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿಬಿಡುತ್ತದೆ. ಆರ್ಥಿಕವಾಗಿ ಹಾಗೂ ಭೌದ್ಧಿಕವಾಗಿ ಉನ್ನತ ಮಟ್ಟದಲ್ಲಿರುವ ಮಹಿಳೆಯರೂ ಕೂಡ ಅಸಹ್ಯ ವರ್ತನೆಗಳಿಂದ ಹಾಗೂ ಲೈಂಗಿಕ ಶೋಷಣೆಯಿಂದ ಸುರಕ್ಷಿತರಾಗಿಲ್ಲ, ಉದಾಹರಣೆಗೆ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿದ ಕೇರಳದ ಹಿರಿಯ ಮಹಿಳಾ ಐ.ಪಿ.ಎಸ್ ಅಧಿಕಾರಿಗೆ ಆದರೆ ಇನ್ನು ಉಳಿದ ಸಾಮಾನ್ಯ & ನಿರ್ಗತಿಕ ಮಹಿಳೆಯರ ಪರಿಸ್ಥಿತಿಯನ್ನು ನಾವು ಊಹಿಸಿಕೊಳ್ಳಬಹುದಾಗಿದೆ. ಭಾರತದ ರಾಜಧಾನಿ ದೆಹಲಿಯು ಬಲತ್ಕಾರದ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ.ಇಲ್ಲಿ ಪ್ರತಿ ತಿಂಗಳು ಸು-500 ರಿಂದ 600 ಬಲತ್ಕಾರದ ಪ್ರಕಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ದೆಹಲಿಯನ್ನು ಮಹಿಳೆಯರಿಗೆ ಅಸುರಕ್ಷಿತ ಸ್ಥಳವೆಂದು ಘೋಷಿಸಲಾಗಿದೆ. ಆದರೆ ಒಬ್ಬ ಭಾರತೀಯ ಮಹಿಳೆಗೆ ಯಾವುದೇ ಸ್ಥಳ ಮತ್ತು ವೇಳೆ ಸುರಕ್ಷಿತವಾಗಿರುವುದಿಲ್ಲ. ಸ್ವಿಜ್ಜರ್ ಲ್ಯಾಂಡ್ ರಾಯಭಾರ ಕಛೇರಿಯ ಮಹಿಳಾ ಉದ್ಯೋಗಿಯನ್ನು ನಮ್ಮ ರಾಷ್ಟ್ರಪತಿಯ ಅಂಗರಕ್ಷಕರೇ ಬಲತ್ಕಾರ ಮಾಡಿರುವುದು ಇದಕ್ಕೆ ಒಂದು ನಿದರ್ಶನವಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಜರ್ಮನಿಯ ಯುವತಿಯನ್ನು ಟ್ಯಾಕ್ಸಿ ಚಾಲಕರು ಅಪಹರಿಸಿ ಬಲತ್ಕಾರ ಮಾಡಿದರು. ಈ ಪ್ರಕರಣದಲ್ಲಿ ಟ್ಯಾಕ್ಸಿ ಚಾಲಕರಿಗೆ ತ್ವರಿತ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಕೂಡ ವಿಧಿಸಿದೆ. ಬಲತ್ಕಾರಕ್ಕೆ ಒಳಗಾದ ಮಹಿಳೆಯು ‘ಬಲತ್ಕಾರಕ್ಕೆ’ಒಳಗಾದವಳು ಎಂಬ ಹಣೆಪಟ್ಟಿ ಹಚ್ಚಿಕೊಂಡು ವಿವಿಧ ರೀತಿಯ ಮಾನಸಿಕ ಹಾಗು ದೈಹಿಕ ಯಾತನೆಗಳನ್ನು ಅನುಭವಿಸುತ್ತಾಳೆ. ಈ ಎಲ್ಲಾ ಶೋಷಣೆಗಳ ವಿರುದ್ಧ ಮಹಿಳೆ ಧ್ವನಿ ಎತ್ತಬೇಕು. ಪ್ರತಿಭಟನೆ ಮಾಡಿ ಹೋರಾಡಬೇಕು,ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕಾನೂನಿನ ಸಹಾಯ ಪಡೆಯಬೇಕು.
‘ಬಾಲ್ಯ ವಿವಾಹ ’
ಭಾರತೀಯ ಸಮಾಜದ ಮತ್ತೊಂದು ಅನಿಷ್ಟ ಪದ್ದತಿ ಎಂದರೆ ಬಾಲ್ಯ ವಿವಾಹ. ರಾಜಸ್ತಾನದ ಕೆಲವೊಂದು ಭಾಗಗಳಲ್ಲಿ ಹಿಂದೂಳಿದ ವರ್ಗಕ್ಕೆ ಸೇರಿದ ಜನರು ‘ಅಖತ್ತೀಜ’(Akhateej) ಎಂಬ ಉತ್ಸವದಲ್ಲಿ ಪಾಲ್ಗೊಂಡು ನೂರಾರು ಅಪ್ರಾಪ್ತ ಬಾಲಕ, ಬಾಲಕಿಯರ ಮದುವೆ ಮಾಡಿ ಬಾಲ್ಯ ವಿವಾಹ ತಡೆಗಟ್ಟುವ ಕಾಯ್ದೆಯನ್ನಿ ಸಂಪೂರ್ಣ ಉಲ್ಲಂಘನೆ ಮಾಡುತ್ತಾರೆ. ಹುಡುಗಿಯು ಶಾಲೆಗೆ ಹೋಗಿ ತನ್ನ ಪುಸ್ತಕ & ಗೆಳತಿಯರೊಂದಿಗೆ ಆಟವಾಡಿಕೊಂಡಿರುವ ಸಮಯದಲ್ಲಿ ಅವಳು ಮದುವೆಯಾಗುವಂತೆ ಒತ್ತಾಯಿಸಲ್ಪಡುತ್ತಾಳೆ. ಬಾಲಕಿಯು ತಾಯಿಯಾಗುವುದಕ್ಕೆ ಮಾನಸಿಕವಾಗಿ & ದೈಹಿಕವಾಗಿ ತಯಾರಾಗಿಲ್ಲದಿರುವಾಗ ತಾಯಿಯಾಗಬೇಕಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ತಾಯಿಯಾಗುವುದರಿಂದ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ವೇಳೆ ಆ ಬಾಲಕಿಯ ಸಾವು ಕೂಡ ಸಂಭವಿಸಬಹುದಾಗಿದೆ.ಇತ್ತೀಚೆಗೆ ಮಧ್ಯ ಪ್ರದೇಶದ ಒಂದು ಹಳ್ಳಿಯಲ್ಲಿ ಬಾಲ್ಯ ವಿವಾಹವನ್ನು ಪ್ರತಿಭಟಿಸಿದಕ್ಕಾಗಿ ಒಬ್ಬ ಮಹಿಳಾ ಸಾಮಾಜಿಕ ಕಾರ್ಯಕರ್ತೆಯ ಎರಡೂ ಕೈಗಳನ್ನು ಕತ್ತರೀಸಲಾಯಿತು.ಈ ವಿಷಯವು ರಾಷ್ಟ್ರಮಟ್ಟದಲ್ಲಿ ಚರ್ಛೆಯಲ್ಲಿತ್ತು.
‘ಶಿಶು ಹತ್ಯೆ’
ಹೆಣ್ಣು ಶಿಶುವಿನ ಜನನವನ್ನು ಒಂದು ರೀತಿಯಲ್ಲಿ ಅಸಹ್ಯ ಹಾಗೂ ಕೀಳೆಂದು ಪರಿಗಣಿಸಲಾಗುತ್ತಿದೆ. ನವಜಾತ ಹೆಣ್ಣು ಶಿಶುವಿನ ಅಳುವಿನ ಜೊತೆಗೆ ಇಡೀ ಕುಟುಂಬ ಅಳಲು ಪ್ರಾರಂಭಿಸುತ್ತದೆ. ಹೊಟ್ಟೆಯಲ್ಲಿರುವ ಮಗು ಹೆಣ್ಣೆಂದು ತಿಳಿದ ಕೂಡಲೇ ಅದು ಈ ಜಗತ್ತಿಗೆ ಬರುವ ಮೊದಲೇ ಆ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಲಾಗುತ್ತದೆ. ಜೀವ ಉಳಿಸುವಲ್ಲಿ ದೇವರ ನಂತರದ ಸ್ಥಾನ ಹೊಂದಿರುವ ವೈದ್ಯರುಗಳು ವಿಜ್ಞಾನ & ತಂತ್ರಜ್ಞಾನದ ದುರುಪಯೋಗ ಪಡೆದು ಹಣಕ್ಕಾಗಿ ಲಿಂಗ ಪತ್ತೆ ಹಚ್ಚಿ ಹೆಣ್ಣು ಶಿಶುಗಳ ಮರಣಕ್ಕೆ ಕಾರಣರಾಗುತ್ತಿದ್ದಾರೆ. ಭಾರತದಲ್ಲಿ ಪ್ರತಿ 1000 ಪುರುಷರಿಗೆ 940 ಮಹಿಳೆಯರಿದ್ದಾರೆ.( ಕರ್ನಾಟಕದಲ್ಲಿ ಪ್ರತಿ 1000 ಪುರುಷರಿಗೆ 973 ಮಹಿಳೆಯರಿದ್ದಾರೆ.) ಈ ರೀತಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಜನರು ಮಹಿಳೆಯರು ಹುಟ್ಟುವ ಹಕ್ಕನ್ನೆ (Right to be born ) ನಿರಾಕರಿಸಿದಂತಾಗುತ್ತದೆ. ಇದಕ್ಕೆ ಅವಳು ಮಾಡಿದ ಬಹುದೊಡ್ಡ ಅಪರಾಧ ಎಂದರೆ ಅವಳು ‘ಹುಡುಗಿ’ಆಗಿರುವುದು.ಗಂಡು ಮಗುವಿನ ಬಯಕೆಯ ಜನಸಂಖ್ಯೆಯ ಸಮತೋಲನ ಕಾಯ್ದುಕೊಳ್ಳಲು ತೊಡಕಾಗಿರುವುದು.
‘ವರದಕ್ಷಿಣೆ ಸಾವುಗಳು’
ವರದಕ್ಷಿಣೆ ಸಾವುಗಳು ಸಾಮಾನ್ಯವಾಗಿ ಬಿಟ್ಟಿವೆ. ಈ ವರದಕ್ಷಿಣೆ ಸಾವುಗಳು ಪ್ರತಿದಿನ ದಿನ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಶಿಕ್ಷಣವೇ ವರದಕ್ಷಿಣೆಯ ಆಚರಣೆಗೆ ಪ್ರೋತ್ಸಾಹ ಕೊಡುತ್ತಿದೆ. ಉನ್ನತ ಶಿಕ್ಷಣ ಪಡೆದ ವರನು ಬಹಳಷ್ಟು ವರದಕ್ಷಿಣೆಯ ಬೇಡಿಕೆಯನ್ನು ಮುಂದಿಡುತ್ತಾನೆ. ಹೆಚ್ಚು ಕಲಿತಷ್ಟು ಹೆಚ್ಚು ವರದಕ್ಷಿಣೆ ಎಂಬ ರೂಡಿ ಜಾರಿಗೆ ಬರುತ್ತಿದೆ. ವರದಕ್ಷಿಣೆಯನ್ನು ಹಣದ ರೂಪದಲ್ಲಿ ಕೊಡುವುದಲ್ಲದೆ ಕಾರು, ಬಂಗಾರ, ಮನೆ ಇತ್ಯಾದಿಗಳ ರೂಪದಲ್ಲಿ ಕೊಡಲಾಗುತ್ತಿದೆ. ಮಧ್ಯಮ ವರ್ಗದ ಕುಟುಂಬಳಗು ಈ ಪದ್ಧತಿಯಿಂದಾಗಿ ಬಹಳ ತೊಂದರೆ ಅನುಭವಿಸುತ್ತಿವೆ. ವರದಕ್ಷಿಣೆ ತರದ ಹೆಣ್ಣು ಮಕ್ಕಳನ್ನು ಗಂಡನ ಮನೆಯವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಾರೆ ಮತ್ತೇ ಕೆಲವೊಮ್ಮೆ ಈ ಲೋಕದಿಂದಲೇ ಇಲ್ಲವಾಗಿನೆ ಬಿಡುತ್ತಾರೆ.
ಹೆಣ್ಣು ಮಕ್ಕಳ ಅಶ್ಲೀಲತೆಯ ಪ್ರದರ್ಶನ & ಅನೈತಿಕವಾಗಿ ಮಾರಾಟ ಮಾಡುವುದರ ಮೂಲಕ ಹೆಣ್ಣು ಮಕ್ಕಳನ್ನು ವ್ಯಾಪಾರೀಕರಣಗೊಳಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ & ಗುಡ್ಡಗಾಡು ಜನಾಂಗದ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡಿ ವೇಶ್ಯಯರನ್ನಾಗಿ ಮಾಡಲಾಗುತ್ತಿದೆ.
“ರಾಜಕೀಯ ಶಕ್ತಿಗಾಗಿ ಮಹಿಳೆ ”
ಭಾರತವು 67ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವಂತಹ ಈ ಸಂದರ್ಭದಲ್ಲಿ ಮಹಿಳಾ ಸಶಕ್ತೀಕರಣ ಎಂಬ ವಿಷಯವು ಇನ್ನು ಅಸ್ತಿತ್ವದಲ್ಲಿರವುದು ನಾಚಿಕೆಗೇಡಿನ ಸಂಗತಿಯಾಗಿದೆ. ದೇಶವು 2020ರ ಹೊತ್ತಿಗೆ ಯೋಜಿತ ಅಭಿವೃದ್ಧಿ ಸಾಧಿಸಬೇಕಾದರೆ ಬಹಳಷ್ಟು ಸಾಧಿಸಬೇಕಾಗಿದೆ. ಇದರಲ್ಲಿ ಮಹಿಳಾ ಸಶಕ್ತೀಕರಣವು ಒಂದು. 1952ರಲ್ಲಿ ಸಂಸತ್ತಿನಲ್ಲಿ ಶೇ.4.4 ಇದ್ದ ಮಹಿಳಾ ಪ್ರತಿನಿಧಿತ್ವವು ಈಗಿನ ಶೇ.8.8 ರಷ್ಟು ತಲುಪಲು ಸು. 50 ವರ್ಷಗಳನ್ನು ಹಾಗು 13 ಲೋಕಸಭೆ ಚುನಾವಣೆಗಳನ್ನು ತೆಗೆದುಕೊಂಡಿತು. ಸಂಸತ್ತಿನ ಹೊರಗೆ & ಒಳಗೆ ಬಹಳಷ್ಟು ಚರ್ಚೆಯ ನಂತರ ಸಂಸತ್ತು 73ನೇ & 74ನೇ ಸಂವಿಧಾನ ತಿದ್ದುಪಡಿಗಳನ್ನು ಮಾಡಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ಒದಗಿಸಿತು. ಈಗ ಮಹಿಳೆಯರು ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ & ತಮ್ಮ ವಿಚಾರಗಳನ್ನು ಮಾಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇವರಿಗೆ ಪ್ರತಿಭೆ ಮೆರೆಯಲು ಅವಕಾಶಗಳು ಪ್ರಾಪ್ತವಾಗುತ್ತಿವೆ.ನಮ್ಮ ದೇಶದ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿರುವುದು. ಭಾರತದ ರಾಜಕೀಯದಲ್ಲಿ ಮಹಿಳೆಯರಿಗೆ ಆಶಾದಾಯಕ ಅವಕಾಶಗಳಿರುವುದನ್ನು ಕಾಣುತ್ತೇವೆ.
“ಇತರೆ ಕ್ಷೇತ್ರಗಳಲ್ಲಿ ಮಹಿಳೆಯ ಸಬಲೀಕರಣ”
ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ನೇಮಿತವಾಗಿತ್ತು.ಮಕ್ಕಳನ್ನು ಹೆರುವುದು ಅವುಗಳ ಲಾಲನೆ, ಪಾಲನೆ ಮಾಡುವುದು & ಕುಟುಂಬವನ್ನು ನೋಡಿಕೊಳ್ಳುವುದು ಮಾತ್ರ ಅವಳ ಕೆಲಸವಾಗಿತ್ತು, ಆದರೆ ಈಗ ಕಾಲ ಬದಲಾಗುತ್ತಿದೆ.ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ & ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಭಾರತೀಯ ಮಹಿಳೆಯು ಹೊಲದಲ್ಲಿ ಕೆಲಸ ಮಾಡುವುದರಿಂದ ಹಿಡಿದು ವಿಮಾನ ನಡೆಸುವ & ಮೌಂಟ್ ಎವರೆಸ್ಟ್ ಶಿಖರ ಹತ್ತುವ ಮಟ್ಟಕ್ಕೆ ಬೆಳೆದಿದ್ದಾಳೆ. ಈಗ ಮಹಿಳೆಯರು ಸಂಘಟಿತ, ಅಸಂಘಟಿತ, ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಪ್ರವೇಶಿಸಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಸರ್ಕಾರವು ಹಿಂದುಳಿದ ವರ್ಗದ ಮಹಿಳೆಯರಿಗಾಗಿಯೇ ವಿಶೇಷ ಸವಲತ್ತುಗಳನ್ನು & ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ.
“ಮಹಿಳಾ ಸಬಲೀಕರಣದಲ್ಲಿ ಸರ್ಕಾರದ ಪಾತ್ರ”
6ನೇ ಪಂಚವಾರ್ಷಿಕ ಯೋಜನೆಯವರೆಗೆ ಮಹಿಳೆಯರಿಗಾಗಿಯೇ ಯಾವುದೇ ಪ್ರತ್ಯೇಕ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡಿರಲಿಲ್ಲ. ಈ ಯೋಜನೆಯಲ್ಲಿ ಮಹಿಳೆಯರಿಗಾಗಿ ಕೆಲವೊಂದು ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಲಾಯಿತು. 1987ರಲ್ಲಿ ಮಹಿಳಾ ತರಬೇತಿ & ಉದ್ಯೋಗಕ್ಕೆ ನೆರವು ನೀಡುವ ಯೋಜನೆ (Step)ಯನ್ನು ಮಹಿಳೆಯರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಜಾರಿಗೆ ತರಲಾಯಿತು. 1982ರಲ್ಲಿ ಗ್ರಾಮೀಣ ಪ್ರದೇಶದ ಮಹಿಳೆ & ಮಕ್ಕಳ ಅಭಿವೃದ್ಧಿ ಯೋಜನೆಗೆ (DWCRA) ಗಳನ್ನು ಜಾರಿಗೆ ತರಲಾಯಿತು. 1988ರಲ್ಲಿ ರಾಷ್ಟ್ರೀಯ ಮಹಿಳಾ ಸಮೃದ್ಧಿ ಯೋಜನೆ. 1995ರಲ್ಲಿ ಇಂದಿರಾ ಮಹಿಳಾ ಯೋಜನೆಯನ್ನು & 2001ರಲ್ಲಿ ‘ಸ್ವಯಂಸಿದ್ದ’ ಯೋಜನೆಗಳನ್ನು ಜಾರಿಗೆ ತರಲಾಯಿತು. ಗ್ರಾಮೀಣ ಜನತೆಗೆ ಸ್ವ ಉದ್ಯೋಗ ಒದಗಿಸುವ ‘ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ಗಾರ್’ಯೋಜನೆಯಡಿಯಲ್ಲಿ ಶೇ.40 ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ. ಕರ್ನಾಟಕದಲ್ಲಿ ‘ಸ್ರ್ತೀ ಶಕ್ತಿ ಯೋಜನೆ & ಉದ್ಯೋಗದಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ & ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 1/3 ರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ. ಸರ್ಕಾರದ ಈ ಎಲ್ಲಾ ಕಾರ್ಯಕ್ರಮಗಳು ಆರ್ಥಿಕವಾಗಿ & ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ. 2001ನೇ ವರ್ಷವನ್ನು “ಮಹಿಳಾ ಸಶಕ್ತೀಕರಣ ವರ್ಷ” ಎಂದು ಘೋಷಿಸಲಾಗಿದೆ. ಮಹಿಳೆಯರ ಸಶಕ್ತೀಕರಣದಲ್ಲಿ ರಾಜಕೀಯ ಪಕ್ಷಗಳಿಗಿಂತ ಸ್ವಯಂ ಸೇವಾ ಸಂಸ್ಥೆಗಳೇ (N.G.O) ಬಹಳಷ್ಟು ಮಹತ್ವದ ಪಾತ್ರ ವಹಿಸಿದೆ.
“ಮಹಿಳಾ ಸಬಲೀಕರಣ ಮಾಡುವುದು ಹೇಗೆ”
ಮಹಿಳೆಯ ಸುರಕ್ಷತೆ & ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ , ಭೌದ್ದಿಕ, ಶೈಕ್ಷಣಿಕ, ಮಾನಸಿಕ ಹಾಗು ದೈಹಿಕವಾಗಿ ಸಶಕ್ತಗೊಳ್ಳುವ ಅಗತ್ಯ ಇದೆ. ಮಹಿಳೆಯರ ಸುರಕ್ಷತೆಗೋಸ್ಕರ ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಈ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿಲ್ಲ. ಕಾನೂನುಗಳನ್ನು ಯಾವುದೇ ಪಕ್ಷಪಾತವಿಲ್ಲದೇ ಸಮರ್ಪಕವಾಗಿ ಜಾರಿಗೆ ತರುವ ತನಕ ಮಹಿಳೆಯರ ವಿರುದ್ಧದ ಅಪರಾಧಗಳು ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಅಭಿವೃದ್ಧಿಯಲ್ಲಿ ರಾಜಕೀಯವನ್ನು ಮಾಡಬಾರದು. ಮಹಿಳೆಯರ ವಿರುದ್ಧದ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದೆ. ಎಷ್ಟೋ ಪ್ರಕರಣಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೈಬಿಡಲಾಗಿದೆ. ಅನೇಕ ಪ್ರಕರಣಗಳುದೀರ್ಘಕಾಲ ನಡೆಯುತ್ತಿವೆ. ನಮ್ಮ ಕಾನೂನುಗಳಲ್ಲಿಯ ಕೆಲವೊಂದು ಲೋಪಗಳಿಂದಾಗಿ ಆರೋಪಿಗಳು ಪಾರಾಗುತ್ತಿದ್ದಾರೆ. ಈ ಕಾನೂನುಗಳನ್ನು ಸರಿಪಡಿಸಬೇಕಾಗಿದೆ. ಮಧ್ಯಪೂರ್ವ ಹಾಗು ಅರಬ್ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಮಹಿಳೆಯರಿಗೆ ಹಿಂಸೆ ಕೊಡುವವರಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕು. ಅತ್ಯಾಚಾರಿಗಳಿಗೆ ಕೊಲೆಗಡುಕರಿಗೆ ಮರಣ ದಂಡನೆಯನ್ನು ವಿಧಿಸಬೇಕು. ಮಹಿಳೆಯರಿಗೆ ಶಿಕ್ಷಣ & ಆರೋಗ್ಯ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು ಹಾಗೂ ಪುರುಷರೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಸರ್ಕಾರವು ಮಹಿಳೆಯರಿಗೆ ಉಚಿತ ಪ್ರಾಥಮಿಕ ಕಂಪ್ಯೂಟರ್ ತರಬೇತಿಯನ್ನು ಕೊಡಬೇಕು. ಒಳ್ಳೆಯ ಶಿಕ್ಷಣ & ಉದ್ಯೋಗಾವಕಾಶಗಳು ಮಹಿಳೆಯರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ.ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಶಿಷ್ಯ ವೇತನ ಕೊಡಬೇಕು. ಮಹಿಳೆಯರು ತಮ್ಮ ಸಾಮಥ್ರ್ಯದಲ್ಲಿ ನಂಬಿಕೆಯನ್ನಿಟ್ಟು ತಮ್ಮ ಸ್ವಂತ ಗುರುತನ್ನು ಸ್ಥಾಪಿಸಿಕೊಳ್ಳಬೇಕು. ಪುರುಷ ಸಮಾಜವು ಮಹಿಳೆಯನ್ನು ಜೀವನದ ಅರ್ಧಂಗ ಎಂದು ಒಪ್ಪಿಕೊಳ್ಳಬೇಕು. ಮಹಿಳೆಯೀಲ್ಲದೆ ಪುರುಷನ ಜೀವನವು ಅಪೂರ್ಣ ಎಂಬ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು.
“ಉಪಸಂಹಾರ ”
ಪ್ರಾಚೀನ ಕಾಲದಿಂದಲೂ ಮಹಿಳೆಯರ ಸ್ಥಾನಮಾನ ಕುಂದುತ್ತಾ ಬಂದಿದೆ. ಹಲವಾರು ಯೋಜನೆಗಳನ್ನು ಹಾಕಿಕೊಂಡರೂ ಸಮಗ್ರವಾದ ಬದಲಾವಣೆಯಾಗಿಲ್ಲ. ಕೆಲವು ಸಾಮಾಜಿಕ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ.ಲಿಂಗ ಸಮಾನತೆಯ ಹೋರಾಟವನ್ನು ದುರುಷರ ವಿರುದ್ಧದ ಹೋರಾಟ ಎಂದು ಪರಿಗಣಿಸಬಾರದು. ಇದು ಮಹಿಳಾ ಶೋಷಣೆಯ ವಿರುದ್ಧದ ಹೋರಾಟ ಮಹಿಳಾ ಸಬಲೀಕರಣ ಕೇವಲ ಸರ್ಕಾರದ ಹೊಣೆಯಲ್ಲ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಹೊಣೆಯಾಗಿದೆ. ಜ.ನೆಹರು ಅವರು “ಜನರನ್ನು ಜಾಗುತಗೊಳಿಸ ಬೇಕಾದರೆ ಮೊದಲು ಮಹಿಳೆಯನ್ನು ಜಾಗುತಗೊಳಿಸಬೇಕು ಒಂದು ಸಲ ಮಹಿಳೆ ಪ್ರಗತಿ ಪಥದಲ್ಲಿ ಚಲಿಸಲು ಪ್ರಾರಂಭಿಸಿದರೆ ಇಡೀ ಕುಟುಂಬ ಹಳ್ಳಿ & ಸಂಪೂರ್ಣ ದೇಶದ ಪ್ರಗತಿಯಾಗುತ್ತದೆ” ಎಂದು ಹೇಳಿದ್ದಾರೆ. ಆದ್ದರಿಂದ ಮಹಿಳೆಯರ ಸಬಲೀಕರಣ ದೇಶದ ಪ್ರಗತಿಗೆ ಅತ್ಯವಶ್ಯವಾಗಿದೆ.
ಭಾಗ -2
ಮಹಿಳೆಯರ ಸ್ಥಾನಮಾನ, ಸಮಸ್ಯೆಗಳು ಹಾಗೂ ಕಾನೂನು
“ಜಗವೆಂಬ ಹಣತೆಯಲ್ಲಿ ಬದುಕೆಂಬ ಎಣ್ಣೆ ಹಾಕಿ ಗಂಡೆಂಬ ಬತ್ತಿಯಲ್ಲಿ ಹೆಣ್ಣೆಂಬ ಜ್ಯೋತಿ ಹಚ್ಚಿದರೆ ಜಗವೆಲ್ಲಾ ಬೆಳಗುವುದಿಲ್ಲವೇ?”
“ಭಾರತದ ಚರಿತ್ರೆಯನ್ನು ತೆಗೆದು ನೋಡಿದಾಗ ಗಂಡನಿಗಾಗಿ ಪ್ರಾಣತೆತ್ತ ಲಕ್ಷ ಲಕ್ಷ ಹೆಂಗಸರು ಸಿಗುತ್ತಾರೆ.ಗಂಡನಿಗಾಗಿ ಉರಿಯುವ ಚಿತೆಗೆ ಪ್ರಾಣ ಸಮರ್ಪಣೆ ಮಾಡಿದ ಅಸಂಖ್ಯಾತ ಹೆಂಗಸರಿಗೆ ಬದುಕು, ಬವಣೆ, ಕಲ್ಲಿಗಿಂತ ಕಠೋರವಾದ ಕಲ್ಲಿನಂತಹ ಹೃದಯವನ್ನೆ ಹಿಂಡಿ ಹಿಪ್ಪಳ ಮಾಡುತ್ತದೆ. ಗಂಡನಿಗಾಗಿ ತಾನು ನಂಬಿದ ಪ್ರೀತಿಗಾಗಿ ತನ್ನನ್ನೇ ಉರಿಯುವ ಚಿತೆಗೆ ಅರ್ಪಿಸಿಕೊಳ್ಳಲು ಅದೇಂಥ ಮಾನಸಿಕ ಶಕ್ತಿ, ಪರಮ ಧೈರ್ಯ ಬೇಕು?
ಆದರೆ ಹೆಂಡತಿಗಾಗಿ, ಆಕೆಯ ಪ್ರೀತಿಗಾಗಿ ಬೆಂಕಿಗೆ ಹಾರಿದ ಒಬ್ಬ ಗಂಡಸು ಇದ್ದಾನಾ? ಇದರಿಂದಲೇ ತಿಳಿಯುತ್ತದೆ. “ಪ್ರೀತಿಗಾಗಿ ಮಿಗಿಲಾದ ಶಕ್ತಿ, ಮಮತೆಯನ್ನು ಮೀರಿಸುವ ತಾಕತ್ತು ಹೆಣ್ಣಿಗಲ್ಲದೆ ಮತ್ತಾರಿಗಿದೆ?
ಪ್ರೀತಿ, ನಂಬಿಕೆ, ಸಹನೆ, ಪ್ರಾಮಾಣಿಕತೆ, ಸಹೃದಯತೆ, ದಯಾಮಮತೆ ಇವು ಹೆಣ್ಣಿನ ಅಸಲಿ ತಾಕತ್ತು. “ತಾಕತ್ತು” ಎಂದರೆ ತೋಳ್ಬಲವಲ್ಲ, ಅವು ಹೆಣ್ಣಿನ ಗುಣ ವೈಶಿಷ್ಟ್ಯಗಳು.
ಈ ರೀತಿಯ “ಮಾತೃ”, “ದೈವ” ಸ್ವರೂಪದ ಹೆಣ್ಣಿನ ಸ್ಥಾನಮಾನವನ್ನು ಇತಿಹಾಸ ಪೂರ್ವದಿಂದ ಇಲ್ಲಿಯವರೆಗೂ ನಾವು ವಿಶ್ಲೇಷಿಸಲು ಹೋರಟಾಗ,
“ಮಹಾಕಾವ್ಯ – ವೇದಗಳ ಕಾಲ” ದಲ್ಲಿ ಮಹಿಳೆಯರ ಸ್ಥಾನಮಾನವು, ವಿಶ್ವಾವರ, ಲೋಪಮುದ್ರಾ, ಅಪಾಲ, ಗಾರ್ಗಿ, ಮೈತ್ರೆಯ ಮುಂತಾದವರ ಸಾಧನೆಯಿಂದ ಪುರುಷ ಸರಿಸಮಾನವಾದ ಸ್ಥಾನದಲ್ಲಿದ್ದುದ್ದನ್ನು ಕಾಣುತ್ತೇವೆ. ಆರ್ಥಿಕವಾಗಿ ಶ್ರೀ ಮಂತರಾಗಿರುವ ಕುಟುಂಬದ ಹೆಣ್ಣು ಮಕ್ಕಳು ಒಳ್ಳೆಯ ಶಿಕ್ಷಣವನ್ನು ಪಡೆಯುತ್ತಿದ್ದರು ಎಂಬುದನ್ನು “ಪೋಪ್”ರಿಂದ ರಚಿತವಾದ “ಋಗ್ವೆದ” “ಕೌಸಲೈ” ಸ್ವಸ್ತಿಯುಗವನ್ನು ನಡೆಸಿದ್ದನ್ನು ರಾಮಾಯಣ ಹೇಳುತ್ತದೆ.
ನಂತರ ಮಧ್ಯಕಾಲೀನ ಯುಗದಲ್ಲಿನ ಮುಸ್ಲೀಂ ದಾಳಿಕೋರರ ಆಳ್ವಿಕೆಯಿಂದಾಗ ಸ್ತ್ರೀಯರ ಗತಿ ಅಧೋ ಪತನಕ್ಕೆ ಇಳಿಯಿತು. ಈ ಕಾಲದಲ್ಲಿಯೇ “ಪರದಾ ಪದ್ಧತಿ ” “ಬಾಲ್ಯ ವಿವಾಹ ಪದ್ಧತಿ” ಗಳೆಂಬ ದುಷ್ಟ ಆಚರಣೆಗಳು ಜಾರಿ ಬಂದವು, ಆದರೆ
ಕ್ರಿ.ಶ.12 ನೇ ಶತಮಾನದಲ್ಲಿ ಮಹಿಳೆಯರ ಶೋಷಣೆ ವಿರುದ್ಧ ನಡೆಸಿದ್ದ ವೀರ ಮಹಿಳೆ “ಅಕ್ಕಮಹಾದೇವಿ”ಸ್ವಾತಂತ್ರ್ಯಕ್ಕಾಗಿ ಹೋರಾಡಿದ “ಕಿತ್ತೂರು ರಾಣಿ ಚೆನ್ನಮ್ಮ” ಸಂಪ್ರದಾಯ ಬದ್ಧ ಮುಸ್ಲಿಂ ಕುಟುಂಬದಿಂದ ಪುಟಿದೆದ್ದು ಹೋರಾಟ ನಡೆಸಿದ “ರಜಿಯಾ ಸುಲ್ತಾನ”ದಿಂದ ಹಿಡಿದು ಆಧುನಿಕ ಯುಗದ “ಕ್ಯಾಬಿನೆಟ್ನಲ್ಲಿ ಒರ್ವನೇ ಪುರುಷ”ಎಂದೇ ಖ್ಯಾತ ಇಂದಿರಾಗಾಂಧಿ, “ನ್ಯಾನ್ಸಿ ಪೆಲೋನಿ” (ಅಮೇರಿಕಾ ದೇಶದ ಪ್ರಪ್ರಥಮ ಮಹಿಳಾ ಸ್ವೀಕರ್) ಯಾದಿಯಾಗಿ ಹಲವಾರು ಮಹಿಳೆಯರು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಾಧನೆಗಳನ್ನು ಮೆರೆದು ಆಶ್ಚರ್ಯ ಪಡುವಂತಹ ಚಿತ್ರಣವನ್ನು ಮೂಡಿಸಿದ್ದಾರೆ.
