ರಾಷ್ಟ್ರಪತಿ ಆಡಳಿತ (ಭಾರತ ಸಂವಿಧಾನದ 356ನೇ ವಿಧಿಯ ಬಳಕೆ)
(President Rule : An Overview)
 
ರಾಷ್ಟ್ರಪತಿ ಆಡಳಿತ
ಸಂವಿಧಾನ ವ್ಯವಸ್ಥೆಯನ್ನು ನಿರ್ವಹಿಸಿಕೊಂಡು ಹೋಗಲು ಅಸಮರ್ಥವಾದ ರಾಜ್ಯವೊಂದರ ಮೇಲೆ ಭಾರತ ಸಂವಿಧಾನದ 356ನೇ ವಿಧಿಯನ್ನು ವಿಧಿಸುವ ಕ್ರಮವನ್ನು ರಾಷ್ಟ್ರಪತಿ ಆಡಳಿತ ಎಂದು ಪರಿಗಣಿಸುತ್ತೇವೆ. ಇಂಥ ಪರಿಸ್ಥಿತಿಯಲ್ಲಿ ಆ ರಾಜ್ಯವು ನೇರವಾಗಿ ಕೇಂದ್ರದ ಆಡಳಿತಕ್ಕೆ ಒಳಪಡುತ್ತದೆ. ಇದನ್ನು ಆ ರಾಜ್ಯ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ ಎಂದು ಪರಿಗಣಿಸಲ್ಪಡುತ್ತದೆ. ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ, ರಾಜ್ಯದ ಕಾರ್ಯನಿರ್ವಹಣೆಯ ಹೊಣೆಯನ್ನು ಕೇಂದ್ರದಿಂದ ನಿಯುಕ್ತರಾದ ರಾಜ್ಯಪಾಲರಿಗೆ ನೇರವಾಗಿ ವಹಿಸುತ್ತಾರೆ.
ಯಾಕೆ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ?
ಈ ಕೆಳಗಿನ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗುತ್ತದೆ.
* ಯಾವುದೇ ರಾಜ್ಯ ಮುಖ್ಯಮಂತ್ರಿಯಾಗಿ ತನ್ನ ಮುಖಂಡನನ್ನು ಆಯ್ಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ.
* ರಾಜ್ಯದ ಮೈತ್ರಿ ಸರ್ಕಾರ ವಿಫಲವಾದಾಗ
* ಅನಿವಾರ್ಯ ಕಾರಣಗಳಿಂದಾಗಿ ರಾಜ್ಯದ ಚುನಾವಣೆಗಳು ಮುಂದೂಡಲ್ಪಟ್ಟಾಗ
* ರಾಜ್ಯವು ಸಂವಿಧಾನಾತ್ಮಕ ರೂಢಿಗಳಿಗೆ ಬದ್ಧವಾಗಲು ವಿಫಲವಾದಾಗ
ರಾಷ್ಟ್ರಪತಿಗಳು ತನ್ನ ಆಡಳಿತ ಅವಧಿಯಲ್ಲಿ ಏನು ಮಾಡಬಹುದು?
*.1994ರವರೆಗೂ ಯಾವುದೇ ರಾಜ್ಯದಲ್ಲಿ ರಾಜಕೀಯ ಅರಾಜಕತೆ ಕಂಡುಬಂದರೆ ಅಂಥ ರಾಜ್ಯದ ಮೇಲೆ ಸಂವಿಧಾನದ 356ನೇ ವಿಧಿ ಅನ್ವಯ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಷ್ಟ್ರಪತಿಗಳಿಗೆ ಸಂಪೂರ್ಣ ಹಾಗೂ ಅನಿಯಂತ್ರಿತ ಅಧಿಕಾರ ಇತ್ತು. ಭಾರತ- ಚೀನಾ ಯುದ್ಧ, ಭಾರತ- ಪಾಕಿಸ್ತಾನ ಯುದ್ಧ, ನಾಗರಿಕ ಸಂಘರ್ಷ ಹಾಗೂ ರಾಜಕೀಯ ವ್ಯತ್ಯಯಗಳ ಸಂದರ್ಭದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
*.1994ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಈ ಪರಿಪಾಠವನ್ನು ಬದಲಿಸಲಾಯಿತು. ರಾಷ್ಟ್ರಪತಿ ಸಂವಿಧಾನಕ್ಕಿಂತ ಮೇಲ್ಪಟ್ಟ ಹುದ್ದೆಯಲ್ಲ. ಆದ್ದರಿಂದ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಅನಿಯಂತ್ರಿತ ಹಾಗೂ ಸಂಪೂರ್ಣ ಅಧಿಕಾರ ಅವರಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ರಾಷ್ಟ್ರಪತಿಗಳ ನಿರ್ಧಾರವು, ತೊಂದರೆಗೀಡಾದ ರಾಜ್ಯಗಳ ರಾಜ್ಯಪಾಲರ ಶಿಫಾರಸ್ಸಿಗೆ ಅನುಗುಣವಾಗಿರಬೇಕು ಎಂದು ತೀರ್ಪು ನೀಡಿತು. ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಸ್ತಾವ ಸಂಸತ್ತಿನ ಎರಡೂ ಸದನಗಳಲ್ಲಿ ಆಂಗೀಕಾರವಾದಲ್ಲಿ ಮಾತ್ರ ರಾಷ್ಟ್ರಪತಿಗಳಿಗೆ ಆ ಅಧಿಕಾರವಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.
*.ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಭಾರತಕ್ಕೆ ಹೊಸದಲ್ಲ. ಭಾರತದ ರಾಜ್ಯಗಳು ಇದುವರೆಗೆ ಒಟ್ಟು 124 ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ನಿರ್ದಶನಗಳು. ಬಹಳಷ್ಟು ಬಾರಿ ನಿರ್ದಿಷ್ಟ ರಾಜ್ಯಗಳು ರಾಜಕೀಯ ಸಂಘರ್ಷವನ್ನು ಎದುರಿಸಿದ ಸಂದರ್ಭದಲ್ಲಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಅನಿವಾರ್ಯ ಎಂಬ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.
Contributed By : Spardhaloka