“ಭಯೋತ್ಪಾದನೆ”
ಆಧುನಿಕ ಜಗತ್ತಿನ ರಾಕ್ಷಸರು ಮನುಕುಲದ ಮೇಲೆ ಭಯ-ಭೀತಿಯುಂಟು ಮಾಡಿ ಹಿಂಸಾಚಾರದ ಮೂಲಕ ತಮ್ಮ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ವಾಮ ಮಾರ್ಗವನ್ನು ಅನುಸರಿಸಿ ಸಮಾಜದಲ್ಲಿ ಅಸಮತೋಲನ ವೇರ್ಪಡುವಂತೆ ಮಾಡುವುದನ್ನ ಭಯೋತ್ಪಾದನೆ ಎನ್ನಬಹುದಾಗಿದೆ.
ಯಾವುದೇ ದೇಶದಲ್ಲಿ ಇದನ್ನು ಎರಡು ರೀತಿಯಲ್ಲಿ ಬೇರ್ಪಡಿಸಬಹುದು - ಬಾಹ್ಯ ಮತ್ತು ಆಂತರಿಕ ಭಯೋತ್ಪಾದನೆಗಳೆಂದು, ಆಂತರಿಕವಾಗಿ ಜನರು ತಮ್ಮ ಅಜ್ಞಾನ ಇಲ್ಲವೆ ಹತಾಷೆ ಭಾವನೆಯನ್ನು ಪ್ರದರ್ಶಿಸಿ, ಮಾನಸಿಕ ಅಸಮತೋಲನವನ್ನು ತಡೆಹಿಡಿಯಲಾರದೆ ಸಮಾಜದಲ್ಲಿ ತಾತ್ಕಾಲಿಕ ಹಾಗೂ ಅನಿಶ್ಚಿತವಾದ ವಾತಾವರಣವನ್ನು ನಿರ್ಮಾಣ ಮಾಡಿ ಭಿಭತ್ಸಕ ಕೃತ್ಯವನ್ನು ನೆಡೆಸುವುದು.
ಭಯೋತ್ಪಾದನೆ ಅಸ್ಥಿತ್ವಕ್ಕೆ ಅನೇಕ ಕಾರಣಗಳಿವೆ – ಅದರಲ್ಲಿ ಮುಖ್ಯವಾದವುಗಳೆಂದರೆ ರಾಜಕೀಯ ಹತಾಷೆ, ಧಾರ್ಮಿಕ ದುರುದ್ದೇಶ, ಆರ್ಥಿಕ ಲಾಭಕ್ಕಾಗಿ. ಮತ್ತು ಜಗತ್ತನ್ನು ಧರ್ಮಾಂಧ ಅಂಧಕಾರದ ಅಂಕುಶದಿಂದ ಆಳುವ ವಿಕೃತ ಮನಸ್ಸುಗಳ ವ್ಯರ್ಥ ಸಾಹಸಗಳು ಭಯೋತ್ಪಾದನೆಯ ಕರಿನೆರಳುಗಳಾಗಿವೆ
ಇತ್ತೀಚಿನ ಕೆಲವು ಉದಾಹರಣೆಗಳೆಂದರೆ-ಸೆಪ್ಟೆಂಬರ್ 11, 2001 ರಲ್ಲಿ ನಡೆದ W.T.O ವಾಣಿಜ್ಯ ಕಟ್ಟಡಗಳ ಮೇಲೆ ನಡೆದ ವಿಮಾನ ಸ್ಪೋಟದ ದುರಂತ, ನಂತರ ಡಿಸೆಂಬರ್ 13, ರ ದೆಹಲಿ ಪಾರ್ಲಿಮೆಂಟ್ ಭವನದ ಮೇಲೆ ನಡೆಸಿದ ಅತಿಕ್ರಮಣ, ನಂತರದಲ್ಲಿ ನಡೆದ ಜಮ್ಮು- ಕಾಶ್ಮೀರದ ರಾಜ್ಯ ವಿಧಾನ ಮಂಡಲದ ಮೇಲೆ ಅಕ್ರಮಣ, ಕಲ್ಕತ್ತದಲ್ಲಿನ ಅಮೇರಿಕಾದ ವಾಣಜ್ಯ ಸಂಕೀರ್ಣಗಳ ಮೇಲೆ ನಡೆದ ದಾಳಿ, ಇತ್ತೀಚಿಗೆ ನಡೆದ ಜಮ್ಮು ಕಾಶ್ಮೀರದ ಹಿಂದೂ ದೇವಾಲಯ ರಘುನಾಥ ಮಂದಿರದ ಮೇಲಿನ ಅಕ್ರಮಣ, ಗುಜರಾತ್ನ ಅಕ್ಷರಧಾಮದ ಮೇಲೆ ನಡೆದ ದಾಳಿ. ಗಡಿಯಲ್ಲಿ ಹೇಡಿಗಳಂತೆ ಭಾರತೀಯ ಸೈನಿಕರ ಮೇಲೆ ದಾಳಿಗಳು, ಐಸಿಎಸ್ ಉಗ್ರರ ಅಟ್ಟಹಾಸಗಳು, ಪ್ರಾನ್ಸ್ ಮೇಲೆ ದಾಳಿ, ಸಿರಿಯಾದಲ್ಲಿನ ಅಮಾಯಕರ ಕಗ್ಗೋಲೆಗಳು, ಲಿಬಿಯಾ,ಕುವೈತ್ ಇರಾನ್, ಇರಾಕ್,ಅಫ್ಘಾನಿಸ್ಥಾನದ ಉಗ್ರಗಾಮಿಗಳ ಬಾಂಬ ದಾಳಿಗಳು, ನೈಜೀರಿಯಾದ ಮನುಷರನ್ನು ತಿನ್ನುವ ರಾಕ್ಷಸಸರು ಮುಂದಿನ ದಿನಗಳ ಕರಾಳ ಬದುಕಿನ ಸಾಕ್ಷಚಿತ್ರಗಳಾಗಿವೆ.ಇದರ ಹಿಂದಿರುವ ಉದ್ದೇಶ, ಮಾನಸಿಕ ಸಿದ್ಧತೆ ಅವರ ತರಬೇತಿ ಅವರಿಗೆ ನೀಡುವ ಹಣಕಾಸು ನೆರವು, ಇವರ ಮೂಲ, ನೈತಿಕತೆ ಧರ್ಮ ಇನ್ನೂ ಮುಂತಾದವುಗಳನ್ನು ಪರಾಮರ್ಶಿಸಿದರೆ ಭಯೋತ್ಪಾದನೆಯ ನೆಲೆಯನ್ನು ಕಾಣಬಹುದು.
ಭಾರತ ಮತ್ತು ವಿಶ್ವದ ಅನೇಕ ರಾಷ್ಟ್ರಗಳು – ಅಮೇರಿಕ, ರಷ್ಯ, ಅರ್ಜೈಂಟೈನಾ, ಆಫ್ರಿಕಾದ ಅನೇಕ ದೇಶಗಳಲ್ಲಿ ನಾವಿಂದು ಭಯೋತ್ಪಾದನೆಯ ಛಾಯೆಯನ್ನು ಕಾಣಬಹುದು.
ಭಾರತದಲ್ಲಿ ಈ ಸಮಸ್ಯೆಯ ಇತಿಹಾಸ – 1947 ರಿಂದಲೂ ಪಾಕಿಸ್ತಾನ ಪಿತೂರಿ ಮತ್ತು ಪ್ರಚೋದಿತ ಭಯೋತ್ಪಾದನೆಯಿಂದ ಭಾರತ ಎರಡು ಬಾರಿ ಯುದ್ಧವನ್ನು ಮಾಡಿದೆ.
