ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ :-

 

ಪ್ರಸ್ತಾವನೆ :


ಪ್ರಕೃತಿಗೂ ಮಾನವನಿಗೂ ಗಾಢ ಸಂಬಂಧವಿದೆ. ಅವನು ಪ್ರಕೃತಿಯಲ್ಲೇ ಹುಟ್ಟಿ, ಪ್ರಕೃತಿಯಲ್ಲೇ ಬದುಕಿ ಬಾಳುತ್ತಾನೆ. ತನಗೆ ಬೇಕಾದ ಎಲ್ಲವನ್ನೂ ಪ್ರಕೃತಿಯಿಂದಲೇ ಪಡೆಯುತ್ತಾನೆ. ಆದ್ದರಿಂದಲೇ ಪ್ರಕೃತಿಯನ್ನು ‘ಪ್ರಕೃತಿ ಮಾತೆ’, ಎಂದು ಕರೆಯುತ್ತಾರೆ. ಆದರೆ ಮಹಾಸ್ವಾರ್ಥಿಯಾದ ಮನುಷ್ಯನಿಂದ ಇಂದು ಗ್ರಾಮ-ನಗರ ಸೇರಿದಂತೆ ಸಂಪೂರ್ಣ ಪರಿಸರ ಮಲಿನವಗಿ, ಮನುಷ್ಯನ ನಾಶ ಸನ್ನಿಹಿತವಗಿದೆ. ಆದ್ದರಿಂದ ಪರಿಸರ ಸಂರಕ್ಷಣೆಯನ್ನು ಮಾಡುವಲ್ಲಿ ಭವಿತವ್ಯದ ನಾರಿಕರಾದ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಬಹುದು.

ವಿಷಯ ನಿರೂಪಣೆ :


ವಿದ್ಯಾರ್ಥಿಗಳು ತಮ್ಮ ಶಾಲೆ, ಮನೆ ಸೇರಿದಂತೆ ಸುತ್ತಲಿನ ಪರಿಸರವು ಮಲಿನವಾಗದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರು ಮತ್ತು ಸಮುದಾಯದ ಸಹಾಯ ಪಡೆದು ವಿದ್ಯಾರ್ಥಿ ಸಂಘಗಳ ಮೂಲಕ ಜಾಥಾ ಹೋಗಿ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸಬೇಕು. ತಮ್ಮ ಶಾಲಾ ಆವರಣದಲ್ಲಿ ಮಾಲಿನ್ಯ ಉಂಟುಮಾಡುವ ಪ್ಲಾಸ್ಟಿಕ್, ಮಲೀನ ನೀರು ಇತ್ಯಾದಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ವಿದ್ಯಾರ್ಥಿಗಳು ಸ್ವತ: ತಾವೇ ಶಾಲೆಗಳಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಬಂಧ, ಭಾಷಣ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ಪರಿಸರ ದಿನಾಚರಣೆಯಂದು ತಮ್ಮ ಮನೆ ಗ್ರಾಮ, ಮತ್ತು ಶಾಲೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು. ವಿದ್ಯಾರ್ಥಿಗಳು ತಮ್ಮ ಊರಿನ ರೈತರಿಗೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರದ ಬದಲಾಗಿ ಸಾವಯವ ಗೊಬ್ಬರ ಬಳಸುವಂತೆ ತಿಳಿಹೆಳಬೇಕು. ವಿದ್ಯಾರ್ಥಿಗಳು ತಮ್ಮ ಗುಂಪಿನ ಮೂಲಕ ಮಾರುಕಟ್ಟೆ ಪ್ರದೇಶಗಳಿಗೆ ಹೋಗಿ ಅಲ್ಲಿನ ವ್ಯಾಪಾರಿಗಳಿಗೆ ಆಹಾರ ಬೆಳೆಗಳು, ಹಣ್ಣು-ತರಕಾರಿಗಳಿಗೆ ರಾಸಾಯನಿಕಗಳನ್ನು ಸಿಂಪಡಿಸದಂತೆ ತಿಳಿಹೇಳಬೇಕು. ವಿದ್ಯಾರ್ಥಿಗಳು ತಮ್ಮ ಹತ್ತಿರದ ಪ್ರದೇಶಗಳಲ್ಲಿರುವ ನದಿ,ನಾಲೆ, ಕೆರೆ, ಬಾವಿಗಳ ಹತ್ತಿರ ನೈರ್ಮಲ್ಯ ಕಾಪಾಡುವ ಸಂದೇಶವನ್ನೊಳಗೊಂಡ ಭಿತ್ತಿಪತ್ರವನ್ನು ಅಂಟಿಸುವ ಮೂಲಕ ಆ ಪ್ರದೇಶಗಳಲ್ಲಿನ ಮಾಲಿನ್ಯವನ್ನು ನಿಯಂತ್ರಿಸುವಂತೆ ಜನರಲ್ಲಿ ಅರಿವನ್ನು ಮೂಡಿಸಬೇಕು. ಅಲ್ಲದೇ ಬೀದಿನಾಟಕಗಳ ಮೂಲಕವು ಸಹ ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಬಹುದು.

ಉಪಸಂಹಾರ :


ಪರಿಸರವೇ ಸೃಷ್ಟಿಯ ಪ್ರತಿಯೊಂದು ಜೀವಿಯ ಆಗರ. ಆದ್ದರಿಂದ ಪರಿಸರವನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗಬೇಕಾದರೆ, ನಾಶವಾಗುತ್ತಿರುವ ಪರಿಸರವನ್ನು ಸಂರಕ್ಷಿಸುವ ಅರಿವನ್ನು ವಿದ್ಯಾರ್ಥಿಗಳಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನೂ ಮಾಡಬೇಕಾದುದೂ ಆದ್ಯ ಕರ್ತವ್ಯವಾಗಿದೆ.
“ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ”