ಆಫ್ರಿಕಾ ಖಂಡ(Africa continent)

 

• ಆಫ್ರಿಕ ಖಂಡವು ಏಷ್ಯದ ನಂತರ ಪ್ರಪಂಚದ ಎರಡನೆಯ ಅತ್ಯಂತ ದೊಡ್ಡ ಖಂಡವಾಗಿದೆ. ಇದು ಜನ ಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಆಫ್ರಿಕ 52 ದೇಶಗಳನ್ನು ಹೊಂದಿದೆ.
• ಆಫ್ರಿಕದ ಪಶ್ಚಿಮ ಭಾಗದಲ್ಲಿ ಪ್ರಧಾನ ರೇಖಾಂಶವು ಉತ್ತರ-ದಕ್ಷಿಣವಾಗಿ ಹಾಯ್ದು ಹೋಗುತ್ತದೆ. ವಿಶೇಷ ಸಂಗತಿ ಎಂದರೆ ಈ ಖಂಡದಲ್ಲಿ ಕರ್ಕಾಟಕ ವೃತ್ತ ಮತ್ತು ಮಕರ ವೃತ್ತಗಳೆರಡೂ ಹಾಯ್ದುಹೋಗಿವೆ.
• ವಿಸ್ತೀರ್ಣ: ಆಫ್ರಿಕದ ಒಟ್ಟು ವಿಸ್ತೀರ್ಣ 30.4 ಮಿಲಿಯನ್ ಚ.ಕಿ.ಮೀ. ಇದು ದಕ್ಷಿಣೋತ್ತರವಾಗಿ 8000 ಕಿ.ಮೀ. ಉದ್ದ ಹಾಗೂ ಪೂರ್ವ-ಪಶ್ಚಿಮವಾಗಿ 7400 ಕಿ.ಮೀ ಅಗಲವಾಗಿದೆ. ಆಲ್- ಘಿರಮ್ (ಟುನಿಸಿಯ) ಆಫ್ರಿಕದ ಉತ್ತರ ತುದಿಯಾದರೆ ಅಗುಲ್ಹಾಸ್ (ದಕ್ಷಿಣ ಆಫ್ರಿಕ) ಭೂಶಿರವು ದಕ್ಷಿಣ ತುದಿಯಾಗಿದೆ.
• ಆಫ್ರಿಕದ ಬಹುತೇಕ ಭೂಭಾಗವು ಒಂದಿಲ್ಲೊಂದು ಸಮುದ್ರ ಅಥವಾ ಮಹಾಸಾಗರಗಳಿಂದ ಸುತ್ತುವರೆಯಲ್ಪಟ್ಟಿದೆ. ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರ, ಪಶ್ಚಿಮಕ್ಕೆ ಅಟ್ಲಾಂಟಿಕ್ ಸಾಗರ, ಪೂರ್ವಕ್ಕೆ ಕೆಂಪು ಸಮುದ್ರ ಹಾಗೂ ಹಿಂದೂ ಸಾಗರಗಳು ಸುತ್ತುವರಿದಿವೆ.

