ಗಾಂಧಿಯುಗ (1920-1947)

 

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರ ವಿರುದ್ಧ ಮಾಡಿದ ಚಳುವಳಿಯ ಸ್ಪೂರ್ತಿಯು ಮುಂದೆ ಭಾರತೀಯರನ್ನು ಬ್ರಿಟಿಷರಿಂದ ವಿಮೋಚನೆ ಮಾಡಲು ಸಹಕಾರಿಯಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1920ರಿಂದ 1947ರ ಕಾಲವನ್ನು ‘ಗಾಂಧಿಯುಗ’ ವೆಂದು ಕರೆಯಲಾಗಿದೆ. ಭಾರತವು ಸ್ವಾತಂತ್ರ್ಯ ಪಡೆಯುವವರೆಗೂ ನಡೆದ ಘಟನಾವಳಿಗಳಲ್ಲಿ ಗಾಂಧೀಜಿಯವರು ಮುಖ್ಯ ಭೂಮಿಕೆಯಲ್ಲಿದ್ದರು.

ಜಲಿಯನ್‍ವಾಲಾಬಾಗ್ ಹತ್ಯಾಕಾಂಡ


ರೌಲತ್ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ಚಳುವಳಿಯು ವ್ಯಾಪಕವಾಗಿ ಹರಡಿತು. ಅಲ್ಲಲ್ಲಿ ಇದು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸರ್ಕಾರವು ಅಮೃತಸರ ನಗರವನ್ನು ಜನರಲ್ ಡಯರ್ ಎಂಬ ಸೇನಾಧಿಕಾರಿಯ ಉಸ್ತುವಾರಿಗೆ ನೀಡಿತು. ಜನರಲ್ ಡಯರ್ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ನಗರವನ್ನು ಸೇನಾಳ್ವಿಕೆಗೆ ಒಳಪಡಿಸಿ ಸಭೆಗಳನ್ನು ನಿಷೇಧಿಸಿದನು. ಆದರೆ, ಜಲಿಯನ್ವಾಲಾಬಾಗ್ನಲ್ಲಿ ಸಭೆ ಸೇರಲು ಹೋರಾಟಗಾರರು ಮೊದಲೇ ನಿರ್ಧರಿಸಿದ್ದರು. ಅವರಿಗೆ ಈ ನಿಷೇಧದ ಬಗ್ಗೆ ಪೂರ್ಣ
ತಿಳುವಳಿಕೆ ಇರಲಿಲ್ಲ. ಸುಮಾರು 20 ಸಾವಿರ ಜನ ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಸೇರಿದ್ದರು. ಸುತ್ತಲೂ ಎತ್ತರವಾದ ಗೋಡೆಗಳಿಂದ, ಕಿರಿದಾದ ಪ್ರವೇಶದಿಂದ ಕೂಡಿದ ಜಲಿಯನ್ ವಾಲಾಬಾಗ್ನಲ್ಲಿ ಸಭೆಯು ಶಾಂತಿಯಿಂದ ನಡೆಯುತ್ತಿತ್ತು. ತನ್ನ ಸೈನ್ಯದೊಂದಿಗೆ ಬಂದ ಜನರಲ್ ಡಯರ್ನು ಯಾವ ಮುನ್ಸೂಚನೆಯನ್ನು ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ಸೇರಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆಗರೆದನು. ಈ ಹತ್ಯಾಕಾಂಡದಲ್ಲಿ 379 ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡರು. ಸಹಸ್ರಾರು ಜನರು ಗಾಯಗೊಂಡರು.

ಸರ್ಕಾರವು ಜಲಿಯನ್ವಾಲಾಬಾಗ್ ದುರಂತದ ವಿಚಾರಣೆಗಾಗಿ ಹಂಟರ್ ಆಯೋಗವನ್ನು ನೇಮಿಸಿತು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ಖಿಲಾಫತ್ ಚಳುವಳಿ


ಟರ್ಕಿಯ ಸುಲ್ತಾನರು ಮುಸ್ಲಿಮರ ಧಾರ್ಮಿಕ ಮುಖಂಡರೂ ಆಗಿದ್ದು, ಖಲೀಫರೆಂದು ಕರೆಸಿಕೊಳ್ಳುತ್ತಿದ್ದರು. ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಖಲೀಫರ ಮೇಲೆ ನಡೆಯುತ್ತಿದ್ದ ಬ್ರಿಟೀಷರ ದೌರ್ಜನ್ಯವನ್ನು ಖಂಡಿಸಿ ಮುಸ್ಲಿಮರು ಜಗತ್ತಿನಾದ್ಯಂತ ಪ್ರತಿಭಟಿಸಿದರು. ಅಂತೆಯೇ ಮಹಮದ್ ಅಲಿ ಮತ್ತು ಶೌಕತ್ ಅಲಿ ಸಹೋದರರು ಭಾರತದಲ್ಲಿ ಟರ್ಕರ ಪರವಾದ ಖಿಲಾಫತ್ ಚಳುವಳಿ ಪ್ರಾರಂಭಿಸಿದರು. ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಬ್ರಿಟಿಷರ ವಿರುದ್ಧ ಬಂಡೆದ್ದರೆ ಮಾತ್ರ ಬ್ರಿಟಿಷರು ಹಿಮ್ಮೆಟ್ಟುತ್ತಾರೆ ಎನ್ನುವುದು ಗಾಂಧೀಜಿಯವರ ನಂಬಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಮರ ಸಹಭಾಗಿತ್ವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ಬಹಳ ಮುಖ್ಯ ಎಂದು ಗಾಂಧೀಜಿ ಭಾವಿಸಿದ್ದರು. ಪರಿಣಾಮವಾಗಿ ಗಾಂಧೀಜಿ ಖಿಲಾಫತ್ ಚಳುವಳಿಗೆ ತಮ್ಮ ಬೆಂಬಲವನ್ನು ನೀಡಿದರು. ಈ ಚಳುವಳಿಯು ಹಿಂದೂ ಮುಸ್ಲಿಮರು ಒಂದುಗೂಡಿ ನಡೆಸಿದ ರಾಷ್ಟ್ರವ್ಯಾಪೀ ಆಂದೋಲನವಾಗಿದೆ. ಅನೇಕ ರಾಷ್ಟ್ರೀಯ ನಾಯಕರು ಮತ್ತು ಕಾಂಗ್ರೆಸ್ ಸಂಘಟನೆಯು ಖಿಲಾಫತ್ ಚಳುವಳಿಯ ಬೆಂಬಲಕ್ಕೆ ನಿಂತಿತು.

ಅಸಹಕಾರ ಚಳವಳಿ


ಅಸಹಕಾರ ಚಳವಳಿ ಭಾರತದ ಪ್ರಥಮ ದೇಶದಾದ್ಯಂತ ಜನರ ಅಹಿಂಸಾತ್ಮಕ ಚಳವಳಿಯಾಗಿದ್ದು, ಇದನ್ನು ಮಹಾತ್ಮಾಗಾಂಧೀಜಿಯವರ ಮುಂದಾಳತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಯೋಜಿಸಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಚಳವಳಿಯಿಂದ ಗಾಂಧಿಯುಗ ಪ್ರಾರಂಭವಾಯಿತು. ಗಾಂಧೀಜಿ ಬ್ರಿಟಿಷರ ವಿರುದ್ಧ 1920ರಲ್ಲಿ ಅಸಹಕಾರ ಚಳುವಳಿಗೆ ಕರೆಯಿತ್ತರು. ಅವರ ಕರೆಯನ್ನು ಬೆಂಬಲಿಸಿ ಶಾಲಾಕಾಲೇಜುಗಳನ್ನು ವಿದ್ಯಾರ್ಥಿಗಳು ಬಹಿಷ್ಕರಿಸಿದರು. ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು. ಭಾರತೀಯ ಗಣ್ಯರು, ಬ್ರಿಟಿಷರು ನೀಡಿದ್ದ ಪುರಸ್ಕಾರಗಳನ್ನು ಹಿಂದಿರುಗಿಸಿದರು. ಈ ಚಳುವಳಿಯನ್ನು ಬೆಂಬಲಿಸಿ ಮೋತಿಲಾಲ್ ನೆಹರು, ಸಿ.ಆರ್.ದಾಸ್ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದರು. ಈ ಅವಧಿಯಲ್ಲಿ ಬ್ರಿಟನ್ ರಾಜಕುಮಾರನ ಭಾರತದ ಭೇಟಿಯನ್ನು ವಿರೋಧಿಸಲಾಯಿತು. ರಾಜಕುಮಾರನ ಭೇಟಿಯ ವಿರುದ್ಧವಾಗಿ ದೇಶಾದ್ಯಂತ ಹರತಾಳಗಳು ನಡೆದವು

ಚೌರಿಚೌರ ಘಟನೆ


ಅಸಹಕಾರ ಚಳುವಳಿಯ ಸ್ವರೂಪವನ್ನು ಮನಗಂಡ ಬ್ರಿಟಿಷ್ ಸರ್ಕಾರದಲ್ಲಿ ಆತಂಕದ ವಾತಾವರಣ ಉಂಟಾಯಿತು. ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದ ಚೌರಿಚೌರ ಎಂಬಲ್ಲಿ ಸಾವಿರಾರು ಸ್ವಾತಂತ್ರ್ಯ ಯೋಧರು ಚಳುವಳಿಗೆ ಧುಮುಕಿದರು. 1922ರಲ್ಲಿ ಶಾಂತಿಯುತವಾಗಿ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ಪೊಲೀಸರು ಹಲ್ಲೆ ಮಾಡಿದರು. ಇದರಿಂದ ರೊಚ್ಚಿಗೆದ್ದ ಜನರು ಠಾಣೆಗೆ ನುಗ್ಗಲೆತ್ನಿಸಿದಾಗ ಪೊಲೀಸರು ಗೋಲಿಬಾರ್ ನಡೆಸಿದರು. ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರÀಗಳು ಖಾಲಿಯಾದ ಕಾರಣದಿಂದ ಪೊಲೀಸರು ಠಾಣೆಯೊಳಗೆ ಓಡಿದರು. ಕುಪಿತರಾದ ಚಳುವಳಿಗಾರರು ಪೊಲೀಸರು ಠಾಣೆಗೆ ಬೆಂಕಿ ಹಚ್ಚಿದರು. ಇದರಿಂದ 22 ಜನ ಪೊಲೀಸರು ಸಜೀವ ದಹನವಾದರು. ಈ ಘಟನೆಯನ್ನು ಇತಿಹಾಸದಲ್ಲಿ ಚೌರಿಚೌರ ಘಟನೆ ಎನ್ನುತ್ತಾರೆ. ಈ
ಘಟನೆಯು ಗಾಂಧೀಜಿಯವರನ್ನು ಖಿನ್ನರನ್ನಾಗಿಸಿತು. ಹಾಗೆಯೇ ಚಳುವಳಿಗಾರರ ಹಿಂಸಾತ್ಮಕ ವರ್ತನೆಗಾಗಿ ಗಾಂಧೀಜಿಯವರು ವಿಷಾದ ವ್ಯಕ್ತಪಡಿಸಿ ಚಳುವಳಿಯನ್ನು ಹಿಂತೆಗೆದುಕೊಂಡರು.

