ಭೂಮಿಯ ರಚನೆ ಮತ್ತು ಸಂಯೋಜನೆ
 
ರಾಸಾಯನಿಕ ರಚನೆ
ಭೂಮಿಯ ದ್ರವ್ಯರಾಶಿಯು ಸುಮಾರು ೫.೯೮ × ೧೦೨೪ ಕಿ.ಗ್ರಾಮ್.ಗಳಷ್ಟಿದೆ. ಬಹುತೇಕವಾಗಿ ಇದು ಕಬ್ಬಿಣ (೩೫.೦%), ಆಮ್ಲಜನಕ (೨೮.೦%), ಸಿಲಿಕಾನ್ (೧೭.೦%), ಮೆಗ್ನೀಷಿಯಂ (೧೫.೭%), ನಿಕಲ್ (೧.೫%), ಕ್ಯಾಲ್ಷಿಯಂ (೧.೪%) ಮತ್ತು ಅಲ್ಯುಮಿನಿಯಮ್ (೧.೪%) ಮೂಲವಸ್ತುಗಳಿಂದ ಕೂಡಿದೆ.
ಭೂಮಿಯ ಸಂಯೋಜನೆ
ವಸ್ತುಗಳ ಸಾಂದ್ರತೆ, ರಾಸಾಯನಿಕ ಸಂಯೋಜನೆ ಮತ್ತು ಭೌತದ್ರವ್ಯಗಳ ರೂಪದ ಆಧಾರದ ಮೇಲೆ ಭೂಮಿಯ ಅಂತರಾಳವನ್ನು 3 ಪ್ರಮುಖ ಪದರುಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ-ಭೂಕವಚ, ಮ್ಯಾಂಟಲ್ ಮತ್ತು ಕೇಂದ್ರ ಗೋಳ.
1) ಭೂಕವಚ (Crust)
ಇದು ಭೂಮಿಯ ಅತ್ಯಂತ ಮೇಲ್ಭಾಗದ ಪದರವಾಗಿದೆ. ಇದು ಹೆಚ್ಚಾಗಿ ಸಿಲಿಕ, ಅಲ್ಯೂಮಿನಿಯಂ ಮತ್ತು ಮೆಗ್ನೀಷಿಯಂಗಳಿಂದ ಕೂಡಿದೆ. ಇದನ್ನು ‘ಶಿಲಾಗೋಳ’ ಎನ್ನುವರು. ಭೂ ಮೇಲ್ಭಾಗದಿಂದ ಇದು ಸುಮಾರು 60 ಕಿ.ಮೀ. ಆಳದವರೆಗೆ ವಿಸ್ತರಿಸಿದೆ. ಈ ಪದರದ ಮೇಲ್ಭಾಗವು ಹೆಚ್ಚು ಹಗುರವಾದ ವಸ್ತುಗಳಿಂದ ಕೂಡಿದೆ. ಇವುಗಳಲ್ಲಿ ಸಿಲಿಕ ಮತ್ತು ಅಲ್ಯೂಮಿನಿಯಂಗಳ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ‘ಸಿಯಾಲ್’ (Sial) ಎಂದು ಕರೆಯಲಾಗಿದೆ. ಇದನ್ನು ‘ಭೂಖಂಡಗಳ ಮೇಲ್ಪದರು’ ಎಂದೂ ಸಹ ಕರೆಯುವರು. ಇದರ ಕೆಳಭಾಗವು ಸಿಲಿಕ ಮತ್ತು ಮೆಗ್ನೀಷಿಯಂಗಳಿಂದ ಕೂಡಿದ್ದು, ಹೆಚ್ಚು ಸಾಂದ್ರಯುತವಾಗಿದೆ.
