ರಾಜ್ಯಪಾಲರು

 

* ಭಾರತದಲ್ಲಿ ಬ್ರಿಟೀಷರ ಆಳ್ವಿಕೆಯ ಅವಧಿಯಲ್ಲಿ (1765) ರಾಜ್ಯಪಾಲರನ್ನಾಗಿ ಹುದ್ದೆಯನ್ನು ಸೃಷ್ಟಿಸಲಾಗಿತ್ತು.
* ಲಾರ್ಡ್‍ಕ್ಲೈವ್‍ನನ್ನು ಬಂಗಾಳದ ಪ್ರಥಮ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು.
* ಸಂವಿಧಾನವು ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ಕಾರ್ಯಾಂಗವನ್ನು ಹೊಂದುವ ಅವಕಾಶವನ್ನು ರಾಜ್ಯಗಳಿಗೆ ನೀಡಿದೆ.
* ರಾಜ್ಯ ಕಾರ್ಯಾಂಗವು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳನ್ನೊಳಗೊಂಡ ಮಂತ್ರಿಮಂಡಲವನ್ನೊಳಗೊಂಡಿರುತ್ತದೆ.
* ಸಂವಿಧಾನದ 6ನೇ ಭಾಗದ 153 ರಿಂದ 167 ನೇ ವಿಧಿಗಳು ರಾಜ್ಯ ಕಾರ್ಯಾಂಗದ ಬಗ್ಗೆ ಪ್ರಸ್ತಾಪಿಸಿವೆ.
* ಪ್ರತಿಯೊಂದು ರಾಜ್ಯವು ರಾಜ್ಯಪಾಲರನ್ನು ಹೊಂದಿರಬೇಕೆಂದು ಸಂವಿಧಾನದ 153ನೇ ವಿಧಿಯಲ್ಲಿ ಪ್ರಸ್ತಾಪಿಸಲಾಗಿದೆ.
* ಒಬ್ಬ ವ್ಯಕ್ತಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಜ್ಯಗಳ ರಾಜ್ಯಪಾಲನಾಗಿ ಏಕಕಾಲದಲ್ಲಿ ಕಾರ್ಯನಿರ್ವಹಿಸಬಹುದು.
* ರಾಜ್ಯ ಕಾರ್ಯಾಂಗದ ಸಮಸ್ತ ಅಧಿಕಾರವು ರಾಜ್ಯಪಾಲರ ಹೆಸರಿನಲ್ಲಿ ನಡೆಯುತ್ತದೆ. (154ನೇ ವಿಧಿ)
* ರಾಷ್ಟ್ರಪತಿಯವರು ರಾಜ್ಯಪಾಲರನ್ನು ನೇಮಿಸುತ್ತಾರೆ. (155ನೇ ವಿಧಿ)
* ರಾಜ್ಯಪಾಲರಾಗಬೇಕಾದರೆ 157 ನೇ ವಿಧಿ ಪ್ರಕಾರ ಭಾರತದ ಪ್ರಜೆಯಾಗಿರಬೇಕು 35 ವರ್ಷ ವಯಸ್ಸಾಗಿರಬೇಕು.
* ಯಾವುದೇ ಸದನದ (ಸಂಸತ್ತಿನ, ವಿಧಾನಮಂಡಲದ) ಸದಸ್ಯನಾಗಿರಬಾರದು, ಒಂದು ವೇಳೆ ಸದಸ್ಯನಾಗಿದ್ದರೆ ರಾಜ್ಯಪಾಲರಾದ ಮೇಲೆ ರದ್ದಾಗುತ್ತದೆ. (158ನೇ ವಿಧಿ)
* ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು.
* ರಾಜ್ಯಪಾಲರ ಅಧಿಕಾರಾವಧಿ 5 ವರ್ಷಗಳು (156ನೇ ವಿಧಿ)
* ರಾಷ್ಟ್ರಪತಿಗಳು ರಾಜ್ಯಪಾಲರನ್ನು ಪದಚ್ಯುತಿಗೊಳಿಸುವ ಅಧಿಕಾರ ಹೊಂದಿದ್ದಾರೆ.
* ರಾಜ್ಯಪಾಲರಿಗೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಪ್ರಮಾಣವಚನ ಬೋಧಿಸುತ್ತಾರೆ.
* ರಾಜ್ಯಪಾಲರ ಹುದ್ದೆ ಆಕಸ್ಮಿಕವಾಗಿ (ರಾಜೀನಾಮೆ ಅಥವಾ ಮರಣ) ಖಾಲಿಯಾದಾಗ ತಾತ್ಕಾಲಿಕವಾಗಿ ಹೈಕೋರ್ಟನ ಮುಖ್ಯ ನ್ಯಾಯಾಧೀಶರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ.
* ರಾಜ್ಯಪಾಲರ ವೇತನ, ಭತ್ಯೆ, ಇತರ ಸೌಲಭ್ಯಗಳನ್ನು ರಾಜ್ಯದ ಸಂಚಿತ ನಿಧಿಯಿಂದ ನೀಡಲಾಗುತ್ತದೆ. ಬಾಡಿಗೆ ರಹಿತ ಬಂಗಲೆ, ಸಾರಿಗೆ, ಸಂಪರ್ಕ, ಆರೋಗ್ಯ ಮೊದಲಾದ ಸೌಲಭ್ಯಗಳನ್ನು ಪಡೆಯುತ್ತಾರೆ.
* ಅಧಿಕಾರಾವಧಿಯಲ್ಲಿ ರಾಜ್ಯಪಾಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ ಹಾಗೂ ಬಂಧನದ ವಾರೆಂಟ್ ನೀಡುವಂತಿಲ್ಲ. ಜೊತೆಗೆ ಅವರ ಕಾರ್ಯನಿರ್ವಹಣೆ ಹಾಗೂ ನಿಧಾರಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. (316ನೇ ವಿಧಿ) ಆದರೆ ಸಿವಿಲ್ ವಿಚಾರಗಳಿಗೆ ಸಂಬಂಧಿಸಿದಂತೆ ಎರಡು ತಿಂಗಳಿಗಿಂತ ಮುಂಚೆ ನೋಟಿಸ್ ನೀಡಿ ಮೊಕದ್ದಮೆ ಹೂಡಬಹುದು.
* ರಾಜ್ಯಪಾಲರನ್ನು ಅಧಿಕಾರಾವಧಿಗೆ ಮೊದಲೇ ಸಂವಿಧಾನಬದ್ಧವಾಗಿ ವಜಾ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.
* ಯಾವುದೇ ರಾಜ್ಯಕ್ಕೆ ಅದೇ ರಾಜ್ಯದ ವ್ಯಕ್ತಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸುವಂತಿಲ್ಲ ಆದರೆ ಪ್ರಾರಂಭದಲ್ಲಿ ಕರ್ನಾಟಕದಲ್ಲಿ ಜಮಚಾಮರಾಜೇಂದ್ರ, ಒಡೆಯರ್, ಪಂಜಾಬನಲ್ಲಿ ಸರ್ಕಾರ್ ಉಜ್ಜಲ್ ಸಿಂಗ್ ಪಶ್ವಿಮ ಬಂಗಾಳದಲ್ಲಿ ಹೆಚ್.ಸಿ. ಮುಖರ್ಜಿಯವರನ್ನು ಈ ಮೇಲಿನ ರಾಜ್ಯಗಳಿಗೆ ಅದೇ ರಾಜ್ಯದವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು.

