ಡಿಸೆಂಬರ್ 18th, 2017

 

ಎಸ್‌.ಎಲ್‌.ಭೈರಪ್ಪಗೆ ನೃಪತುಂಗ ಪ್ರಶಸ್ತಿ-2017


ಕನ್ನಡದ ಜ್ಞಾನಪೀಠವೆಂದೇ ಗುರುತಿಸಿಕೊಂಡಿರುವ ನೃಪತುಂಗ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ.ಎಸ್.ಎಲ್.ಭೈರಪ್ಪ ಅವರನ್ನು 2017ನೇ ಸಾಲಿನ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 7 ಲಕ್ಷ ರೂ.ನಗದು, ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ.

ಮಯೂರವರ್ಮ ಸಾಹಿತ್ಯ ಪ್ರಶಸ್ತಿ-2017


2017ನೇ ಸಾಲಿನ ಮಯೂರವರ್ಮ ಸಾಹಿತ್ಯ ಪ್ರಶಸ್ತಿಗೆ ರಾಮಲಿಂಗೇಶ್ವರ (ಸಿಸಿರಾ), ಡಾ.ಸಿ.ನಂದಿನಿ ಹಾಗೂ ಶಾಂತಿ ಕೆ.ಅಪ್ಪಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ 45 ವರ್ಷದೊಳಿನ ಸಾಹಿತಿಗಳಿಗೆ ಪ್ರಶಸ್ತಿ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 25 ಸಾವಿರ ರೂ.ನಗದು, ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ತ್ರಿವಳಿ ತಲಾಖ್‌ ನಿಷೇಧ ವಿಧೇಯಕ: ಕೇಂದ್ರ ಸಂಪುಟ ಅನುಮೋದನೆ


ತ್ರಿವಳಿ ತಲಾಖ್‌ ಅನ್ನು ಅಪರಾಧವೆಂದು ಘೋಷಿಸುವ ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ವಿಧೇಯಕ 2017ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕರಡು ವಿಧೇಯಕವನ್ನು ಸಿದ್ಧಪಡಿಸಿ ಈ ತಿಂಗಳ ಆರಂಭದಲ್ಲಿ ರಾಜ್ಯಗಳಿಗೆ ಕಳುಹಿಸಲಾಗಿತ್ತು. ತ್ರಿವಳಿ ತಲಾಖ್‌ ಅನ್ನು ಜಾಮೀನು ರಹಿತ ಅಪರಾಧವೆಂದು ಘೋಷಿಸಿ, ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧ ಎಂದು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಸ್ತಾವಿತ ಕಾಯ್ದೆಯ ಪ್ರಕಾರ, ತ್ರಿವಳಿ ತಲಾಖ್‌ನ ಸಂತ್ರಸ್ತೆ ತನ್ನ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ತನ್ನ ವಶಕ್ಕೆ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಗಂಡನಿಂದ ಜೀವನಾಂಶ ಕೋರಿ ಮ್ಯಾಜಿಸ್ಟ್ರೇಟರಿಗೆ ದೂರು ಸಲ್ಲಿಸಬಹುದು. ಕಾಯ್ದೆಯ ಪ್ರಕಾರ, ಇ-ಮೇಲ್‌, ಎಸ್‌ಎಂಎಸ್‌ ಅಥವಾ ವಾಟ್ಸಪ್‌- ಯಾವುದೇ ವಿಧಾನದ ತ್ರಿವಳಿ ತಲಾಖ್‌ ಅನ್ನು ನಿಷೇಧಿಸಲಾಗುವುದು.

Contributed by: Mallikajan.Korbu