ಭಾರತಕ್ಕೆ ಯುರೋಪಿಯನ್ನರ ಆಗಮನ

 

ಪೋರ್ಚುಗೀಸ್ ಅನ್ವೇಷಕ ವಾಸ್ಕೋಡಿಗಾಮ ಕ್ರಿ.ಶ. 1498 ರಲ್ಲಿ ಕಲ್ಲಿಕೋಟೆ ಬಂದರಿಗೆ ಆಗಮಿಸಿದ ನಂತರ, ಯುರೋಪಿನ ವ್ಯಾಪಾರಸ್ಥರು ಸಾಂಬಾರ ಪದಾರ್ಥಗಳ ವ್ಯಾಪಾರದ ಅನ್ವೇಷಣೆಯಲ್ಲಿ ಭಾರತದ ಕರಾವಳಿಗೆ ಬರತೊಡಗಿದರು. 1757ರ ಪ್ಲಾಸಿ ಕದನದಲ್ಲಿ ರಾಬರ್ಟ್ ಕ್ಲೈವನ ಅಧೀನದಲ್ಲಿದ್ದ ಬ್ರಿಟಿಷ್ ಸೈನ್ಯವು ಬಂಗಾಳದ ನವಾಬ ಸಿರಾಜುದ್ದೌಲನನ್ನು ಪರಾಭವಗೊಳಿಸಿದ ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ನೆಲೆಗೊಂಡಿತು. ಇದನ್ನು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ನಾಂದಿ ಎಂದು ಗುರುತಿಸಲಾಗುತ್ತದೆ.

• ಭಾರತದ ಮೇಲೆ ಅಧಿಕಾರ ಸ್ಥಾಪಿಸಲು ಹೊರಟ ಎಲ್ಲಾ ಯುರೋಪಿಯನ್ನರನ್ನು ಸೋಲಿಸಿದ ಬ್ರಿಟಿಷರು ಭಾರತವನ್ನು ಆಕ್ರಮಿಸಲು ತೊಡಗಿದರು.
• ಈ ಆಕ್ರಮಣಕ್ಕೆ ಮೊದಲು ವಶವಾದದ್ದೇ ಬಂಗಾಳ. ನವಾಬ ಸಿರಾಜುದ್ದೌಲನು ಬಂಗಾಳದ ಮೇಲಿನ ಅಧಿಪತ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಕಾದಾಡಿದ ಯುದ್ದವನ್ನು ಪ್ಲಾಸಿ ಕದನವೆಂದು ಕರೆಯುತ್ತಾರೆ. ಈ ಯುದ್ಧದಲ್ಲಿ ರಾಬರ್ಟ್ಕ್ಲೈವ್ ನೇತೃತ್ವದ ಕಂಪನಿ ಸೈನ್ಯವು ನವಾಬ ಸಿರಾಜುದ್ದೌಲನನ್ನು 1757ರಲ್ಲಿ ನಡೆದ ನಿರ್ಣಾಯಕ ಪ್ಲಾಸಿ ಕದನದಲ್ಲಿ ಸೋಲಿಸಿದನು.
• ಬ್ರಿಟಿಷರೊಂದಿಗೆ ಸಹಕರಿಸಿದ ಮೀರ್ಜಾಫರನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿ ಪ್ರತಿಯಾಗಿ ಅವನಿಂದ ಬ್ರಿಟಿಷರು 24 ಪರಗಣದ ಮೇಲಿನ ಜಮೀನ್ದಾರಿ ಹಕ್ಕನ್ನು ಪಡೆದುಕೊಂಡು ಅತ್ಯಂತ ಪ್ರಬಲರಾದರು.
• ಮೀರ್ ಜಾಫರನು ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಮುಂದಾದಾಗ ಬ್ರಿಟಿಷರು ಅವನನ್ನು ಅಧಿಕಾರದಿಂದ ಕೆಳಗಿಳಿಸಿ ಮೀರ್ ಕಾಸಿಮನನ್ನು ನವಾಬನನ್ನಾಗಿ ಮಾಡಿದರು. ಇದಕ್ಕೆ ಪ್ರತಿಯಾಗಿ ಅವನು ಬರ್ದವಾನ, ಮಿಡ್ನಾಪುರ ಮತ್ತು ಚಿತ್ತಗಾಂಗ್ ಪ್ರದೇಶಗಳನ್ನು ಬ್ರಿಟಿಷರಿಗೆ ಬಳುವಳಿಯಾಗಿ ನೀಡಿದನು.
• ಇಂಗ್ಲಿಷರ ಹಿಡಿತದಿಂದ ಹೊರಬರಲು ಮೀರ್ ಕಾಸಿಮನು ಪ್ರಯತ್ನಿಸಿದಾಗ ಅವನನ್ನು ಪದಚ್ಯುತಗೊಳಿಸಿದರು. ನಂತರ ಷರತ್ತುಗಳೊಂದಿಗೆ ಇಂಗ್ಲಿಷರು ಮೀರ್ ಜಾಫರನನ್ನು ಮತ್ತೆ ನವಾಬನನ್ನಾಗಿ ಮಾಡಿದರು.
• ಇದರ ನಡುವೆ ಮೊಘಲ್ ಚಕ್ರವರ್ತಿ ಷಾ ಅಲಂ, ಔದ್ನ ನವಾಬ ಷೂಜ ಉದ್ದೌಲ ಮತ್ತು ಮೀರ್ ಖಾಸಿಮರ ತ್ರಿಮೈತ್ರಿ ಕೂಟದ ಸೈನ್ಯವು ಇಂಗ್ಲಿಷರ ವಿರುದ್ಧ ಹೋರಾಡಿ ಸೋತಿತು. ಇದನ್ನು 1764ರ ಬಕ್ಸಾರ್ ಕದನ ಎಂದು ಕರೆಯುತ್ತಾರೆ ಈ ಕದನದ ಪರಿಣಾಮವಾಗಿ ಬಿಹಾರ, ಒರಿಸ್ಸಾ ಮತ್ತು ಬಂಗಾಳ ಪ್ರಾಂತ್ಯಗಳು ಇಂಗ್ಲಿಷರ ವಶವಾದವು.
• ಮೊಘಲ್ ಚಕ್ರವರ್ತಿ ಷಾ ಅಲಂ ದಿವಾನಿ ಹಕ್ಕನ್ನು ಇಂಗ್ಲಿಷರಿಗೆ ನೀಡಿದನು. ಪರಿಣಾಮವಾಗಿ 1765ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡಿದ್ದ ರಾಬರ್ಟ್ಕ್ಲೈವನು ಬಂಗಾಳದಲ್ಲಿ ದ್ವಿ-ಸರ್ಕಾರವನ್ನು ಜಾರಿಗೆ ತಂದನು. ಅಂದರೆ ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುತ್ತಿದ್ದರು. ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೇ ದ್ವಿ-ಸರ್ಕಾರವೆಂದು ಕರೆಯಲಾಗಿದೆ.
• ಹೀಗೆ ಬ್ರಿಟಿಷರು ತಮ್ಮ ವಾಣಿಜ್ಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ತಮ್ಮ ರಾಜಕೀಯ ಕುಟಿಲತೆಯಿಂದ ದೇಶೀಯ ಪ್ರದೇಶಗಳ ಮೇಲೆ ಭದ್ರಹಿಡಿತವನ್ನು ಸಾಧಿಸಿದರು. ಕ್ರಮೇಣ ಭಾರತದ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡರು. ಈ ಮೂಲಕ ಭಾರತದ ಮೇಲೆ ಬ್ರಿಟಿಷರು ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಆರಂಭಿಸಿದರು.