ವ್ಯವಸಾಯ (Agriculture)
 
ವ್ಯವಸಾಯವು ಮಾನವನ ಪುರಾತನ ವೃತ್ತಿಗಳಲ್ಲಿ ಒಂದಾಗಿದ್ದು, ನಾಗರಿಕತೆಯ ಆರಂಭದಿಂದಲೂ ಮಾನವನು ಈ ವೃತ್ತಿಯಲ್ಲಿ ತೊಡಗಿರುವನು. ವ್ಯವಸಾಯ ‘ಭೂಮಿಯನ್ನು ಉಳುಮೆ ಮಾಡುವ ಕಲೆ’ ಎಂದು ವ್ಯಾಖ್ಯಾನಿಸಲಾಗಿದೆ. ಭೂಮಿಯನ್ನು ಉಳುಮೆ ಮಾಡಿ ಸಸ್ಯಗಳನ್ನು ಬೆಳೆಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗವನ್ನು ಪಡೆಯುವುದನ್ನೇ ವ್ಯವಸಾಯ ಅಥವಾ ಕೃಷಿ ಎಂದು ಕರೆಯುವರು. ವ್ಯಾಪಕ ಅರ್ಥದಲ್ಲಿ ಇದು ಮೀನುಗಾರಿಕೆ, ಪಶುಪಾಲನೆ ಮತ್ತು ಅರಣ್ಯಗಾರಿಕೆಯನ್ನೂ ಸಹ ಒಳಗೊಂಡಿದೆ.
ವ್ಯವಸಾಯದ ವಿಧಗಳು
1) ಸಾಂದ್ರ ಬೇಸಾಯ (Intensive Farming):
ಒಂದು ವರ್ಷದಲ್ಲಿ ಒಂದೇ ವ್ಯವಸಾಯ ಕ್ಷೇತ್ರದಿಂದ 2-3 ಬೆಳೆಗಳನ್ನು ಬೆಳೆಯುವುದಕ್ಕೆ ಸಾಂದ್ರ ಬೇಸಾಯ ಎಂದು ಕರೆಯುವರು. ಅಧಿಕ ಜನಸಂಖ್ಯೆ ಇರುವ ಫಲವತ್ತಾದ ಪ್ರದೇಶಗಳಲ್ಲಿ ಇಂತಹ ಬೇಸಾಯವು ರೂಢಿಯಲ್ಲಿದೆ.
2) ಜೀವನಾಧಾರದ ಬೇಸಾಯ (Subsistance Farming)
ಈ ಬೇಸಾಯ ಪದ್ದತಿಯಲ್ಲಿ ವಿಸ್ತಾರವಾದ ಭೂ ಭಾಗದಳೀ ಒಂದೇ ಬೆಳೆಯನ್ನು ಬಿತ್ತನೆ ಮಾಡುವ ಬದಲು ಹಲವಾರು ಬೆಳೆಗಳನ್ನು ಬಿತ್ತನೆ ಮಾಡುವುದು ಸಾಮಾನ್ಯ.ಇದರ ಮುಖ್ಯ ಉದ್ದೇಶ ಕನಿಷ್ಠ ಒಂದು ಬೆಳೆಯ ಉತ್ತಮ ಪಸಲನ್ನು ಪಡೆಯುವುದು.ಈ ಬೇಸಾಯ ಪದ್ಧತಿಯಲ್ಲಿ ರೈತರು ಆಹಾರ ಧಾನ್ಯ, ಎಣ್ಣೆಕಾಳು, ತರಕಾರಿ ಮುಂತಾದವುಗಳನ್ನು ಬೆಳೆಯುವರು.
3) ಸ್ಥಳಾಂತರ ಬೇಸಾಯ (Shifting Cultivation)
ಯಾವುದೇ ಒಂದು ಪ್ರದೇಶದಲ್ಲಿ ಜನರು ಸ್ಥಿರವಾಗಿ ನೆಲೆಸದೆ ಅಲ್ಲಿರುವ ಅರಣ್ಯಗಳನ್ನು ಕಡಿದು ಬೇಸಾಯ ಮಾಡುವರು. ಒಂದೆರಡು ವರ್ಷ ಬೇಸಾಯ ಮಾಡಿ ಅಲ್ಲಿನ ಮಣ್ಣಿನ ಫಲವತ್ತತೆ ಕಡಿಮೆಯಾದ ನಂತರ ಬೇರೆ ಪ್ರದೇಶಗಳಿಗೆ ಹೋಗಿ ಬೇಸಾಯ ಮಾಡುವರು. ಇಂತಹ ಬೇಸಾಯವನ್ನು ಸ್ಥಳಾಂತರ ಬೇಸಾಯ ಎಂದು ಕರೆಯುವರು. ಈ ಬೇಸಾಯದಲ್ಲಿ ಅರಣ್ಯಗಳನ್ನು ನಾಶಗೊಳಿಸಿರುವುದರಿಂದ ಮಣ್ಣಿನ ಕೊರತೆಯೂ ಹೆಚ್ಚುವುದು.ಇದರಿಂದಾಗಿ ಈ ಬೇಸಾಯ ಪದ್ದತಿಯನ್ನು ನಿಷೇದಿಸಲಾಗಿದೆ
4) ವಾಣಿಜ್ಯ ಬೇಸಾಯ (Commercial Farming)
ವ್ಯಾಪಾರದ ಉದ್ದೇಶದ ಸಲುವಾಗಿ ಕೈಗೊಳ್ಳುವ ಬೇಸಾಯವನ್ನು ವಾಣಿಜ್ಯ ಬೇಸಾಯ ಎಂದು ಕರೆಯುವರು. ಹೊಗೆಸೊಪ್ಪು, ಅಡಿಕೆ, ತೆಂಗು, ಕಬ್ಬು, ಹತ್ತಿ, ಚಹ, ಕಾಫಿ, ರಬ್ಬರ್ ಇತ್ಯಾದಿ ವಾಣಿಜ್ಯ ಬೇಸಾಯದ ಬೆಳೆಗಳಾಗಿವೆ.
5) ತೋಟಗಾರಿಕಾ ಬೇಸಾಯ (Plantation Agriculture)
ಭಾರತದ ಮುಖ್ಯ ಬೇಸಾಯ ಪದ್ಧತಿಗಳಲ್ಲಿ ತೋಟಗಾರಿಕೆ ಬೇಸಾಯವು ಸಹ ಒಂದು. ಕಾಫಿ, ಚಹ ಮತ್ತು ರಬ್ಬರ್ ತೋಟಗಾರಿಕೆ ಬೆಳೆಗಳಲ್ಲಿ ಮುಖ್ಯವಾದವು. ಒಂದೇ ಬೆಳೆಯನ್ನು ವಿಸ್ತಾರವಾದ ತೋಟಗಳಲ್ಲಿ ಬೆಳೆಯಲಾಗುವುದು.