Loading [Contrib]/a11y/accessibility-menu.js

“ನಿರುದ್ಯೋಗ’’

 

ನಿರುದ್ಯೋಗ ಆಧುನಿಕ ಜಗತ್ತನ್ನು ಶಾಪವಾಗಿದೆ ನಿರುದ್ಯೋಗದಿಂದ ಹಸಿವು, ಬಡತನ, ದರಿದ್ರ್ಯ ಅನಾಚಾರ, ಅಪರಾಧ ಕೃತ್ಯಗಳು ಜನ್ಮತಾಳುತ್ತವೆ. ನಿರುದ್ಯೋಗದ ಶ್ಯೂನತೆಯ ಅನುಭವು ಅನುಭವಿಸಿದವರಿಗಷ್ಟೇ ಗೊತ್ತು. ಒಂದೆಡೆ ಜಾರಿ ಹೋಗುವ ಅದೆಷ್ಟೊ ಕನಸುಗಳು,ಮತ್ತೊಂದೆಡೆ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲಾರದ ಅಸಹಾಯಕ ಸ್ಥಿತಿ. ಇದರ ನಡುವೆ ಸರಿದೇ ಹೋಗುವ ಅಮೂಲ್ಯ ವಯಸ್ಸು ಬದುಕೊಂದು ಜೀವಂತ ನರಕ. ಇದು ಇಂದಿನ ಎಲ್ಲ ಸಮಾಜಗಳೂ ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ಮತ್ತು ರಾಷ್ಟ್ರಗಳು ಎದುರಿಸುತ್ತಿರುವ ಭೀಕರ ಸಮಸ್ಯೆ.

ನಿರುದ್ಯೋಗ ಎಂದರೇನು?


ಕೆಲಸ ಮಾಡಲು ಶಕ್ತಿ, ಸಾಮಥ್ರ್ಯ ಮತ್ತು ಇಚ್ಚಾ ಶಕ್ತಿಗಳಿದ್ದು, ಯಾವುದೇ ಅವಕಾಶ ಸಿಗದಿರುವುದನ್ನು ನಿರುದ್ಯೋಗ ಎನ್ನಬಹುದು. ಕೇಂದ್ರ ಯೋಜನಾ ಆಯೋಗದ ಪ್ರಕಾರ ಸ್ತ್ರೀ, ಪುರುಷ ಯಾರೇ ಆಗಲಿ 6 ತಿಂಗಳು ಕೆಲಸವಿಲ್ಲದಿದ್ದರೆ ಅದು ಮಾರ್ಜಿನಲ್ ನಿರುದ್ಯೋಗದ ಸ್ಥಿತಿಯಾಗುತ್ತದೆ.ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ಪ್ರಕಾರ ವಾರದಲ್ಲಿ 2 ದಿನ ಕೆಲಸವಿದ್ದರೆ ಅವನು ಉದ್ಯೋಗಿಯಾಗುತ್ತಾನೆ. ಆದರೆ ((ILO) ನ ಈ ವ್ಯಾಖ್ಯಾನವನ್ನು ನಿರುದ್ಯೋಗಿ ವಿಮೆ ಯೋಜನೆಯನ್ನು ಹೊಂದಿರುವ ಪಾಶ್ಚಾತ್ಯ ರಾಷ್ಟ್ರಗಳಿಗೆ ಅನ್ವಯಿಸಬಹುದೇ ಹೊರತು ಈ ಯೋಜನೆಯಿಲ್ಲದ ದಿನವಿಡೀ ದುಡಿದರೂ ಹೊಟ್ಟೆ ಬಟ್ಟೆಗೆ ಸಾಲದ ರಸ್ತೆ, ಮೋರಿ, ಪೈಪುಗಳ ಸಂದುಗೊಂದುಗಳಲ್ಲಿ ಕೊಳೆಗೇರಿಗಳಲ್ಲಿ ಜೀವನ ತಳ್ಳುವ ಭಾರತದಂತ ರಾಷ್ಟ್ರಗಳಿಗೆ ಅನ್ವಯಿಸಲಾಗದು. ಒಟ್ಟಿನಲ್ಲಿ ನಿರುದ್ಯೋಗವೆಂಬುದು ಇಚ್ಛೆಯಿಲ್ಲದಿದ್ದರೂ ಅನಿವಾರ್ಯವಾಗಿ ಬಂದೆರೆಗಿದ ಅಪ್ರಯೋಜಕ ಸ್ಥಿತಿ.

ನಿರುದ್ಯೋಗವು 3 ಮುಖ್ಯ ಅಂಶಗಳನ್ನು ಒಳಗೊಂಡಿರುತ್ತದೆ.
1. ಉದ್ಯೋಗ ಮಾಡುವ ಸಾಮಥ್ರ್ಯವಿರುವುದು
2. ಮಾಡುವ ಇಚ್ಛೆಯಿರುವುದು
3. ಇದಕ್ಕಾಗಿ ನಿರಂತರ ಪ್ರಯತ್ನ

ಈ ಅಂಶಗಳಿಲ್ಲದ ಸ್ಥಿತಿಯನ್ನು ನಿರುದ್ಯೋಗ ಎನ್ನಲಾಗುವುದಿಲ್ಲ. ಯಾವುದೇ ಒಂದು ವ್ಯವಸ್ಥಿತ ಸಮಾಜವು ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತದೆ.

1. ತಮ್ಮ ಶಕ್ತಿ - ಸಾಮಥ್ರ್ಯ ಮತ್ತು ಅರ್ಹತೆಗೆ ತಕ್ಕಂತೆ ಬಲು ಬೇಗ ಕೆಲಸ ಸಿಗುವುದು.
2. ಈ ಬಗ್ಗೆ ಭರವಸೆ ಹುಟ್ಟಿಸುವುದು
3. ಉದ್ಯೋಗಾವಕಾಶಗಳು ನಿರುದ್ಯೋಗಿಗಳಿಗಿಂತ ಹೆಚ್ಚಾಗಿರುವುದು
4. ಉದ್ಯೋಗಕ್ಕೆ ತಕ್ಕ ವೇತನ ನೀಡುವುದು

ಈ ಅಂಶಗಳಿರುವ ಸಮಾಜವನ್ನು ಸಮತೋಲನ ಸಮಾಜ ಎನ್ನಲಡ್ಡಿಯಿಲ್ಲ. ಒಂದು ಸಮಾಜದಲ್ಲಿ ಅವಶ್ಯಕತೆ ಇರುವಷ್ಟು ಈ ಎಲ್ಲ ಅಂಶಗಳು ಇಲ್ಲದಿದ್ದರೂ, ಒಂದು ನಿಭಾಯಿಸಬಹುದಾದ ಮಟ್ಟದಲ್ಲಿರಬೇಕಾದುದು ಸಮಾಜದ ಉಳಿವಿಗೆ, ಅಭಿವೃದ್ಧಿಗೆ ಅನಿವಾರ್ಯವಾಗಿದೆ.

ಭಾರತದಲ್ಲಿ ನಿರುದ್ಯೋಗದ ಪ್ರಮಾಣ


ಆಶ್ಚರ್ಯಕರ ವಿಷಯವೆಂದರೆ ಭಾರತದಲ್ಲಿ ಪ್ರಸ್ತುತ ಎಷ್ಟು ಜನ ನಿರುದ್ಯೋಗಿಗಳಿದ್ದಾರೆ ಎಂಬುದು ಗೊತ್ತಿಲ್ಲ ಭಾರತಕ್ಕೆ ಸ್ವಾತಂತ್ರ್ಯ ಬಂದು ಸುಮಾರು 57 ವರ್ಷಗಳು ಕಳೆದರೂ ಇಲ್ಲಿಯವರೆಗೆ ಈ ಬಗ್ಗೆ ಕೇಂದ್ರ ಯೋಜನಾ ಆಯೋಗ ನ್ಯಾಷನಲ್ ಸ್ಯಾಂಪಲ್ ಸರ್ವೇ (NSS) ಸೆಂಟ್ರಲ್, ಸ್ಪ್ಯಾಟಿಸ್ಪಿಕಲ್ ಆರ್ಗನೈಜೇಷನ್ (CSO), ಇಂಡಿಯನ್ ಸ್ಪ್ಯಾಟಿಸ್ಪಿಕಲ್ ಇನ್ಸ್ಟಿಟ್ಯೂಟ್ ಮುಂತಾದ ಯಾವ ಸಂಸ್ಥೆಯಿಂದಲೂ ಈ ಬಗ್ಗೆ ಅಂಕಿ ಅಂಶ ಸಂಗ್ರಹ ಕಾರ್ಯ ನಡೆದಿಲ್ಲ. ಯಾವುದೇ ನಿಖರ ಮಾಹಿತಿಯೂ ಇಲ್ಲ. ಈ ಬಗ್ಗೆ ಇರುವ ಎಲ್ಲ ಮಾಹಿತಿಗಳೂ ಕೇವಲ ಊಹೆಯನ್ನಾಧರಿ ಸಿದ್ಧಾಗಿದೆ. ಇದರಿಂದ ನಮ್ಮ ಪ್ರಜಾಪ್ರಭುತ್ವ ಸರ್ಕಾರಗಳು ತಮ್ಮ ನಾಗರೀಕರ ಬಗ್ಗೆ ಎಷ್ಟು ಕಾಳಜಿಯನ್ನು ಇಟ್ಟುಕೊಂಡಿವೆ ಎಂಬುದು ಸ್ಪಷ್ಟವಾಗುತ್ತದೆ.

ಇಲ್ಲಿಯವರೆಗೆ ನಗರ ಪ್ರದೇಶಗಳ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿದ ನಿರುದ್ಯೋಗಿಗಳ ಸಂಖ್ಯೆಯನ್ನಾಧರಿಸಿ ದೇಶದ ಒಟ್ಟಾರೆ ನಿರುದ್ಯೋಗಿಗಳ ಸಂಖ್ಯೆಯನ್ನು ಊಹಿಸಿಕೊಳ್ಳಲಾಗುತ್ತಿದೆ. ಈ ಪ್ರಕಾರ 1956ರಲ್ಲಿ ದೇಶದಲ್ಲಿ 381 ಲಕ್ಷ ನಿರುದ್ಯೋಗಿಗಳಿದ್ದರು. ಈ ಲೆಕ್ಕಾಚಾರದಂತೆ 1952 ರಿಂದ 1971 ರವರೆಗೆ ಸುಮಾರು 11.7 ಪಟ್ಟು ಮತ್ತು 1971 ರಿಂದ 1995 ರವರೆಗೆ ಸುಮಾರು 7.5 ಪಟ್ಟು ನೋಂದಾಯಿತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದು ನಗರ ಪ್ರದೇಶಗಳಲ್ಲಿ ನೊಂದಾಯಿಸಿದ ಶಿಕ್ಷಿತ ನಿರುದ್ಯೋಗಿಗಳ ಸಂಖ್ಯೆಯಾಯಿತು. ಇನ್ನು ನೋಂದಾಯಿಸಿದ ಅಶಿಕ್ಷಿತ ಮತ್ತು ಗ್ರಾಮೀಣ ಪ್ರದೇಶದ ಎಲ್ಲರನ್ನೂ ಸೇರಿಸಿಕೊಂಡರೆ ಇದರ ಪ್ರಮಾಣ ಎಷ್ಟಾಗುವುದೆಂಬುದನ್ನು ದೇವರೆ ಬಲ್ಲ.

1956ರಲ್ಲಿ ಕೇಂದ್ರ ಯೋಜನಾ ಖಾತೆಯ ರಾಜ್ಯ ಮಂತ್ರಿ ಪಾರ್ಲಿಮೆಂಟ್ನಲ್ಲಿ ಹೇಳಿದಂತೆ ಅಂದಿಗೆ ದೇಶದಲ್ಲಿ ಸುಮಾರು 37.2 ಮಿಲಿಯನ್ ನಿರುದ್ಯೋಗಿಗಳಿದ್ದರು. 18 ರಿಂದ 59 ವರ್ಷದೊಳಗಿನ ಶೇ. 6.8 ಜನ ನಿರುದ್ಯೋಗಿಗಳಾಗಿದ್ದರು. ಲೇಬಲ್ ಮಿನಿಸ್ಟ್ರೀಯ ಲೆಕ್ಕಾಚಾರದಂತೆ ನೇ ಯೋಜನೆ ಅಂತ್ಯದ ವೇಳೆಗೆ ಅಂದರೆ 1997ರ ವೇಳೆಗೆ ನಿರುದ್ಯೋಗದ ಪ್ರಮಾಣ 54 ಮಿಲಿಯನ್.

ಭಾರತದಲ್ಲಿ ನಿರುದ್ಯೋಗದ ಗುಣಲಕ್ಷಣ


ಭಾರತದಲ್ಲಿ ಗ್ರಾಮ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದ್ದು ಇದರಲ್ಲಿ ಪುರುಷರಿಗಿಂತ ಮಹಿಳೆಯರ ದರ ಹೆಚ್ಚಾಗಿದೆ. ಶಿಕ್ಷಣ ಪಡೆಯದವರಿಗಿಂತ ಶಿಕ್ಷಿತರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಭಾರತದ ಮುಕ್ಕಾಲು ಪಾಲು ಜನರು ಕೃಷಿಯನ್ನು ಅವಲಂಬಿಸಿರುವುದರಿಂದ ಕೃಷಿ ವಲಯದಲ್ಲಿ ಹೆಚ್ಚು ಪ್ರಮಾಣದ ನಿರುದ್ಯೋಗವಿದೆ. ಪ್ರಸ್ತುತ ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗ ಪ್ರಮಾಣ ಸುಮಾರು ಶೇ. 2.

ನಿರುದ್ಯೋಗದ ವಿಧಗಳು


ಭಾರತದಲ್ಲಿ ವೈವಿಧ್ಯಮಯ ನಿರುದ್ಯೋಗ ಸಮಸ್ಯೆಗಳಿದ್ದು ಕೆಲವನ್ನು ಈ ಕೆಳಗಿನಂತೆ ಅರಿಯಬಹುದು.

1. ಋತುಮಾನದ ನಿರುದ್ಯೋಗ (Seasonal Unemployment)


ವರ್ಷದ ಕೆಲವು ಕಾಲಗಳಲ್ಲಿ ಮಾತ್ರ ಕೆಲಸವಿದ್ದು ಮಿಕ್ಕಂತೆ ನಿರುದ್ಯೋಗಿಯಾಗಿರುವುದನ್ನು ಈ ವಿಧವು ಪ್ರತಿನಿಧಿಸುತ್ತದೆ. ಉದಾಹರಣೆಗೆ ಮಳೆಯನ್ನು ನಂಬಿ ಒಕ್ಕಲುತನ ಮಾಡುವ ರೈತರು ಪ್ರತಿ ಬೆಳೆಯ ನಂತರ 4-5 ತಿಂಗಳು ನಿರುದ್ಯೋಗಿಗಳಾಗಿರುವುದು.

2. ಮರೆಮಾಚಿದ ನಿರುದ್ಯೋಗ (Disguised Unemployment)


ಒಬ್ಬರಿಗೆ ಸಾಕಾಗುವಷ್ಟು ಕೆಲಸವನ್ನು ಅನೇಕರು ಮಾಡುವುದನ್ನು ಮರೆಮಾಚಿದ ನಿರುದ್ಯೋಗ ಎನ್ನುವರು. ನಮ್ಮ ಗ್ರಾಮ ಪ್ರದೇಶಗಳಲ್ಲಿ ಸ್ವಲ್ಪವೇ ಭೂಮಿಯಲ್ಲಿ ಹಲವರು ಇದಕ್ಕೆ ಉದಾಹರಣರೆ.

3. ರಾಚನಿಕ ನಿರುದ್ಯೋಗ (Structural Unemployment)


ಆರ್ಥಿಕ ವ್ಯವಸ್ಥೆಯು ಅವಶ್ಯಕವಾದ ಉದ್ಯೋಗ ಸೃಷ್ಟಿಸದಿರುವುದು ರಾಚನಿಕ ನಿರುದ್ಯೋಗ.

4. ಮುಕ್ತ ನಿರುದ್ಯೋಗ (Open Unemployment)


ದುಡಿಯುವ ವಯಸ್ಸಿನಲ್ಲಿ ಕೆಲಸ ಸಿಗದಿರುವುದು ಮುಕ್ತ ನಿರುದ್ಯೋಗ

5.ಅರೆ ಉದ್ಯೋಗ


ತಮ್ಮ ಸಾಮಥ್ರ್ಯವಿರುವಷ್ಟು ಕೆಲಸ ಸಿಗದಿರುವುದು. ಉದಾ: ಒಬ್ಬ ವೈದ್ಯನಿಗೆ ಕೇವಲ 4 ಗಂಟೆ ಮಾತ್ರ ದುಡಿಯಲು ಅವಕಾಶ ಸಿಗುವುದು.

6.ಸುಶಿಕ್ಷಿತರ ನಿರುದ್ಯೋಗ (Educated Unemployment)


ಶಿಕ್ಷಣ ಪಡೆದು ನಿರುದ್ಯೋಗಿಗಳಾಗಿರುವುದು.

ನಿರುದ್ಯೋಗಕ್ಕೆ ಕಾರಣಗಳು:


ಆರ್ಥಿಕ ಕಾರಣ:


ಅನೇಕ ಅರ್ಥಶಾಸ್ತ್ರಜ್ಞರು ತಮ್ಮ ಪರಿಭಾಷೆಯಲ್ಲಿ ನಿರುದ್ಯೋಗಕ್ಕೆ ಕಾರಣಗಳನ್ನು ನೀಡಲೆತ್ನಿಸಿದ್ದಾರೆ.ಇವರಂತೆ ಮುಖ್ಯವಾಗಿ ಬಂಡವಾಳದ ಕೊರತೆ, ಹೂಡಿಕೆ ಕೊರತೆ, ಅತ್ಯಧಿಕ ಉತ್ಪಾದನೆ, ಸ್ಪರ್ಧೆ, ತಾಂತ್ರಿಕ ಉನ್ನತಿ, ಬೇಡಿಕೆ ಕುಸಿತ ಮುಂತಾದ ಅಂಶಗಳು ನಿರುದ್ಯೋಗಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಕಾರಣಗಳನ್ನು ಪ್ರತ್ಯೇಕಿಸಿ ನೋಡಲಾಗದು. ಪ್ರತಿಯೊಂದು ಅಂಶವೂ ಮತ್ತೊಂದರ ಜೊತೆ ನಿಕಟ ಸಂಬಂಧವನ್ನು ಹೊಂದಿರುತ್ತದೆ. ಉದಾಹರಣೆಗೆ ಮಾರುಕಟ್ಟೆಯಲ್ಲಿ ಒಂದು ಸರಕಿನ ಬೇಡಿಕೆ ಕುಸಿತವಾದರೆ ಬೆಲೆಯೂ ಕುಸಿಯುತ್ತದೆ. ಇದರಿಂದ ಕಾರ್ಖಾನೆಯು ತನ್ನ ನೌಕರರನ್ನು ಕಡಿತಗೊಳಿಸುತ್ತದೆ ಅಥವಾ ಮುಚ್ಚಲ್ಪಡುತ್ತದೆ. ಅದೇ ರೀತಿ ಬೇಡಿಕೆ ಕುಸಿಯಲು ಆರ್ಥಿಕ ಅಭಿವೃದ್ಧಿ ದರ ಕಾರಣವಾಗುತ್ತದೆ. ಇದರಿಂದ ಹೂಡಿಕೆ ದರವೂ ಕುಸಿಯುತ್ತದೆ. ಹೀಗೆ ಇದೊಂದು ಚಕ್ರದಂತೆ ಪರಸ್ಪರ ಸಂಬಂಧ ಹೊಂದಿರುತ್ತದೆ. ಅದೇ ರೀತಿ ಬೇಡಿಕೆ ಪೂರೈಕೆಯ ಸಮತೋಲನ ತಪ್ಪುವುದೂ ಕೂಡ ನಿರುದ್ಯೋಗವನ್ನು ಹೆಚ್ಚಿಸುತ್ತದೆ.

ಸಾಮಾಜಿಕ ಕಾರಣ:


ಒಬ್ಬ ವ್ಯಕ್ತಿ ತನ್ನ ಅಥವಾ ತನ್ನ ಕುಟುಂಬದ ಸ್ಥಾನಮಾನಕ್ಕೆ ಧಕ್ಕೆಯಾಗಬಹುದು ಎಂಬ ಕಾರಣದಿಂದ ದೊರಕುವ ಕೆಲಸವನ್ನು ನಿರಾಕರಿಸಿ ನಿರುದ್ಯೋಗಿಯಾಗಿರಬಹುದು. ತಮ್ಮ ಸಾಮಥ್ರ್ಯ ಮತ್ತು ಅರ್ಹತೆಗಿಂತ ಉನ್ನತ ಸ್ಥಾನಮಾನದ ಹುದ್ದೆಗಳನ್ನು ನಿರೀಕ್ಷಿಸುತ್ತ ಅದೇ ಭ್ರಮೆಯಲ್ಲಿ ನಿರುದ್ಯೋಗಿಗಳಾಗಿ ಉಳಿಯಬಹುದು.
ನಿರಂತರವಾಗಿ ತೀವ್ರತರವಾಗಿ ಹೆಚ್ಚುತ್ತಿರುವ ಜನಸಂಖ್ಯೆ ನಿರುದ್ಯೋಗಕ್ಕೆ ಪ್ರಮುಖ ಕಾರಣವಾಗಿದೆ. ಈ ರೀತಿ ಹೆಚ್ಚುವ ಜನಸಂಖ್ಯೆಯು ಅವಶ್ಯಕತೆಗಳನ್ನು ಪೂರೈಸುವ ಸಂಪನ್ಮೂಲ ಕೊರತೆ, ತಾಂತಿಕ ಕೊರತೆ, ಕೌಶಲ್ಯಗಳ ಕೊರತೆ ಮತ್ತು ಅವಶ್ಯಕತೆಗಿಂತ ಕಡಿಮೆ ಉದ್ಯೋಗ ಸೃಷ್ಟಿ ಮುಂತಾದವುಗಳಿಂದ ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುತ್ತದೆ.
ದೋಷಪೂರಿತ ಶಿಕ್ಷಣ ವ್ಯವಸ್ಥೆಯಿಂದ ಉಂಟಾದ ಪ್ರಸ್ತುತ ಮಾರುಕಟ್ಟೆಗೆ ಅವಶ್ಯವಾದ ಕೌಶಲ್ಯ ಹೊಂದಿದ ಮಾನವ ಶಕ್ತಿಯ ಕೊರತೆಯಿಂದ ನಿರುದ್ಯೋಗ ಹೆಚ್ಚಾಗುವುದು. ಸುಮಾರು 150 ವರ್ಷಗಳ ಹಿಂದೆ ಗುಮಾಸ್ತರನ್ನು ಸೃಷ್ಟಿಸಲು ರಚಿಸಿದ ಶೈಕ್ಷಣಿಕ ವ್ಯವಸ್ಥೆ ಮತ್ತು ಪಠ್ಯಗಳನ್ನು ಇಂದಿಗೂ ಪರಿವರ್ತಿಸದಿರುವುದು ಶಿಕ್ಷಣದ ವ್ಯವಸ್ಥೆಯ ಮೂಲಭೂತ ದೋಷವಾಗಿದೆ. ಪ್ರಸ್ತುತ ಪ್ರಾಥಮಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ಸಿಗದಿರುವುದು, ಉದ್ಯೋಗ ಕೇಂದ್ರಿತ ಶಿಕ್ಷಣ ಕೋರ್ಸಗಳ ತೀವ್ರ ಕೊರತೆಗಳೂ ನಿರುದ್ಯೋಗಕ್ಕೆ ಕಾರಣವಾಗುತ್ತವೆ. ರಾಷ್ಟ್ರೀಯ ಬಜೆಟ್ನ ಶೇ.5ರಷ್ಟು ಸಂಪನ್ಮೂಲ ಬಳಕೆಯಾಗುವ ನಮ್ಮ ಬೃಹತ್ ಶಿಕ್ಷಣ ವ್ಯವಸ್ಥೆಗೆ ಅವಶ್ಯಕವಾದ ಸಂಪನ್ಮೂಲದ ಕೊರತೆಯೂ ನಿರುದ್ಯೋಗಕ್ಕೆ ಕಾರಣವಾಗುವುದು. 1989-90 ರಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾದವರು ಸುಮಾರು ಲಕ್ಷ ಜನ ನಿರಂತರ ಹೆಚ್ಚುತ್ತಿರುವ ಈ ಸಂಖ್ಯೆ? ಇವರೆಲ್ಲರಿಗೂ ಉದ್ಯೋಗವೆಲ್ಲಿದೆ?
ವೈಯಕ್ತಿಕ ಕಾರಣಗಳಾದ ಅನುಭವದ ಕೊರತೆ, ಅಸಮರ್ಥತೆ, ರೋಗ ರುಜಿನ, ಉತ್ಸಾಹದ ಕೊರತೆ ಮುಂತಾದವುಗಳೂ ನಿರುದ್ಯೋಗಕ್ಕೆ ಕಾರಣವಾಗುತ್ತದೆ.
ಭೌಗೋಳಿಕ ಚಲನೆಯಿಲ್ಲದಿರುವುದು ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಗಳು ಲಭ್ಯವಿದ್ದು ಕೆಲಸಗಾರರು ಸಿಗದಿರಬಹುದು. ಇದರ ಬಗ್ಗೆ ಬೇರೆ ಪ್ರದೇಶದವರಿಗೆ ಮಾಹಿತಿ ಇಲ್ಲದಿರಬಹುದು. ಇದ್ದರೂ ಅಲ್ಲಿನ ಭಾಷೆ, ಸಂಸ್ಕೃತಿ, ವಾತಾವರಣ, ಆಹಾರ ಮುಂತಾದವುಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದಿರಬಹುದು.

ಇತರ ಕಾರಣಗಳು


• ರಾಜಕೀಯ ಅಸ್ಥಿರತೆ
• ದೋಷಪೂರಿತ ಆರ್ಥಿಕ ವ್ಯವಸ್ಥೆ
• ದೋಷಪೂರಿತ ಯೋಜನೆಗಳು
• ಭ್ರಷ್ಟಾಚಾರ
• ವಿದ್ಯುಚ್ಛಕ್ತಿ ಕೊರತೆ
• ನೈಸರ್ಗಿಕ ಸಂಪನ್ಮೂಲ ಬಳಸಿಕೊಳ್ಳುವ ಜ್ಞಾನ, ತಾಂತ್ರಿಕ ಇಲ್ಲದಿರುವುದು.

ಪರಿಣಾಮಗಳು


• ದೇಶದ್ರೊಹಿ ಕೆಲಸ, ಭಯೋತ್ಪದನಾ ಕೃತ್ಯ , ಪ್ರಕ್ಷೋಭೆಗಳು ಉಂಟಾಗುತ್ತವೆ.
• ನಿರುದ್ಯೋಗವು ವ್ಯಕ್ತಿ ಕುಟುಂಬ ಮತ್ತು ಸಮಾಜದ ಮೇಲೆ ತೀವ್ರ ತರನಾದ ದುಷ್ಟರಿಣಾಮ ಬೀರುತ್ತದೆ.
• ನಿರುದ್ಯೋಗದಿಂದ ವ್ಯಕ್ತಿಯು ಆಶಾಭಂಗ, ಕೋಪ, ಆತ್ಮನಿಂದನೆ, ಕೀಳರಿಮೆ, ನೋವು, ಮಾನಸಿಕ ಹಿಂಸೆಯ ಪರಮಾವಧಿಯನ್ನು ಮುಟ್ಟುತ್ತಾನೆ.
• ತನ್ನೊಳಗಿನ ಎಲ್ಲ ಒತ್ತಡವನ್ನು ಸಮಾಜದ ಮೇಲೆ ತೀರಿಸಿಕೊಳ್ಳುತ್ತಾನೆ
• ಭಯೋತ್ಪದನೆ, ನಕ್ಸಲ್ ವಾದಿಗಳು, ವಿಕೃತ ಮನಸ್ಥಿತಿ, ಸಮಾಜವು ಸ್ನಿಗ್ದತೆಗೊಳ್ಳುತ್ತದೆ.
• ಅಭಿವೃದ್ದಿ ಕುಂಠಿತಗೊಳ್ಳುತ್ತದೆ
• ಯುವ ಸಮಾಜಕ್ಕೆ ಮಾನಸಿಕ ಕಿನ್ನತೆ ಕಾಡವುದು,
• ಅಸ್ಥಿರ, ಅಭದ್ರ ಸಮಾಜ ನಿರ್ಮಾಣವಾಗುತ್ತದೆ.