ಯುರೋಪ್ ಖಂಡ(Europe continent)

 

• ಯೂರೋಪ್ ಪ್ರಪಂಚದ ಎರಡನೆಯ ಚಿಕ್ಕ ಭೂಖಂಡ.ಒಟ್ಟು ವಿಸ್ತೀರ್ಣ 10.4 ಮಿಲಿಯನ್ ಚ.ಕಿ.ಮೀ.ಗಳು.
• ಇದು ಭಾರತದ ವಿಸ್ತೀರ್ಣಕ್ಕಿಂತ ಮೂರು ಪಟ್ಟು ದೊಡ್ಡದಾಗಿದೆ. ಈ ಖಂಡವು ಪೃಥ್ವಿಯ ಒಟ್ಟು ವಿಸ್ತೀರ್ಣದಲ್ಲಿ ಶೇ.7 ಭಾಗವನ್ನು ಹೊಂದಿದೆ. ಆದರೆ ಪ್ರಪಂಚದ ಜನಸಂಖ್ಯೆಯಲ್ಲಿ 1/4 ಭಾಗವನ್ನು ಹೊಂದಿದೆ.
• ಈ ಖಂಡವು ಮೂರು ಕಡೆ ನೀರಿನಿಂದಾವರಿಸಿದೆ. ಉತ್ತರದಲ್ಲಿ ಬೇರೆಂಟ್ ಸಮುದ್ರ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರಗಳು ಆವರಿಸಿವೆ.
• ಯೂರೋಪಿನ ಪೂರ್ವಭಾಗದಲ್ಲಿ ಏಷ್ಯ ಖಂಡವಿದ್ದು, ಅದನ್ನು ಯೂರಲ್ಸ್ ಪರ್ವತ, ಕಕಾಸಸ್ ಪರ್ವತ ಮತ್ತು ಕ್ಯಾಸ್ಪಿಯನ್ ಸಮುದ್ರಗಳು ಯೂರೋಪಿನಿಂದ ಬೇರ್ಪಡಿಸುತ್ತವೆ.

ಪ್ರಾಕೃತಿಕ ಲಕ್ಷಣಗಳು


• ಯೂರೋಪ್ ಖಂಡದ ಅತಿ ಎತ್ತರವಾದ ಎಲ್ಬ್ರುಸ್ ಶಿಖರ
• ಅತ್ಯಂತ ತಗ್ಗಾದ ಸ್ಥಳ ಕ್ಯಾಸ್ಪಿಯನ್ ಸಮುದ್ರ. ಇದು ಸಮುದ್ರ ಮಟ್ಟಕ್ಕೆ 28 ಮೀ. ತಗ್ಗಿನಲ್ಲಿದೆ.
• ಯೂರೋಪ ಖಂಡದಲ್ಲಿ ಹಲವು ಪರ್ಯಾಯ ದ್ವೀಪಗಳಿವೆ. ಉದಾ: ಸ್ಕಾಂಡಿನೇವಿಯ, ಐಬೀರಿಯ, ಜಟ್ಲ್ಯಾಂಡ್, ಬಾಲ್ಕನ್ ಮೊದಲಾದವು. ಆದ್ದರಿಂದ ಯೂರೋಪನ್ನು “ಪರ್ಯಾಯ ದ್ವೀಪಗಳ ಪರ್ಯಾಯ ದ್ವೀಪ” ಎಂದು ಕರೆಯಲಾಗಿದೆ.
• ಯೂರೋಪಿನಲ್ಲಿ 80,500 ಕಿ.ಮೀ. ಉದ್ದವುಳ್ಳ ಒಳಚಾಚುಗಳನ್ನುಳ್ಳ ಸಮುದ್ರ ತೀರವಿದೆ.
• ಅತ್ಯಂತ ಪುರಾತನ ಪರ್ವತ ಸರಣಿಗಳನ್ನುಳ್ಳ ಫಿನ್ಲ್ಯಾಂಡ್, ಸ್ವೀಡನ್, ನಾರ್ವೆಗಳನ್ನೊಳಗೊಂಡಿದ್ದು, ಐಸ್ಲ್ಯಾಂಡ್ ಮತ್ತು ಬ್ರಿಟನ್ವರೆಗೂ ವಿಸ್ತರಿಸಿದೆ.
• ಆಲ್ಫೈನ್ ಪರ್ವತಗಳ ಭಾಗ: ಇದರಲ್ಲಿ ಅನೇಕ ಪರ್ವತ ಸರಣಿಗಳಿವೆ - ಸಿಯೆರ್ರಮೊರೇನ, (ಸ್ಪೇನ್), ಫ್ರಾನ್ಸ್ ಮತ್ತು ಸ್ಪೇನ್ಗಳ ಮಧ್ಯದಲ್ಲಿ ಗಡಿಯಂತಿರುವ ಪಿರನೀಸ್ ಪರ್ವತಗಳು. ಇವು ಪಶ್ಚಿಮದಲ್ಲಿ ಅಟ್ಲಾಂಟಿಕ್ ತೀರದಿಂದ ಪೂರ್ವದಲ್ಲಿ ಕ್ಯಾಸ್ಪಿಯನ್ ಸಮುದ್ರದವರೆಗೂ ಒಂದಕ್ಕೊಂದು ಸಮಾನಾಂತರ ಸರಣಿಗಳಾಗಿ ಹಬ್ಬಿವೆ. ಇವು ಹಿಮಾಲಯಗಳಂತೆ ಮಡಿಕೆ ಪರ್ವತಗಳಾಗಿವೆ. ಇಲ್ಲಿನ ಅತ್ಯಂತ ಎತ್ತರವಾದ ಶಿಖರವೆಂದರೆ ಮೌಂಟ್ ಬ್ಲಾಂಕ್ (4807 ಮೀ).

ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ


• ಈ ಖಂಡದ ಹೆಚ್ಚಿನ ಭಾಗವು‘ಸಮಶೀತೋಷ್ಣವಲಯದ ವಾಯುಗುಣ’ವನ್ನು ಹೊಂದಿದೆ.
• ಸಾಮಾನ್ಯವಾಗಿ ದಕ್ಷಿಣ ಯೂರೋಪಿನ ತಂಪಾದ ಅಲ್ಪಾವಧಿ ಬೇಸಿಗೆಗಿಂತ ಉತ್ತರದಲ್ಲಿ ಚಳಿಗಾಲವು ದೀರ್ಘ ಮತ್ತು ಶೀತವಾಗಿರುತ್ತದೆ. ಅಲ್ಲದೆ ಪಶ್ಚಿಮ ಯೂರೋಪ್ಗಿಂತ ಪೂರ್ವಭಾಗದಲ್ಲಿ ಚಳಿಗಾಲವು ದೀರ್ಘ ಮತ್ತು ಶೀತವಾಗಿದ್ದು, ಬೇಸಿಗೆಯು ಅಲ್ಪಾವಧಿ ಮತ್ತು ಶಾಖವುಳ್ಳದ್ದಾಗಿರುತ್ತದೆ.
• ಯೂರೋಪಿನಲ್ಲಿ ಬಹಳ ದೀರ್ಘಕಾಲದಿಂದ ಮಾನವರು ನೆಲಸಿದ್ದಾರೆ ಮತ್ತು ಇದು ಅಧಿಕ ಜನಸಾಂದ್ರತೆಯುಳ್ಳದ್ದು. ಆದ್ದರಿಂದ ಸ್ವಾಭಾವಿಕ ಸಸ್ಯವರ್ಗವು ಸಂಪೂರ್ಣವಾಗಿ ವಿನಾಶಗೊಂಡಿದೆ. ಜನವಸತಿಗೆ ಪ್ರತಿಕೂಲವಾದ ಮತ್ತು ಎತ್ತರದ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ಕೆಳಕಂಡಂತೆ ಯೂರೋಪಿನಲ್ಲಿ ಆರು ಪ್ರಕಾರದ ಸಸ್ಯವರ್ಗವಿದೆ.
• ತಂಡ್ರ ಸಸ್ಯವರ್ಗವು ಶಿಲಾವಲ್ಕ ಮತ್ತು ಪಾಚಿಗಳಿಂದ ಕೂಡಿದೆ. ಇದು ಐಸ್ಲ್ಯಾಂಡ್, ಉತ್ತರ ನಾರ್ವೆ, ಸ್ವೀಡನ್ ಮತ್ತು ಫಿನ್ಲೆಂಡ್ಗಳನ್ನೊಳಗೊಂಡ ಕಿರಿದಾದ ಪ್ರದೇಶದಲ್ಲಿ ಕಂಡುಬರುವುದು. ಇಂತಹದೇ ಸಸ್ಯವರ್ಗ ಆಲ್ಪ್ಸ್ ಮತ್ತು ಉತ್ತರ ಯೂರಲ್ಸ್ ಪರ್ವತಗಳ ಎತ್ತರದ ಭಾಗಗಳಲ್ಲಿಯೂ ಕಂಡುಬರುವುದು.
• ತೈಗ ಅರಣ್ಯಗಳು ನಾರ್ವೆ, ಸ್ವೀಡನ್ ಮತ್ತು ಫಿನ್ಲೆಂಡ್ಗಳನ್ನೊಳಗೊಂಡ ಧ್ರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳನ್ನು ಇಲ್ಲಿ ಕೆಲವೇ ಪ್ರಭೇದದ ಮರಗಳು ಬೆಳೆಯುತ್ತವೆ. ಉದಾ: ಸ್ಕಾಟ್ಸ್ಪೈನ್, ಸ್ಪ್ರೂಸ್ ಮತ್ತು ಲಾರ್ಚ್.
• ಮಿಶ್ರ ಕಾಡುಗಳು ದಕ್ಷಿಣದ ಕೇಂದ್ರ ಪ್ರದೇಶದಲ್ಲಿ ಕಂಡುಬರುತ್ತವೆ. ಪ್ರಮುಖವಾದ ಮರಗಳೆಂದರೆ ಓಕ್, ಆಶ್, ಎಲ್ಮ್, ಪಾಪ್ಲರ್, ವಿಲ್ಲೊ, ಬೀಚ್ ಇತ್ಯಾದಿ.
• ಮೆಡಿಟರೇನಿಯನ್ ಸಸ್ಯವರ್ಗವು ಸಾಮಾನ್ಯವಾಗಿ ಮೆಡಿಟರೇನಿಯನ್ ಸಮುದ್ರದ ತೀರದುದ್ದಕ್ಕೂ ಕಂಡುಬರುವುದು. ಇದು ಅಗಲ ಎಲೆಗಳನ್ನುಳ್ಳ ಸದಾ ಹಸಿರಾದ ಸಸ್ಯವರ್ಗ. ಕಾರ್ಕ್ಓಕ್, ಆಲಿವ್, ಲಾರೆಲ್ ಮುಂತಾದ ಮರಗಳು ಇಲ್ಲಿ ಬೆಳೆಯುತ್ತವೆ.
• ಹುಲ್ಲುಗಾವಲು ದಕ್ಷಿಣ ಭಾಗದ ಎಲೆ ಉದುರಿಸುವ ಅರಣ್ಯಗಳಲ್ಲಿ ಕಂಡು ಬರುತ್ತದೆ. ಉದಾ: ಹಂಗೇರಿ, ಬಲ್ಗೇರಿಯ, ರುಮೇನಿಯ ಮತ್ತು ಯೂರೋಪಿಯನ್ ರಷ್ಯ.
• ಆಲ್ಪೈನ್ ಸಸ್ಯವರ್ಗವು ಯೂರೋಪಿನ ದಕ್ಷಿಣ ಭಾಗದಲ್ಲಿ ಎತ್ತರವಾದ ಪರ್ವತ ಭಾಗಗಳಲ್ಲಿ ಹಂಚಿಕೆಯಾಗಿದೆ. ಉದಾ: ಆಲ್ಪ್ಸ್, ಪಿರನೀಸ್, ಬಾಲ್ಕನ್, ಕಾರ್ಪೇಥಿಯನ್ ಮತ್ತು ಡಿನಾರಿಕ್ ಪರ್ವತಗಳು.

ಖನಿಜಗಳು


• ಈ ಖಂಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅದಿರು ಉತ್ಪಾದನೆಯಾಗುತ್ತದೆ.ಯೂರೋಪಿನ ಬಹಳಷ್ಟು ದೇಶಗಳಲ್ಲಿ ಕಬ್ಬಿಣದ ಅದಿರು ಹಂಚಿಕೆಯಾಗಿದೆ. ಪ್ರಪಂಚದ ಶೇ. 5 ಭಾಗದಷ್ಟು ಕಬ್ಬಿಣದ ಅದಿರಿನ ನಿಕ್ಷೇಪವು ಈ ಖಂಡದಲ್ಲಿ ಲಭ್ಯವಿದೆ. ಫ್ರಾನ್ಸ್, ಜರ್ಮನಿ, ಸ್ಪೇನ್, ಬ್ರಿಟನ್ ಮತ್ತು ಸ್ವೀಡನ್ಗಳು ಪ್ರಮುಖ ಕಬ್ಬಿಣದ ಅದಿರು ಉತ್ಪಾದಿಸುವ ದೇಶಗಳು.
• ಬಲ್ಗೇರಿಯ ಮತ್ತು ಪೋಲೆಂಡ್ ಪ್ರಮುಖ ತಾಮ್ರ ಉತ್ಪಾದಿಸುವ ದೇಶಗಳು.
• ಯೂರೋಪಿನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಂಪತ್ತು ಬಹಳ ಕಡಿಮೆ.ಪ್ರಮುಖ ಪೆಟ್ರೋಲಿಯಂ ಉತ್ಪಾದಿಸುವ ಭಾಗಗಳೆಂದರೆ ಉತ್ತರ ಸಮುದ್ರ, ಫ್ರಾನ್ಸ್, ಇಟಲಿ, ನೆದರ್ಲೆಂಡ್ಸ್ ಮತ್ತು ಜರ್ಮನಿ.
• ಕಲ್ಲಿದ್ದಲು ಯೂರೋಪಿನ ಪ್ರಮುಖ ವಿದ್ಯುತ್ಶಕ್ತಿಯ ಸಂಪನ್ಮೂಲ. ಸ್ಕಾಂಡಿನೇವಿಯ ಮತ್ತು ಮೆಡಿಟರೇನಿಯನ್ ದೇಶಗಳನ್ನು ಹೊರತುಪಡಿಸಿ ಈ ಖಂಡದಾದ್ಯಂತ ಕಲ್ಲಿದ್ದಲು ನಿಕ್ಷೇಪವು ಹಂಚಿಕೆಯಾಗಿದೆ. ಉತ್ತಮದರ್ಜೆಯ ಬಿಟುಮಿನಸ್ ಕಲ್ಲಿದ್ದಲು ಯೂರೋಪಿಯನ್ ರಷ್ಯ, ಜರ್ಮನಿ ಮತ್ತು ಬ್ರಿಟನ್ಗಳಲ್ಲಿ ಹಂಚಿಕೆಯಾಗಿದೆ.

ಪ್ರಮುಖ ಕೈಗಾರಿಕೆಗಳು


• ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ: ಇದು ಯೂರೋಪಿನ ದೊಡ್ಡ ಪ್ರಮಾಣದ ಕೈಗಾರಿಕೆಯಾಗಿದ್ದು, ಹಲವು ಉಪಕೈಗಾರಿಕೆಗಳಿಗೆ ಅಗತ್ಯವಾದ ಕಬ್ಬಿಣ ಮತ್ತು ಉಕ್ಕುಗಳನ್ನು ಉತ್ಪಾದಿಸುತ್ತದೆ. ಪ್ರಮುಖ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಪ್ರದೇಶಗಳೆಂದರೆ,
1) ಜರ್ಮನಿ ರ್ಹೂರ್, ಸಾರ್, ವೆಸರ್ ನದಿಬಯಲುಗಳು ಮತ್ತು ಬರ್ಲಿನ್ ಪ್ರದೇಶ.
2) ಬ್ರಿಟನ್ ಬ್ಲಾಕ್ಕಂಟ್ರಿ, ಶೆಫೀಲ್ಡ್, ಈಶಾನ್ಯ ಕರಾವಳಿ ಮತ್ತು ವೇಲ್ಸ್ ಪ್ರದೇಶ.
3) ಫ್ರಾನ್ಸ್ ಲೊರೈನ್, ವಾಯವ್ಯ ಮತ್ತು ಪೂರ್ವಗಡಿ ಪ್ರದೇಶಗಳು, ಪೋಲೆಂಡಿನ ಸೈಲೀಸಿಯ ಇಟಲಿಯ ಪೋ ನದಿ ಕಣಿವೆ ಮತ್ತು ಲಂಬಾರ್ಡಿ ಮೈದಾನ.
• ಹತ್ತಿ ಬಟ್ಟೆ ಕೈಗಾರಿಕೆ: ಯೂರೋಪಿನಲ್ಲಿ ಹತ್ತಿಬಟ್ಟೆ ಕೈಗಾರಿಕೆ ಯೂರೋಪಿನ ಪ್ರಮುಖ ಉದ್ಯಮವಾಗಿದೆ. ಯೂರೋಪಿನಾದ್ಯಂತ ಹತ್ತಿಗಿರಣಿಗಳಿವೆ. ಕಚ್ಚಾಹತ್ತಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಬ್ರಿಟನ್ ಆಧುನಿಕ ಹತ್ತಿಬಟ್ಟೆ ಕೈಗಾರಿಕೆಯ ಉಗಮ ಸ್ಥಳವಾಗಿದೆ.. ಇಲ್ಲಿನ ಲಂಕಾಷೈರ್,ಚೆಷೈರ್ ಮತ್ತು ಡರ್ಬಿ ಷೈರ್ಗಳು ಪ್ರಮುಖ ಹತ್ತಿಗಿರಣಿ ಕೇಂದ್ರಗಳು. ಜರ್ಮನಿ ಮತ್ತು ಪ್ರಾನ್ಸ್ಗಳು ಇತರ ಪ್ರಮುಖ ಹತ್ತಿ ಜವಳಿ ವಸ್ತುಗಳನ್ನು ಉತ್ಪಾದಿಸುವ ದೇಶಗಳು.
• ಹಡಗು ಕಟ್ಟುವ ಕೈಗಾರಿಕೆ: ಯೂರೋಪಿನಲ್ಲಿ ಜರ್ಮನಿಯು ಪ್ರಮುಖ ಹಡಗು ಕಟ್ಟುವ ದೇಶ. ಸ್ವೀಡನ್, ಬ್ರಿಟನ್ ಮತ್ತು ಫ್ರಾನ್ಸ್ಗಳು ಯುರೋಪಿನ ಇತರ ಹಡಗು ಕಟ್ಟುವ ದೇಶಗಳು.

ಜನಸಂಖ್ಯೆ


• ಯೂರೋಪಿಯನ್ ರಷ್ಯವನ್ನು ಹೊರತುಪಡಿಸಿ ಪ್ರಪಂಚದ ಶೇ.11 ಭೂಭಾಗವನ್ನು ಹೊಂದಿದೆ. ಆದರೆ ಪ್ರಪಂಚದ ಐದನೆಯ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದೆ. ಅದರ ಒಟ್ಟು ಜನಸಂಖ್ಯೆ 738.2 ಮಿಲಿಯನ್ಗಳು (2010).
• ಯೂರೋಪಿನಲ್ಲಿ ಜನಸಂಖ್ಯೆಯು ಸಮನಾಗಿ ಹಂಚಿಕೆಯಾಗಿಲ್ಲ. ಜರ್ಮನಿ, ಬ್ರಿಟನ್, ಇಟಲಿ ಮತ್ತು ಫ್ರಾನ್ಸ್ಗಳು ಯೂರೋಪಿನ ಜನಭರಿತ ದೇಶಗಳು.
• ವಾಯವ್ಯ ಯೂರೋಪಿನಲ್ಲಿ ಜನಸಾಂದ್ರತೆ ಕಡಿಮೆ. ಆಲ್ಪ್ಸ್, ಕಕಾಸಸ್, ಅರೆ ಶುಷ್ಕ ಪ್ರದೇಶವುಳ್ಳ ಆಗ್ನೇಯ ಯೂರೋಪಿನ ಭಾಗಗಳಲ್ಲಿಯೂ ಜನಸಾಂದ್ರತೆ ವಿರಳ.
• ಯೂರೋಪಿನ ಅಧಿಕ ಜನಸಾಂದ್ರತೆಯುಳ್ಳ ದೇಶಗಳೆಂದರೆ; ಬೆಲ್ಜಿಯಂ, ಲಕ್ಷಂಬರ್ಗ್, ನೆದರ್ಲೆಂಡ್ಸ್ ಇತ್ಯಾದಿ. ಇದಕ್ಕೆ ಕೈಗಾರಿಕೀಕರಣ, ಸಾರಿಗೆ ಸೌಲಭ್ಯ, ನೈಸರ್ಗಿಕ ಸಂಪನ್ಮೂಲಗಳು ಮತ್ತು ತಂತ್ರಜ್ಞಾನದ ಪ್ರಗತಿ ಪ್ರಮುಖ ಕಾರಣಗಳಾಗಿವೆ.