ಮೊಘಲ್ ಸಾಮ್ರಾಜ್ಯ
 
ಸಾ.ಶ. 1526 ರಲ್ಲಿ ಬಾಬರನು ಭಾರತದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ.ದೆಹಲಿ ಇದರ ರಾಜಧಾನಿಯಾಯಿತು.
ಪ್ರಮುಖ ಅರಸರು ಮತ್ತು ಆಡಳಿತಾವಧಿ
1.ಬಾಬರ್ (1526 - 1530)
2.ಹುಮಾಯೂನ್ (1530-1556)
3.ಅಕ್ಬರ್ (1556-1605)
4.ಜಹಾಂಗೀರ್ (1605-1627)
5.ಷಾ ಜಹಾನ್ (1627-1658)
6.ಔರಂಗಜೇಬ್ (1658-1707)
1.ಬಾಬರ್ (1526 - 1530)
• ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಾಬರ್ ಮೂಲತಃ ತುರ್ಕಿಸ್ಥಾನದವನು. ತಂದೆಯ ಮರಣದಿಂದಾಗಿ ಬಾಬರ್ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಫರ್ಗಾನದ ಸಿಂಹಾಸನ ಏರಿದನು.
• ಆದರೆ ಕೆಲವೇ ದಿನಗಳಲ್ಲಿ ಸಂಬಂಧಿಕರು ಹಾಗೂ ಶತ್ರುಗಳ ಪಿತೂರಿಯಿಂದಾಗಿ ರಾಜ್ಯವನ್ನು ಕಳೆದುಕೊಂಡು ಅಲೆಮಾರಿ ಜೀವನ ನಡೆಸುವಂತಾಯಿತು.
• ವಿವಿಧ ಬಗೆಯ ಒತ್ತಡಗಳಿಂದ ಸೃಷ್ಟಿಯಾದ ಸಂದರ್ಭವು ಭಾರತದ ಮೇಲೆ ದಾಳಿ ಮಾಡಲು ಪ್ರೇರಣೆ ನೀಡಿತು. ಬಾಬರನು ಐದು ಬಾರಿ ದಾಳಿ ಮಾಡಿದನು.
• 1526ರಲ್ಲಿ ನಡೆದ ಮೊದಲನೆಯ ಪಾಣಿಪತ್ ಯುದ್ಧದಲ್ಲಿ ದೆಹಲಿ ಸುಲ್ತಾನನಾಗಿದ್ದ ಇಬ್ರಾಹಿಂ ಲೋದಿ ಹಾಗೂ ಆತನ ಆಫ್ಘನ್ ಬೆಂಬಲಿಗರನ್ನು ಸೋಲಿಸಿ ಭಾರತದಲ್ಲಿ ಮೊಘಲರ ಆಳ್ವಿಕೆಗೆ ಅಡಿಪಾಯ ಹಾಕಿದನು. ದೆಹಲಿ ಈತನ ರಾಜಧಾನಿಯಾಯಿತು.ಬಾಬರನು ಪಾಣಿಪತ್, ಕಣ್ವ ಮತ್ತು ಗೋಗ್ರ ಎಂಬ ಮೂರು ಯುದ್ಧಗಳನ್ನು ಗೆಲ್ಲುವ ಮೂಲಕ ಉತ್ತರ ಭಾರತದ ವಿಶಾಲವಾದ ಪ್ರದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ.
2.ಹುಮಾಯೂನ್ (1530-1556)
• ಹುಮಾಯುನನು ಬಾಬರ್ನ ಹಿರಿಯ ಮಗ.
• ಇವನು ಸಾ.ಶ.1530ರಲ್ಲಿ ಅಧಿಕಾರಕ್ಕೆ ಬಂದಾಗ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು.
• ಕಾಲಿಂಜರ್ ಹಾಗೂ ಚುನಾರ್ ಕೋಟೆಗಳ ಮೇಲಿನ ಮುತ್ತಿಗೆಯಲ್ಲಿ ವಿಫಲನಾದರೂ ದೌರಾ, ಜಾನ್ಪುರ, ಮಾಂಡಸರ್ಗಳನ್ನು ವಶಪಡಿಸಿಕೊಂಡನು.
