ಸ್ವಚ್ಛ ಭಾರತ ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರ :-
ಪ್ರಸ್ತಾವನೆ :
‘ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ.’ ಎಂಬ ನಾಣ್ಣುಡಿಯಂತೆ ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯಕರ್ತವ್ಯವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.ಇದು ನಮ್ಮ ಮನೆ ಪರಿಸರದಿಂದಲೇ, ನಮ್ಮಿಂದಲೇ ಅಂದರೆ ವಿದ್ಯಾರ್ಥಿಗಳಿಂದಲೇ ಪ್ರಾರಂಭವಾದಾಗ ‘ಸ್ವಚ್ಛಭಾರತ ಅಭಿಯಾನ’ಕ್ಕೆ ಸಂಪೂರ್ಣವಾಗಿ ಯಶಸ್ಸು ದೊರೆಯುತ್ತದೆ.
ವಿಷಯ ನಿರೂಪಣೆ :
‘ಆರೋಗ್ಯವೇ ಭಾಗ್ಯ’ ಎಂಬ ನಾಣ್ನುಡಿ ನಮ್ಮಲ್ಲಿದೆ ಉತ್ತಮ ಆರೋಗ್ಯಕ್ಕೆ ಉತ್ತಮ ಹಾಗೂ ಸ್ವಚ್ಛವಾದ ಪರಿಸರ ಅಗತ್ಯ. ಇದಕ್ಕಾಗಿಯೇ ನಮ್ಮ ಇಂದಿನ ಪ್ರಧಾನ ಮಂತ್ರಿಗಳು ಗಾಂಧೀಜಿಯವರ ಜನ್ಮದಿನವಾದ 2.10.2014ರಂದು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದರು.ಗಾಂಧೀಜಿಯವರು ಹುಟ್ಟಿ 150 ವರ್ಷಪೂರ್ಣಗೊಳ್ಳುವ 2.10.2019ಕ್ಕೆ ಈ ಯೋಜನೆಯ ಗುರಿಯನ್ನು ಇಟ್ಟುಕೊಳ್ಳಭೇಕಾಗಿದೆ.ಈ ಅವಧಿಯಲ್ಲಿ ಸಂಪೂರ್ಣವಾಗಿ ಸ್ವಚ್ಛಭಾರತ ನಿರ್ಮಾಣವಾಗಬೇಕು ಈ ದಿಸೆಯಲ್ಲಿ ವಿದ್ಯಾರ್ಥಿಗಳ ಪತ್ರ ಅತ್ಯಂತ ಮಹತ್ವದ್ದು.
ಶಾಲೆಯಲ್ಲಿ ಮಕ್ಕಳಿಂದ ಸ್ವಚ್ಚತೆ ಮತ್ತು ನೈರ್ಮಲ್ಯದ ಮೇಲೆ , ವಿಶೇಷವಾಗಿ ಗಾಂಧೀಜಿಯವರ ಬೋಧನೆಗಳಿಗೆ ಸಂಬಂಧಿಸಿದಂತೆ ಚರ್ಚೆಗಳನ್ನು ಏರ್ಪಡಿಸಬೇಕು. ಶಾಲಾಕೊಠಡಿ, ಪ್ರಯೋಗಾಲಯಗಳು, ಗ್ರಂಥಾಲಯಗಳನ್ನು ವಿದ್ಯಾರ್ಥಿಗಳು ಸ್ವತ: ತಾವೇ ಸ್ವಚ್ಚಗೊಳಿಸುವುದನ್ನು ರೂಢಿಮಾಡಿಕೊಳ್ಳಬೇಕು. ಶಾಲೆಯಲ್ಲಿರುವ ಕುಡಿಯುವ ನೀರಿನ ಪ್ರದೇಶ, ಶೌಚಾಲಯ, ಅಡುಗೆಮನೆಯನ್ನು ವಿದ್ಯಾರ್ಥಿಗಳು ಪ್ರತಿ ವಾರಕ್ಕೆ ಒಂದು ತರಗತಿಯಂತೆ ಸ್ವಚ್ಛಮಾಡಬೇಕು. ಶಾಲಾ ಆಟದ ಮೈದಾನಗಳು, ಶಾಲ ಉದ್ಯಾನವನಗಳು ಹಾಗೂ ಶಾಲಾ ತರಗತಿಗಳಲ್ಲಿ ಸ್ವಚ್ಛತಾ ನಿರ್ವಹಣೆಯನ್ನು ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಜಾಥಾಹೋಗುವ ಮೂಲಕ ಜನರಲ್ಲಿ ಸ್ವಚ್ಛಭಾರತದ ಉದ್ಧೇಶವನ್ನು ಜನರಲ್ಲಿ ಮೂಡಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ಶಾಲೆಗಳಲ್ಲಿ ನೈರ್ಮಲ್ಯ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುವ ಪ್ರಬಂಧ, ಚರ್ಚೆ, ಭಾಷಣ, ಚಿತ್ರಕಲೆ ಸ್ಪರ್ದೇಗಳನ್ನು ಏರ್ಪಡಿಸುವ ಮೂಲಕ ಎಲ್ಲ ವಿದ್ಯಾರ್ಥಿಗಳಲಿ ಸ್ವಚ್ಛಭಾರತ ಅಭಿಯಾನದ ಕಲ್ಪನೆ ಮೂಡಿಸುವುದು. ವಿದ್ಯಾರ್ಥಿಗಳು ಸ್ವಚ್ಛತೆಯ ಮೇಲ್ವಿಚಾರಣೆಯ ಜೊತೆಗೆ ಸ್ವಚ್ಛತೆಯ ಅರಿವನ್ನು ಮೂಡಿಸುವ ಚಿತ್ರ ಪ್ರದರ್ಶನಗಳು, ವರ್ಣಚಿತ್ರಗಳು ಮತ್ತು ಸಂದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನು ಅಚಿಟಿಸುವುದು. ವಿದ್ಯಾರ್ಥಿಗಳು ಶಾಲೆಯಲ್ಲಿನ ವಿದ್ಯಾರ್ಥಿ ಸಂಸತ್ತಿನ ಮೂಲಕ ಸಂಘಟನೆಗೊಂಡು ಶಿಕ್ಷಕರು, ಪೋಷಕರು ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆಯ ಜೊತೆಗೆ ಸ್ವಚ್ಛತೆಯ ಅರಿವನ್ನು ಮೂಡಿಸುವುದು
ಉಪಸಂಹಾರ :
ಸ್ವಚ್ಛ ಭಾರತ ನಿರ್ಮಾಣದ ಕನಸನ್ನು ನನಸು ಮಾಡೋಣ ಈ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಪ್ರತಿವಾರ ಕೇವಲ ಎರಡು ಗಂಟೆಗಳ ಅವಧಿಯನ್ನು ಮೀಸಲಿಡೋಣ ಈ ಮೂಲಕ ಪ್ರಧಾನ ಮಂತ್ರಿಗಳ ಕನಸನ್ನು ನನಸಾಗಿಸುವುದರ ಮೂಲಕ ಸ್ವಚ್ಛಭಾರತ ಅಭಿಯಾನವನ್ನು ಯಶಸ್ವಿಗೊಳಿಸೋಣ.