ಗಡಿಯಾಚೆಯಿಂದ ಭಾರತಕ್ಕೆ ಸವಾಲಾಗಿರುವ ಭಯೋತ್ಪಾದನಾ ಸಂಘಟನೆಗಳೆಂದರೆ ಪ್ರಮುಖವಾಗಿ - ಲಕ್ಷ್ಕರ್-ಇ-ತೋಯಿಬಾ, ಜೈಷ-ಎ-ಮೊಹಮ್ಮದ್, ಹಿಜ್ಜುಲ್- ಮುಜಾಹಿದ್ದೀನ್, ಆಲ್-ಖೈದಾಗಳಂತವುಗಳಾದರೆ, ಇತ್ತೀಚಿಗೆ ಐಸಿಎಸ್ ಎಂಬ ಆಧುನಿಕ ರಾಕ್ಷಸಸರು, ಆಂತರಿಕವಾಗಿ P.W.G ಪೀಪಲ್ ವಾರ್ ಗ್ರೂಪ್, ಮಾವೋಹಿಸ್ಟ್-ಕಮ್ಯೂನಿಷ್ಟ ಸೆಂಟರ್, ಈಶಾನ್ಯ ರಾಜ್ಯಗಳಲ್ಲಿರುವ ಅನೇಕ ತೆರನಾದ ಮುಕ್ತಿ ಮೊರ್ಚಾದ ಹೆಸರಿನಲ್ಲಿರುವ ಸಂಘಟನೆಗಳು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿವೆ.
ಇತ್ತೀಚೆಗೆ ಮುಸ್ಲಿಂ ವಿದ್ಯಾರ್ಥಿ ಸಂಘಟನೆಯಾದ “SIMI” ಸಹ ದೇಶದೊಳಗೆ ಭಯೋತ್ಪಾದನಾ ಬೀಜ ಬಿತ್ತಲು ಕಾರಣವಾದ್ದರಿಂದ ಅದನ್ನು “POTA” ಕಾಯ್ದೆಯಡಿ ನಿಷೇಧಿಸಲಾಗಿದೆ. ಪ್ರಜಾಪ್ರಭುತ್ವ ತತ್ವಕ್ಕೆ ವಿರುದ್ಧವಾದ ಮತ್ತು ಬಹುದೊಡ್ಡ ಸಮಸ್ಯೆ ಎಂದರೆ ಅದು ಭಯೋತ್ಪಾದನೆಯಾಗಿದೆ. ಭಯೋತ್ಪಾದನೆಯನ್ನು ಪ್ರಜಾಪ್ರಭುತ್ವ ವಿರೋಧಿ, ಜನವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ಚಟುವಟಿಕೆ ಎನ್ನಬಹುದು.
ಇದು ಕೇವಲ ಭಾರತದ ಸಮಸ್ಯೆಯಲ್ಲ – ಇದೊಂದು ವಿಶ್ವ ಸಮಸ್ಯೆ ಶ್ರೀಲಂಕಾದಲ್ಲಿ –ಎಲ್.ಟಿ.ಟಿ.ಇ. ಯನ್ನು ಭಯೋತ್ಪಾದನಾ ಗುಂಪೆಂದರೆ, ಇಸ್ರೇಲ್‍ನಲ್ಲಿ-ಹಮಾಸ್, ರಷ್ಯದಲ್ಲಿ- ಚೆಚನ್ಯಾ ಬಂಡುಕೋರರು, ಅಮೇರಿಕಾಕ್ಕೆ – ಮುಸ್ಲಿಂ ಭಯೋತ್ಪಾದನಾ ಗುಂಪುಗಳ ಬೆದರಿಕೆ, ಅದರಲ್ಲೂ ಅಲ್ ಖೈದಾದಿಂದ ತೀವ್ರ ಹಾನಿ.
ವಿಶ್ವ ಕೆಲವು ಭಯೋತ್ಪಾದಕರು – ಒಸಾಮಾ ಬಿನ್ ಲಾಡೆನ್ (ಆಲ್ ಖೈದಾ), ಪ್ರಭಾಕರನ್ ತಮಿಳು ಈಳಂ ನಾಯಕ, ಫಿಜಿಯಲ್ಲಿ – ಜಾರ್ಜ್ ಸ್ಪಟ್ (ಮರಣ ದಂಡನೆಗೆ ಗುರಿಯಾದವ, ಈಗ ಜೀವಾವಧಿ ಶಿಕ್ಷೆಗೆ ಅನುಮತಿ) ಷೇಕ್ – ಒಮರ್ (ಡೇನಿಯಕ್ ಪರ್ಲ್‍ನ ಹತ್ಯೆಯ ರುವಾರಿ) ಮೌಲಾನ ಮಸೂದ್ ಅಜರ್ (ಕಂದಾಹಾರ್‍ಗೆ ಭಾರತದ ವಿಮಾನ ಅಪಹರಣ ಮಾಡಿ ಕೊಂಡ್ಯೊದಾಗ ಬಿಡುಗಡೆಯಾದ ಭಯೋತ್ಪಾದಕ), ಅಫ್ತಾಬ್ ಅನ್ಸಾರಿ ಇತ್ಯಾದಿ.
ಇಂತಹ ಅನೇಕ ಮಂದಿಗಳ ಜೊತೆ ಭೂಗತ ಜಗತ್ತಿನ ನಂಟೂ ಸೇರಿಕೊಂಡಿದೆ. ಚಲನಚಿತ್ರ ರಂಗದಲ್ಲಿ ಇವರ ಹಾವಳಿ ಹೆಚ್ಚು ಗುಲ್ಪೈನ್ ಕುಮಾರ್ ಹತ್ಯೆ ಸೇರಿದಂತೆ ಅನೇಕ ಇಂತಹ ಕೃತ್ಯಗಳಿಗೆ ಕಾರಣರಾದ ಮುತ್ತಪ್ಪ ರೈ, ಅಬು ಸಲೇಂ, ಛೋಟಾ ರಾಜನ್ ಇವರಂತಹ ಪಾತಕಿಗಳು ಅಂತಾರಾಷ್ಟ್ರೀಯ ಕೈವಾಡದಿಂದ ತಮ್ಮ ಕಾರ್ಯ ಜಾಲವನ್ನು ವಿಶ್ವ ವ್ಯಾಪಿಯಾಗಿ ಬೆಳೆಸಿಕೊಂಡಿದ್ದಾರೆ.
ಭಯೋತ್ಪಾದನೆಯ ಹೆಸರಿನಲ್ಲಿ ಗಣ್ಯವ್ಯಕ್ತಿಗಳ ಅಪಹರಣ ಮತ್ತು ಅವರ ಬಿಡುಗಡೆಯಾಗಿ ಒತ್ತೆ ಹಣ ಕೇಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಉದಾ: ಭಾರತದಲ್ಲಿ ಹಿಂದಿನ ಗೃಹ ಸಚಿವರು,ಈಗಿನ ಜಮ್ಮು-ಕಾಶ್ಮೀರದ ಮುಖ್ಯ ಮಂತ್ರಿಗಳೂ ಆದ ಮುಫ್ತಿ ಮಹಮದ್ ಸೈಯೀದ್ರ ಪುತ್ರಿಯ ಅಪಹರಣವಾಗಿ ಸುಖಾಂತ್ಯವಾಗಿತ್ತು. (ಡಾ.ರುಬಿಯಾ) ನಂತರ ಇಂಡಿಯನ್ ಆಯಿಲ್ ಕಾಪೋರೇಷನ್ ಅಧ್ಯಕ್ಷರ ಅಪಹರಣವಾಗಿತ್ತು. ಅದೂ ಒತ್ತೆ ಹಣ ನೀಡುವುದರಲ್ಲಿ ಅವರ ಸಂಗಾತಿಗಳನ್ನು ಬಿಡಿಸಿಕೊಳ್ಳುವಲ್ಲಿ ಮುಕ್ತಾಯವಾಗಿತ್ತು. ಕರ್ನಾಟಕದ ಮೇರು ನಟ ಡಾ. ರಾಜ್ ಕುಮಾರ್ ಅಪಹರಣವೂ ಭಯೋತ್ಪಾದನೆಯ ಇನ್ನೊಂದು ಮುಖವೇ. ಇತ್ತೀಚೆಗೆ ನಡೆದ ಕಹಿ ಘಟನೆಗಳಲ್ಲೊಂದಾದ ಮಾಜಿ ಸಚಿವ ನಾಗಪ್ಪ ಅಪಹರಣ ಮತ್ತು ಅವರ ಅಮಾನುಷ ಹತ್ಯೆ ಸಹ ಇದೇ ಹೆಸರಿನಡಿ ನಡೆದ ಮತ್ತೊಂದು ಘಟನೆ.
ಭಯೋತ್ಪಾದನೆಯನ್ನು ಬೇರು ಸಹ ಕೀಳದಿದ್ದರೆ ಅಥವ ಪ್ರಪಂಚದಿಂದ ಸಂಪೂರ್ಣ ನಿರ್ಮೂಲನೆ ಮಾಡದಿದ್ದರೆ, ಮುಂದೊಂದು ದಿನ ಈ ಪ್ರಪಂಚದಲ್ಲಿ ನಡೆಯುವ ಆಗು- ಹೋಗುಗಳನ್ನು ನೋಡಲು ಮಾನವ ಸಂತತಿಯೇ ಇರುತ್ತದೆಯೇ ? ಅಂದರೆ ಸಣ್ಣ-ಪುಟ್ಟ ಸಂಘಟಿತ ಗುಂಪುಗಳು ನಡೆಸುವ ಭಯೋತ್ಪಾದನಾ ಕೃತ್ಯಗಳಿಂದ, ರಾಷ್ಟ್ರ – ರಾಷ್ಟ್ರಗಳ ನಡುವೆ ಕಲಹ ಅಥವ ಯುದ್ದ, ಇವುಗಳಿಂದ ಸಂಭವಿಸಬಹುದಾದ ದುರಂತಗಳನ್ನು ನೆನೆದರೆ ಜಗತ್ತು ಎತ್ತ ಸಾಗುತ್ತದೆ ? ಯಾರು ಹೊಣೆ ? ಭವಿಷತ್ತ್ ದುಃಖಕರವಾಗುವು ಎಷ್ಟು ಸರಿ ? ಇದಕ್ಕೆ ಜಗತಿಕವಾಗಿ ಪರಿಹಾರ ಕಂಡುಕೊಳ್ಳದಿದ್ದರೆ ಎಲ್ಲರ ಭವಿಷ್ಯ ಊಹಿಸಲು ಅಸಾಧ್ಯ !
ದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವುದು. ಆರ್ಥಿಕ ಹಿಂಜರಿತ, ಹಿಂಬೀಳಿಕೆ, ಯುವ ಜನತೆಯ ಮಾನಸಿಕ ಅಸಮತೋಲನಕ್ಕೆ ಕಾರಣವಾಗುವುದು. ಅಪರಾಧಿ ಮತ್ತು ಭೂಗತ ಚಟುವಟಿಕೆಗಳಿಗೂ ಭಯೋತ್ಪಾದಕರಿಗೂ ನಡುವೆ ಭಿನ್ನತೆಯನ್ನು ಮಾಡುವುದು ಕಷ್ಟವಾಗಿ, ಅವರಿಬ್ಬರೂ ಪರಸ್ಪರ ಹೆಸರಿನಲ್ಲಿ ಲಾಭ ಪಡೆದುಕೊಳ್ಳುವರು. ಕಾನೂನು-ಸುವ್ಯವಸ್ಥೆ ಹದಗೆಟ್ಟು ದೈನಂದಿನ ಬದುಕು ಅಸಹನೀಯವೆನಿಸುವುದು, ಜನತೆಗೆ ಯಾವ ಸರ್ಕಾರಗಳಲ್ಲೂ ವಿಶ್ವಾಸ ಮೂಡದೆ, ಪ್ರಜಾಪ್ರಭುತ್ವದ ಬೆಳವಣಿಗೆ/ಏಳಿಗೆಗೆ ಮಾರಕವಾಗುವುದು. ಭಯೋತ್ಪಾದನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳನ್ನು. ಯಾವುದೇ ದೇಶ ಆರ್ಥಿಕವಾಗಿ ಸುಭದ್ರವಾಗಿರಬೇಕಾದರೆ - ಸ್ಥಿರ ಸರ್ಕಾರ ಅತ್ಯಂತ ಪ್ರಮುಖವಾದ ಅಂಶ. ದೇಶದಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಾಗಬೇಕು. ಪಾಕ್ ಮತ್ತು ಅಂಥಹ ಅನೇಕ ರಾಷ್ಟ್ರಗಳು ಧಾರ್ಮಿಕ ಭಯೋತ್ಪಾದನೆಗೆ ಸಹಕಾರ ನೀಡಿರುವುದು, ಈಗಲೂ ಅಂತಹ ಸಹಕಾರ ನೀಡುವುದನ್ನು ಮುಂದುವರೆಸಿರುವುದು ಅಕ್ಷಮ್ಯ ಘೋರ ಕೃತ್ಯಗಳೇ ಆಗಿವೆ.
ವಿದೇಶಿಗರು ಯಾವುದೇ ದೇಶದಲ್ಲಿ ಹಣ ಹೂಡುವ ಮೊದಲು ಆ ದೇಶದ ಪರಿಸ್ಥಿತಿಗಳನ್ನು ಅಭ್ಯಾಸ ಮಾಡುವುದು ವಾಡಿಕೆ. ರಾಜಕೀಯ ಅಸ್ಥಿರತೆ ಮತ್ತು ಗೊಂದಲಮಯ ವಾತಾವರಣದಿಂದ ವಿದೇಶಿ ಬಂಡವಾಳದ ಹರಿವು ಕುಂಠಿತಗೊಂಡು ಆರ್ಥಿಕ ವೃದ್ಧಿಗೆ ಅಡ್ಡಗಾಲುಂಟಾಗುವುದೇ ಹೆಚ್ಚು.
ಭಯೋತ್ಪಾದನೆಯಿಂದ ದೇಶದಲ್ಲಿ ಮತೀಯ ಕಲಹಗಳೇರ್ಷಡುವ ಸಂಭವ ಹೆಚ್ಚು ಭಾರತದಂತ ವೈವಿದ್ಯಮಯ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಏಕತೆ ಮೂಡಿಸಲು ಸರ್ಕಾರಗಳು ನಡೆಸುವಂತಹ ಅತ್ಯುತ್ತಮ ಪ್ರಯತ್ನಗಳೂ ನಿಷ್ಫಲವಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಮತೀಯ ಭಯೋತ್ಪಾದನೆಯೇ ಆಗಿರುವುದು ದುರಾದೃಷ್ಟ.
ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಸೌಹಾರ್ದತೆ ಮೂಡಿಸಲು ಪ್ರಯತ್ನಗಳು ನಡೆಯುತ್ತಾ ಬಂದಿವೆ. ಈಗಲೂ ಅದೇ ನಿಟ್ಟಿನಲ್ಲಿ ಮುಂದುವರೆದರೂ ಆ ನಿಟ್ಟಿನಲ್ಲಿ ಜಯಕ್ಕಿಂತ ಅಪಜಯವೇ ಹೆಚ್ಚು.
ಸೆಪ್ಟೆಂಬರ್ 11 ಮತ್ತು ಡಿಸೆಂಬರ್ 13 ರ ಭಯೋತ್ಪಾದನಾ ಕೃತ್ಯಗಳ ನಂತರ ಪಾಕಿಸ್ತಾನವೂ ಸೇರಿದಂತೆ ಅಮೇರಿಕಾ, ಬ್ರಿಟನ್, ಪ್ರಾನ್ಸ್, ಭಾರತ ಮತ್ತು ವಿಶ್ವದ ಅನೇಕ ರಾಷ್ಟ್ರಗಳು ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಪಣ ತೊಟ್ಟಿವೆ, ಆ ನಿಟ್ಟಿನಲ್ಲಿ ಅಮೇರಿಕ ಮತ್ತು ಬ್ರಿಟನ್ನ ರಕ್ಷಣಾ ಮತ್ತು ವಿದೇಶಾಂಗ ಇಲಾಖಾ ಮುಖ್ಯಸ್ಥರು ವಿಶ್ವ ಪರ್ಯಟನೆ ಮಾಡಿ ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳ ಮುಖ್ಯಸ್ಥರೊಂದಿಗೆ ಅನೇಕ ಬಾರಿ ನಡೆಸಿರುವುದನ್ನು ಪ್ರಸ್ತಾಪಿಸಬೇಕು.
Operation Anakonda ಒಸಾಮಾ ಬಿನ್ ಲಾಡೆನ್ – ವಿಶ್ವ ಭಯೋತ್ಪಾದಕ, ಆಲ್ ಖೈದಾ ಸಂಘಟನೆ ಬಗ್ಗೆ ಬರೆಯಿರಿ. ಇದೊಂದು ವಿಶ್ವ ಸಮಸ್ಯೆಯೆಂದು ಚರ್ಚಿಸಬೇಕು.
ಅಪರೇಷನ್ ಸರ್ಜಿಕಲ್- ಭಾರತದ ಸೈನಿಕರು ಪಾಕ್ ಭಯೋತ್ಪಧಕರನ್ನು ಕೊಂದು ಹಾಕಿದ
ಭಾರತ ಸರ್ಕಾರದಿಂದ ನಿಷೇಧಿಸಲ್ಪಟ್ಟ ಭಯೋತ್ಪಾದನಾ ಗುಂಪುಗಳು
ಅಮೇರಿಕಾ ಸರ್ಕಾರದಿಂದಲೂ ಇಂತಹ ಗುಂಪುಗಳ ಬಹಿಷ್ಕಾರ ಉದಾ: ಲಷ್ಕರ-ಇತೊ ಯಿವಾ, ಜೈಷ-ಎ-ಮೊಹಮ್ಮದ್, ಆಲ್ಖೈದಾ, ಸಿಮಿ, ಹರ್ಕತ್-ಉಲ್-ಮುಜಾಹಿದ್ದೀನ್ ಇತ್ಯಾದಿ.
-ಸೆಪ್ಟೆಂಬರ್ 11, 2001 ರಲ್ಲಿ ನಡೆದ W.T.O ವಾಣಿಜ್ಯ ಕಟ್ಟಡಗಳ ಮೇಲೆ ನಡೆದ ವಿಮಾನ ಸ್ಪೋಟದ ದುರಂತ, ನಂತರ ಡಿಸೆಂಬರ್ 13, 2001 ರ ದೆಹಲಿ ಪಾರ್ಲಿಮೆಂಟ್ ಭವನದ ಮೇಲೆ ನಡೆಸಿದ ಅತಿಕ್ರಮಣದ ನಂತರ. ಭಾರತ ಸರ್ಕಾರದ – POTA ಕಾಯ್ದೆಯ ಜಾರಿ, ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (KOCA ) ಮಹಾರಾಷ್ಟ್ರ ಸರ್ಕಾರ ((MOCA). ಇಂತಹುದೇ ಕಾಯ್ದೇ ತರುವುದರ ಮೂಲಕ ಭಯೋತ್ಪದನೆ ಮಟ್ಟ ಹಾಕಲು ಹತ್ತ ಹಲವು ಕ್ರೀಯ ಯೋಜನೆ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ತುರ್ತಾಗಿ ಹಾಕಿಕೊಂಡಿವೆ.
ಮಾನವನಿಂದು ವೈಜ್ಞಾನಿಕ ಯುಗದ ಕೊನೆಯ ಮೆಟ್ಟಿಲನ್ನೇರಿ ವಿಶ್ವದ ಅನ್ಯ ಗ್ರಹಗಳಲ್ಲಿ ತಾಣವನ್ನು ಅರಸುತ್ತಿರುವಾಗ ಮಾನವೀಯತೆಯನ್ನು ಪ್ರತಿಬಿಂಬಿಸಬೇಕಾದ ನಾವಿಂದು ಅನಾಗರಿಕ ಮತ್ತು ಅಮಾನವೀಯತೆಯ ವಿಚ್ಚಿದ್ರಕಾರಕ –ವಿಕಾರ ಮನಸ್ಸುಗಳ ಬಲಿಪಶುಗಳಾಗುತ್ತಿರುವುದು ಸಹ ವಿಪರ್ಯಾಸವೇ ಸರಿ.
ಹಸಿವು, ಬಡತನ, ಅನಕ್ಷರತೆ, ನಿರುದ್ಯೋಗ, ರೋಗ ರುಜಿನಗಳಿಗೆ ಮದ್ದು ಕಂಡುಕೊಂಡ ನಮಗೆ ನಮ್ಮ ಮನಸ್ಸಿನ ನಿಯಂತ್ರಣ/ಹತೋಟಿ ಸಾಧ್ಯವಾಗದಿರುವುದು ಏಕೆಂದು ಅರ್ಥವಾಗದ ಒಗಟಾಗಿದೆ. ಕೇವಲ ಕಾಯ್ದೆಗಳು ಜನರ ಮನಸ್ಸನ್ನು ಸರಿಪಡಿಸಲಾರವು, ಬದಲಿಗೆ ಜನರಿಗೆ ಶಿಕ್ಷಣ, ನೈತಿಕತೆ, ಆರ್ಥಿಕ ಸಬಲೀಕರಣ, ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡುವವರೆಗೆ ದೇಶದ ಮತ್ತು ವಿಶ್ವದ ಪರಿಸ್ಥಿತಿ ಹೀಗೆಯೇ ಮುಂದುವರೆಯುವುದು, ಭಯೋತ್ಪಾದನೆ ಮಾನವ ಕುಲಕ್ಕೆ ತಾಗಿದ AIDS ಮಾರಿಯಂತೆ ತನ್ನ ರೂಪವನ್ನು ಬೇಕೆಂದಾಗ ಬದಲಾಯಿಸುತ್ತಾ ಯಾವ ಔಷಧಿಗಳಿಗೂ ವಾಸಿಯಾಗದ ಪ್ರಪಂಚ/ವಿಶ್ವ ವ್ಯಾಪಿ ಖಾಯಿಲೆಯಾಗಿ ಪರಿಣಮಿಸಿರುವುದು 21ನೇ ಶತಮಾನದ ಬಹುದೊಡ್ಡ ಸಮಸ್ಯೆಯಾಗಿದೆ.
ಮಾನವ ಸಮಸ್ಯೆಗಳಿಗೆ ವಿಜ್ಞಾನದ ನೆರವಿನಿಂದ ಉತ್ತರ/ಪರಿಹಾರ ಹುಡುಕಿ ಕೊಂಡಿರುವಾಗ, ಈಗ ಭಯೋತ್ಪಾದನೆಯಂತಹ ಘೋರ ಸಮಸ್ಯೆಯನ್ನು ವೈಜ್ಞಾನಿಕ ನೆಲಗಟ್ಟಿನಲ್ಲಿಯೇ ಅಭ್ಯಾಸ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಮಾನವ ಭಾವಜೀವಿಯಾಗಿರುವುದರಿಂದ ಆತನ ಮನಸ್ಸಿನ ಏರಳಿತಗಳನ್ನು ಎಷ್ಟೇ ವೈಜ್ಞಾನಿಕವಾಗಿ ಓರೆ ಹಿಡಿದು ನೋಡಿದರೂ, ಸಮಯ ಸಂದರ್ಭ ಕಾಲ, ದೇಶಗಳಿಗನುಗುಣವಾಗಿ ಮಾನವನ ಮನಸ್ಸು ಸದಾ ಪರಿವರ್ತನೆಗೊಳ್ಳುವುದರಿಂದ ಒಂದೇ ಸೂಕ್ತವಾದ ಪರಿಹಾರವನ್ನು ಎಲ್ಲರಿಗೂ ಅನ್ವಯ ಮಾಡಲು ಬರುವುದಿಲ್ಲ.
ಜಾಗತಿಕವಾಗಿ ನಾಗರಿಕ ಸಮಾಜ ಮತ್ತು ವಿಜ್ಞಾನದ ನೆರವು ಪಡೆದು ವಿಶ್ವ ಸಂಸ್ಥೆಯ ಸಹಯೋಗದಲ್ಲಿ ಎಲ್ಲ ದೇಶಗಳೂ ಒಂದುಗೂಡಿ ಕೈ ಜೋಡಿಸಿದರೆ ಭಯಾನಕ ಸಮಸ್ಯೆಯಾದ ಭಯೋತ್ಪಾದನೆಯನ್ನು ನಿರ್ಮೂಲನ ಮಾಡುವುದು ಕಷ್ಟವಲ್ಲ. ಇದಕ್ಕೆ ಬೇಕಾಗಿರುವುದು ದೃಢ ಸಂಕಲ್ಪ ಮತ್ತು ನಿಷ್ಕಳಂಕ ಮನಸ್ಸು , ಪ್ರಮಾಣಿಕ ಕಾಳಜಿ, ಮಾನವೀಯ ಮೌಲ್ಯಗಳ ಬೆಳೆಸುವಿಕೆ, ಮತ್ತು ವಿಶ್ವ ಪ್ರೇಮ ಹಾಗು ಕುವೆಂಪುರವರ ವಿಶ್ವ ಮಾನವ ಸಂದೇಶ ಎಲ್ಲರು ಪಾಲಿಸ ಬೇಕು ಅಷ್ಟೇ.