ವಾಯುಮಂಡಲದ ಒತ್ತಡ

 

ವಾಯು ತೂಕವನ್ನು ಹೊಂದಿದ್ದು, ಭೂಮಿಯ ಮೇಲೆ ಒತ್ತಡವನ್ನುಂಟು ಮಾಡುವುದು. ಇದನ್ನೇ ವಾಯು ಮಂಡಲದ ಒತ್ತಡ ಎನ್ನುವರು. ವಾಯುವಿನ ಒತ್ತಡವನ್ನು ಅಳೆಯಲು ಬಳಸುವ ಉಪಕರಣ
ವಾಯುಭಾರಮಾಪಕ (Barometer). ಒತ್ತಡವನ್ನು ಮಿಲಿಬಾರ್(mb)ಗಳಲ್ಲಿ ಅಳೆಯಲಾಗುತ್ತದೆ. ಸಮುದ್ರ ಮಟ್ಟದಲ್ಲಿ ವಾಯುಮಂಡಲದ ಸರಾಸರಿ ಒತ್ತಡ 1013.25 ಮಿಲಿಬಾರ್‍ಗಳಷ್ಟಿರುತ್ತದೆ. ವಾಯುಮಂಡಲದ ಒತ್ತಡವು ಉಷ್ನಾಂಶ, ಭೂಮಿಯ ದೈನಂದಿನ ಚಲನೆ, ಸಮುದ್ರಮಟ್ಟದಿಂದ ಎತ್ತರ, ನೀರಾವಿ ಮೊದಲಾದವುಗಳಿಂದ ಪ್ರಭಾವಿತವಾಗುವುದು. ಇವುಗಳಲ್ಲಿ ಉಷ್ನಾಂಶವು ಅತಿಮುಖ್ಯವಾದುದು. ಉಷ್ನಾಂಶವು ಹೆಚ್ಚಾಗಿರುವ ಪ್ರದೇಶಗಳಲ್ಲಿ ಒತ್ತಡವು ಕಡಿಮೆ. ಇದಕ್ಕೆ ಪ್ರತಿಯಾಗಿ ಕಡಿಮೆ ಉಷ್ನಾಂಶ ಇರುವ ಪ್ರದೇಶಗಳಲ್ಲಿ ವಾಯುವು ಸಂಕುಚಿತಗೊಂಡು ಒತ್ತಡವು ಅಧಿಕವಾಗುವುದು. ಹೀಗೆ ಉಷ್ನಾಂಶ ಮತ್ತು ಒತ್ತಡಗಳು ಪರಸ್ಪರ ತದ್ವಿರುದ್ಧ ಸಂಬಂಧವನ್ನು ಹೊಂದಿವೆ. ವಾಯುಮಂಡಲದ ಒತ್ತಡವು ಭೂಮೇಲ್ಮೈನಿಂದ ಎತ್ತರಕ್ಕೆ ಹೋದಂತೆ
ಕಡಿಮೆಯಾಗುವುದು. ಈ ಇಳಿಕೆಯ ಪ್ರಮಾಣವು ಪ್ರತಿ 300 ಮಿ.ಗಳಿಗೆ 34 ಮಿಲಿಬಾರ್‍ಗಳಷ್ಟಿರುವುದು.

ಪ್ರಪಂಚದ ಮುಖ್ಯ ಒತ್ತಡ ಪ್ರದೇಶಗಳು


ಪ್ರಪಂಚದಲ್ಲಿ ಒಟ್ಟು ಏಳು ಒತ್ತಡದ ವಲಯಗಳಿವೆ. ಅವುಗಳೆಂದರೆ:
1. ಸಮಭಾಜಕವೃತ್ತದ ಕಡಿಮೆ ಒತ್ತಡ ಪ್ರದೇಶ.
2. ಉತ್ತರ ಉಪಉಷ್ಣವಲಯದ ಅಧಿಕ ಒತ್ತಡ ಪ್ರದೇಶ.
3. ದಕ್ಷಿಣ ಉಪ ಉಷ್ಣವಲಯದ ಅಧಿಕ ಒತ್ತಡ ಪ್ರದೇಶ.
4. ಉತ್ತರ ಉಪಧ್ರುವೀಯ ಕಡಿಮೆ ಒತ್ತಡ ಪ್ರದೇಶ.
5. ದಕ್ಷಿಣ ಉಪಧ್ರುವೀಯ ಕಡಿಮೆ ಒತ್ತಡ ಪ್ರದೇಶ.
6. ಉತ್ತರ ಧ್ರುವೀಯ ಅಧಿಕ ಒತ್ತಡ ಪ್ರದೇಶ.
7. ದಕ್ಷಿಣ ಧ್ರುವೀಯ ಅಧಿಕ ಒತ್ತಡ ಪ್ರದೇಶ.