ಕಾನೂನು ಭಂಗ ಚಳುವಳಿ (ಥಂಡಿ ಸತ್ಯಾಗ್ರಹ)


ಕಾನೂನು ಭಂಗ ಚಳುವಳಿಯ ನೇತೃತ್ವ ವಹಿಸಿಕೊಂಡ ಗಾಂಧೀಜಿಯವರು ವೈಸರಾಯ್ ಇರ್ವಿನ್ನನ ಮುಂದೆ ಉಪ್ಪಿನ ಮೇಲಿನ ತೆರಿಗೆ ರದ್ದತಿಯು ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ಸಲ್ಲಿಸಿದ್ದರು. ಈ ಬೇಡಿಕೆಗಳು ಈಡೇರದೇ ಹೋದಲ್ಲಿ ಕಾನೂನು ಭಂಗ ಚಳುವಳಿ ಆರಂಭಿಸುವುದಾಗಿ ಗಾಂಧೀಜಿಯವರು ಘೋಷಿಸಿದರು. ಆದರೆ ಇರ್ವಿನ್ ಅವರ ಬೇಡಿಕೆಗಳನ್ನು ಪರಿಗಣಿಸಲಿಲ್ಲ. ಇದರ ಪರಿಣಾಮವಾಗಿ ಗಾಂಧೀಜಿಯವರು 1930ರಲ್ಲಿ ಸಬರಮತಿ ಆಶ್ರಮದಿಂದ ಸೂರತ್ ಸಮೀಪದ ಸಮುದ್ರ ತೀರದ ದಂಡಿಯವರೆಗೆ ತಮ್ಮ ಅನುಯಾಯಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರಟು ದಂಡಿಯ ಕಡಲ ತೀರದಲ್ಲಿ ತಾವೇ ಉಪ್ಪು ತಯಾರಿಸಿ ಕಾನೂನು ಭಂಗ ಚಳುವಳಿಯನ್ನು ಪ್ರಾರಂಭಿಸಿದರು. ಈ ಘಟನೆಯನ್ನು ‘ದಂಡಿ ಸತ್ಯಾಗ್ರಹ’ ಎಂದು ಕರೆಯುತ್ತಾರೆ. 23 ದಿನಗಳ ಈ ನಡಿಗೆಯಲ್ಲಿ ಸಹಸ್ರಾರು ಸಹ ಸತ್ಯಾಗ್ರಹಿಗಳು ದಾರಿಯುದ್ದಕ್ಕೂ ಸೇರಿದರು. ನಾಲ್ಕು ಜಿಲ್ಲೆಗಳು ಮತ್ತು 48 ಹಳ್ಳಿಗಳ ಮೂಲಕ ಹಾಯ್ದು ಈ ನಡಿಗೆ ಏಪ್ರಿಲ್ 5 ರಂದು ದಂಡಿ ತಲುಪಿತು

ಕಾನೂನು ಭಂಗ ಚಳುವಳಿಯಲ್ಲಿ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ವಿಜಯಲಕ್ಷ್ಮಿ ಪಂಡಿತ್, ಕಮಲಾನೆಹರು, ವಲ್ಲಭ ಬಾಯಿ ಪಟೇಲ್, ರಾಜಗೋಪಾಲಚಾರಿ, ಬಾಬು ರಾಜೇಂದ್ರ ಪ್ರಸಾದ್ ಮೊದಲುಗೊಂಡು ಸಾವಿರಾರು ಜನರನ್ನು ಬ್ರಿಟಿಷರು ಬಂಧಿಸಿದರು. ಈ ಚಳುವಳಿಯು ದೇಶದ ನಾನಾಭಾಗಗಳಲ್ಲಿ ವ್ಯಾಪಿಸಿತು.

ಕ್ವಿಟ್ ಇಂಡಿಯಾ ಚಳುವಳಿ (1942)


ಬ್ರಿಟಿಷ ಸರ್ಕಾರವು ಭಾರತೀಯ ನಾಯಕರೊಂದಿಗೆ ಸಂಧಾನಕ್ಕಾಗಿ ಕಳುಹಿಸಿದ್ದ ಸ್ಟ್ರಾಫರ್ಡ್ ಕ್ರಿಪ್ಸ್ ಆಯೋಗವು 1942ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು. ಈ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು, ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದು, ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸೇರುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಸಂಬಂಧಿಸಿದ ರಾಜ್ಯಗಳಿಗೆ ಬಿಡುವಂತಹ
ಸಲಹೆಗಳನ್ನು ನೀಡಿತು. ಈ ಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿತು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎನ್ನುವುದು ಕ್ವಿಟ್ ಇಂಡಿಯಾ ಚಳುವಳಿಯ ಆಶಯವಾಗಿತ್ತು. ಕ್ವಿಟ್ ಇಂಡಿಯಾ ಚಳುವಳಿ ಗಾಂಧೀಜಿಯವರು ದೇಶಬಾಂಧವರಿಗೆ ‘ಮಾಡು ಇಲ್ಲವೇ ಮಡಿ’ ಎನ್ನುವ ಕರೆ ನೀಡಿದರು. ಈ ಕರೆ ನೀಡಿದ ಹಿನ್ನೆಲೆಯಲ್ಲಿ ಗಾಂಧೀಜಿ, ನೆಹರು, ರಾಜೇಂದ್ರಪ್ರಸಾದ್, ಅಬುಲ್ ಕಲಾಂ ಅಜಾದ್, ಸರ್ದಾರ್ ವಲ್ಲಭ ಭಾಯಿ ಪಟೇಲ್, ಆಚಾರ್ಯ ಕೃಪಲಾನಿ, ಕಸ್ತೂರಬಾ ಗಾಂಧಿ ಮೊದಲಾದ ನಾಯಕರನ್ನು ಬ್ರಿಟಿಷ ಸರ್ಕಾರವು ಬಂಧಿಸಿ ಜೈಲಿನಲ್ಲಿಟ್ಟಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಬಹುತೇಕ ನಾಯಕರು ಬಂಧನದಲ್ಲಿದ್ದ ಕಾರಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸೇತರ ಸಂಘಟನೆಗಳು ಮುಖ್ಯ ಭೂಮಿಕೆಯಲ್ಲಿದ್ದವು. ಹೊಸನಾಯಕರುಗಳ ಉದಯಕ್ಕೆ ಈ ಹೋರಾಟವು ಎಡೆ ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಚಳುವಳಿಯ ನೇತೃತ್ವವನ್ನು
ಜಯಪ್ರಕಾಶ್ ನಾರಾಯಣರವರು ವಹಿಸಿಕೊಂಡರು. ಇವರು ಕಾಂಗ್ರೆಸ್‍ನ ಸಮಾಜವಾದಿ ಬಣದ ಪ್ರಮುಖ ನಾಯಕರಾಗಿದ್ದರು. ಇವರು ತಮ್ಮ ಬೆಂಬಲಿಗರೊಡನೆ ದೇಶದ ವಿವಿಧೆಡೆಯಲ್ಲಿ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತೊಡಗಿದರು. ಸಮಾಜವಾದಿಗಳು ‘ದಿ ಫ್ರೀಡಂ ಸ್ಟ್ರಗಲ್ ಫ್ರಾಂಟ್’ ಎಂಬ ದಾಖಲೆ(Document) ಮೂಲಕ ತಮ್ಮ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದರು. ಈ ಮೂಲಕ ಅವರು ಕಾರ್ಮಿಕರಿಗೆ ತರಬೇತಿಯನ್ನು ನೀಡಿದರು.ಹಾಗಾಗಿ ಇದು ಪ್ರತಿಯೊಬ್ಬ ಭಾರತೀಯನಲ್ಲಿ ದೇಶ ಪ್ರೇಮವನ್ನು ಜಾಗೃತಗೊಳಿಸಿತು. ಭಾರತದ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ಮಟ್ಟದ ಚಳುವಳಿಯಾಗಿದೆ.