ಪ್ರಾಕೃತಿಕ ಲಕ್ಷಣಗಳು


ಆಫ್ರಿಕದ ತಗ್ಗುಪ್ರದೇಶಗಳು


ಆಫ್ರಿಕದಲ್ಲಿ ಐದು ಪ್ರಮುಖ ತಗ್ಗು ಪ್ರದೇಶಗಳಿವೆ. ಅವುಗಳ ವಿವರ ಕೆಳಕಂಡಂತಿದೆ.
1. ಸುಡಾನ್ ತಗ್ಗುಪ್ರದೇಶವು ಬಿಳಿ ಮತ್ತು ನೀಲಿ ನೈಲ್ನದಿಗಳು ಹರಿಯುವ ಪ್ರದೇಶ. ಪ್ರಪಂಚದಲ್ಲೇ ಅತಿ ವಿಸ್ತಾರವಾಗಿರುವ ಈ ಜವುಗು ಭೂಮಿಯನ್ನು ‘ಸಡ್ ಎಂದು ಕರೆಯುವರು.
2. ಚಾಡ್ ತಗ್ಗುಪ್ರದೇಶವು ಚಾಡ್ ಸರೋವರದಿಂದಾವರಿಸಿದೆ.
3. ಜೋಫ್ ತಗ್ಗು ಪ್ರದೇಶವು ಸಹರ ಮರುಭೂಮಿಯ ಪಶ್ಚಿಮ ಭಾಗವನ್ನೊಳಗೊಂಡಿದೆ ಮತ್ತು ಮಾರಿಟಾನಿಯ-ಮಾಲಿ ಗಡಿಯ ಉದ್ದಕ್ಕೂ ಸಾಕಷ್ಟು ವಿಸ್ತರಿಸಿದೆ.
4. ಕಾಂಗೊ ತಗ್ಗು ಪ್ರದೇಶವು ಒಂದು ರಚನಾತ್ಮಕ ಭೂಸ್ವರೂಪವಾಗಿದ್ದು ಅದು ಪ್ರಸ್ತಭೂಮಿಯಿಂದ ಸುತ್ತುವರಿಯಲ್ಪಟ್ಟಿದೆ.
5. ಕಲಹರಿ ತಗ್ಗು ಪ್ರದೇಶವು ಬಹಳಷ್ಟು ಮಟ್ಟಿಗೆ ಮರುಭೂಮಿ ಮತ್ತು ಸ್ಟೆಪ್ಪಿ ಹುಲ್ಲುಗಾವಲಿನ ಭಾಗ. ಇದು ಪ್ರಸ್ಥಭೂಮಿಗಳಿಂದ ಸುತ್ತುವರಿದಿದೆ.

ಸರೋವರಗಳು


• ಟಾಂಗನಿಕ ಸರೋವರವು ಪ್ರಪಂಚದ ಎರಡನೆಯ ಅತಿ ಆಳವಾದ ಸರೋವರವಾಗಿದೆ. ಅದು ಸುಮಾರು 1,436 ಮೀ ಆಳವಾಗಿದೆ.
• ವಿಕ್ಟೋರಿಯಾ ಸರೋವರವು ಆಫ್ರಿಕದ ಬಹು ದೊಡ್ಡ ಸರೋವರವಾಗಿದೆ. ಅದು ಸುಮಾರು 69,481 ಚ.ಕಿ.ಮೀ ವಿಸ್ತಾರವಾಗಿದೆ. ಇಲ್ಲಿಂದ ನೈಲ್ನದಿ ಉಗಮವಾಗುತ್ತದೆ.

ಪರ್ವತಗಳು


• ಅಟ್ಲಾಸ್ ಸರಣಿ: ಇವು ನಮ್ಮ ಭಾರತದ ಹಿಮಾಲಯ ಪರ್ವತಗಳಂತೆಯೇ ಮಡಿಕೆ ಪರ್ವತಗಳಾಗಿವೆ. ಇವು ದಕ್ಷಿಣ ಯುರೋಪಿನ ಪರ್ವತಗಳ ಮುಂದುವರಿಕೆಗಳಾಗಿವೆ. ಮೌಂಟ್ ಟಾಬ್ಕಾಲ್ ಎತ್ತರವಾದ ಶಿಖರ. ಅಟ್ಲಾಸ್ ಸರಣಿಗಳು ಅಲ್ಜಿರಿಯ, ಮೊರಾಕೊ ಮತ್ತು ಟುನಿಸಿಯಗಳಲ್ಲಿ ಹಬ್ಬಿವೆ.
• ಡ್ರೇಕನ್ಸ್ ಬರ್ಗ್ ಪರ್ವತಗಳು: ಆಫ್ರಿಕದ ಆಗ್ನೇಯ ಸಮುದ್ರ ತೀರದ ಉದ್ದಕ್ಕೂ ಇವು ಹಬ್ಬಿವೆ.
• ಕಿಲಿಮಾಂಜರೊ ಪರ್ವತಗಳು: ಈ ಪರ್ವತ ಕಿಲಿಮಾಂಜರೊ ಪರ್ವತ ಶ್ರೇಣಿಯು ಆಫ್ರಿಕದ ಪೂರ್ವ ಭಾಗದಲ್ಲಿದೆ. ಇದು ಆಫ್ರಿಕ ಖಂಡದ ಅತ್ಯಂತ ಎತ್ತರವಾದ ಶಿಖರವನ್ನು ಹೊಂದಿದೆ. ಅದರ ಎತ್ತರ 5,895 ಮೀಟರುಗಳು.

ಸೂಯೇಜ್ ಕಾಲುವೆ


ಸೂಯೇಜ್ ಕಾಲುವೆವು ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳ ನಡುವಣ ಕಿರಿದಾದ ಭೂಭಾಗವಾಗಿದೆ. ಅದು ಆಫ್ರಿಕ ಮತ್ತು ಏಷ್ಯ ಖಂಡಗಳನ್ನು ಸೇರಿಸುತ್ತದೆ. ಇದನ್ನು 1869 ರಲ್ಲಿ ಕಟ್ಟಲಾಗಿದೆ,

ಜಲಸಂಪನ್ಮೂಲಗಳು


ಆಫ್ರಿಕದ ನದಿಗಳು


ಆಫ್ರಿಕ ಖಂಡವು ನಾಲ್ಕು ಪ್ರಮುಖ ನದಿಗಳನ್ನು ಹೊಂದಿದೆ. ಅವುಗಳೆಂದರೆ - ನೈಲ್, ಕಾಂಗೊ (ಜೈರೆ), ನೈಜರ್ ಮತ್ತು ಜಾಂಬೆಜಿ. ಆಫ್ರಿಕದ ಇತರ ಮಹತ್ವದ ನದಿಗಳೆಂದರೆ: ಸೆನೆಗಲ್, ಆರೆಂಜ್ ಮತ್ತು ಲಿಂಪೋಪೋಗಳಾಗಿವೆ.

ನೈಲ್ ನದಿ


ನೈಲ್ ನದಿಯು ಜಗತ್ತಿನ ಅತ್ಯಂತ ಉದ್ದವಾದ ನದಿ. ಇದು 6,650 ಕಿ.ಮೀ ಉದ್ದ ಹರಿಯುತ್ತದೆ. ವಿಕ್ಟೋರಿಯ ಸರೋವರದಲ್ಲಿ ಉಗಮಗೊಂಡು ಸಹರಾ ಮರುಭೂಮಿಯಗುಂಟ ಉತ್ತರಾಭಿಮುಖವಾಗಿ ಹರಿದು ಮೆಡಿಟರೇನಿಯನ್ ಸಮುದ್ರದಲ್ಲಿ ಸಂಗಮಗೊಳ್ಳುತ್ತದೆ. ನೈಲ್ನದಿಯ ಬಯಲು ಅತ್ಯಂತ ಫಲವತ್ತಾಗಿದೆ. ಸಹಸ್ರಾರು ಜನರ ಬದುಕಿಗೆ ನೆರವಾಗಿದ್ದು, ಜನರು ಅದರ ನೀರನ್ನು ನೀರಾವರಿಗಾಗಿ ಬಳಸುತ್ತಾ ಜೀವನ ಸಾಗಿಸುತ್ತಿದ್ದಾರೆ

ಕಾಂಗೋ ನದಿ


ಕಾಂಗೋ ಅಥವಾ ಜೈರೆ ನದಿಯು ಆಫ್ರಿಕದ ಎರಡನೆಯ ಉದ್ದವಾದ ನದಿ. ಆಫ್ರಿಕದ ಜನ ಈ ನದಿಯನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಇದು 4640 ಕಿ.ಮೀ ದೂರ ಹರಿಯುತ್ತ ಅಟ್ಲಾಂಟಿಕ್ ಸಾಗರ ಸೇರುತ್ತದೆ. ಇದು ಆಫ್ರಿಕದ ಮಧ್ಯಭಾಗದಲ್ಲಿ ಸಮಭಾಜಕ ವೃತ್ತದ ಅರಣ್ಯಗಳ ನಡುವೆ ಹರಿಯುತ್ತದೆ. ಪ್ರಸಿದ್ಧ ಲಿವಿಂಗ್ಸ್ಟನ್ ಜಲಪಾತವನ್ನು ನಿರ್ಮಿಸುತ್ತದೆ. ಆದರೆ ನದಿ ಮುಖಜ ಭೂಮಿ ಹೊಂದಿಲ್ಲ.

ನೈಜರ್ ನದಿ


ಆಫ್ರಿಕದ ಮೂರನೇ ಉದ್ದವಾದ ನದಿ ಇದಾಗಿದೆ. ಇದು ಕೂಡಾ ಅಟ್ಲಾಂಟಿಕ್ ಮಹಾಸಾಗರವನ್ನು ಕೂಡಿಕೊಳ್ಳುತ್ತದೆ. ಈ ನದಿಯ ಉದ್ದ 4000 ಕಿ.ಮೀ.

ಜಾಂಬೆಜಿ ನದಿ


ಆಫ್ರಿಕದ ನಾಲ್ಕನೆಯ ಉದ್ದವಾದ ನದಿ ಇದಾಗಿದೆ. ಇದು ಕೇಂದ್ರ ಆಫ್ರಿಕ ಪ್ರದೇಶದಲ್ಲಿ ಹುಟ್ಟಿ ಆಗ್ನೇಯದ ಕಡೆಗೆ ಹರಿಯುತ್ತದೆ. ಹಿಂದೂ ಮಹಾಸಾಗರದಲ್ಲಿ ಸೇರುತ್ತದೆ. ಇದು ತನ್ನ ಪಾತ್ರದ ಉದ್ದಕ್ಕೂ ಸಾಕಷ್ಟು ತ್ವರಿತಪ್ರವಾಹ ಹಾಗೂ ಜಲಪಾತಗಳನ್ನು ಉಂಟುಮಾಡಿದೆ. ಅವುಗಳಲ್ಲಿ ಅತ್ಯಂತ ವಿಶಿಷ್ಟವಾದುದು ವಿಕ್ಟೋರಿಯ ಜಲಪಾತ.

ಸೆನೆಗಲ್‍ ನದಿ


ಇದು ಗಿನಿಯ ಘೌಟಾ ಜಾಲ್ಲೊನ್ ಪ್ರಸ್ಥಭೂಮಿಯಲ್ಲಿ ಉಗಮ ಹೊಂದುತ್ತದೆ. ಅನಂತರ ವಾಯವ್ಯಕ್ಕೆ ಸುಮಾರು 1640 ಕಿ.ಮೀ. ಹರಿದು, ಅಂತಿಮವಾಗಿ ಅಟ್ಲಾಂಟಿಕ್ ಸಾಗರ ಸೇರುವುದು.

ವಾಯುಗುಣ


• ಅತ್ಯಂತ ಉದ್ದ ಹಾಗೂ ಅಗಲವಾದ ಆಫ್ರಿಕಾ ಖಂಡವು ಉತ್ತರಾರ್ಧಗೋಳ ಮತ್ತು ದಕ್ಷಿಣಾರ್ಧಗೋಳದಲ್ಲಿ ವಿಸ್ತರಿಸಿದೆ. ಹೀಗಾಗಿ ಇದನ್ನು ಕೇಂದ್ರಸ್ಥಾನ ಭೂಖಂಡವೆಂದು ಕರೆಯಲಾಗಿದೆ. ಸಹರ ಮರುಭೂಮಿಯು ಆಫ್ರಿಕದ ಉತ್ತರದ ಭಾಗವನ್ನು ಆವರಿಸಿದ್ದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಮರುಭೂಮಿ.
• ಈ ಭೂಖಂಡದ ಮಧ್ಯಭಾಗದಲ್ಲಿ ಸಮಭಾಜಕ ವೃತ್ತವು ಹಾಯ್ದು ಹೋಗಿರುವುದರಿಂದ ಸೂರ್ಯನ ಕಿರಣಗಳು ಲಂಬವಾಗಿ ಪ್ರಸರಿಸುತ್ತವೆ. ಆದ್ದರಿಂದ ಈ ಖಂಡದಲ್ಲಿ ಉಷ್ಣವಲಯದ ವಾಯುಗುಣವಿದೆ.
• ಆಫ್ರಿಕಾ ಖಂಡದಲ್ಲಿ ಮೊಸಾಂಬಿಕ್ ಉಷ್ಣ ಸಾಗರ ಪ್ರವಾಹವು ಹೆಚ್ಚು ತೇವಾಂಶವನ್ನು ತರುವುದರೊಂದಿಗೆ ಮಳೆ ಸುರಿಸುತ್ತದೆ.
• ಎತ್ತರವುಳ್ಳ ಪರ್ವತಗಳು ಇಲ್ಲದಿರುವುದು ಹಾಗೂ ವಾಯುಗುಣದ ಇತರೆ ವಿಭಾಜಕಗಳ ಕೊರತೆಯು ಇಲ್ಲಿ ಉಷ್ಣವಲಯದ ವಾಯುವಿನ ಮುಕ್ತಚಲನೆಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ ವಾಯುಗುಣದಲ್ಲಿ ಬದಲಾವಣೆಯು ನಿಧಾನವಾಗಿ ಸಾಗುವುದು.
• ಆಫ್ರಿಕದ ವಾಯುಗುಣದ ಮೇಲೆ ಮಳೆಯ ಹಂಚಿಕೆಯೂ ಮಹತ್ವದ ಪಾತ್ರವಹಿಸುತ್ತದೆ. ಸಮಭಾಜಕ ವೃತ್ತದ ಬಳಿ ಮಳೆಯು ಹೆಚ್ಚಾಗಿರುತ್ತದೆ. ಈ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ಮಳೆಯು 200 ಸೆಂ.ಮೀ., ಆಗಿರುತ್ತದೆ ಮತ್ತು ಸಮಭಾಜಕ ವೃತ್ತದಿಂದ ದೂರ ಹೋದಂತೆ ಮಳೆ ಕಡಿಮೆಯಾಗುತ್ತದೆ. ಸಹರ, ಕಲಹರಿ ಮತ್ತು ನಮೀಬಿಯ ಪ್ರದೇಶಗಳಲ್ಲಿ ಮಳೆ ಕೇವಲ 15 ಸೆಂ.ಮೀ ಆಗಿರುತ್ತದೆ. ಆದಾಗ್ಯೂ ಕ್ಯಾಮರೂನ್ ಆಫ್ರಿಕದ ಅತ್ಯಂತ ತೇವದ ಪ್ರದೇಶವಾಗಿದ್ದು 1016 ಸೆಂ.ಮೀ ವಾರ್ಷಿಕ ಸರಾಸರಿ ಮಳೆಯನ್ನು ಪಡೆಯುತ್ತದೆ.
• ಸವನ್ನಮಾದರಿ ವಾಯುಗುಣ ಪ್ರದೇಶ: ಇದು ಸೋಮಾಲಿಯ, ಇಥಿಯೋಪಿಯ, ಸುಡಾನ್, ಚಾಡ್ ಮತ್ತು ನೈಜರ್ ಪ್ರಾಂತ್ಯಗಳ ಭಾಗಗಳನ್ನೊಳಗೊಂಡಿದೆ. ಈ ಮಾದರಿಯ ವಾಯುಗುಣವು ಹೆಚ್ಚಾಗಿ ಸುಡಾನ್ನಲ್ಲಿ ಕಂಡುಬರುವುದು. ಹೀಗಾಗಿ ಇದನ್ನು ‘ಸುಡಾನ್ ಮಾದರಿ ವಾಯುಗುಣ’ ಎಂತಲೂ ಕರೆಯುವರು.

