ಬೆಳೆ ಋತುಗಳು(Crop Seasons)
 
ಭಾರತದಲ್ಲಿ ವರ್ಷದ ಎಲ್ಲ ಅವಧಿಯಲ್ಲೂ ವಿವಿಧ ಪ್ರದೇಶಗಳಲ್ಲಿ ಬೆಳೆಗಳನ್ನು ಬೆಳೆಯಲಾಗುವುದು. ಹೀಗೆ ದೇಶದಾದ್ಯಂತ ವರ್ಷದಲ್ಲಿ ಒಂದಿಲ್ಲ ಒಂದು ಭಾಗದಲ್ಲಿ ಬೆಳೆಗಳನ್ನು ಬೆಳೆಯುವುದನ್ನು ಕಾಣಬಹುದು. ದೇಶದಲ್ಲಿ ಮೂರು ವ್ಯವಸಾಯದ ಅವಧಿಗಳು ಕಂಡುಬರುತ್ತವೆ.
1) ಮುಂಗಾರು ಅಥವಾ ಖರೀಫ್ ಬೇಸಾಯ
2) ಹಿಂಗಾರು ಅಥವಾ ರಬಿ ಬೇಸಾಯ
3) ಬೇಸಿಗೆ ಅಥವಾ ಜೇಡ್ ಬೇಸಾಯ.
1) ಮುಂಗಾರು ಅಥವಾ ಖರೀಫ್ ಬೇಸಾಯ
ನೈಋತ್ಯ ವiನ್ಸೂನ್ ಮಾರುತಗಳ ಅವಧಿಯ ಬೇಸಾಯವನ್ನೇ ‘ಮುಂಗಾರು ಬೇಸಾಯ’ ಅಥವಾ ‘ಖರೀಫ್ ಬೇಸಾಯ’ ವೆಂದು ಕರೆಯುವರು. ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡುವರು. ದೇಶದ ಹೆಚ್ಚು ಭಾಗವು ಈ ಅವಧಿಯಲ್ಲಿ ಸಾಗುವಳಿಗೆ ಒಳಪಟ್ಟಿರುವುದು. ಭತ್ತ, ರಾಗಿ, ಹತ್ತಿ, ಜೋಳ, ಮೆಕ್ಕೆಜೋಳ,ಎಣ್ಣೆಕಾಳುಗಳು ಈ ಅವಧಿಯ ಮುಖ್ಯ ಬೆಳೆಗಳಾಗಿವೆ.
2) ಹಿಂಗಾರು ಅಥವಾ ಚಳಿಗಾಲದ ಅಥವಾ ರಬಿ ಬೇಸಾಯ
ಇದು ಚಳಿಗಾಲದಲ್ಲಿ ಮಳೆ ಪಡೆಯುವ ಪ್ರದೇಶಗಳ ಮುಖ್ಯ ಸಾಗುವಳಿಯ ಅವಧಿಯಾಗಿದೆ. ವಾಯುವ್ಯ ಭಾರತದ ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಹಾಗೂ ದಕ್ಷಿಣದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳು ಈ ಅವಧಿಯ ಬೇಸಾಯಕ್ಕೆ ಒಳಪಟ್ಟಿವೆ. ವಾಯವ್ಯ ಭಾರತದಲ್ಲಿ ಗೋಧಿ ಅತಿ ಮುಖ್ಯ ರಬಿ ಬೆಳೆಯಾಗಿದೆ. ಚಳಿಗಾಲದಲ್ಲಿ ತಂಪಾದ ಸಮಶೀತೋಷ್ಣವಾದ ತುಂತುರು ಮಳೆಯಿಂದ ಕೂಡಿರುವ ವಾಯುಗುಣವಿರುವುದು. ಇದು ಗೋಧಿ ಬೇಸಾಯಕ್ಕೆ ಅತ್ಯಂತ ಸೂಕ್ತವಾಗಿದೆ. ಅಕ್ಟೋಬರ- ನವಂಬರನಲ್ಲಿ ಬಿತ್ತನೆ ಮಾಡಿ ಫೆಬ್ರುವರಿ-ಮಾರ್ಚ ಅವಧಿಯಲ್ಲಿ ಕಟಾವು ಮಾಡುವರು.
3) ಬೇಸಿಗೆಯ ಅಥವಾ ಜೇಡ್ ಬೇಸಾಯ
ರಬಿ ಹಾಗೂ ಖರೀಪ್ ಬೇಸಾಯದ ನಡುವಿನ ಅವಧಿಯಲ್ಲಿಯೂ ಭಾರತದ ಹಲವು ಕಡೆಗಳಲ್ಲಿ ಬೇಸಾಯ ಕಂಡು ಬರುವುದು. ಬೇಸಿಗೆಯ ಈ ಬೇಸಾಯವನ್ನೇ ‘ಜೇಡ್ ಬೇಸಾಯ’ ವೆಂದು ಕರೆಯುವರು. ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ಎಣ್ಣೆಕಾಳುಗಳು ಮತ್ತು ತರಕಾರಿಗಳನ್ನು ಈ ಅವಧಿಯಲ್ಲಿ ಬೆಳೆಯುವರು.