“ಅಡುಗೆ ಮನೆಯ ನಾಲ್ಕು ಗೋಡೆಗಳ ನಡುವಿನಿಂದ ಸ್ತ್ರೀ ಹೊರಬಂದು ಅನೇಕ ವರ್ಷಗಳಾಗಿವೆ”. 50 ವರ್ಷಗಳ ಹಿಂದೆ ಸ್ತ್ರೀಯನ್ನು ಕಲ್ಪಿಸಿಕೊಳ್ಳಲಾರದಂತಹ ಕ್ಷೇತ್ರಗಳಲ್ಲಿಯೂ ಅವಳಿಂದು ಪುರುಷರಿಗೆ ಸರಿ ಸಮಾನವಾಗಿ ನಿಲ್ಲಬಲ್ಲಳು ಎಂಬುದನ್ನು ಈ ಕೆಳಗಿನ ಕ್ಷೇತ್ರಗಳಲ್ಲಿ ಆಕೆ ಮಾಡಿದ ಸಾಧನೆಗಳು ಸಾಬೀತು ಪಡಿಸುತ್ತವೆ.
ರಾಜಕೀಯ ಕ್ಷೇತ್ರದಲ್ಲಿ...
“ತೊಟ್ಟಿಲು ತೂಗುವ ಕೈ, ಲೋಕದ ಸೂತ್ರವನ್ನು ಹಿಡಿಯಬಲ್ಲದು” ಎಂಬ ಮಾತನ್ನು ಸಾಬೀತು ಮಾಡಿದ ಪ್ರಪಂಚದ ಪ್ರಥಮ ಮಹಿಳಾ ಪ್ರಧಾನಿ ಶ್ರೀಮತಿ ಸಿರಿಮಾವೋ ಬಂಡಾರ ನಾಯಕಿ, ಶ್ರೀಮತಿ ಇಂದಿರಾ ಗಾಂಧಿ, ಸರೋಜಿನಿನಾಯ್ಡು, ಕಾಂಡೊಲಿಸಾರೈಸ್, ಬೇನಜೀರ ಭುಟ್ಟೋ, ಸೋನಿಯಾ ಗಾಂಧಿ, ಸುಷ್ಮ ಸ್ವರಾಜ್ ಇವರುಗಳು ರಾಜಕೀಯ ಕ್ಷೇತ್ರದ ಹೆಜ್ಜೆ ಗುರುತುಗಳು ಯಾರೂ ಸಹ ಅಳಿಸಿ ಹಾಕಲಾರದಂತವು.
ಉದ್ಯಮ ರಂಗದಲ್ಲಿ..
ಮನೆಯಲ್ಲಿ ತಂದೆ – ತಾಯಿಗಳಿಗೆ ಮಗಳಾಗಿ, ಗಂಡನಿಗೆ ಅರ್ಧಾಂಗಿಯಾಗಿ, ಮಕ್ಕಳಿಗೆ ತಾಯಿಯಾಗಿ ದುಡಿಂಯುವುದರ ಜೊತೆಗೆ ಹೊರ ಜಗತ್ತಿಗೂ ಉದ್ಯೋಗ ಅವಕಾಶ ಕಲ್ಪಿಸಿದ ಹಾಗೂ ವಿಶ್ವದ 50 ಪ್ರಭಾವಿ ಮಹಿಳಾ ಉದ್ಯಮಿಗಳ ಗುಂಪಿಗೆ ಸೇರಿದ “ಕಿರಣ ಮಜುಂದಾರ್ ಷಾ ” (ಬಯೋಕಾನ್ ಮುಖ್ಯಸ್ಥ), “ಚಂದಾ ಕೊಚ್ಚಾರ್” (ICICI, DY,MD), “ದಿಶಾಲಿ ನಯನಾ ಲಾಲ್ ಕಿದ್ದಾಯಿ” (HSBC DIRECTOR ) “ಸುಧಾಮೂರ್ತಿ” (Infosis ನ ಅಧಿಕಾರಿ), ಮುಂತಾದವರ ಸಾಧನೆ. “ಉದ್ಯೋಗಂ ಪುರುಷ ಲಕ್ಷಣಂ” ಹೋಗಿ “ಉದ್ಯೋಗಂ ಮನುಜ ಲಕ್ಷಣಂ”ಎನ್ನುವಂತೆ ಮಾಡಿದೆ.
ಆವಿಷ್ಕಾರ ಕ್ಷೇತ್ರ:
ಹೆಣ್ಣು ಕೇವಲ ಮಕ್ಕಳನ್ನು ಹೆರುವ ಯಂತ್ರವಲ್ಲ. ಹೊಸ ಜಗತ್ತಿನ ಆವಿಷ್ಕಾರವು ತನ್ನಿಂದ ಸಾದ್ಯ ಎಂಬುದನ್ನು ಸಾಬೀತು ಪಡಿಸಲು ಬಾನಂಗಳದ ಚಂದ್ರ, ನಕ್ಷತ್ರಗಳನ್ನು ಹಿಡಿಯಲೆತ್ನಿಸಿದ “ಕಲ್ಪನಾ ಚಾವ್ಲಾ”, “ಸುನೀತಾ ವಿಲಿಯಂ”ರ ಸಾಧನೆ, ವಾಯು ಪಡೆಯ ಅಧಿಕಾರ “ಅಮೃತ ಅರೋರಾ”, ಎವರಸ್ಟ್ ಏರಿದ “ಖಚೇಂದ್ರಿ ಪಾಲ್” ಮುಂತಾದವರ ಸಾಧನೆ, ನಿಜಕ್ಕೂ ಆಶ್ವರ್ಯಪಡುವಂತಹದ್ದು.
ಸಾಮಾಜಿಕ ವಲಯ..
ಹೆಣ್ಣು ಇಂದು ಕೇವಲ ಬಾವಿಯೊಳಗಿನ ಮಂಡೂಕದಂತಿರದೇ, ಸಮುದ್ರದಲ್ಲಿ ವಾಸಿಸುವ ತಿಮಿಂಗಲವಾಗಿದ್ದಾಳೆ. ಸಮಾಜದ ಆಗು-ಹೋಗುಗಳಲ್ಲಿ, ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾಳೆ, ಸಮಾಜದ ಏಳ್ಗೆ ಶಾಂತಿ, ಸಹನೆ, ತಾಳ್ಮೆಯಿಂದ ಮಾಡಲೆತ್ನಿಸಿ, ಅದರಲ್ಲಿ ಸಫಲಳೂ ಆಗಿದ್ದಾಳೆ ಎಂಬುದನ್ನು ಸಾಮಾಜಿಕ ಶಾಂತಿಗಾಗಿ ದುಡಿದ “ಮದರ್ ತೇರೆಸಾ” ದೀನದಲಿತರ ಏಳಿಗಾಗಿ ಹೋರಾಡಿದ “ರುತ್ ಮನೋರಮಾ”, ಪ್ರಪಂಚವೇ ಬೆಚ್ಚಿ ಬೀಳುತ್ತಿರುವ ಭಯಂಕರ ರೋಗವಾದ “ಏಡ್ಸ್ ” ವಿರುದ್ಧ ಹೋರಾಟ ನಡೆಸುತ್ತಿರುವ “ವೀಣಾಧರಿ”, ಪ್ರಥಮ ಪೋಲೋಸ್ ಅಧಿಕಾರಿಣಿಯಾಗಿ ತಿಹಾರ್ ಜೈಲಿನ ಖೈದಿಗಳ ಜೀವನ ಮಟ್ಟ ಸುಧಾರಿಲೆತ್ನಿಸಿದ “ಕಿರಣ್ ಬೇಡಿ” ಮುಂತಾದವರ ಸಾದನೆಗಳು “ಹೆಣ್ಣು ಕೇವಲ ಮನೆಯೊಳಗಿನ ಹೊರೆಯಲ್ಲ, ಜಗತ್ತನ್ನೆ ಬೆಳಗಬಲ್ಲ ಜ್ಯೋತಿ” ಎಂಬುದನ್ನು ಸಾಬೀತು ಮಾಡಿದೆ.
ಆರ್ಥಿಕ ವಲಯ..
ಆರ್ಥಿಕಾಭಿವೃದ್ಧಿಯ ದೃಷ್ಟಿಯಿಂದ ಸೇವಾ ಕ್ಷೇತ್ರ & ಉದ್ದಿಮೆಗಳಲ್ಲಿ ಗ್ರಾಮ & ನಗರಗಳೆರಡರಲ್ಲಿಯೂ ಉದ್ಯೋಗಿ ಮಹಿಳೆಯರ ಪ್ರಮಾಣ ಹೆಚ್ಚುತ್ತದೆ. ಪ್ರಚಾರ ಜಾಹೀರಾತು, ವಾಣಿಜ್ಯ ಮಳಿಗೆ, ಸಿನಿಮಾ ಇತ್ಯಾದಿಗಳಲ್ಲಿ ಮಹಿಳೆಯರ ಸಾಧನೆ ಅದ್ವೀತಿಯ ಗಾಲ ಕೋಗಿಲೆ “ಲತಾ ಮಂಗೇಶ್ಕರ್”, ಪ್ರಪಂಚದ 10 ಪ್ರಭಾವಿ ಮಹಿಳೆಯರಲ್ಲಿ,ಭಾರತದ ಮಾಜಿ ವಿಶ್ವ ಸುಂದರಿ ಹಾಲಿವುಡ್ - ಬಾಲಿವುಡ್ ಪ್ರಖ್ಯಾತ ಪಡೆದ “ಐಶ್ವರ್ಯರೈ”, 2006ನೇ ಸಾಲಿನ ಅಂತರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿ ಪಡೆದ (ಲಂಡನ್) “ಶಬಾನಾ ಅಜ್ಮಿ”,ಯವರ ಸಾಧನೆ ಅಮೋಘವಾದುದು.
ಗ್ರಾಮೀಣ ಮಟ್ಟದಲ್ಲಿಯೂ ಸಹ ಮಹಿಳೆಯು ಪರುಷರಿಗೆ ಸರಿ ಸಮಾನವಾದತಂಹ ಕೆಲಸ ಅಂದರೆ, “ಬೀಜ ಬಿತ್ತನೆಯಿಂದ ಭತ್ತವಾಗಿ, ಅಕ್ಕಿಯಾಗಿ, ಅನ್ನವಾಗಿ, ನಮ್ಮ ಹಸಿವನ್ನು ನೀಗಿಸುವವರೆಗೂ “ಹೆಣ್ಣು ಅಬಲೆಯಲ್ಲ”ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಮಹಿಳೆಯರ ಈ ಎಲ್ಲಾ ಸಾಧನೆಗಳು “ಹಿಮಾಲಯದೆತ್ತರಕ್ಕೆ” ಬೆಳೆದಿದ್ದರೂ, ಈ 21 ನೇ ಶತಮಾನದಲ್ಲಿಯೂ ಸ್ತ್ರೀಯರ ಮೇಲೆ ಹಿಂಸಾಚಾರ, ಶೋಷಣೆ, ದಬ್ಬಾಳಕೆ, ಕೊಲೆ, ಅತ್ಯಾಚಾರ, ತಾರತಮ್ಯವನ್ನು ನಾವು ಕಾಣುತ್ತಿದ್ದೇವೆಯೆಂದರೆ ಅದಕ್ಕಿಂತಲೂ ವಿಷಾದನೀಯ ಸಂಗತಿ ಮತ್ತೊಂದಿರಲಾರದು.
“ಹಿಂಸೆ” ಎಂದರೆ, ವ್ಯಕ್ತಿಯನ್ನು ಗಾಯಗೊಳಿಸುವ ಹಾಉ ಮಾಡುವ ಅಥವಾ ಅವನ ಮರ್ಯಾದೆಗೆ ಧಕ್ಕೆ ತರುವ ಯಾವುದೇ ಪ್ರಕಟಿತ ಹೆದರಿಕೆ ಅಥವಾ ಶಕ್ತಿಯ ಪ್ರಯೋಗವಾಗಿದೆ”.
“ಎಲ್ಲ ನಾರಿಯರು ಪೂಜಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ” ಎಂಬ ಮಾತು ಇಂದು ಸುಳ್ಳಾಗುತ್ತಿದೆ. ಅಂದರೆ ಭಾರತದಲ್ಲಿ ಪ್ರತಿ 47 ನಿಮಿಷಕ್ಕ ಒಂದು ವರದಕ್ಷಿಣೆ ಸಾವು, ಪ್ರತಿ ನಿಮಿಷಕ್ಕೆ ಒಂದು ಬಲಾತ್ಕಾರ,ಪ್ರತಿ 25 ನಿಮಿಷಕ್ಕೊಂದು ಸ್ತ್ರೀ ಬೇಡಗೆ ಪ್ರಕರಣಗಳು ದಾಖಲಾಗುತ್ತಿದೆ, ಆದರೆ ಇನ್ನೂ ದಾಖಲಾಗದೇ ಉಳಿಯುವ ಪ್ರಕರಣಗಳೇಷ್ಟು ಆಶ್ಚರ್ಯವಲ್ಲವೇ? ಆದರೂ ಸತ್ಯ.
ಈ ಹಿಂಸೆ, ಶೋಷಣೆಗೆ ಒಳಗಾಗುತ್ತಿರುವವರು ಅಸಹಾಯಕರು,ಆತ್ಮಸ್ತ್ಯ್ರ್ಯರ್ಯವಿಲ್ಲದಿರುವವರು, ರೋಗಗ್ರಸ್ಥ ಕುಟುಂಬದಲ್ಲಿ ವಾಸಿಸುವರು, ಅನಕ್ಷರಸ್ಥರು, ಮದ್ಯವೈಸನಿಗಳ ಪತ್ನಿಯರು, ಸರ್ಕಾರದ ಯೋಜನೆ – ಕಾನೂನುಗಳ ಬಗ್ಗೆ ಅರಿವಿಲ್ಲದವರು ಹಾಗೂ ಆರ್ಥಿಕ ಸಾಮಾಜಿಕವಾಗಿ ಹಿಂದುಳಿದವರು.
ಗಾಂಧೀಜಿಯವರು ಹೇಳಿರುವಂತೆ, “ನಡುರಾತ್ರಿಯಲ್ಲಿ ಹೆಣ್ಣು ಮಗಳೊಬ್ಬಳು ಸುರಕ್ಷಿತವಾಗಿ ರಸ್ತೆಯಲ್ಲಿ ನಡೆದಾಡುವಂತಿದ್ದರೆ, ಅದೇ ನಮಗೆ ದೊರೆತ ನಿಜವಾದ ಸ್ವಾತಂತ್ರ್ಯ”.
ಆದರೆ ನಮ್ಮ ಈ ಸಂಪ್ರದಾಯ ಬದ್ಧ ಸಮಾಜದಲ್ಲಿ ಹೆಣ್ಣಿನ ಪರಿಸ್ಥಿತಿ ಏನಾಗಿದೆ? ಏನಾಗುತ್ತಿದೆ? ಎಂಬುದನ್ನು ವಿಶ್ಲೇಷಿಸಲ್ಲೊರಟಾಗ,
ಹಿಂದೂ ಮಹಿಳೆಯರಿಗಿಂತಲೂ ಮುಸ್ಲಿಂ ಮಹಿಳೆಯರ ಸಮಸ್ಯೆ ಭಿನ್ನವಾಗಿದೆ. ಅಂದರೆ, ಮುಸ್ಲೀಂ ಪ್ರಧಾನ ದೇಶವಾದ ಕುವೈತ್ನಲ್ಲಿ ಸ್ತ್ರೀಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವಾಗಲಿ, ಅಧಿಕಾರವಾಗಲಿ ನಿಷೇಧ, ಆಕೆ ಕೇವಲ ಮಕ್ಕಳನ್ನು ಹೆರುವ ಯಂತ್ರ, ವಿಚ್ಛೇದನದ ಹಕ್ಕು ಕೇವಲ ಪುರುಷನಿಗಷ್ಟೇ, ಇಂದಿಗೂ “ಪರದಾ ಪದ್ಧತಿ”ಯು ಜಾರಿಯಲ್ಲಿದ್ದು, ಹೆಚ್ಚು ಹೆಚ್ಚು “ಬಾಲ್ಯ ವಿವಾಹ ” ದಂತಹ ಪದ್ಧತಿಗಳು ಇವರಲ್ಲಿಯೇ ಹೆಚ್ಚು.
ಹೆಣ್ಣನ್ನು ಬಾಲ್ಯದಲ್ಲಿ ತಂದೆಯು, ಯೌವನದಲ್ಲಿ ಪತಿಯು, ವೃದ್ದಾಪ್ಯದಲ್ಲಿ ಮಗನು ರಕ್ಷಿಸಬೇಕೆಂದು ಹೇಳಿದ ಮನುವಿನ ವಾಕ್ಯ ಪರಿಪಾಲಕರು, ಸಂಪ್ರದಾಯ ಬದ್ಧ ಹಿಂದೂಗಳು.
ಕುಟುಂಬದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಕೆಲಸಕ್ಕೆ ಹೊರಟ ಹೆಣ್ಣು ಇಂದು ತನ್ನ ಉದ್ಯೋಗ ಕ್ಷೇತ್ರದಲ್ಲಿ ಪುರುಷ ಪ್ರಧಾನ ವರ್ಗದಿಂದ ದೈಹಿಕ, ಮಾನಸಿಕ ಹಿಂಸೆಗೆ, ಲೈಂಗಿಕ ಕಿರುಕುಳ, ಹೆಚ್ಚು ದುಡಿಮೆ – ಕಡಿಮೆ ವೇತನ,ಅನಾರೋಗ್ಯ, ಸೇವಾ ಭದ್ರತೆ ಇಲ್ಲದಿರುವುದು, ಸಂಘಟನಾ ಸ್ವಾತಂತ್ರ್ಯದ ನಿರಾಕರಣೆ, ಕಾನೂನು ಬದ್ಧ ಸೌಕರ್ಯವಿಲ್ಲದಿರುವುದು ಹೀಗೆ ಹಲವಾರು ಶೋಷಣೆಗೆ ಸ್ತ್ರೀಯು ಒಳಗಾಗುತ್ತಿದ್ದಾಳೇ. ಅಂತರಾಷ್ಟ್ರೀಯ ವರದಿಯೊಂದರ ಪ್ರಕಾರ, ಜಗತ್ತಿನಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಮಂದಿ ಕೆಂಪು ದೀಪದ (ವೇಶ್ಯಾವಾಟಿಕೆ) ಕೆಳಗೆ ನರಳುತ್ತಿದ್ದಾರೆ.
ಮಹಾತ್ಮಾ ಗಾಂಧಿಯನ್ನು ಸಾಮಾಜಿಕವಾಗಿ ಹೆಚ್ಚು ನೋಯಿಸಿದ ಸಂಗತಿಯೆಂದರೆ, “ಮಹಿಳಾ ದೌರ್ಜನ್ಯ”ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ, ಕಾಲ್ ಸೆಂಟ್ರ್ ಯುವತಿ “ಪ್ರತಿಭಾ” ಕೊಲೆ ಪ್ರಕರಣದಿಂದ ರಾತ್ರಿ ಪಾಳೆಯಲ್ಲಿ ದುಡಿಯುವ ಹೆಣ್ಣು ಮಕ್ಕಳಿಗೆ “ಎಷ್ಟರ ಮಟ್ಟಿಗೆ ರಕ್ಷಣೆ ಇದೆ” ಎಂಬುದನ್ನು ಸಾಬೀತು ಪಡಿಸುತ್ತದೆ.
“ಹೆಣ್ಣಿಂದಲೇ ಇಹವು ಹೆಣ್ಣಿಂದಲೇ ಪರವು” ಎನ್ನುವ ನಮ್ಮ ಸಮಾಜ ಹೆಣ್ಣನ್ನು ಮೂಕ ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶೋಚನೀಯ. ಜಗತ್ತಿನಾದ್ಯಂತ ಮಹಿಳೆಯರು ತಮ್ಮ ಶೃಂಖಲೆಗಳನ್ನು ಕಿತ್ತೊಗೆದು ಬಂಧ ಮುಕ್ತರಾಗಬೇಕು, ಇದಕ್ಕೆ ವೈಜ್ಞಾನಿಕ ಮನೋಭಾವನೆಯುಳ್ಳ ಪುರುಷರು, ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಸರ್ಕಾರದ ಯೋಜನೆಗಳ ಅವಶ್ಯಕತೆ ಬಹಳಿಷ್ಟಿದೆ.
ಸ್ತ್ರೀಯರ ಸಾಧನೆಗಳ ಇತಿಹಾಸ ಪೂರ್ವದಿಂದ ಇಲ್ಲಿಯವರೆವಿಗೂ ನಡೆದು ಕೊಂಡು ಬಂದಿವೆ. ಹಾಗೆಯೇ ಹಿಂಸೆಗಳು ಸಹ ಅದರ ನೆರಳಿನಂತೆ ಹಿಂಸೆಯಿಂದಲೂ ನಡೆದುಕೊಂಡು ಬರುತ್ತವೆ. ಹಾಗೆಯೇ ಪರಿಹಾರಗಳು ಸಹ.
• ಸಾಮಾಜಿಕ ಪುನರುಜ್ಜೀವನದ ಪಿತಾಮಹಾರಾದಂತಹ “ರಾಜಾರಾಂ ಮೋಹನ್ ರಾಯ್”ರ ಅವಿರತ ಹೋರಾಟ, ಲಾರ್ಡ್ ವಿಲಿಯಂ ಬೆಂಟಿಕ್ರವರ ಬೆಂಬಲದಿಂದ 1829ರಲ್ಲಿಯೇ “ಸತಿ ಸಹಗಮನ ಪದ್ಧತಿ”ಯು ನಿರ್ಮೂಲನೆ ಮಾಡಲಾಗಿದೆ.
• 1945ರ ವಿಶ್ವ ಸಂಸ್ಥೆಯ “ಪಾರ್ಟರ್ ಕಾಯ್ದೆ”ಯು ಲಿಂಗ ತಾರತಮ್ಯಕ್ಕೆ ಯಾವುದೇ ಅವಕಾಶವಿಲ್ಲ ಎಂಬುದನ್ನು ಘೋಷಿಸಿದೆ” ಇದಕ್ಕಾಗಿಯೇ ನಾಲ್ಕು ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳು ನಡೆದವು.
• ಭಾರತವದ ಸಂವಿಧಾನವು ಮಹಿಳೆಯರಿಗಾಗಿ ಸಮಾನ ಹಕ್ಕುಗಳನ್ನು (14ನೇ ಕಾಯ್ದೆ), ಸ್ತ್ರೀಯರ ಏಳಿಗೆಗೆ ಹಲವಾರು ರೀತಿಯ ಕಾಯ್ದೆಗಳನ್ನು (Article, 23,39,42,51 A) ರೂಪಿಸಿಕೊಂಡಿದೆ. 1955 ರ ಹಿಂದೂ ವಿವಾಹ ಕಾಯ್ದೆ, 1956ರ ಕನ್ಯೆಯರ & ಮಹಿಳೆಯರ ಅನೈತಿಕ ವ್ಯಾಪಾರ ನಿರ್ಬಂಧ ಕಾಯ್ದೆ.
1961ರ ವರದಕ್ಷಿಣೆ ನಿಷೇಧ ಕಾಯ್ದೆ, 1976 - ಬಾಲ್ಯ ವಿವಾಹ ನಿಷೇದ ಕಾಯ್ದೆ 1976 - ಭ್ರೂಣ ಲಿಂಗ ಪತ್ತೆ ನಿಷೇದ ಕಾಯ್ದೆ ಹೀಗೆ ಹಲವಾರು ಶಾಸನಗಳನ್ನು ಜಾರಿ ತರುವ ಮೂಲಕ, ಹಾಗೂ ಸರ್ಕಾರದ ಕೆಲವೊಂದು ಯೋಜನೆಗಳ ಮೂಲಕ ಅಂದರೆ,
• ಗರ್ಭಿಣಿ ಮಹಿಳೆಯರ ಉಚಿತ ತಪಾಸಣೆ & ಔಷಧಿಗಾಗಿ “ವಂದೇ ಮಾತರಂ” ಯೋಜನೆ.
• 1992ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ
• 1992ರಲ್ಲಿ ಸಂವಿಧಾನ 72 & 73ನೇ, ಅನುಸೂಚಿಗೆ ತಿದ್ದುಪಡಿ ತಂದು ಆ ಮೂಲಕ ಗ್ರಾಮೀಣ ಸ್ಥಳೀಯ ಸರ್ಕಾರಗಳು 33% ಮೀಸಲಾತಿಯನ್ನು ನೀಡಲಾಗಿದೆ.
• ಗ್ರಾಮೀಣ ಮಟ್ಟದಲ್ಲಿ “ಸ್ತ್ರೀ ಶಕ್ತಿ ” ಸಂಘಟನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದಾರಿ ಮಾಡಿಕೊಡಲಾಗಿದೆ.
• ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣು ಮಕ್ಕಳಿಗೆ “ಭಾಗ್ಯಲಕ್ಷ್ಮಿ ಯೋಜನೆ” ಏಪ್ರಿಲ್ 2006ರಿಂದ ಜಾರಿಗೆ ತರಲಾಗಿದೆ.
• 2005 ರಿಂದ “ಜನನಿ ಸುರಕ್ಷಾ ಯೋಜನೆ”
• ವಿವಿಧ ಬ್ಯಾಂಕ್ಗಳ (ಬರೋಡಾ ಬ್ಯಾಂಕ್. ಎಸ್.ಬಿ.ಐ., ಕೆನರಾ ಬ್ಯಾಂಕ್ ಇತ್ಯಾದಿ) ಮೂಲಕ ಮಹಿಳೆಯ ಆರ್ಥಿಕ ಬೆಳವಣಿಗೆಗೆ ಹಲವಾರು ರೀತಿಯ ಸಾಲಯೋಜನೆಯನ್ನು ಜಾರಿತರಲಾಗಿದೆ.
ಮಹಿಳೆಯರ ಮೇಲಿನ ದಬ್ಬಾಳಿಕೆ, ಹಿಂಸೆ, ಕಡಿಮೆಯಾಗಬೇಕೆಂದರೆ ಆಕೆಯ ಮೇಲೆ ದಬ್ಬಾಳಿಕೆ ಮಾಡಿಕ ಜನ ಸಮೂಹ ಅಥವಾ ವ್ಯಕ್ತಿಗೆ ಕಾನೂನಿನ ಮೂಲಕ ಕ್ರೂರವಾದ ಶಿಕ್ಷೆಗೆ ಒಳ ಪಡಿಸಿದರೆ ಮಾತ್ರ ಆಕೆಯ ಮೇಲಿನ ಹಿಂಸೆ ಕಡಿಮೆಯಾಗುವುದು.
ಈ ನಿಟ್ಟಿನಲ್ಲಿ ಭಾರತದಲ್ಲಿ ಇತ್ತಿಚೆಗೆ ಬಂದಂತಹ ಒಂದು ಕಾನೂನು “ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ 2005” ಸ್ತ್ರೀಯರ ಪಾಲಿಗೆ ವರವೇ ಆಗಿದೆ. ಈ ಕಾಯ್ದೆ ಅನ್ವಯ “ಹೆಂಡತಿ ಅಥವಾ ಸಂಗಾತಿಯನ್ನು ಹಿಂಸಿಸುವ ಗಂಡನಿಗೆ 1 ವರ್ಷ ಸರವಾಸ ಹಾಗೂ 20 ಸಾವಿರ ದಂಡ”.
ಇಷ್ಟೆಲ್ಲಾ ಯೋಜನೆಗಳನ್ನು ನಮ್ಮ ಘನ ಸರ್ಕಾರಗಳು ರೂಪಿಸಿ ತಂದರೂ ಸಹ, ಸ್ತ್ರೀಯರ ಸಬಲೀಕರಣಕ್ಕಾಗಿ,ಇನ್ನೂ ಹೆಚ್ಚು ಹೆಚ್ಚು ಶ್ರಮಿಸಬೇಕು ಅಂದರೆ,
• ನೆನೆಗುದಿಗೆ ಬಿದ್ದಿರುವ ಮಹಿಳಾ 33% ಮೀಸಲಾತಿ ಮಸೂದೆ ತನ್ನ ಅಸ್ತಿತ್ವ ಪಡೆಯುವಂತೆ ಆಗಬೇಕು.
• ವಿಕೃತ ಕಾಮಿ “ಉಮೇಶ್ ರಡ್ಡಿ”ಗೆ ನ್ಯಾಯಾಲಯ ನೀಡಿದ ‘ಮರುದಂಡನೆ’ ತೀರ್ಪು ಶ್ಲಾಘನೀಯವಾಗಿದ್ದು, ಇತರೆ ಅತ್ಯಾಚಾರಿ, ಕೊಲೆಗಡುಕರಿಗೆ ಇದು ಮಾದರಿಯಾಗಿದೆ ಆದರೂ ಸ್ತ್ರೀ ವಿರದ್ಧ ದಾಖಲಾಗುವ ಹಿಂಸಾಚಾರ ಪ್ರಕರಣದ ಕೇಸು ನ್ಯಾಯಾಲಯಗಳಲ್ಲಿ ಬಹು ಬೇಗನೆ ಪರಿಹಾರ ಕಾಣಬೇಕು.
• ಸ್ತ್ರೀಯರ ಸಬಲೀಕರಣಕ್ಕಾಗಿಯೇ ರೂಪುಗೊಂಡ ಯೋಜನೆಗಳನ್ನು ಸರಿಯಾದ ಕ್ರಮದಲ್ಲಿ ಶೀಘ್ರದಲ್ಲಿ ಜಾರಿ ತರಬೇಕು.
• ರಾತ್ರಿ ಪಾಳೆಯಲ್ಲಿ ದುಡಿಯುವ ಸ್ತ್ರೀಯರಿಗೆ ಹೆಚ್ಚಿನ ರಕ್ಷಣೆಯನ್ನು ಶಾಲಾ, ಕಾಲೇಜು, ಕಛೇರಿಗಳಲ್ಲಿ ಮುಕ್ತವಾಗಿ ವ್ಯವಹರಿಸಲು “ಮುಕ್ತ ಸ್ವತ್ವ” ವಾತಾವರಣವನ್ನು ಕಲ್ಪಿಸಬೇಕು.
ಸ್ತ್ರೀಯನ್ನು “ಮನುಕುಲೋದ್ಧಾರಕಳು” ಎಂದ ಗಾಂಧೀಜಿ ಪುರುಷ ಪ್ರಧಾನ ಸಮಾಜದಿಂದ ಮಹಿಳೆಯರನ್ನು ಮುಕ್ತಗೊಳಿಸಲು “ಮಹಿಳಾ ವಿಮೋಚನಾ ಹೋರಾಟ”ಕ್ಕೆ ಶಕ್ತಿ ತುಂಬಿದರು. ಅವರು ಸ್ತ್ರೀಯನ್ನು “ಮಾನವ ಜನಾಂಗದ ಮೊದಲ ಗುರು” ಎಂದು ಕರೆದರು. ಆದರೂ ನಮ್ಮ ದೇಶದಲ್ಲಿ ಮಹಿಳಾ ದೌರ್ಜನ್ಯ ನಡೆಯುತ್ತಲೇ ಇದೆ.
ಮಹಿಳೆಯರನ್ನು ಗೌರವಿಸದ & ಅವರಿಗೆ ಅರ್ಹವಾದ ಅಂತಸ್ತು ಹಾಗು ಅವಕಾಶಗಳನ್ನು ಕಲ್ಪಿಸಿಕೊಡದಿರುವ ಸಮಾಜವು ಮುಂದೆ ಬರುವುದು ಸಾಧ್ಯವಿಲ್ಲ” ಎಂದು ಸ್ವಾಮಿ ವಿವೇಕಾನಂದರು ಖಚಿತವಾಗಿ ತಿಳಿಸಿದ್ದಾರೆ.
ಕೊನೆಯದಾಗಿ ಈ ಪುರುಷ ಪ್ರಧಾನ ಸಮಾಜಕ್ಕೆ ನಾನು ಕೇಳುವ ಪ್ರಶ್ನೆ ಎಂದರೆ, “ಹೆಣ್ಣಿನ ಗರ್ಭದಿಂದಲೇ ಜನಿಸುವ ನೀವು ಹೆಣ್ಣನ್ನೆ ಕೀಳಾಗಿ ಕಾಣುವುದು ನೈತಿಕವೇ?”
“ನಿಮ್ಮ ಸಂಗಾತಿಯಾಗಿ, ಸಹಧರ್ಮಿಣಿಯಾಗಿ ನಿಮಗೆ ಆಸರೆ ನೀಡುವ ಹೆಣ್ಣನ್ನು ಸದಾ ಕಾಮಾಂಧತೆಗಳಿಂದಲೇ ನೋಡುತ್ತಾ ಅತ್ಯಾಚಾರ, ಬಲತ್ಕಾರಗಳಂತಹ ಅಮಾನವೀಯ ಕೃತ್ಯಗಳನ್ನು ಮಾಡುವುದು ಪುರುಪಾರ್ಥವೇ? ನಮ್ಮ ಪುರುಷ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕು. “ಗಾಂಧಿ, ಬುದ್ಧ” ರಿದ್ದಂತಹ ನಾಡು ನಮ್ಮದು. ಪ್ರತಿಯೊಬ್ಬರು ಗಾಂಧಿ, ಬುದ್ಧರಾಗುವುದು ಬೇಡ, ಆದರೆ ತಮ್ಮ ಬದುಕಿನ ಜೊತೆಗಾರ್ತಿಯೊಂದಿಗೆ ಮಾನವತೆಯಿಂದ, “ಮಾನವರು” ಎಂಬುದಾಗಿ ಬಾಳಿದರೇ ಸಾಕು. ಅದೇ ನೀವು ನಮಗೆ ನೀಡುವ ಅತ್ಯಮೂಲ್ಯವಾದಂತಹ “ಕೋಹಿನೂರ್ ವಜ್ರ”ವಿದ್ದಂತೆ.