ವಿಜಯನಗರ ಸಾಮ್ರಾಜ್ಯ
 
ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಒಂದು ಮಹತ್ವದ ಘಟನೆ. ದಕ್ಷಿಣ ಭಾರತದ ರಾಜಮನೆತನಗಳಾಗಿದ್ದ ದೇವಗಿರಿಯ ಯಾದವರು, ವಾರಂಗಲ್ಲಿನ ಕಾಕತೀಯರು, ಮಧುರೆಯ ಪಾಂಡ್ಯರು, ದ್ವಾರಸಮುದ್ರದ (ಹಳೇಬೀಡು) ಹೊಯ್ಸಳರು ಮತ್ತು ತಂಜಾವೂರಿನ ಚೋಳರು ಅಲ್ಲಾವುದ್ದೀನ್ ಖಿಲ್ಜಿಯ
ಭೀಕರ ದಾಳಿಗೆ ತುತ್ತಾದರು. ಇದರ ಪರಿಣಾಮವಾಗಿ ರಾಜಕೀಯ ಅಭದ್ರತೆ, ಅಸ್ಥಿರತೆ, ಕ್ಷೋಭೆ, ಭಯ ಮತ್ತು ಧಾರ್ಮಿಕ ವಿಪ್ಲವ ಕಾಣಿಸಿಕೊಂಡವು. ಈ ಸನ್ನಿವೇಶದಲ್ಲಿ ವಿಜಯನಗರ ಸಾಮ್ರಾಜ್ಯ ಉದಯವಾಯಿತು. ಮೂರು ಶತಮಾನಗಳ ಕಾಲ ಆಳ್ವಿಕೆ ನಡೆಸಿತು. ಈ ಸಾಮ್ರಾಜ್ಯ 15ನೆಯ ಶತಮಾನದ ವೇಳೆಗೆ ದಕ್ಷಿಣದಲ್ಲಿ
ಹಿಂದೂ ಮಹಾಸಾಗರ, ಪೂರ್ವದಲ್ಲಿ ಬಂಗಾಳ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದವರೆಗೆ ಭೂ ಭಾಗಗಳಿಲ್ಲಿದ್ದ ರಾಜ್ಯಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು.
ಸ್ಥಾಪನೆ
ಹಕ್ಕ-ಬುಕ್ಕರು ಸಾ.ಶ. 1336ರಲ್ಲಿ ತುಂಗಭದ್ರಾ ನದಿಯ ದಕ್ಷಿಣ ದಡದ ಮೇಲೆ ಈ ರಾಜ್ಯವನ್ನು ಸ್ಥಾಪಿಸಿದರು. ಮುಂದೆ ಹಂಪೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಯಿತು.
ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜ ಮನೆತನಗಳು
1. ಸಂಗಮವಂಶ : (ಕ್ರಿ.ಶ 1336-1485)
ಪ್ರಥಮ ಅರಸ : ಹರಿಹರ (ಕ್ರಿ.ಶ 136-1356)
ಕೊನೆಯ ಅರಸ : ವಿರೂಪಾಕ್ಷ (ಕ್ರಿ,ಶ 1485)
2. ಸಾಳುದ ವಂಶ: (ಕ್ರಿ.ಶ 1485-1505)
ಪ್ರಥಮ ಅರಸ : ಸಾಳುವ ನರಸಿಂಹ (ಕ್ರಿ.ಶ 1485-91)
ಕೊನೆಯ ಅರಸ : ಎರಡನೇ ನರದಿಂಹ (ಕ್ರಿ.ಶ 1491-1505)
3. ತುಳುವ ವಂಶ : (ಕ್ರಿ.ಶ 1505-1565)
ಪ್ರಥಮ ಅರಸ : ನರಸನಾಯಕ (ಕ್ರಿ.ಶ 150309)
ಕೊನೆಯ ಅರಸ : ಸದಾಶಿವರಾಯ (ಕ್ರಿ.ಶ 1542-70)
ಪ್ರಸಿದ್ಧ ರಾಜ : ಶ್ರೀ. ಕೃಷ್ಣದೇವರಾಯ (ಕ್ರಿ.ಶ. 1509-29)
4. ಅರವೀಡು ವಂಶ : (ಕ್ರಿ.ಶ 1565-1646)
ಪ್ರಥಮ ಅರಸ : ತಿರುಮಲರಾಯ (ಕ್ರಿ.ಶ 1565-72)
ಕೊನೆಯ ಅರಸ : ಮೂರನೆಯ ಶ್ರೀರಂಗರಾಯ (ಕ್ರಿ.ಶ 1642-46)
ಸಂಗಮ ವಂಶದ (ಸಾ.ಶ.1336-1486) ಪ್ರಸಿದ್ಧ ದೊರೆಗಳೆಂದರೆ ಒಂದನೆಯ ಹರಿಹರ, ಬುಕ್ಕರಾಯ,
ಎರಡನೆಯ ಹರಿಹರ ಮತ್ತು ಪ್ರೌಢದೇವರಾಯ. ಒಂದನೇ ಹರಿಹರ ವಿಜಯನಗರ ರಾಜ್ಯಕ್ಕೆ ಅಸ್ತಿಭಾರ ಹಾಕಿ
ಕಡಿದಾದ ಬೆಟ್ಟಗಳ ನಡುವಣ ಪ್ರದೇಶದಲ್ಲಿ ಹೊಸ ರಾಜಧಾನಿಯನ್ನು ಅಭಿವೃದ್ಧಿಪಡಿಸಿದನು.
ಬುಕ್ಕರಾಯ
ಮಧುರೈಯ ಸುಲ್ತಾನನನ್ನು ಪದಚ್ಯುತಗೊಳಿಸಿ ಬುಕ್ಕನ ಪುತ್ರ ಕಂಪಣನು ಸಾಮ್ರಾಜ್ಯವನ್ನು ವಿಸ್ತರಿಸಿದನು. ಈ ದಿಗ್ವಿಜಯದ ಬಗ್ಗೆ ಗಂಗಾದೇವಿ ಬರೆದ ‘ಮಧುರಾವಿಜಯಂ’ ಸಂಸ್ಕೃತ ಕೃತಿಯು ಹೆಚ್ಚಿನ ವಿವರಣೆ ನೀಡುತ್ತದೆ. ಕೊಂಡವೀಡಿನ ರೆಡ್ಡಿಗಳನ್ನು ಸೋಲಿಸಿ ಪೆನುಗೊಂಡೆ ಪ್ರದೇಶವನ್ನು ಬುಕ್ಕನು ವಿಜಯನಗರಕ್ಕೆ
ಸೇರಿಸಿದನು. ಬುಕ್ಕನು ಜೈನರ ಮತ್ತು ಶ್ರೀವೈಷ್ಣವರ ನಡುವಿನ ಧಾರ್ಮಿಕ ಕಲಹವನ್ನು ಬಗೆಹರಿಸಿ ಸರ್ವಮತ ಸಮನ್ವಯತೆಯ ನೀತಿಯನ್ನು ಎತ್ತಿ ಹಿಡಿದನೆಂದು ಶ್ರವಣಬೆಳಗೊಳದ ಶಾಸನ ತಿಳಿಸುತ್ತದೆ. ರಾಜಧಾನಿಯಲ್ಲಿ ಕೋಟೆಯನ್ನು ಕಟ್ಟಿಸಿ, ದೇವಾಲಯಗಳನ್ನು ನಿರ್ಮಿಸಿ, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದನು.ಚೀನಾ ದೇಶದ ಮಿಂಗ್ ವಂಶದ ಸಾಮ್ರಾಟನ ಆಸ್ಥಾನಕ್ಕೆ ಬುಕ್ಕರಾಯ ರಾಯಭಾರಿಯನ್ನು ಕಳುಹಿಸಿದ್ದನು.