2) ಮ್ಯಾಂಟಲ್
ಇದು ಭೂಮಿಯ ಅಂತರಾಳದ ಎರಡನೆಯ ಹಾಗೂ ಮಧ್ಯಭಾಗದ ಪದರು. ಮ್ಯಾಂಟಲ್ ವಲಯವು ಭೂ ಮೇಲ್ಮೈನಿಂದ ಸುಮಾರು 2900 ಕಿ.ಮಿ.ಗಳ ಆಳದವರೆಗೆ ವಿಸ್ತರಿಸಿದೆ. ಇದರ ಮೇಲ್ಪದರದಲ್ಲಿನ ವಸ್ತಗಳು ಭಾಗಶಃ ದ್ರವ ಮತ್ತು ಘನ ಸ್ಥಿತಿಯಲ್ಲಿರುವುದರಿಂದ ಇದನ್ನು ‘ಶಿಲಾಪಾಕ’(ಮ್ಯಾಗ್ಮಾ) ಎಂದು ಕರೆಯುವರು. ಮ್ಯಾಂಟಲ್ ವಲಯವು ಹೆಚ್ಚು ಸಾಂದ್ರತೆಯುಳ್ಳ ಹಾಗೂ ಕಠಿಣ ಶಿಲಾ ವಸ್ತುಗಳಿಂದ ಕೂಡಿದ್ದು ಪ್ರಮುಖವಾಗಿ ಖನಿಜಗಳನ್ನು ಹೊಂದಿದೆ. ಅವುಗಳೆಂದರೆ ಮೆಗ್ನೀಷಿಯಂ ಮತ್ತು ಕಬ್ಬಿಣ. ಮ್ಯಾಂಟಲ್‍ನಲ್ಲಿ ಎರಡು ಭಾಗಗಳಿವೆ. ಎ) ಮ್ಯಾಂಟಲ್‍ನ ಮೇಲ್ಪದರು ಅಥವಾ ‘ಏಸ್ತೆನೋಸ್ಪಿಯರ್’ ಎನ್ನುವರು. ಇದು ಭಾಗಶಃ ದ್ರವರೂಪದಲ್ಲಿದೆ. ಬಿ) ಮ್ಯಾಂಟಲ್‍ನ ಕೆಳಪದರು ಅಥವಾ `ಮೆಸಾಸ್ಪಿಯರ್’ ಎನ್ನುವರು. ಇದು ಘನರೂಪದಲ್ಲಿರುತ್ತದೆ. ಭೂಕವಚ ಮತ್ತು ಮ್ಯಾಂಟಲ್ ಸಂಧಿಸುವ ಸೀಮಾ ವಲಯವನ್ನು ‘ಮೊಹೊರೋವಿಸಿಕ್’ ಅಥವಾ ‘ಮೋಹೋ’ ವಲಯ ಎನ್ನುವರು. ಅದೇರೀತಿ ಮ್ಯಾಂಟಲ್ ಮತ್ತು ಕೇಂದ್ರಗೋಳವನ್ನು ಬೇರ್ಪಡಿಸುವ ಗಡಿಯನ್ನು ‘ಗುಟೆನ್‍ಬರ್ಗ್ ಸೀಮಾವಲಯ’ ಎನ್ನುವರು. ಇಲ್ಲಿಂದ ಮೇಲೆ ಅಥವಾ ಕೆಳಗೆ ಶಿಲೆಗಳು ವಿವಿಧ ರಾಸಾಯನಿಕ ಸಂಯೋಜನೆಗಳಿಂದ ಕೂಡಿರುತ್ತವೆ.
3) ಕೇಂದ್ರ ಗೋಳ(ಭೂ ತಿರುಳು)
ಇದು ಭೂಮಿಯ ಅತ್ಯಂತ ಒಳಭಾಗ. ಇದು ಭೂಮಿಯ ಮೇಲ್ಮೈನಿಂದ 6,371 ಕಿ.ಮೀ ಆಳದವರೆಗೆ ಇರುವುದು. ಕೇಂದ್ರಗೋಳವು ಪ್ರಧಾನವಾಗಿ ನಿಕ್ಕಲ್ (Ni) ಮತ್ತು ಕಬ್ಬಿಣದ(Fe) ವಸ್ತುಗಳಿಂದ ಕೂಡಿರುವುದು. ಇದರಿಂದ ಕೇಂದ್ರವಲಯವನ್ನು ಸಾಂಕೇತಿಕವಾಗಿ ‘ನಿಫೆ’ (Nife) ಎಂದು ಕರೆಯಲಾಗಿದೆ.