ಸೌರವ್ಯೂಹ(Solar System)

 

ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8 ಗ್ರಹಗಳು ಅವುಗಳ ಉಪಗ್ರಹಗಳು, ಉಲ್ಕೆ, ಧೂಮಕೇತು, ಮತ್ತು ಕ್ಷುದ್ರಗ್ರಹ, ಗರಹಗಳ ಪರಿವಾರವನ್ನು ಸೌರವ್ಯೂಹ ಎನ್ನುತ್ತಾರೆ.

ಸೂರ್ಯ


ಸೌರಮಂಡಲದ ಆಧಾರ ಬಿಂದು ಇದು ಸೌರವ್ಯೂಹದ ಒಟ್ಟು ದ್ರವ್ಯರಾಶಿಯ 99% ರಷ್ಟು ಒಳಗೊಂಡಿದೆ ಸೂರ್ಯನು ಬೃಹತ್ ಗಾತ್ರದ ಅಗ್ನಿಜ್ವಾಲೆಯಿಂದ ಕೂಡಿದ, ಅತ್ಯುಷ್ಣತೆಯ ಒಂದು ಅನಿಲರೂಪದ ರಾಶಿ. ಸೂರ್ಯನು ಶೇ. 71% ರಷ್ಟು ಭಾಗ – ಜಲಜನಕ, 27% ರಷ್ಟು - ಹೀಲಿಯಂಗಳಿಂದ ಕೂಡಿದೆ. ಇದರ ವಸ್ತುರಾಶಿಯು ಭೂಮಿಯ ವಸ್ತು ರಾಶಿಗಿಂತ 3,30,000 ದಷ್ಟು ಹಾಗೂ ಭೂಮಿಯ ತ್ರಿಜ್ಯಕ್ಕಿಂತ 109 ಪಟ್ಟು ಅಧಿಕವಾಗಿದೆ.ಸೂರ್ಯನ ಉಗಮ 4.6 ಬಿಲಿಯನ್ ವರ್ಷಗಳ ಹಿಂದೆ ಎಂದು ಊಹಿಸಲಾಗಿದೆ. ಸೂರ್ಯನು ತನ್ನ ಅಕ್ಷದ ಸುತ್ತಲೂ ಪೂರ್ವದಿಂದ ಪಶ್ಚಿಮಕ್ಕೆ 27 ದಿನಗಳಿಗೊಮ್ಮೆ ಸುತ್ತುತ್ತಾನೆ. ಸೂರ್ಯನು ತನ್ನ ನಕ್ಷತ್ರಪುಂಜದ ಸುತ್ತಲೂ ಸುತ್ತಲು ಸುಮಾರು 250 ಮಿಲಿಯನ್ ವರ್ಷಗಳನ್ನು ತೆಗೆದಕೊಳ್ಳುತ್ತಾನೆ.. ಇದನ್ನು Cosmic Year ಎನ್ನುವರು. ಸೂರ್ಯನನ್ನು 5 ವಲಯಗಳಾಗಿ ವಿಂಗಡಿಸಲಾಗಿದೆ. ಸೂರ್ಯನ ಮಧ್ಯಭಾಗವನ್ನು ಕೇಂದ್ರಗೋಳವೆಂದು ಕರೆಯುತ್ತಾರೆ. ಈ ಭಾಗದಲ್ಲಿ ಅತೀ ಹೆಚ್ಚು ಉಷ್ಣಾಂಶವಿರುವುದು ಸುಮಾರು 20 ಮಿಲಿಯನ್ ಸೆಂಟಿಗ್ರೇಡ್‍ನಷ್ಟಿರುತ್ತದೆ. ಇದರ ಸುತ್ತಲೂ ವಿಕಿಣ ವಲಯ ಮತ್ತು ಪ್ರಚಲನ ವಲಯಗಳಿಂದ ಸುತ್ತುವರಿದಿದೆ. ಇದರ ಮೇಲೆ ಸುತ್ತಲೂ ನಮಗೆ ಕಂಡು ಬರುವ ಬಳೆಯಾಕಾರದ ವಲಯವನ್ನು ಫೋಟೋಸ್ಪಿಯರ್ ಎಂದು ಕರೆಯುತ್ತಾರೆ. ಇದರ ಮೇಲ್ಭಾಗದಲ್ಲಿರುವ ಸೌರವಾಯು ಮಂಡಲವನ್ನು ಕ್ರೋಮೋಸ್ಟಿಯರ್ ಎಂದು ಕರೆಯಲಾಗಿದೆ. ಇಲ್ಲಿನ ತಾಪಮಾನ 6000 ಡಿಗ್ರಿ ಸೆಲ್ಷಿಯಸ್ ಇದು ಸಮಾನ್ಯವಾಗಿ ಸೂರ್ಯ ಮುಳುಗುವಾಗ ಉದಯಿಸುವಾಗ ಕಂಡುಬರುತ್ತದೆ.