ಎರಡನೆಯ ಹರಿಹರ
ಬುಕ್ಕರಾಯನ ಮಗನಾದ ಎರಡನೆಯ ಹರಿಹರನ 27 ವರ್ಷಗಳ ಆಡಳಿತದ ಅವಧಿಯಲ್ಲಿ ವಿಜಯನಗರವು ವಿಶಾಲ ಪ್ರದೇಶಗಳನ್ನು ಒಳಗೊಂಡಿತ್ತು. ಈತನು ಕೊಂಡವೀಡು, ಕರ್ನೂಲ್, ನೆಲ್ಲೂರು ಮತ್ತು ಕೋಟೆಗಳನ್ನು ಗೆದ್ದುಕೊಂಡನು.ಬಹಮನಿಯ ಸುಲ್ತಾನ ಮುಜಾಹಿದ್ ತೀರಿಕೊಂಡ ಕಾಲದಲ್ಲಿ ಈತನು ರಾಜ್ಯವನ್ನು ಗೋವೆಯಿಂದ ಕೊಂಕಣ ಕರಾವಳಿಯ ಉತ್ತರಕ್ಕೆ ವಿಸ್ತರಿಸಿದ. ಕೃಷ್ಣೆಯ ಉತ್ತರದ ಪಾಂಗಳ ಕೋಟೆಯನ್ನು 1398 ರಲ್ಲಿ ವಶಪಡಿಸಿಕೊಂಡನು.
ಎರಡನೆಯ ದೇವರಾಯ (ಪ್ರೌಢದೇವರಾಯ)
ಇವನಿಗೆ ಪ್ರತಾಪರುದ್ರ ಎನ್ನುವ ಮತ್ತೊಂದು ಹೆಸರೂ ಇತ್ತು. ಸಂಗಮ ವಂಶದಲ್ಲಿಯೇ ಶ್ರೇಷ್ಠ ದೊರೆ ಎರಡನೆಯ ದೇವರಾಯ (ಪ್ರೌಢದೇವರಾಯ). ಈತ ‘ಗಜ ಬೇಂಟೆಕಾರ’ ಎಂಬ ಬಿರುದು ಸಹ ಧರಿಸಿದ್ದ. ಎರಡನೆಯ ದೇವರಾಯನು ಒರಿಸ್ಸಾದ ಗಜಪತಿ ಕಪಿಲೇಂದ್ರನನ್ನು ಸೋಲಿಸಿ ಕೊಂಡವೀಡನ್ನು ಗೆದ್ದುಕೊಂಡನು. ಗಡಿ ಪ್ರದೇಶದ ನಾಯಕರುಗಳನ್ನು ಅಡಗಿಸಿ ಈಶಾನ್ಯ ಗಡಿಯನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿದ. ನಂತರ ಕೇರಳವನ್ನು ಗೆದ್ದು, ಕೇರಳ, ಶ್ರೀಲಂಕಾದಿಂದ ಕಪ್ಪ
ಕಾಣಿಕೆಗಳನ್ನು ಸ್ವೀಕರಿಸಿದನು. ಇದರಿಂದ “ದಕ್ಷಿಣಾಪಥದ ಚಕ್ರವರ್ತಿ” ಎನಿಸಿದ. ಈ ವಿಜಯಗಳಿಂದ ವಿಜಯನಗರ ಸಾಮ್ರಾಜ್ಯ ಸಿಂಹಳದ ಗಡಿಗಳಿಂದ ಗುಲ್ಬರ್ಗದವರೆಗೆ ಮತ್ತು ತೆಲಂಗಾಣ, ಮಲಬಾರ್‍ಗಳಿಗೆ ವಿಸ್ತರಿಸಿಕೊಂಡಿತು. ನ್ಯೂನಿಜ್‍ನ ಪ್ರಕಾರ ಪ್ರೌಢದೇವರಾಯನಿಗೆ ಸಿಲೋನ್, ಪುಲಿಕಾಟ್, ಪೆಗು, ತೆನಾಸ್ಸೆರಿಂ (ಬರ್ಮಾ ಭಾಗ) ಮತ್ತು ಮಲಯದ ರಾಜರು ಕಪ್ಪಕಾಣಿಕೆಗಳನ್ನು ನೀಡುತ್ತಿದ್ದರು. ಸಾಂಪ್ರದಾಯಿಕ ಶತ್ರುಗಳಾದ ಬಹಮನಿ ಅಹಮದ್ ನನ್ನು ಬಿಜಾಪುರದವರೆಗೆ ಹಿಮ್ಮೆಟ್ಟಿಸಿ ಮುದಗಲ್ ಮತ್ತು ಬಂಕಾಪುರಗಳನ್ನು ತನ್ನ ಸ್ವಾಧೀನ ಮಾಡಿಕೊಂಡನು. ಎರಡನೇ ದೇವರಾಯನ ದಳಪತಿಯಾದ ಲಕ್ಕಣ್ಣದಂಡೇಶನು ಒಂದು ನೌಕಾ ವಿಜಯಯಾತ್ರೆಯನ್ನು ಕೈಗೊಂಡು ಯಶಸ್ವಿಯಾದನು. ಈತನು ಪರಮತ ಸಹಿಷ್ಣುವಾಗಿದ್ದನು. ರಾಜಧಾನಿಯಲ್ಲಿ ಮಸೀದಿಯನ್ನು ನಿರ್ಮಿಸಿದನು. ಜೈನ ಮತ್ತು ವೈಷ್ಣವ ದೇವಾಲಯಗಳು ನಿರ್ಮಾಣಗೊಂಡವು. ಸ್ವತಃ ಕವಿಯಾಗಿದ್ದ, ಈತನ ಆಸ್ಥಾನದಲ್ಲಿ ಸಂಸ್ಕೃತ ಕವಿ ಡಿಂಡಿಮ ಮತ್ತು ಕನ್ನಡ ಕವಿ ಲಕ್ಕಣದಂಡೇಶರು ಇದ್ದರು. ದೇವರಾಯನ ಕಾಲದಲ್ಲಿ ವೀರಶೈವ ಸಂಪ್ರದಾಯ ಹಾಗೂ ಸಾಹಿತ್ಯಪುನರುಜ್ಜೀವನ ಪಡೆದವು. ಸಾ.ಶ. 1446ರಲ್ಲಿ ಎರಡನೆಯ ದೇವರಾಯನ ಮರಣದ ನಂತರ ಬಂದ ದುರ್ಬಲ ಅರಸರೊಂದಿಗೆ ಸಂಗಮ ವಂಶದ ಆಳ್ವಿಕೆ ಮುಕ್ತಾಯವಾಯಿತು
ಕೃಷ್ಣದೇವರಾಯ
ತುಳುವ ಸಂತತಿಯ ನರಸನಾಯಕನ ಹಾಗೂ ಎರಡನೆಯ ಸತಿ ನಾಗಲಾಂಬಿಕೆಯ ಪುತ್ರನಾದ ಕೃಷ್ಣದೇವರಾಯನು ವಿಜಯನಗರ ಸಾಮ್ರಾಜ್ಯದ ಅರಸರಲ್ಲಿಯೇ ಅತ್ಯಂತ ಶ್ರೇಷ್ಠ ದೊರೆ. ಇವನ ಆಳ್ವಿಕೆಯ ಅವಧಿಯಲ್ಲಿ ವಿಜಯನಗರವು ತನ್ನ ಸಾಧನೆಗಳ ಪರಾಕಾಷ್ಠತೆಯನ್ನು ತಲುಪಿತು.ಜಗದ್ವಿಖ್ಯಾತರಾದ ಅಶೋಕ, ಸಮುದ್ರಗುಪ್ತ, ಹರ್ಷವರ್ಧನರ ಸಾಲಿನಲ್ಲಿ ನಿಲ್ಲುವ ಇವನು 20 ವರ್ಷಗಳ ಕಾಲ ಆಳ್ವಿಕೆ ಮಾಡಿದ. ಕೃಷ್ಣದೇವರಾಯ ಪಟ್ಟಕ್ಕೆ ಬಂದಾಗ ರಾಜ್ಯದ ಒಳ ಹಾಗೂ ಹೊರಗೆ ಜಟಿಲವಾದ ಸಮಸ್ಯೆಗಳಿದ್ದವು. ಹೊಸ ಜಲಮಾರ್ಗಗಳ ಮೂಲಕ ಆಗಮಿಸಿದ ಐರೋಪ್ಯರು ಇಲ್ಲಿ ನೆಲೆಗಳನ್ನು ಸ್ಥಾಪಿಸಲು ಆರಂಭಿಸಿದರು. ಬಹಮನಿ ರಾಜ್ಯದ ಐದು ಷಾಹಿ
ರಾಜ್ಯಗಳು ಸುಲ್ತಾನರಾಗಿ ಹೊಸ ರೂಪ ಪಡೆದುಕೊಂಡು ಕೃಷ್ಣದೇವರಾಯನ ವಿರುದ್ಧ ಕದನಕ್ಕಿಳಿದರು. ಜೊತೆಗೆ ಉಮ್ಮತ್ತೂರು ಹಾಗೂ ಒರಿಸ್ಸಾದ ಅರಸರು
ವಿಜಯನಗರದ ಮೇಲೆ ಹಗೆತನವನ್ನು ಸಾಧಿಸುತ್ತಲೇ ಇದ್ದರು.1509ರಲ್ಲಿ ಯೂಸುಫ್ ಆದಿಲ್‍ಶಾಹನು ಇತರ ಶಾಹಿ ಮನೆತನಗಳೊಂದಿಗೆ ಒಟ್ಟಾಗಿ ವಿಜಯನಗರದ ಮೇಲೆ ಯುದ್ಧ ಘೋಷಿಸಿದನು. ಯುದ್ಧದಲ್ಲಿ
ಬಿಜಾಪುರದ ಆದಿಲ್‍ಶಾಹಿ ಮರಣ ಹೊಂದಿದನು. ಈ ಸಮಯದಲ್ಲಿ ಕೃಷ್ಣದೇವರಾಯನು ರಾಯಚೂರು ದೋ ಆಬ್‍ನ್ನು ವಶಪಡಿಸಿಕೊಂಡನು. ಜೊತೆಗೆ ಕೃಷ್ಣದೇವರಾಯನು ಬಂಧನದಲ್ಲಿದ್ದ ಮಹಮದ್ ಶಾಹನನ್ನು ಬಿಡುಗಡೆಗೊಳಿಸಿ ಬಹಮನಿಯ ರಾಜನನ್ನಾಗಿಸಿದನು. ಹಾಗಾಗಿ ‘ಯವನರಾಜ್ಯ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದು ಧರಿಸಿದನು.
ವಿಜಯನಗರ ಸಾಮ್ರಾಜ್ಯದ ಅಂತ್ಯ
ವಿಜಯನಗರದ ಚರಿತ್ರೆಯಲ್ಲಿ ಸಾ.ಶ. 1565ರಲ್ಲಿ ನಡೆದ ರಕ್ಕಸ-ತಂಗಡಿ ಯುದ್ಧವು ಅತ್ಯಂತ ನಿರ್ಣಾಯಕ ಯುದ್ಧಗಳಲ್ಲಿ ಒಂದು. ಇದು ವಿಸ್ತಾರವಾಗಿದ್ದ ಸಾಮ್ರಾಜ್ಯವನ್ನು ಮೂಲೆಗುಂಪು ಮಾಡಿ ದಕ್ಷಿಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು. ಕೃಷ್ಣದೇವರಾಯನ ನಿಧನದ ನಂತರದಲ್ಲಿ ಅಧಿಕಾರಕ್ಕಾಗಿ ಆಂತರಿಕ
ಸಂಘರ್ಷಗಳು ಕಂಡುಬಂದವು. ನಂತರದ ದೊರೆ ಅಚ್ಯುತ ದೇವರಾಯನ ನಿಧನ ಮತ್ತೊಮ್ಮೆ ಅಧಿಕಾರಕ್ಕಾಗಿ ಆಂತರಿಕ ಕದನಕ್ಕೆ ದಾರಿ ಮಾಡಿತು. ಸದಾಶಿವರಾಯನು ಪಟ್ಟಕ್ಕೆ ಬಂದರೂ ಆಡಳಿತ ಅಳಿಯ ರಾಮರಾಯನ ಕೈಯಲ್ಲಿತ್ತು. ರಾಮರಾಯ ತನ್ನ ಆಳ್ವಿಕೆಯಲ್ಲಿ ಕೈಗೊಂಡ ಯುದ್ಧಗಳು ಸಾಮ್ರಾಜ್ಯದ ವಿಸ್ತಾರ ಹೆಚ್ಚಿಸಿದ್ದರೂ ಅನೇಕ ಶತ್ರುಗಳನ್ನು ಸೃಷ್ಟಿಸಿತ್ತು. ರಾಮರಾಯನ ನೀತಿಗಳು ದಖನ್ ಸುಲ್ತಾನರನ್ನು ಒಂದುಗೂಡಿಸಿ ವಿಜಯನಗರದ ಸಾಮ್ರಾಜ್ಯದ ಮೇಲೆ ದಾಳಿ ಮಾಡುವಂತೆ ಪ್ರೇರೆಪಿಸಿತು.ಹೀಗೆಯೇ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.