• ಕೊನೆಗೆ ಶೇರ್ ಷಾನಿಂದ ಸೋತ ಹುಮಾಯುನನು ಸಿಂಧ್ ಪ್ರಾಂತ್ಯದಲ್ಲಿ ಆಶ್ರಯ ಪಡೆದು ಶೇರ್ ಷಾನ ಮರಣದ ನಂತರ ಪುನ: ಆಡಳಿತ ನಡೆಸಿದನು.
3.ಅಕ್ಬರ್ (1556-1605)
• ಮೊಘಲ ಅರಸರಲ್ಲಿಯೇ ಪ್ರಸಿದ್ಧ ದೊರೆ ಅಕ್ಬರ್. ಇವನು ಸಿಂಧ್ನ ಅಮರಕೋಟೆಯಲ್ಲಿ ಜನಿಸಿದನು. ಈತನ ತಂದೆ ಹುಮಾಯೂನ್, ತಾಯಿ ಹಮಿದಾಬಾನು ಬೇಗಂ.
• ಅಧಿಕಾರಕ್ಕೆ ಬಂದಾಗ ಅಕ್ಬರ್ನು ಹದಿಮೂರು ವರ್ಷದ ಬಾಲಕ ಆಗಿದ್ದರಿಂದ ಅವನ ಪೋಷಕನಾಗಿದ್ದ ಬೈರಾಮ್ಖಾನ್
• ರಾಜಪ್ರತಿನಿಧಿಯಾಗಿ ಆಳ್ವಿಕೆ ನಡೆಸಿದನು.
• ಅಕ್ಬರ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಂಗಾಳದ ದೊರೆ ಮಹಮ್ಮದ ಷಾ ಮತ್ತು ಅಬ್ದಾಲಿಯ ದಂಡನಾಯಕ ಹೇಮು ಮೊಘಲರನ್ನು ವಿರೋಧಿಸತೊಡಗಿದನು. ಅಲ್ಲದೆ ದೆಹಲಿ ಹಾಗೂ ಆಗ್ರಾವನ್ನು ವಶಪಡಿಸಿಕೊಂಡನು. ಹೀಗಾಗಿ ಹೇಮು
• ಮತ್ತು ಅಕ್ಬರನ ನಡುವೆ ಸಾ.ಶ 1556ರಲ್ಲಿ 2ನೇ ಪಾಣಿಪತ್ ಯುದ್ಧ ಸಂಭವಿಸಿತು. ಈ ಯುದ್ಧದಲ್ಲಿ ಬೈರಾಮ್ಖಾನನ ನೆರವಿನಿಂದ ಅಕ್ಬರ್ನಿಗೆ ಗೆಲುವು ಲಭಿಸಿತು.
• ಅಕ್ಬರ್ ಸ್ವತಂತ್ರವಾಗಿ ಮಾಳ್ವ, ಚುನಾರ್, ಜೈಪುರ, ಗೊಂಡವಾನ, ಚಿತ್ತೋರ್, ರಣಥಂಬೋರ್, ಕಾಲಿಂಜರ್, ಗುಜರಾತ್ಗಳನ್ನು
• ವಶಪಡಿಸಿಕೊಂಡನು.
• ಈ ಯುದ್ಧಗಳಲ್ಲಿಯೇ ಹಳದಿಘಾಟ್ ಕದನ ಮಹತ್ವದ್ದು. ಚಿತ್ತೋರ್ನ ಅರಸ ರಾಣಾಪ್ರತಾಪಸಿಂಗ್ ಮತ್ತು ಅಕ್ಬರ್ ನಡುವೆ ನಡೆಯಿತು. ಅಕ್ಬರ್ ತನ್ನ ದಂಡನಾಯಕರಾದ ಮಾನ್ಸಿಂಗ್ ಮತ್ತು ಅಸಫ್ಖಾನರ ನೇತೃತ್ವದಲ್ಲಿ ಸೈನ್ಯವನ್ನು ಪ್ರತಾಪಸಿಂಗ್ನ ವಿರುದ್ಧ ಕಳಿಸಿದನು. ಎರಡೂ ಸೈನ್ಯಗಳ ನಡುವೆ ಹಳದಿಘಾಟ್ ಎಂಬಲ್ಲಿ ನಡೆದ ಯುದ್ಧದಲ್ಲಿ ಅಕ್ಬರನ ಸೈನ್ಯ ಜಯಗಳಿಸಿತು. ನಂತರದಲ್ಲಿ ಬಿಹಾರ, ಬಂಗಾಳ, ಕಾಬೂಲ್, ಕಾಶ್ಮೀರ, ಸಿಂಧ್, ಒರಿಸ್ಸಾ, ಬಲೂಚಿಸ್ತಾನ, ಕಾಂದಹಾರ್ ಹಾಗೂ ಅಹಮದ್ನಗರಗಳನ್ನು ಅಕ್ಬರನು ಯಶಸ್ವಿಯಾಗಿ ವಶಪಡಿಸಿಕೊಂಡು, ಮೊಘಲರು ಮಧ್ಯಯುಗದ ಭಾರತದಲ್ಲಿ ಬೃಹತ್ ಸಾಮ್ರಾಜ್ಯ ಶಕ್ತಿಯಾಗಿ ಬೆಳೆಯಲು ಧೃಡವಾದ ತಳಹದಿಯನ್ನು ನಿರ್ಮಿಸಿದನು.
• ಅಕ್ಬರನು ಸರ್ವಧರ್ಮ ಸಹಿಷ್ಣುಕನಾಗಿದ್ದನು.ಎಲ್ಲ ಧರ್ಮಗಳಿಗೆ ಸಮಾನವಾದ ಪ್ರಾತಿನಿಧ್ಯವನ್ನು ಕೊಡುತ್ತಿದ್ದನು. ಹಿಂದೂಗಳ ಮೇಲಿನ ಜೆಸಿಯಾ ತಲೆಗಂದಾಯವನ್ನು ರದ್ದುಪಡಿಸಿದನು. ಹಿಂದೂ ಧರ್ಮ ಗ್ರಂಥಗಳನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದನು.ಆಸ್ಥಾನದಲ್ಲಿ ದೀಪಾವಳಿ ಹಾಗೂ ಶಿವರಾತ್ರಿ ಮುಂತಾದ ಹಬ್ಬಗಳ ಆಚರಣೆಗೂ ಆದೇಶ ನೀಡಿದನು.
• ಅಕ್ಬರನು 1582ರಲ್ಲಿ ದೀನ್-ಇ-ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು. ಎಲ್ಲ ಧರ್ಮಗಳ ಉತ್ತಮಾಂಶಗಳು ಇದರಲ್ಲಿ ಸೇರಿದ್ದವು.
• ಆಡಳಿತದ ಅನುಕೂಲಕ್ಕಾಗಿ ಅಕ್ಬರ್ ತನ್ನ ರಾಜ್ಯವನ್ನು ಕೇಂದ್ರ ಸರ್ಕಾರ, ಪ್ರಾಂತೀಯ ಸರ್ಕಾರ ಹಾಗೂ ಪರಗಣಗಳೆಂದು ವಿಂಗಡಿಸಿದ್ದನು. ಅಕ್ಬರನು ಅರಸ, ಸೈನ್ಯದ ದಂಡನಾಯಕ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಮುಖ್ಯಸ್ಥನೂ ಆಗಿದ್ದನು. ಅರಸನಿಗೆ ಆಡಳಿತದಲ್ಲಿ ನೆರವು ನೀಡಲು ವಕೀಲ್, ಮೀರ್ ಭಕ್ಷಿ, ಮುಖ್ಯ ಸದರ್, ಮುಖ್ಯ ಖಾಜಿ, ಮುಹ್ತಸೀಬ್ ಎಂಬ ಪ್ರಮುಖ ಮಂತ್ರಿಗಳಿದ್ದರು.
• ಸಾಮ್ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಅವುಗಳನ್ನು ಸುಭಾಗಳೆಂದು ಕರೆಯುತ್ತಿದ್ದರು.ಇವುಗಳ ರಾಜಕೀಯ ಹಾಗೂ ಮಿಲಿಟರಿ ಕಾರ್ಯಗಳನ್ನು ಸುಭೇದಾರ ನೋಡಿಕೊಳ್ಳುತ್ತಿದ್ದನು.
