ಶಿಲೆಗಳು

 

ಶಿಲೆಗಳು ವಿವಿಧ ಬಗೆಯ ಖನಿಜಗಳ ಸಂಯುಕ್ತ ವಸ್ತುಗಳಾಗಿವೆ. ಇವು ಶಿಲಾಗೋಳದಲ್ಲಿ ಸ್ವಾಭಾವಿಕವಾಗಿ
ಘನ ರೂಪದ ಅಜೈವಿಕ (Inorganic) ವಸ್ತುಗಳು. ಇದರಿಂದ ಶಿಲೆಗಳನ್ನು ಖನಿಜಗಳ ಮಿಶ್ರಣವೆಂದೂ
ಕರೆಯುವರು. ಶಿಲೆಗಳು ವಿವಿಧ ನೈಸರ್ಗಿಕ ಪ್ರಕ್ರಿಯೆಗಳಿಂದ ನಿರ್ಮಿತವಾಗುವುದರಿಂದ ಇವುಗಳನ್ನು ಮೂರು
ಮುಖ್ಯ ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ;
1. ಅಗ್ನಿ ಶಿಲೆಗಳು
2. ಪದರು ಶಿಲೆಗಳು
3. ರೂಪಾಂತರ ಶಿಲೆಗಳು.

1. ಅಗ್ನಿ ಶಿಲೆಗಳು


ಅಗ್ನಿ ಶಿಲೆಗಳು ಭೂಮಿಯ ಅಂತರಾಳದಿಂದ ಶಿಲಾಪಾಕವು ಹೊರಹೊಮ್ಮಿ ಭೂ ಮೇಲ್ಮೈಯಲ್ಲಿ ತಂಪಾಗಿ ಘನೀಭವಿಸುವುದರಿಂದ ನಿರ್ಮಿತವಾಗುತ್ತವೆ. ಅಗ್ನಿಶಿಲೆಗಳು ಮೊದಲು ನಿರ್ಮಾಣವಾಗುವುದರಿಂದ ಇವುಗಳನ್ನು ‘ಪ್ರಾಥಮಿಕ ಶಿಲೆ’ಗಳೆಂದೂ ಕರೆಯುವರು.
ಅಗ್ನಿ ಶಿಲೆಗಳಲ್ಲಿ ಈ ಕೆಳಕಂಡಂತೆ ವಿಧಗಳಿವೆ.
i. ಅಂತಸ್ಸರಣ ಶಿಲೆಗಳು: ಶಿಲಾಪಾಕ ಅಥವಾ ಮ್ಯಾಗ್ಮಾ ಭೂ ಮೇಲ್ಮೈಯನ್ನು ತಲುಪುವ ಮೊದಲೇ ಕೆಲವು ವೇಳೆ ಅಂತರಾಳದಲ್ಲಿ ತಂಪಾಗಿ, ಘನೀಭವಿಸಿ ನಿಧಾನವಾಗಿ ಶಿಲೆಗಳು ನಿರ್ಮಿತವಾಗುತ್ತವೆ. ಇವುಗಳನ್ನು ಅಂತಸ್ಪರಣ
ಶಿಲೆಗಳು ಎನ್ನುವರು.
ಉದಾ: ಗ್ರಾನೈಟ್, ಡಯೊರೈಟ, ಗ್ಯಾಬ್ರೊ ಇತ್ಯಾದಿ.
ii. ಬಹಿಸ್ಸರಣ ಶಿಲೆಗಳು : ಶಿಲಾಪಾಕವು ಮ್ಯಾಗ್ಮಾ) ಹೊರಹೊಮ್ಮಿ ಕ್ರಮೇಣ ಭೂಮೇಲ್ಮೈಯಲ್ಲಿ ಘನೀಭವಿಸಿ ಉತ್ಪತ್ತಿಯಾದ ಶಿಲೆಗಳನ್ನು ಬಹಿಸ್ಸರಣ ಶಿಲೆಗಳು ಎಂದು ಕರೆಯಲಾಗಿದೆ.
ಉದಾ: ಬಸಾಲ್ಟ್, ಆಂಡೆಸೈಟ್.

2. ಪದರು ಶಿಲೆಗಳು


ಪದರು ಶಿಲೆಗಳು ನೀರು, ಗಾಳಿ ಮತ್ತು ಹಿಮ ಮುಂತಾದ ಕರ್ತೃಗಳಿಂದ ನಿರ್ಮಾಣವಾಗುತ್ತವೆ. ಈ ಕರ್ತೃಗಳು ಅಗ್ನಿಶಿಲೆಗಳನ್ನು ಚೂರುಚೂರಾಗಿ ಒಡೆದು ಸವೆಸುತ್ತವೆ. ಒಡೆದ ಶಿಲಾಚೂರುಗಳು ಸಾಗಿಸಲ್ಪಟ್ಟು ಕೆಲವು ಸ್ಥಳಗಳಲ್ಲಿ ಸಂಚಯಗೊಳ್ಳುತ್ತವೆ.
ಅಗ್ನಿಶಿಲೆಯ ನಂತರ ರಚನೆಯಾಗುವುದರಿಂದ ದ್ವಿತೀಯ ಶಿಲೆಗಳೆಂದೂ ಕರೆಯುವರು. ಸಾಮಾನ್ಯವಾಗಿ ಇವು ಸಮುದ್ರ, ಸಾಗರ ಮೊದಲಾದ ಜಲರಾಶಿಗಳಲ್ಲಿ ಸಂಚಯಿತವಾಗಿ ನಿರ್ಮಿತವಾಗುವುದರಿಂದ ಇವುಗಳನ್ನು ‘ಜಲಶಿಲೆ’ಗಳೆಂದೂ ಕರೆಯುವರು. ಇವುಗಳ ನಿರ್ಮಾಣದಲ್ಲಿ ನೀರು ಮುಖ್ಯ ಪಾತ್ರವಹಿಸುವುದು. ಕಣ ಶಿಲೆಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ,
i.ಭೌತಿಕ ಕ್ರಿಯೆಯಿಂದಾದ ಪದರು ಶಿಲೆಗಳು : ಶಿಥಿಲೀಕರಣ ಮತ್ತು ಸವೆತ ಕಾರ್ಯದಿಂದ ಮೂಲಕಲೆಗಳಿಂದ ಉತ್ಪತ್ತಿಯಾದ ಶಿಲಾಚೂರುಗಳಿಂದ ಈ ಶಿಲೆಗಳು ನಿರ್ಮಿತವಾಗುತ್ತವೆ.
ಉದಾ: ಮರಳುಗಲ್ಲು ಮತ್ತು ಜೇಡಿಶಿಲೆ
ii.ರಾಸಾಯನಿಕ ಕ್ರಿಯೆಯಿಂದಾದ ಪದರು ಶಿಲೆಗಳು : ಲವಣಾಂಶಗಳಿಂದ ಕೂಡಿರುವ ನೀರಿನ ದ್ರಾವಣವು ಉಷ್ಣ0ಶದಿಂದ ಭಾಷ್ಪೀಭವನಗೊಳ್ಳುವುದರಿಂದ ರಾಸಾಯನಿಕ ಕಣಗಳು ಸಂಚಯಗೊಂಡು ಇಂತಹ ಶಿಲೆಗಳು ನಿರ್ಮಿತವಾಗುತ್ತವೆ.
ಉದಾ : ಕಲ್ಲುಪ್ಪು, ಜಿಪ್ಸಂ ಇತ್ಯಾದಿ.

3. ರೂಪಾಂತರ ಶಿಲೆಗಳು


ಅಗ್ನಿಶಿಲೆಗಳು ಹಾಗೂ ಪದರು ಶಿಲೆಗಳು ಅತ್ಯಧಿಕ ಉಷ್ಣ ಹಾಗೂ ಒತ್ತಡದ ಪರಿಣಾಮದಿಂದ ಮಾರ್ಪಾಡು ಹೊಂದಿ ರೂಪಾಂತರ ಶಿಲೆಗಳಾಗಿ ರೂಪುಗೊಳ್ಳುತ್ತವೆ.
ಉದಾಹರಣೆಗೆ:
ಎ) ಗ್ರಾನೈಟ್->ನೀಸ್,
ಬಿ) ಬಸಾಲ್ಟ್-> ಶಿಸ್ಟ್,
ಸಿ) ಸುಣ್ಣದಕಲ್ಲು->ಅಮೃತಶಿಲೆ,
ಡಿ) ಮರುಳು ಶಿಲೆ->ಸ್ಫಟಿಕ ಶಿಲೆ,
ಇ) ಕಲ್ಲಿದ್ದಲು->ಗ್ರಾಫೈಟ್,
ಎಫ್) ಗ್ರಾಫೈಟ್->ವಜ್ರ.