ಬುಧ


ಸೂರ್ಯನಿಗೆ ಅತ್ಯಂತ ಸಮೀಪವಾದ ಗ್ರಹ. ಇದಕ್ಕೆ ಯಾವುದೇ ಉಪಗ್ರಹವಿಲ್ಲ. ಸೌರವ್ಯೂಹದ ಅತ್ಯಂತ ಚಿಕ್ಕದಾದ ಗ್ರಹ. ಸೌರವ್ಯೂಹದಲ್ಲಿ ಅತೀ ಉಷ್ಣವೂ, ಅತೀ ಶೀತವೂ ಆದ ಗ್ರಹವಾಗಿದೆ. ಪ್ರತೀ ಗಂಟೆಗೆ 1.70000 ಕಿ.ಮೀ. ವೇಗದಿಂದ ಚಲಿಸುವ ಬುಧ ಗ್ರಹವು ಸೂರ್ಯನನ್ನು ಒಂದು ಸಲ ಪ್ರದಕ್ಷಿಣೆ ಹಾಕಲು 88 ದಿವಸ ತೆಗೆದುಕೊಳ್ಳುವುದು.

ಶುಕ್ರ


ಸೌರವ್ಯೂಹದಲ್ಲಿ ಸೂರ್ಯ ಚಂದ್ರನ ನಂತರ ಪ್ರಕಾಶಮಾನವಾಗಿ ಪ್ರಜ್ವಲಿಸುವ ಗ್ರಹ. ಭೂಮಿಗೆ ಅತ್ಯಂತ ಸಮೀಪದ ಗ್ರಹ. ಶುಕ್ರಗ್ರಹವು ಕೆಲವು ತಿಂಗಳು ಸೂರ್ಯೋದಯದ ಮೊದಲು ಪೂರ್ವದಿಕ್ಕಿನಲ್ಲಿ ಕಾಣಿಸುತ್ತದೆ. ಆಗ ಇದನ್ನು ಬೆಳ್ಳಿಚುಕ್ಕಿ/Morning Star ಎಂದು ಮತ್ತೆ ಕೆಲವು ತಿಂಗಳು ಸೂರ್ಯಾಸ್ತದ ನಂತರ ಪಶ್ಚಿಮದಲ್ಲಿ ಕಾಣಿಸಿಕೊಳ್ಳುತ್ತಾನೆ. ಹಾಗಾಗಿ ಇದಕ್ಕೆ ಸಂಜೆಯ ನಕ್ಷತ್ರ/ Evening Star ಎಂದು ಕರೆಯುತ್ತಾರೆ. ಇದರ ವಾತಾವರಣದ್ಲ್ಲಿ 95%-97% ರಷ್ಟು – ಕಾರ್ಬನ್ ಡೈ ಆಕ್ಸೈಡ್, ನೈಟ್ರೋಜನ್, ಉಳಿದ ಭಾಗ ನೀರಿನ ಭಾಷ್ಪದಿಂದ ಕೂಡಿದ್ದು ಅತ್ಯಂತ ಉಷ್ಣವಾದ ಗ್ರಹವಾಗಿದ್ದು ಜೀವರಾಶಿಗಳ ಅಸ್ತಿತ್ವಕ್ಕೆ ಬಲು ಮಾರಕವಾಗಿದೆ. ಇದರ ಲಕ್ಷಣಗಳು ಭೂಮಿಯನ್ನು ಹೋಲುವುದರಿಂದ ಶುಕ್ರಗ್ರಹವನ್ನು - ಭೂಮಿಯ ಅವಳಿ ಗ್ರಹ ಎನ್ನುವರು. ಇದಕ್ಕೆ ಯಾವುದೇ ಉಪಗ್ರಹಗಳಿಲ್ಲ. ಇದನ್ನು ಸೌಂದರ್ಯ ದೇವತೆ ಗ್ರಹ ಎಂದೂ ಕರೆಯಲಾಗುತ್ತದೆ.

ಭೂಮಿ


ಸೌರವ್ಯೂಹದಲ್ಲಿ ಜೀವ ವಸತಿಯುಳ್ಳ ಏಕೈಕ ಗ್ರಹವಾಗಿದೆ. ಭೂಮಿಗೆ ವಾಯುಮಂಡಲದ ಹೊದಿಕೆಯಿದ್ದು 1600 ಕೀ.ಮೀ. ದೂರ ವ್ಯಾಪಿಸಿದೆ. ಜೀವಿಗಳಿಗೆ ಬದುಕಲು ಅವಶ್ಯಕವಾದ ಆಮ್ಲಜನಕ, ಸಾರಜನಕ, ಮುಖ್ಯವಾಗಿರುವುದರಿಂದ ಈ ಗ್ರಹವು ವಸತಿಗೆ ಮೂಲಕಾರಣವಾಗಿದೆ. ಭೂಮಿಯು ತನ್ನ ಅಕ್ಷದಲ್ಲಿ “ಪಶ್ಚಿಮದಿಂದ - ಪೂರ್ವಕ್ಕೆ” ಪರಿಭ್ರಮಿಸುತ್ತಾ ಸೂರ್ಯನ ಸುತ್ತ ಸುತ್ತುತ್ತದೆ.ಇದು ಏಕೈಕ ಉಪಗ್ರಹ ಚಂದ್ರನನ್ನು ಹೊಂದಿದೆ. ಭೂಮಿಯ ಅಕ್ಷ ಪ್ರದಕ್ಷಿಣೆ ಮತ್ತು ಸೂರ್ಯ ಪ್ರದಕ್ಷಿಣೆ ಕಾಲಾವಧಿ ಬೇರೆ ಬೇರೆಯಾಗಿರುವುದರಿಂದ ಭೂಮಿಯ ಮೇಲೆ ಹಗಲು, ರಾತ್ರಿ ಮತ್ತು ಋತುಮಾನಗಳುಂಟಾಗುತ್ತವೆ. ಇದರ ಅಕ್ಷ ಪ್ರದಕ್ಷಿಣೆಯ ಅವಧಿ 23 ಗಂಟೆ 56 ನಿಮಿಷಗಳಾದರೆ ಸೂರ್ಯ ಪ್ರದಕ್ಷಿಣಾವಧಿ 3651/4 ದಿವಸಗಳಾಗಿರುತ್ತದೆ. ಧ್ರುವ ಪ್ರದೇಶದ ವ್ಯಾಸ – 12713 ಕೀ.ಮೀ. ಸಮಭಾಜಕ ವೃತ್ತದ ವ್ಯಾಸ 12,756 ಕಿ.ಮೀ. ಗಳಾಗಿರುತ್ತದೆ. ಭೂಮಿಗೆ ಸೂರ್ಯನ ಕಿರಣ ತಲುಪಲು ಬೇಕಾದ ಸಮಯ 8 ನಿಮಿಷ.ಭೂಮಿಯನ್ನು ನೀಲಿ ಗ್ರಹವೆಂದು ಕರೆಯುತ್ತಾರೆ.

ಮಂಗಳ


ಅಂಗಾರಕ /ಕುಜ ಗ್ರಹ ಅಥವಾ ಕೆಂಪು ಗ್ರಹ ಎಂದು ಕರೆಯುತ್ತಾರೆ. ಎರಡು ಉಪಗ್ರಹಗಳಿವೆ -(Phobos & Deemos) ಪೋಬೋಸ್ ಮತ್ತು ಡೆಮೋಸ್. ಮಂಗಳನ ವಾತಾವರಣವು ಬಹಳ ವಿರಳವಾಗಿದೆ 0.15% ಆಮ್ಲಜನಕ ಹೊಂದಿದೆ.

ಗುರು


ಬೃಹಸ್ಪತಿ ಎಂದೂ ಕರೆಯುತ್ತಾರೆ. ಸೌರವ್ಯೂಹದಲ್ಲಿ ಅತ್ಯಂತ ದೊಡ್ಡ ಗ್ರಹ ಭೂಮಿಗಿಂತ 1300 ಪಟ್ಟು ದೊಡ್ಡದಾಗಿದೆ. 1610 ರಲ್ಲಿ ಗೆಲಿಲಿಯೋ ಈ ಗ್ರಹ ಕಂಡು ಹಿಡಿದನು. ಇದು 9656 K.m. ದಪ್ಪವಾದ ವಾಯುಮಂಡಲ ಹೊಂದಿದ್ದು ದಟ್ಟವಾದ ಅಮೋನಿಯಾ, ಮಿಥೇನ್, ಜಲಜನಕ, ಮುಂತಾದ ಅನಿಲ ರಾಶಿಗಳನ್ನು ಒಳಗೊಂಡಿದೆ.ಇತ್ತೀಚಿನ ವರದಿ ಪ್ರಕಾರ 63 ಉಪಗ್ರಹ ಹೊಂದಿದ್ದು ಅವುಗಳಲ್ಲಿ ಗ್ಯಾನಿಮೇಡ್ ಎಂಬುದು ಅತಿದೊಡ್ಡ ಉಪಗ್ರಹವಾಗಿದೆ.

ಶನಿ


ಇದು ಅತ್ಯಂತ ಆಕರ್ಷಕ ಗ್ರಹವಾಗಿದ್ದು, ಗಾತ್ರದಲ್ಲಿ 2ನೇ ಸ್ಥಾನದಲ್ಲಿದೆ. ಇದರಲ್ಲಿಯ ಉಂಗುರು ವ್ಯವಸ್ಥೆಯು ಇದನ್ನು ಸುಂದರವನ್ನಾಗಿಸಿದೆ. ಇದು 27ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊಂದಿದ್ದು, ಇದರಲ್ಲಿ ಟೈಟಾನ್ ಉಪಗ್ರಹ ಸೌರಮಂಡಲದ ಅತ್ಯಂತ ದೊಡ್ಡ ಉಪಗ್ರಹವಾಗಿದೆ. ಇದು ಭೂಮಿಗಿಂತ 95 ಪಟ್ಟು ಹೆಚ್ಚು ತೂಕವುಳ್ಳದ್ದಾಗಿದ್ದು, ಸಾಂದ್ರತೆ ಸೌರವ್ಯೂಹದ ಎಲ್ಲಾ ಗ್ರಹಗಳಿಗಿಂತ ಕಡಿಮೆ ಇದೆ. ಇದರ ಸಾಪೇಕ್ಷ ಸಾಂದ್ರತೆ 0.87 ನೀರಿನ ಸಾಂದ್ರತೆಗಿಂತ ಕಡಿಮೆ ಇರುವುದರಿಂದ ಈ ಗ್ರಹವು ನೀರಿನ ಮೇಲೆ ಇಟ್ಟರೂ ಮುಳುಗುವುದಿಲ್ಲ. ಶನಿಯ ಸುತ್ತ ಬಳೆಯಿರುವುದನ್ನು 1656 ಖಗೋಳ ಶಾಸ್ತ್ರಜ್ಞ ಹೇಗಿನ್ಸ್ ಪ್ರಥಮ ಬಾರಿಗೆ ಕಂಡು ಹಿಡಿದ. ನಂತರ 1675 ರಲ್ಲಿ ಖಗೋಳ ಶಾಸ್ತ್ರಜ್ಞ ಕ್ಯಾಸಿನಿ, ಈ 3 ಬಳೆಗಳು ಬಿಡಿಬಿಡಿಯಾಗಿರುವುದನ್ನು ಶೋಧಿಸಿದ. ಆದ್ದರಿಂದ ಈ ಬಳೆಗಳ ಮಧ್ಯದಲ್ಲಿ ಖಾಲಿ ಇದೆ. ಈ ಸ್ಥಾನಕ್ಕೆ “ಕ್ಯಾಸಿನಿ ವಿಚ್ಛನ್ನತೆ (Casini Division) ಎಂದು ಹೆಸರಿಸಲಾಗಿದೆ. ಶನಿಗ್ರಹ ಒಟ್ಟು 7 ಉಂಗುರ ಬಳೆಗಳನ್ನುಹೊಂದಿದೆ.

ಯುರೇನಸ್


1781 ರಲ್ಲಿ ಜರ್ಮನಿಯ ವಿಲಿಯಮ್ ಹರ್ಷಲ್ ಇಂಗ್ಲೇಂಡ್‍ನಲ್ಲಿ ಕಂಡು ಹಿಡಿದನು. 1847 ರಲ್ಲಿ ಇದಕ್ಕೆ ಯುರೇನಸ್ ಹೆಸರನ್ನು ನೀಡಲಾಯಿತು. ಇದರ ವ್ಯಾಸ 51485 k.m. ಇದು ಗಾತ್ರದಲ್ಲಿ ಭೂಮಿಗಿಂತ 15 ಪಟ್ಟು ದೊಡ್ಡದು. ಇದು 27 ಉಪಗ್ರಹಗಳನ್ನು ಹೊಂದಿದ್ದು ಸುಮಾರು 9 ಕಪ್ಪು ಬಣ್ಣದ ಉಂಗುರಗಳನ್ನು ಹೊಂದಿದೆ. ಏರಿಯಲ್, ಟೈಟಾನಿಯಾ, ಓಬೆರಾನ್, ಮಿಲಿಂಡಾ ಪ್ರಮುಖ ಉಪಗ್ರಹಗಳಾಗಿವೆ.

ನೆಪ್ಚ್ಯೂನ್


ಜರ್ಮನಿಯ ಖಗೋಳ ಶಾಸ್ತ್ರಜ್ಞ “ಜೋಹಾನ್ ನಾಲೆ” 1846 ರಲ್ಲಿ ಶೋಧಿಸಿದನು. ಇದಕ್ಕೆ ಗ್ರೀಕ್ ಪುರಾಣಗಳ ಕಥೆಗಳ ಹೆಸರನ್ನಿಡಲಾಗಿದೆ. ನೆಪ್ಚ್ಯೂನ್ ಶನಿಯ ಮಗ ಮತ್ತು ಗುರುವಿನ ಸಹೋದರ. ಗಾತ್ರದಲ್ಲಿ ಯುರೇನಸ್‍ಗಿಂತ ಚಿಕ್ಕದಾಗಿದ್ದು ದ್ರವ್ಯರಾಶಿ ಹೆಚ್ಚಿಗೆ ಹೊಂದಿದೆ. ಇದು ಗಾತ್ರದಲ್ಲಿ ಭೂಮಿಗಿಂತ 17.2 ಪಟ್ಟು ದೊಡ್ಡದಾಗಿದೆ. ನೆಪ್ಚ್ಯೂನ್ 13 ಉಪಗ್ರಹಗಳನ್ನು ಹೊಂದಿದೆ. ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹವಾಗಿದ್ದು 5 ಉಂಗುರ ವ್ಯವಸ್ಥೆಯನ್ನು ಹೊಂದಿದೆ. ಮೀಥೇನ್, ಜಲಜನಕ ಹೀಲಿಯಂಗಳಿಂದ ಆವರಿಸಿದೆ. ಮೀಥೇನ್ ಅನಿಲದಿಂದಾಗಿ ಇದಕ್ಕೆ ನೀಲಿ ಬಣ್ಣ ಬಂದಿದೆ.

ಪ್ಲುಟೋ


1930 ರಲ್ಲಿ ಕ್ಲೈಡ್ ಬಾವತ್ ಎನ್ನುವನು ಶೋಧಿಸಿದನು. 24-08-2006 ರಂದು ಜೆಕ್ ಗಣರಾಜ್ಯದ ರಾಜಧಾನಿಯಾದ ಪ್ರೇಗ್‍ನಲ್ಲಿ ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಅಧಿವೇಶನದಲ್ಲಿ 2500 ಖಗೋಳ ವಿಜ್ಞಾನಿಗಳು ಭಾಗವಹಿಸಿ ವೈಜ್ಞಾನಿಕ ವಿವರಣೆಯೊಂದಿಗೆ ಸೌರವ್ಯೂಹದ ಗ್ರಹಗಳಿಂದ ತೆಗೆದು ಹಾಕಲಾಯಿತು. ಕಾರಣ ಈ ಗ್ರಹ ತೀರ ಚಿಕ್ಕದು, ಅದರ ಕಕ್ಷೆ ಓರೆಯಾಗಿದ್ದು ಸ್ವಯಂ ಗುರುತ್ವ ಶಕ್ತಿಯನ್ನು ಪಡೆದುಕೊಳ್ಳಲು ಅಗತ್ಯ ದ್ರವ್ಯರಾಶಿ ಹೊಂದಿಲ್ಲ. ತನ್ನದೇ ಆದ ಸ್ವಂತ ಪರಿಭ್ರಮಣ ಕಕ್ಷೆ ಇಲ್ಲದಿರುವುದು ಮತ್ತು ಗ್ರಹಗಳಿಗೆ ಇರಬೇಕಾದ ದ್ರವ್ಯರಾಶಿ (3 ಬಿಲಿಯನ್ ಟನ್) ಇಲ್ಲದಿರುವುದು. ಹಾಗಾಗಿ ಇದನ್ನು ಚಿಕ್ಕ ಗ್ರಹಗಳ ಗುಂಪಿಗೆ (dwarf planets) ಸೇರಿಸಲಾಗಿದೆ. ಈಗ ಸೌರಮಂಡಲ ಅಷ್ಟಗ್ರಹಗಳ ಕೂಟವಾಗಿದೆ.