• ಪೊಲೀಸ್ (ಕೊತ್ವಾಲ) ವ್ಯವಸ್ಥೆ ಸುವ್ಯವಸ್ಥಿತವಾಗಿತ್ತು. ಪರಗಣಗಳಲ್ಲಿ ಪೊಲೀಸ್ ಠಾಣೆಗಳನ್ನು ತೆರೆಯುವ ಮೂಲಕ ಬಿಗಿ ಭದ್ರತೆಯನ್ನು ಒದಗಿಸಿದ್ದು ಅಕ್ಬರನ ವಿಶೇಷ.
ಅಕ್ಬರನ ಆಸ್ಥಾನದಲ್ಲಿನ ನವರತ್ನಗಳು
1) ಅಬುಲ್ ಫಝಲ್ - ಅಕ್ಬರನ ಮುಖ್ಯ ಸಲಹೆಗಾರ ಮತ್ತು ಅಕ್ಬರನ ಜೀವನಚರಿತ್ರೆಯಾದ ಅಕ್ಬರ್ ನಾಮಾದ ಲೇಖಕ
2) ಫೈಜಿ
3) ತಾನ್ ಸೇನ್ - ಕಂಠ ಮತ್ತು ಸಂಗೀತಕ್ಕೆ ಪ್ರಖ್ಯಾತ
4) ಬೀರಬಲ್ - ತೀಕ್ಷ್ಣ ಬುದ್ಧಿಗೆ ಪ್ರಖ್ಯಾತ
5) ರಾಜಾ ತೋದರ್ ಮಲ್
6) ರಾಜಾ ಮಾನ್ ಸಿಂಗ್
7) ಅಬ್ದುಲ್ ರಹೀಂ ಖಾನ್-ಇ-ಖಾನಾ
8) ಫಕೀರ್ ಅಝಿಯಾಓದಿನ್
9) ಮುಲ್ಲಾ ದೋಪ್ಯಾಝಾ
4.ಜಹಾಂಗೀರ್ (1605-1627)
• ಭಾರತದ ನಾಲ್ಕನೆಯ ಮೊಘಲ್ ಚಕ್ರವರ್ತಿ. ಇವನ ಮೂಲ ಹೆಸರು ಮಿರ್ಜಾ ನೂರ್ ಉದ್ದೀನ್ ಬೇಗ್ ಮೊಹಮ್ಮದ್ಖಾನ್ ಸಲೀಂ. ಅಕ್ಬರನ ಮಗ.
• ಅಕ್ಬರ ಬದುಕಿದ್ದಾಗಲೇ, 1601-1604ರಲ್ಲಿ, ಜಹಾಂಗೀರ್ ಅಕ್ಬರ ವಿರುದ್ಧ ದಂಗೆ ಎದ್ದಿದ್ದರೂ ಅಕ್ಬರ ಇವನನ್ನು ಕ್ಷಮಿಸಿದ್ದ. 1605 ರಲ್ಲಿ ಅಕ್ಬರ್ ನಿಧನ ಹೊಂದಿದ ನಂತರ ಸಿಂಹಾಸನಾರೂಢನಾದ.
• ಆಳ್ವಿಕೆಯ ಆರಂಭದಲ್ಲೆ ಇವನು ಮಗ ಖುಸ್ರುವಿನ ದಂಗೆಯನ್ನು ಎದುರಿಸಬೇಕಾಯಿತು. ಆದರೆ ಜಹಾಂಗೀರ್ ಆತನನ್ನು ಸೋಲಿಸಿ ಸೆರೆಹಿಡಿದು, ಆತನ ಅನುಯಾಯಿಗಳಿಗೆ ಮರಣದಂಡನೆ ವಿಧಿಸಿದ. ಖುಸ್ರು 1622ರಲ್ಲಿ ಕಾರಾಗೃಹದಲ್ಲೇ ನಿಧನ ಹೊಂದಿದ.
• ಮಗನ ವಿರುದ್ಧ ನಡೆಸಿದ ಕಾರ್ಯಾಚರಣೆಗಳ ಅಂಗವಾಗಿ ಸಿಕ್ಖರ ಐದನೆಯ ಗುರು ಅರ್ಜುನನನ್ನು ಜಹಾಂಗೀರ್ ಗಲ್ಲಿಗೇರಿಸಿದಾಗ ಸಿಖ್ ಜನತೆ ಜಹಾಂಗೀರನ ವಿರುದ್ಧ ದಂಗೆಯೇಳುವ ಪರಿಸ್ಥಿತಿ ಉಂಟಾಯಿತು.
5.ಷಾ ಜಹಾನ್ (1627-1658)
• ಜಹಾಂಗೀರ್ ನಂತರ ಮಗನಾದ ಷಾ ಜಹಾನ್ ಅಧಿಕಾರಕ್ಕೆ ಬಂದನು.
• ಸಾ.ಶ.1632ರಲ್ಲಿ ಪೋರ್ಚುಗೀಸರನ್ನು ಸೋಲಿಸಿ ಹೂಗ್ಲಿಯನ್ನು ವಶಪಡಿಸಿಕೊಂಡನು. ಅಹಮದ್ನಗರವನ್ನು ತನ್ನ ಅಧೀನಕ್ಕೆ ತೆಗೆದುಕೊಂಡನು.
• ಭೂಮಿಯ ಫಲವತ್ತತೆಗೆ ಅನುಗುಣವಾಗಿ ಕಂದಾಯವನ್ನು ನಿಗದಿಪಡಿಸಿದನು.
• ದೆಹಲಿಯ ಕೆಂಪುಕೋಟೆ, ಆಗ್ರಾದ ತಾಜಮಹಲ್ ಹಾಗೂ ಇನ್ನಿತರೆ ಕಟ್ಟಡಗಳು ಇವನ ಮಹತ್ವದ ಕೊಡುಗೆಗಳಾಗಿವೆ. ಮೊಘಲರ ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಪ್ರೋತ್ಸಾಹದಿಂದಾಗಿ ಇವನ ಅವಧಿಯನ್ನು ‘ಸುವರ್ಣಯುಗ’ವೆಂದು ಕರೆಯಲಾಗಿದೆ.
6.ಔರಂಗಜೇಬ್ (1658-1707)
• ತಂದೆ ಷಾ ಜಹಾನ್ನನ್ನು ಬಂಧನದಲ್ಲಿಟ್ಟು ‘ಅಲಂಗೀರ್’ ಎಂಬ ಬಿರುದಿನೊಂದಿಗೆ ಔರಂಗಜೇಬನು ಸಿಂಹಾಸನ ಏರಿದನು.
• ಇವನ ಆಡಳಿತದ ವಿರುದ್ಧ ಈಶಾನ್ಯ ಭಾಗದಲ್ಲಿ ಅಹೋಮರು, ವಾಯುವ್ಯದಲ್ಲಿ ಯೂಸಫ್ಪಾಯಿಗಳು ದಂಗೆ ಎದ್ದಾಗ ಅವುಗಳನ್ನು ತಾತ್ಕಾಲಿಕವಾಗಿ ಅಡಗಿಸಿದನು. ಮರಾಠ ದೊರೆ ಶಿವಾಜಿಯನ್ನು ಅವಮಾನಗೊಳಿಸಿ, ಬಂಧಿಸಿದ್ದು ಮುಂದೆ ಮೊಘಲರ ವಿರುದ್ಧ ದಾಳಿಗಳನ್ನು ನಡೆಸಲು ಕಾರಣವಾಯಿತು.
• ಬಿಜಾಪುರದ ಆದಿಲ್ಶಾಹಿ ಹಾಗೂ ಗೋಲ್ಕಂಡದ ನಿಜಾಮ್ಶಾಹಿಗಳೊಂದಿಗೆ ಕಾದಾಡಿ ಅವುಗಳನ್ನು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದ.
• ಕೊನೆಯಲ್ಲಿ ಪ್ರಬಲ ಶಕ್ತಿಯಾಗಿದ್ದ ರಜಪೂತರ ಜೊತೆಗಿನ ಇವನ ವೈರತ್ವದಿಂದ ಮೊಘಲರ ಅವನತಿ ಪ್ರಾರಂಭವಾಯಿತು.
• ಔರಂಗಜೇಬನು ಕುರಾನಿನ ತತ್ವಗಳನ್ನು ಕಟ್ಟುನಿಟ್ಟಾಗಿ ಆಚರಣೆಗೆ ತರಲು ಪ್ರಯತ್ನಿಸಿದನು. ಇವನ ಕಾಲದಲ್ಲಿ ಹಲವು ಪ್ರಸಿದ್ಧ ಹಿಂದೂ ದೇವಾಲಯಗಳು ನಾಶವಾದವು.
• ಸತಿ ಆಚರಣೆ, ಸಂಗೀತ ಕಚೇರಿ, ಮೆರವಣಿಗೆ, ಜೂಜಾಟ, ಮದ್ಯಪಾನ ಹಾಗೂ ಗಾಂಜಾ ಉತ್ಪನ್ನಗಳನ್ನು ಉಪಯೋಗಿಸುವುದನ್ನು
• ನಿಷೇದಿಸಿದನು.
• ಇವನನ್ನು ಜಿಂದಾ ಫಕೀರ್ ಅಥವಾ ಜೀವಂತ ಫಕೀರ ಎಂದು ಕರೆಯುತ್ತಿದ್ದರು.
ಮೊಘಲರ ಕೊಡುಗೆಗಳು
ಆಡಳಿತ : ಮೊಘಲರ ಆಡಳಿತವು ವಂಶಪಾರಂಪರ್ಯವಾಗಿತ್ತು. ಕೇಂದ್ರೀಕೃತ ನಿರಂಕುಶ ಪ್ರಭುತ್ವವಾಗಿದ್ದು, ರಾಜನು ಹೆಚ್ಚಿನ ಅಧಿಕಾರವನ್ನು ಪಡೆದಿದ್ದನು. ತಮ್ಮನ್ನು ಸಾಮ್ರಾಟರೆಂದು ಪರಿಗಣಿಸಿ ‘ಬಾದಶಹ’ ಎಂಬ ಬಿರುದು ಪಡೆದಿದ್ದರು. ಸುಲ್ತಾನನು ಸರ್ಕಾರದ ಮುಖ್ಯಸ್ಥ, ದಂಡನಾಯಕ ಹಾಗೂ ನ್ಯಾಯಾಂಗದ ಮುಖ್ಯಸ್ಥನಾಗಿದ್ದನು. ಈತನಿಗೆ ಆಡಳಿತದಲ್ಲಿ ಸಲಹೆ ನೀಡಲು ಮಂತ್ರಿಗಳು ಹಾಗೂ ಅಧಿಕಾರಿಗಳಿದ್ದರು. ಪರ್ಶಿಯನ್ ಭಾಷೆ ಆಡಳಿತ ಭಾಷೆಯಾಗಿತ್ತು. ಸಾಮ್ರಾಜ್ಯವನ್ನು ಪ್ರಾಂತ, ಸರ್ಕಾರ್ ಹಾಗೂ ಪರಗಣಗಳೆಂದು ವಿಂಗಡಿಸಲಾಗಿತ್ತು.
ಕಂದಾಯ ವ್ಯವಸ್ಥೆ : ಮೊಘಲ್ ಸಾಮ್ರಾಜ್ಯದಲ್ಲಿ ಕೃಷಿ ಕಂದಾಯದ ಮೂಲವಾಗಿದ್ದು, ಭೂಮಿಯ ಫಲವತ್ತತೆಯನ್ನು ಆಧರಿಸಿ ಭೂಕಂದಾಯವನ್ನು ಸಂಗ್ರಹಿಸಲಾಗುತ್ತಿತ್ತು. ಭೂಮಿಯ ಉತ್ಪನ್ನದ 1/3 ಭಾಗವನ್ನು ನಗದು ಅಥವಾ ದವಸಧಾನ್ಯಗಳ ರೂಪದಲ್ಲಿ ಕಂದಾಯ ಸಲ್ಲಿಕೆಯಾಗುತ್ತಿತ್ತು.
ಸಾಹಿತ್ಯ : ಮೊಘಲರ ಕಾಲದಲ್ಲಿ ಪರ್ಶಿಯನ್, ಅರೆಬಿಕ್, ತುರ್ಕಿ, ಉರ್ದು, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಕೃತಿಗಳು ರಚನೆಯಾದವು. ಬಾಬರ್ ಹಾಗೂ ಜಹಂಗೀರ್ ಸ್ವತಃ ವಿದ್ವಾಂಸರಾಗಿದ್ದು ತಮ್ಮ ಆತ್ಮಕಥನಗಳಾದ `ಬಾಬರ್ನಾಮಾ’ ಹಾಗೂ ‘ತುಜಿಕಿ-ಇ-ಜಹಂಗೀರ್’ಗಳನ್ನು ರಚಿಸಿದರು. ಹುಮಾಯೂನ್ ಕೂಡ ಲೇಖಕನಾಗಿದ್ದನು. ಅಕ್ಬರನ ಆಸ್ಥಾನದಲ್ಲಿ ಅಬುಲ್ ಫಜಲ್ನು ‘ಐನ್-ಇ-ಅಕ್ಬರಿ’, ‘ಅಕ್ಬರ್ ನಾಮಾ’ ಕೃತಿಗಳನ್ನು ಪರ್ಶಿಯನ್ ಭಾಷೆಯಲ್ಲಿ ರಚಿಸಿದನು. ಬದೌನಿಯು ರಾಮಾಯಣ, ಫೈಜಿಯು ಲೀಲಾವತಿ ಎಂಬ ಗ್ರಂಥ, ತೋದರಮಲ್ಲನು ಭಾಗವತ ಪುರಾಣವನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದರು. ತುಳಸಿದಾಸರ-ರಾಮಚರಿತ ಮಾನಸ, ಸೂರದಾಸರ-ಸೂರ್ಸಾಗರ್ ಹಿಂದಿ ಭಾಷೆಯಲ್ಲಿ ರಚಿತವಾದ ಮಹತ್ವದ ಕೃತಿಗಳು.
ಕಲೆ ಮತ್ತು ವಾಸ್ತುಶಿಲ್ಪ : ಮೊಘಲರ ಕಾಲದಲ್ಲಿ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಕೊಡುಗೆ ನೀಡಿದವರಲ್ಲಿ ಅಕ್ಬರ್ ಹಾಗೂ ಷ ಜಹಾನ್ ಪ್ರಮುಖರು. ಇವರು ನಿರ್ಮಿಸಿರುವ ಸ್ಮಾರಕಗಳು ಫತೇಫುರ್ ಸಿಕ್ರಿ, ಆಗ್ರಾ ಹಾಗೂ ದೆಹಲಿಯಲ್ಲಿವೆ. ಅಕ್ಬರನ ಅವಧಿಯಲ್ಲಿ ಇಂಡೋ-ಪರ್ಶಿಯನ್ ಶೈಲಿಯ ಸಮ್ಮಿಶ್ರಣವಿದೆ. ಪ್ರಸಿದ್ಧ ಅರಮನೆಗಳಾದ ಅಕ್ಬರಿ ಮಹಲ್, ಜಹಾಂಗಿರಿ ಮಹಲ್, ಫತೇಪುರ್ ಸಿಕ್ರಿ(ವಿಜಯದ ನಗರ)ಯಲ್ಲಿ ಪಂಚಮಹಲ್, ಜೋದಾಬಾಯಿ ಮಹಲ್, ಬೀರ್ಬಲ್ ಮಹಲ್, ಇಬಾದತ್-ಖಾನಾ, ಜಾಮಿ ಮಸೀದಿ, ಬುಲಂದ್ದರ್ವಾಜ್ ಇವನ ಕಾಲದ ಮಹತ್ವದ ಕೊಡುಗೆಗಳು. ಷ ಜಹಾನನ ಕಾಲದಲ್ಲಿ ದೆಹಲಿಯಲ್ಲಿ ಕೆಂಪುಕೋಟೆ, ಮೋತಿ ಮಸೀದಿ, ದಿವಾನ್-ಇ-ಆಮ್, ದಿವಾನ್-ಇ ಖಾಸ್, ರಂಗಮಹಲ್, ಖಾಸ್ ಮಹಲ್, ಮಮತಾಜ್ ಮಹಲ್ ಮುಂತಾದ ಕಟ್ಟಡ ಗಳನ್ನು ನಿರ್ಮಿಸಲಾಯಿತು. ಮಯೂರ ಸಿಂಹಾಸನದ ತಯಾರಿಕೆ , ದೇಶದ ಅತ್ಯಂತ ದೊಡ್ಡದಾದ ಜಾಮಿಯಾ ಮಸೀದಿ ಇವನ ಕಾಲದ ಕೊಡುಗೆಗಳು.