ಸ್ವಾಭಾವಿಕ ಸಸ್ಯವರ್ಗ


• ಸಮಭಾಜಕ ವೃತ್ತದ ಅತಿ ಉಷ್ಣ ಮತ್ತು ಆಧ್ರ್ರಭರಿತ ವಾಯುಗುಣವು ಅಲ್ಲಿ ದಟ್ಟವಾದ ಕಾಡು ಬೆಳೆಯುವಂತೆ ಮಾಡಿದೆ. ಮರಗಳು ಎತ್ತರವಾಗಿ ಬೆಳೆಯುತ್ತವೆ. ಸಮಭಾಜಕ ವೃತ್ತದ ಸದಾಹಸಿರಾಗಿರುವ ಅರಣ್ಯಗಳ ಮುಖ್ಯ ಲಕ್ಷಣವೆಂದರೆ ಅವೆಲ್ಲ ಅಗಲವಾದ ಎಲೆಗಳನ್ನುಹೊಂದಿವೆ. ಇಲ್ಲಿ ಉಷ್ಣವಲಯದ ಬೆಲೆಬಾಳುವ ಗಟ್ಟಿ ಮರಗಳಾದ ರಬ್ಬರ್, ಬೀಟೆ, ಎಬೋನಿ, ಸಿಂಕೋನ, ತೇಗ, ತಾಳೆ, ಕರಿಮರ ಮುಂತಾದ ಮರಗಳು ಬೆಳೆಯುತ್ತವೆ.
• ಮ್ಯಾಂಗ್ರೋವ್ ಸಸ್ಯಗಳು ಸಮುದ್ರದ ಅಳಿವೆಗಳ ಜವುಗು ಪ್ರದೇಶದಲ್ಲಿ ಬೆಳೆಯುತ್ತವೆ.
• ಸವನ್ನ ಕಾಡುಗಳು ಮುಳ್ಳು ಕಂಟಿ ಮತ್ತು ಹುಲ್ಲುಗಾವಲುಗಳಿಗೆ ಹೆಸರಾಗಿವೆ. ಮುಳ್ಳು ಕಂಟಿಗಳು ಮತ್ತು ಪೈನ್, ಜುನಿಪರ್, ಕಾರ್ಕ್, ಸಿಡಾರ್, ಫಿಗ್ ಮತ್ತು ಆಲಿವ್ ಮರಗಳು ಮೆಡಿಟರೇನಿಯನ್ ವಾಯುಗುಣವಿರುವ ಪ್ರದೇಶದಲ್ಲಿ ಕಂಡುಬರುತ್ತವೆ.
• ದಕ್ಷಿಣ ಆಫ್ರಿಕದ ಕರ್ರೂ ಭಾಗದಲ್ಲಿ ಪ್ರಸಿದ್ಧ ಕುರುಚಲು ಸಸ್ಯವರ್ಗ, ನೈಲ್ನದಿ ಬಯಲಿನಲ್ಲಿ `ಸಡ್’ ಎಂಬ ವಿಶೇಷ ಸಸ್ಯವರ್ಗವಿದೆ.

ಕೈಗಾರಿಕೆಗಳು


• ಆಫ್ರಿಕದ ಅನೇಕ ದೇಶಗಳು ನೀರು, ಅರಣ್ಯ ಮತ್ತು ಖನಿಜ ಸಂಪತ್ತಿನಲ್ಲಿ ಶ್ರೀಮಂತವಾಗಿವೆ. ಈ ನೈಸರ್ಗಿಕ ಸಂಪತ್ತಿನ ಹಂಚಿಕೆ ಸಮನಾಗಿಲ್ಲ. ಇಲ್ಲಿಯ ಬಹಳಷ್ಟು ದೇಶಗಳ ಆರ್ಥಿಕತೆಯು ಬೇಸಾಯ ಅವಲಂಬಿತ ಗುಣಲಕ್ಷಣವನ್ನು ಹೊಂದಿದೆ.
• ಕಳೆದ ಕೆಲವು ದಶಕಗಳಲ್ಲಿ ಕೈಗಾರಿಕೀಕರಣಕ್ಕೆ ಒಳಗಾಗುತ್ತಿರುವ ದೇಶಗಳೆಂದರೆ ಜಿಂಬಾಬ್ವೆ, ನೈಜೀರಿಯ, ಈಜಿಪ್ಟ್, ಅಲ್ಜೀರಿಯ ಮತ್ತು ದಕ್ಷಿಣ ಆಫ್ರಿಕ. ಸ್ವತಂತ್ರ ಪಡೆದ ನಂತರ ಬಹಳಷ್ಟು ಆಫ್ರಿಕದ ದೇಶಗಳು ಲಘು ಕೈಗಾರಿಕಾ ಬೆಳವಣಿಗೆಯಲ್ಲಿ ಆಸಕ್ತಿ ತೋರಿವೆ. ಜವಳಿ ಉದ್ಯಮ, ಔಷಧಿ ಮತ್ತು ಆಹಾರ ಸಂಸ್ಕರಣ, ಚರ್ಮ ಉತ್ಪಾದನೆ ಹಾಗೂ ಪಾನೀಯ ಉದ್ದಿಮೆಗಳು ಜಾರಿಗೆ ಬರುತ್ತಿವೆ.
• ಬೃಹತ್ ಉದ್ದಿಮೆಗಳಾದ ಕಬ್ಬಿಣ ಮತ್ತು ಉಕ್ಕು, ರಬ್ಬರ್, ಸಿಮೆಂಟ್, ಮತ್ತು ಪೆಟ್ರೊ-ರಾಸಾಯನಿಕಗಳ ತಯಾರಿಕೆಗಳು ದಕ್ಷಿಣ ಆಫ್ರಿಕದಲ್ಲಿ ಕೇಂದ್ರೀಕರಣಗೊಳ್ಳುತ್ತಿವೆ. ಅಲ್ಜೀರಿಯ, ಟುನಿಸಿಯ, ಈಜಿಪ್ಟ್ ಮತ್ತು ಜಿಂಬಾಬ್ವೆ ದೇಶಗಳಲ್ಲಿ ಕಬ್ಬಿಣ ಮತ್ತು ಉಕ್ಕುಕೈಗಾರಿಕೆಗಳು ಹಂಚಿಕೆಯಾಗಿವೆ.
• ಆಫ್ರಿಕದ ಇತರ ಪ್ರಮುಖ ಕೈಗಾರಿಕೆಗಳೆಂದರೆ ವಿದ್ಯುತ್ಯಂತ್ರ, ಸಾರಿಗೆ ಉಪಕರಣ, ಟ್ರಾಕ್ಟರ್ ತಯಾರಿಕೆ ಹಾಗೂ ಸಮರಕ್ಕೆ ಬಳಕೆಯಾಗುವ ವಿಮಾನ ಜೋಡಣೆ, ಇತ್ಯಾದಿ .

ಬೆಲೆಬಾಳುವ ಖನಿಜಗಳು


ಆಫ್ರಿಕ ಖಂಡವು ಅಪಾರವಾದ ಖನಿಜ ಸಂಪತ್ತನ್ನು ಹೊಂದಿದೆ. ಆದರೆ ಬೆಲೆಬಾಳುವ ಖನಿಜಗಳಾದ ವಜ್ರ, ಬಂಗಾರ ಮತ್ತು ಪ್ಲಾಟಿನಮ್ಗಳನ್ನು ಹೆಚ್ಚು ಉತ್ಪಾದಿಸುತ್ತದೆ.
• ವಜ್ರ: ಪ್ರಪಂಚದ ಒಟ್ಟು ವಜ್ರದ ನಿಕ್ಷೇಪದಲ್ಲಿ ಶೇ 80 ಭಾಗವು ಆಫ್ರಿಕ ಒಂದರಲ್ಲೇ ಕಂಡುಬರುತ್ತದೆ. ಬೋನ್ಸ್ವಾನ, ಜೈರೆ ಮತ್ತು ದಕ್ಷಿಣ ಆಫ್ರಿಕಗಳು ಅತಿ ಹೆಚ್ಚು ವಜ್ರವನ್ನು ಉತ್ಪಾದಿಸುವ ದೇಶಗಳಾಗಿವೆ.
• ಕೈಗಾರಿಕಾ ವಜ್ರವು ಮುಖ್ಯವಾಗಿ ಉಜ್ಜು ಕಾಗದ ಮತ್ತು ಗಾಜು ಕತ್ತರಿಸುವ ಉಪಕರಣಗಳ ತಯಾರಿಕೆಗೆ ಬಳಕೆಯಾಗುತ್ತದೆ.
• ಬಂಗಾರ: ಪ್ರಪಂಚದ ಅರ್ಧದಷ್ಟು ಬಂಗಾರದ ನಿಕ್ಷೇಪವು ದಕ್ಷಿಣ ಆಫ್ರಿಕ ಒಂದರಲ್ಲೇ ಕಂಡುಬರುತ್ತದೆ. ಬಂಗಾರ ಹಂಚಿಕೆಯಾಗಿರುವ ಮುಖ್ಯ ಸ್ಥಳಗಳೆಂದರೆ ವಿಟ್ವಾಟರ್ಸ್ರ್ಯಾಂಡ್ (ಟ್ರಾನ್ಸವಾಲ್) ಮತ್ತು ಆರೆಂಜ್ ಫ್ರೀ ಸ್ಟೇಟ್ ರಾಜ್ಯಗಳಾಗಿವೆ. ಈ ಖಂಡದ ಒಟ್ಟು ಬಂಗಾರದ ಉತ್ಪಾದನೆಯಲ್ಲಿ ಶೇ.50ಕ್ಕೂ ಹೆಚ್ಚಿನ ಭಾಗವು ದಕ್ಷಿಣ ಆಫ್ರಿಕ, ಜಿಂಬಾಬ್ವೆ ಮತ್ತು ಕಾಂಗೋ (ಜೈರೆ) ಗಣರಾಜ್ಯಗಳಿಂದ ಪೂರೈಕೆಯಾಗುತ್ತದೆ.

ಜನಸಂಖ್ಯೆ


• ಸುಮಾರು 1051 ಮಿಲಿಯನ್ ಜನರು ಆಫ್ರಿಕ ಖಂಡದಲ್ಲಿ ವಾಸಿಸುತ್ತಾರೆ.
• ನೈಜೀರಿಯ, ಈಜಿಪ್ಟ್, ಇಥಿಯೋಪಿಯ, ಜೈರೆ ಮತ್ತು ದಕ್ಷಿಣ ಆಫ್ರಿಕಗಳು ಹೆಚ್ಚು ಜನಸಾಂದ್ರತೆಯನ್ನು ಹೊಂದಿವೆ.
• ಆಫ್ರಿಕದ ಜನರನ್ನು ನಾಲ್ಕು ಗುಂಪುಗಳಾಗಿ ವಿಭಾಗಿಸಬಹುದು:
1) ಪಿಗ್ಮಿಗಳು, ಬುಶ್ಮೆನ್ ಮತ್ತು ಮಸಾಯಿ. ಇವರು ಸಹರ ಮರುಭೂಮಿಯ ದಕ್ಷಿಣ ಭಾಗದಲ್ಲಿ ವಾಸಿಸುತ್ತಾರೆ.
2) ಅರಬ್ಬರು ಉತ್ತರ ಆಫ್ರಿಕದಲ್ಲಿ ವಾಸಿಸುತ್ತಾರೆ.
3) ಇಂಡಿಯನ್ರು ದಕ್ಷಿಣ ಮತ್ತು ಪೂರ್ವ ಆಫ್ರಿಕದಲ್ಲಿ ವಾಸಿಸುತ್ತಾರೆ.
4) ಯುರೋಪಿಯನ್ನರು ದಕ್ಷಿಣ ಆಫ್ರಿಕದಲ್ಲಿ ಹಾಗೂ ಇತರ ಫಲವತ್ತಾದ ನದಿ ಬಯಲುಗಳಲ್ಲಿ ವಾಸಿಸುತ್ತಾರೆ.