ಮಣ್ಣುಗಳು

 

ಶಿಲೆಗಳು ಒಡೆದು ಪುಡಿಪುಡಿಯಾಗಿ / ಸಣ್ಣ ಸಣ್ಣ ಕಣಗಳಾಗಿ ಪರಿವರ್ತನೆಗೊಂಡು ಭೂಮಿಯ ಮೇಲೆ ತೆಳುವಾಗಿ ಹರಡಿದ ಹೊರಪದರಿಗೆ ಮಣ್ಣು ಎನ್ನಲಾಗುವುದು ಅಥವಾ ಸಸ್ಯಗಳು ಬೆಳೆಯ ಬಹುದಾದ ಭೂಮಿಯ ಮೇಲಿನ ಮೃದು ಮತ್ತು ಪೊಳ್ಳಾದ ಸೂಕ್ಷ್ಮ ಶಿಲಾ ದ್ರವ್ಯಕ್ಕೆ ಮಣ್ಣು ಎನ್ನುವರು. ನಿಸರ್ಗದಲ್ಲಿ ನಡೆದಿರುವ ಭೌತಿಕ, ರಾಸಾಯನಿಕ, ಜೈವಿಕ ಕ್ರಿಯೆಗಳಿಂದ ಶಿಲಾಬಂಡೆಗಳು ಶಿಥಿಲೀಕರಣ ಹೊಂದಿ ಅತೀ ಸೂಕ್ಷ್ಮ ಗಾತ್ರದ ಜೇಡಿ ಮತ್ತು ವಿಶಿಷ್ಟ ಪದರುಗಳನ್ನೊಳಗೊಂಡ ಮಣ್ಣು ರೂಪುಗೊಳ್ಳುತ್ತದೆ. ಮೇಲ್ಪದರ ಮಣ್ಣು ರಚನೆಯಾಗಲು 100-2500 ವರ್ಷಗಳು ಬೇಕಾಗುತ್ತದೆ. ಮಣ್ಣಿನ ಅಧ್ಯಯನವನ್ನು ಪೆಡೋಲಜಿ (Pedology) ಎನ್ನುವರು.

ವಿಧಗಳು


ಈ ಮಣ್ಣು ಒಳಗೊಂಡಿರುವ ಕಣ ರಚನೆಯ ಮೇಲಿಂದ 3 ವಿಧಗಳಾಗಿ ವಿಂಗಡಿಸಬಹುದು.
(1) ಮರಳು ಮಣ್ಣು (Sand Soil)
(2) ರೇವೇ ಮಣ್ಣು (Silt Soil)
(3) ಜೇಡಿ ಮಣ್ಣು (Clay Soil)

(1) ಮರಳು ಮಣ್ಣು (Sand Soil)


ಇದು ದಪ್ಪವಾ ದಅಂದರೆ ಕಣಗಳ ಗಾತ್ರವು 20 ಮಿ.ಮೀ.ನಿಂದ 0.02 ಮಿ.ಮೀ. ವರೆಗೆ ದಪ್ಪವಾದ ಕಣಗಳಿಂದ ಕೂಡಿದ್ದು ಸಸ್ಯ ಬೆಳವಣಿಗೆಗೆ ಯೋಗ್ಯವಾಗಿರುವುದಿಲ್ಲ. ಇದು ಶಿಥಿಲೀಕರಣದಿಂದ ಘರ್ಷಣೆ ಉಜ್ಜುವಿಕೆಯಿಂದ ನಿರ್ಮಾಣಗೊಂಡಿರುತ್ತದೆ. ಕಣಗಳ ನಡುವೆ ಅಗಲವಾದ ರಂಧ್ರಗಳಿಂದ ಕೂಡಿರುತ್ತದೆ. ಇದರಿಂದಾಗಿ ನೀರು ಸುಲಭವಾಗಿ ಕೆಳಗಿಳಿಯುತ್ತದೆ.

(2) ರೇವೇ ಮಣ್ಣು (Silt Soil)


ಈ ಕಣಗಳ ಗಾತ್ರ 0.02 – 0.002 mm ನಷ್ಟು ಇರುತ್ತದೆ. ಕಣಗಳ ಗಾತ್ರವು ಸ್ವಲ್ಪ ಚಿಕ್ಕದಾಗಿರುವುದರಿಂದ ತೇವಾಂಶವು ಹೆಚ್ಚು ಕಾಲ ಉಳಿಯುತ್ತದೆ ಮತ್ತು ಸಾವಯವ ಪದಾರ್ಥಗಳು ಇದರೊಂದಿಗೆ ಸೇರ್ಪಡೆಯಾಗುವುದರಿಂದ ಮತ್ತು ಫಲವತ್ತತೆಯಿಂದ ಕೂಡಿಕೊಂಡಿದ್ದು ಸಸ್ಯಗಳ ಬೆಳವಣಿಗೆಗೆ ಯೋಗ್ಯವಾಗಿರುವುದು. ಸುಣ್ಣದ ಅಂಶವನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ. ಇದು ಹೆಚ್ಚಾಗಿ ತಿಳಿ ಕಂದು ಹಳದಿ ಬಣ್ಣ ಹೊಂದಿದ್ದು ರಂಜಕ, ಪೊಟ್ಯಾಸ್ ಹೆಚ್ಚಾಗಿ ಕಂಡು ಬರುತ್ತದೆ.

(3) ಜೇಡಿ ಮಣ್ಣು (Clay Soil)


ಅತೀ ಸೂಕ್ಷ್ಮವಾದ ಮಣ್ಣಿನ ಕಣಗಳಿಂದ ಕೂಡಿದ್ದು ಕಣಗಳ ಗಾತ್ರವು – 0.002 mm ಗಿಂತ ಚಿಕ್ಕದಾಗಿರುತ್ತದೆ. ಇದು ಸಿಲಿಕೇಟ್ ಮತ್ತು ಅಲ್ಯುಮಿನಿಯಂ ಹೊಂದಿದ್ದು ಕಣಗಳ ಗಾತ್ರವು ಅತೀ ಚಿಕ್ಕದಾಗಿರುವುದರಿಂದ ಜಲಾಮಶವು ಬೇಗ ಒಣಗದೆ ಬಹುದಿನಗಳವರೆಗೆ ಉಳಿಯುವುದು. ಅಲ್ಲದೆ ಒತ್ತೊತ್ತಾದ ಕಣಗಳಿಂದ ಕೂಡಿರುವುದರಿಂದ ಹೆಚ್ಚು ನೀರು ಮಣ್ಣಿನಲ್ಲಿ ಇಂಗಲ್ಪಡುವುದಿಲ್ಲ. ಅತ್ಯಧಿಕ ಮಳೆಯಿಂದಾಗಿ ಮಣ್ಣಿನಲ್ಲಿ ಜಿಗುಟುತನ ಹೆಚ್ಚಾಗಿ ಕಂಡು ಬರುತ್ತದೆ. ಇದು ಹೆಚ್ಚಾಗಿ ಸಾವಯವ ಪದಾರ್ಥಗಳಿಂದ ಕೂಡಿ ಕೊಂಡಿದ್ದು ವ್ಯವಸಾಯಕ್ಕೆ ಅತೀ ಉಪಯುಕ್ತವಾಗಿರುತ್ತದೆ.