ಕ್ರೀಡೆಗಳು
 
ಪ್ರಸ್ತಾವನೆ:-
ಮನುಷ್ಯನ ಪೂರ್ಣ ವ್ಯಕ್ತಿತ್ವವನ್ನು ರೂಪಿಸಿ ಬೆಳೆಸುವುದೇ ಶಿಕ್ಷಣದ ಗುರಿ.ಮಾನಸಿಕ ಬೆಳವಣಿಗೆ, ಜ್ಞಾನದ ಬೆಳವಣಿಗೆಯ ಜೊತೆಜೊತೆಗೆ ಶಾರೀರಿಕ ಬೆಳವಣಿಗೆಯೂ ಆವಶ್ಯಕ. ದೇಹದಾಢ್ರ್ಯವನ್ನು ಪಡೆಯಲು ಕ್ರೀಡಾ ಚಟುವಟಿಕೆಗಳು,ಆಟ ಪಾಠಗಳು ಅತಿಮುಖ್ಯ.ಆರೋಗ್ಯವಂತನಾದ ವ್ಯಕ್ತಿಯು ನಿಜಕ್ಕೂ ನಿಶ್ಚಲವಾದ ಮನಸ್ಸನ್ನು ಹೊಂದಿ ನೆಮ್ಮದಿಯಿಂದಿರುತ್ತಾನೆ.
ವಿಷಯ ನಿರೂಪಣೆ:-
ಪ್ರತಿದಿನ ಗೊತ್ತಾದ ಸಮಯದಲ್ಲಿ ಯಾರು ಕ್ರೀಡಾ ಚಟುವಟಿಕೆಗಳಲ್ಲಿ,ವ್ಯಾಯಾಮಗಳಲ್ಲಿ ನಿರತರಾಗಿರುತ್ತಾರೋ ಅಂತಹವರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ.ಪ್ರತಿಯೊಬ್ಬರೂ ತಮ್ಮ ಬಿಡುವಿನ ವೇಳೆಯಲ್ಲಿ ಯಾವುದಾದರು ಒಂದು ಆಟವನ್ನು ಆಡುವ ಹವ್ಯಾಸ ಬೆಳೆಸಿಕೊಳ್ಳುವುದು ಬಹಳ ಒಳ್ಳೆಯದು. ಆಟಗಳು ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತವೆ. ಜ್ಞಾನವು ಮನಸ್ಸಿಗೆ ಆಹಾರವಾದರೆ, ಆಟಗಳು ಅಥವಾ ಕ್ರೀಡೆಗಳು ಶರೀರಕ್ಕೆ ಆಹಾರ. ಆಟಗಳಲ್ಲಿ ಭಾಗವಹಿಸಿದಾಗ ನೀತಿ ನಿಯಮಗಳನ್ನು ಪಾಲಿಸಬೇಕು. ಆಟಗಳನ್ನು ಆಡುವುದರಿಂದ ಒಬ್ಬರಿಗೊಬ್ಬರು ಹೇಗೆ ಸ್ನೇಹದಿಂದ ವರ್ತಿಸಬೇಕು, ಸಹಾಯ ಮಾಡಬೇಕು ಎಂಬುದು ಅರಿವಾಗುತ್ತದೆ. ನಾಯಕತ್ವದಲ್ಲಿ ಅಡ್ಡಿ ಆತಂಕಗಳು ಬಂದಾಗ ಮನೋಸ್ಥೈರ್ಯ ನಮ್ಮದಾಗುತ್ತದೆ. ಸೋತಾಗ ಅಂಜದೆ, ಮತ್ತೆ ಮತ್ತೆ ಪ್ರಯತ್ನಿಸಿ ಗೆಲ್ಲುವ ಮನೋಭಾವ ಬೆಳೆಯುತ್ತದೆ.
ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಸ್ಥಿತಿಯಲ್ಲಿ ತೆಗೆದುಕೊಳ್ಳುವ ಮನೋಭಾವ ಬೆಳೆಯುತ್ತದೆ. ಕ್ರೀಡಾ ಮನೋಭಾವನೆಯು ಬೆಳೆದು ಜೀವನದುದ್ದಕ್ಕೂ ಎಲ್ಲ ಕ್ಷೇತ್ರದಲ್ಲೂ ನೀತಿಯುತವಾಗಿ ನಿಯಮಗಳನ್ನು ಉಲ್ಲಂಘಿಸದೆ ಬಾಳುವುದನ್ನು ಕಲಿಸುತ್ತದೆ. ಕ್ರೀಡೆಗಳಲ್ಲಿ ಎರಡು ವಿಧಗಳಿವೆ. ಒಂದು ಹೊರಾಂಗಣ ಕ್ರೀಡೆಯಾದರೆ, ಇನ್ನೊಂದು ಒಳಾಂಗಣ ಕ್ರೀಡೆ ಹೊರಾಂಗಣ ಕ್ರೀಡೆ ಎಂದರೆ ಮೈದಾನದಲ್ಲಿ ಆಡುವುದು. ಉದಾ:- ಕ್ರಿಕೆಟ್, ಫುಟ್ಬಾಲ್, ಹಾಕಿ ಇತ್ಯಾದಿ, ಒಳಾಂಗಣ ಕ್ರೀಡೆ ಎಂದರೆ ಕಟ್ಟಡದ ಒಳಗೆ ಆಡುವ ಆಟಗಳು. ಉದಾ :- ಟೇಬಲ್ ಟೆನಿಸ್, ಚೆಸ್,ಕೇರಂ ಇತ್ಯಾದಿ. ಎಲ್ಲಾ ತರಹದ ಕ್ರೀಡೆಗಳು ನಮ್ಮಲ್ಲಿ ಉತ್ಸಾಹವನ್ನು ತುಂಬುತ್ತವೆ.
ಉಪಸಂಹಾರ :
ಕ್ರೀಡೆಗಳ ಮೂಲ ಉದ್ದೇಶ ಜನರ ಶಾರೀರಿಕ ಮತ್ತು ಮಾನಸಿಕಬೆಳವಣಿಗೆಯನ್ನು ಹೆಚ್ಚಿಸುವುದು. ಕ್ರೀಡಾಸ್ಫೂರ್ತಿಯನ್ನು ಹೊಂದಿದ ಮನುಷ್ಯ ತುಂಬಾ ಉತ್ತಮವಾಗಿ ಜೀವನ ಸಾಗಿಸಬ್ಲ. ಪ್ರತಿಯೊಬ್ಬರೂ ಯಾವುದಾದರೊಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.