ಅಧಿಕಾರ ಮತ್ತು ಕಾರ್ಯಗಳು


1. ಶಾಸನೀಯ ಅಧಿಕಾರಗಳು :


* ರಾಜ್ಯ ಶಾಸಕಾಂಗದ ಅಧಿವೇಶನವನ್ನು ಕರೆಯುವ, ಮುಂದೂಡುವ, ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರ (174ನೇ ವಿಧಿ).
* ಮಸೂದೆಗಳಿಗೆ ಸಂಬಂಧಿಸಿದಂತೆ ಉಭಯ ಸದನಗಳಿಗೆ ಸಂದೇಶ ಕಳುಹಿಸುವ (175ನೇ ವಿಧಿ) ಅಧಿಕಾರ.
* ಸಾರ್ವತ್ರಿಕ ಚುನಾವಣೆ ನಂತರ ಪ್ರತಿವರ್ಷದ ಪ್ರಥಮ ಅಧಿವೇಶನದಲ್ಲಿ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡುವ ಅಧಿಕಾರ.
* ಕಲೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡುವ (1/6ರಷ್ಟು -12 ಜನರನ್ನು) ಅಧಿಕಾರ.
* ‘ವಿಟೋ’ ಅಧಿಕಾರ ಚಲಾಯಿಸಿ ಮಸೂದೆಗಳನ್ನು ತಡೆಹಿಡಿಯಬಹುದು ಅಥವಾ ತಿರಸ್ಕರಿಸಬಹುದು.
* 213 ನೇ ವಿಧಿ ಪ್ರಕಾರ ರಾಜ್ಯಪಾಲರು ಸುಗ್ರೀವಾಜ್ಞೆಗಳನ್ನು ಹೊರಡಿಸುವ (ವಿಧಾನಮಂಡಲ ಅಧಿವೇಶನದಲ್ಲಿದ್ದಾಗ) ಅಧಿಕಾರ.
* ರಾಜ್ಯ ಶಾಸಕಾಂಗದ ಮಸೂದೆಗಳನ್ನು ರಾಜ್ಯಪಾಲರು ರಾಷ್ಟ್ರಪತಿ ಅನುಮೋದನೆಗೆ ಕಾಯ್ದಿರಿಸುವ (200ನೇ ವಿಧಿ) ಅಧಿಕಾರ.
* ವಿಧಾನಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಏಕಕಾಲದಲ್ಲಿ ಖಾಲಿಯಾದಾಗ ಸದನದ ಯಾವುದೇ ಸದಸ್ಯರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಿಸುವ ಅಧಿಕಾರಗಳು.

2. ಕಾರ್ಯಾಂಗೀಯ ಅಧಿಕಾರಗಳು :


* ಮುಖ್ಯಮಂತ್ರಿಯನ್ನು ನೇಮಿಸಿ ಇವರ ಸಲಹೆ ಮೇರೆಗೆ ಇತರೆ ಮಂತ್ರಿಗಳು (164ನೇ ವಿಧಿ) ನೇಮಿಸುವ, ವಜಾ ಮಾಡುವ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ನೇಮಿಸುವ ರಾಜ್ಯ ಮಹಿಳಾ ಆಯೋಗ ರಾಜ್ಯ ಅಲ್ಪಸಂಖ್ಯಾತ ಆಯೋಗ, ರಾಜ್ಯ ಮಾನವ ಹಕ್ಕುಗಳ ಆರೋಗ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸುವ ಅಧಿಕಾರ.
* ರಾಜ್ಯದ ಅಡ್ವೋಕೇಟ್ – ಜನರಲ್ ನೇಮಿಸುವ ಅಧಿಕಾರ.
* ರಾಜ್ಯಪಾಲರು ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿರುತ್ತಾರೆ.

3. ಹಣಕಾಸು ಅಧಿಕಾರಗಳು :


* ರಾಜ್ಯ ಪಾಲರ ಅನುಮತಿಯಿಲ್ಲದೆ ಹಣಕಾಸಿನ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವಂತಿಲ್ಲ.
* ರಾಜ್ಯ ತುರ್ತು ನಿಧಿ, ರಾಜ್ಯ ಸಂಚಿತನಿಧಿ ರಾಜ್ಯಪಾಲರ ಅಧೀನದಲ್ಲಿರುತ್ತದೆ.
* ರಾಜ್ಯ ಹಣಕಾಸು ಆಯೋಗ ರಚಿಸುವ ಅಧಿಕಾರ.

4. ನ್ಯಾಯಿಕ ಅಧಿಕಾರಗಳು :


* ನ್ಯಾಯಾಲಯವು ಒಬ್ಬ ಅಪರಾಧಿಗೆ ನೀಡಿದ ಶಿಕ್ಷೆಯನ್ನು ಕ್ಷಮಿಸುವ, ಕಡಿಮೆ ಮಾಡುವ, ಬದಲಿಸುವ ಅಧಿಕಾರ ಹೊಂದಿದ್ದಾರೆ. ಆದರೆ ಗಲ್ಲು ಶಿಕ್ಷೆಯನ್ನು ತಡೆಯುವ ಅಧಿಕಾರ ರಾಜ್ಯಪಾಲರಿಗಿರುವುದಿಲ್ಲ.
* ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ರಾಷ್ಟ್ರಪತಿ ಸಲಹೆ ಮೇರೆಗೆ ನೇಮಿಸುವ ಅಧಿಕಾರ.

5. ವಿವೇಚನಾಧಿಕಾರಿಗಳು :


* ರಾಜ್ಯ ಶಾಸಕಾಂಗದ ಮಸೂದೆಗಳನ್ನು ರಾಷ್ಟ್ರಪತಿಯ ಅನುಮೋದನೆಗೆ ಕಾಯ್ದಿರಿಸುವ ಅಧಿಕಾರ.
* 356 ನೇ ವಿಧಿ ಪ್ರಕಾರ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಧಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಅಧಿಕಾರ.
* ವಿಧಾನಸಭೆ ವಿಶ್ವಾಸವನ್ನು ಅಥವಾ ಬಹುಮತವನ್ನು ಕಳೆದುಕೊಂಡಾಗ ಅದನ್ನು ವಜಾ ಮಾಡುವ ಅಧಿಕಾರ.
* ಸಂವಿಧಾನದ 239(2) ನೇ ವಿಧಿ ಪ್ರಕಾರ ರಾಜ್ಯಪಾಲರು ಕೇಂದ್ರಾಡಳಿತ ಪ್ರದೇಶಗಳ ಸ್ವತಂತ್ರ ಆಡಳಿತಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ. (ರಾಷ್ಟ್ರಪತಿ ಆದೇಶಕ್ಕನುಗುಣವಾಗಿ)
* ಆದಿವಾಸಿಗಳಿರುವ ಪ್ರದೇಶಗಳನ್ನು ನೋಡಿಕೊಳ್ಳುವ ಜವಾಬ್ದಾರಿ ರಾಜ್ಯಪಾಲರ ಮೇಲಿರುತ್ತದೆ. (ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮೊದಲಾದವುಗಳು).