ಉತ್ತರ ಅಮೆರಿಕ ಖಂಡ(North America continent)

 

• ಉತ್ತರ ಅಮೆರಿಕವು ಇತ್ತೀಚೆಗೆ ಕಂಡುಹಿಡಿದ ಖಂಡವಾಗಿದೆ. 1501ರಲ್ಲಿ ಇಟಲಿಯ ನಾವಿಕ ಅಮೆರಿಗೊ ವೆಸ್ಪುಸಿ ಈ ಖಂಡದ ಕರಾವಳಿಯನ್ನು ತಲುಪಿದನು. ಅನಂತರ ಈ ಖಂಡವನ್ನು ಆತನ ಹೆಸರಿನ ಮೊದಲ ಪದ `ಅಮೆರಿಗೊ' ದಿಂದ `ಅಮೆರಿಕಾ' ಎಂದು ಕರೆಯಲಾಗಿದೆ.
• ಉತ್ತರ ಅಮೆರಿಕದ ಹೇರಳವಾದ ಸಂಪನ್ಮೂಲಗಳು ಅಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ತಳಹದಿಯಾಗಿವೆ. ಉತ್ತರ ಅಮೆರಿಕವು ಜಗತ್ತಿನ ಅತಿ ಶ್ರೀಮಂತ ಮತ್ತು ಆರ್ಥಿಕವಾಗಿ ಪ್ರಾಬಲ್ಯ ಹೊಂದಿದ ಖಂಡಗಳಲ್ಲೊಂದಾಗಿದೆ.
• ಉತ್ತರ ಅಮೆರಿಕವು ಪೂರ್ವದಲ್ಲಿ ಅಟ್ಲಾಂಟಿಕ್ ಮಹಾಸಾಗರ, ಪಶ್ಚಿಮದಲ್ಲಿ ಫೆಸಿಫಿಕ್ ಮಹಾಸಾಗರ ಮತ್ತು ಉತ್ತರದಲ್ಲಿ ಆಕ್ರ್ಟಿಕ್ (ಉತ್ತರ ಶೀತ) ಸಾಗರದಿಂದ ಸುತ್ತುವರಿದಿದೆ.
• ಬೇರಿಂಗ್ ಜಲಸಂಧಿಯು ಉತ್ತರ ಅಮೆರಿಕಾವನ್ನು ಏಷ್ಯ ಖಂಡದಿಂದ ಪ್ರತ್ಯೇಕಿಸಿದೆ.
• ಉತ್ತರ ಅಮೆರಿಕವು ವಿಸ್ತೀರ್ಣದಲ್ಲಿ (16.46%) ಏಷ್ಯ ಮತ್ತು ಆಫ್ರಿಕಗಳ ನಂತರ ಮೂರನೇ ಅತಿ ದೊಡ್ಡ ಭೂಖಂಡವಾಗಿದೆ (24.24 ದಶಲಕ್ಷ ಚ.ಕಿ.ಮೀ). ಇದು ಭಾರತಕ್ಕಿಂತ ಸುಮಾರು ಏಳು ಪಟ್ಟು ದೊಡ್ಡದಾಗಿದೆ. ಉತ್ತರ ಅಮೆರಿಕದಲ್ಲಿ 23 ದೇಶಗಳಿವೆ.

ಪ್ರಾಕೃತಿಕ ಲಕ್ಷಣಗಳು


ಉತ್ತರ ಅಮೆರಿಕ ಖಂಡವನ್ನು ನಾಲ್ಕು ಮುಖ್ಯ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ
1. ಪರ್ವತಗಳು (ರಾಕಿ ಪರ್ವತಗಳು)
2. ಮಹಾ ಮೈದಾನಗಳು
3. ಉನ್ನತ ಪ್ರದೇಶಗಳು/ಅಪಲೇಷಿಯನ್ ಪರ್ವತಗಳು
4. ಕರಾವಳಿ ಪ್ರದೇಶ

1. ಪರ್ವತಗಳು (ರಾಕಿ ಪರ್ವತಗಳು)


• ಇವು ಹಿಮಾಲಯ ಪರ್ವತಗಳಂತೆ ಮಡಿಕೆ ಪರ್ವತ ಶ್ರೇಣಿಗಳಾಗಿವೆ. ಅಲಾಸ್ಕದಿಂದ ದಕ್ಷಿಣದಲ್ಲಿ ಪನಾಮದವರೆಗೂ ಹಬ್ಬಿವೆ.
• ಇವುಗಳ ಎತ್ತರವು ಅಲಾಸ್ಕದೆಡೆಗೆ ಹೋದಂತೆ ಕಡಿಮೆಯಾಗುತ್ತದೆ ಮತ್ತು ಮೆಕ್ಸಿಕೊ ಕಡೆಗೆ ಹೋದಂತೆ ಹೆಚ್ಚಾಗುತ್ತದೆ.
• ಪಶ್ಚಿಮದ ಪರ್ವತಾವಳಿಗಳಲ್ಲಿ ರಾಕಿ ಪರ್ವತಗಳು ಅತಿ ಪ್ರಮುಖವಾದ ಸರಣಿಗಳಾಗಿವೆ. ಈ ಪ್ರದೇಶದಲ್ಲಿ ಮೌಂಟ್ ಮ್ಯಾಕ್ಕಿನ್ಲೆ (6194 ಮೀ) ಅತಿ ಎತ್ತರವಾದ ಶಿಖರವಾಗಿದ್ದರೆ, ಮೃತ್ಯುಕಣಿವೆಯು (ಸಮುದ್ರ ಮಟ್ಟದಿಂದ 86 ಮೀ.ನಷ್ಟು ತಗ್ಗಾದ) ಅತಿ ತಗ್ಗಾದ ಭಾಗವಾಗಿದೆ.
• ಕಾಸ್ಕೇಡ್ ಮತ್ತು ಸಿಯೆರ್ರಾ ನಿವೇಡಗಳು ಇತರೆ ಪರ್ವತ ಸರಣಿಗಳು.

2. ಮಹಾ ಮೈದಾನಗಳು


• ಈ ಮೈದಾನಗಳು ಹೆಚ್ಚು ವಿಸ್ತಾರವಾಗಿದ್ದು (ಉತ್ತರ ಅಮೆರಿಕದ ಒಟ್ಟು ಭೂಭಾಗದ 3/5ರಷ್ಟು) ಸಮತಟ್ಟಾದ ಲಕ್ಷಣದಿಂದ ಸಾಧಾರಣ ಇಳಿಜಾರುವಿನಿಂದ ಕೂಡಿವೆ. ಪೂರ್ವದಲ್ಲಿ ಅಪಲೇಷಿಯನ್ ಪರ್ವತ ಮತ್ತು ಪಶ್ಚಿಮದಲ್ಲಿ ಪರ್ವತಾವಳಿಗಳ ಮಧ್ಯೆ ಕಂಡುಬರುತ್ತವೆ.
• ಈ ಮೈದಾನಗಳು ಮಿಸಿಸಿಪ್ಪಿ ಮತ್ತು ಮಿಸ್ಸೌರಿ ನದಿಗಳು ಮತ್ತು ಅವುಗಳ ಉಪನದಿಗಳಿಂದ ನಿರ್ಮಾಣವಾಗಿವೆ. ಇದು ಪ್ರಪಂಚದ ಅತಿ ಫಲವತ್ತಾದ ಮೈದಾನಗಳಲ್ಲೊಂದಾಗಿದ್ದು, ಉತ್ತಮ ಕೃಷಿ ಪ್ರದೇಶವಾಗಿದೆ.

3. ಉನ್ನತ ಪ್ರದೇಶಗಳು/ಅಪಲೇಷಿಯನ್ ಪರ್ವತಗಳು


• ಇವು ಪೂರ್ವ ಭಾಗದಲ್ಲಿ ಪರ್ವತಪಾದದ ಪ್ರಸ್ಥಭೂಮಿ ಮತ್ತು ಅಟ್ಲಾಂಟಿಕ್ ಕರಾವಳಿ ಮೈದಾನಗಳಿವೆ. ಅವು ಕಲ್ಲಿದ್ದಲು, ಸೀಸ, ಸತು, ಕಬ್ಬಿಣದ ಅದಿರು, ತಾಮ್ರ, ಜಲಶಕ್ತಿ ಮತ್ತು ಕಾಡುಮರಗಳಂತಹ ಸಂಪನ್ಮೂಲಗಳಿಂದ ಶ್ರೀಮಂತವಾಗಿವೆ. ಈ ಪ್ರದೇಶವು ಅಪಾರ ಜನಸಂಖ್ಯೆಯನ್ನು ಹೊಂದಿದ್ದು, ಅದು ಉತ್ತರ ಅಮೆರಿಕದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡಿದೆ.

4. ಕರಾವಳಿ ಪ್ರದೇಶ


• ಕರಾವಳಿ ಮೈದಾನವು ಈಶಾನ್ಯದಲ್ಲಿ ಕಿರಿದಾಗಿದೆ ಮತ್ತು ದಕ್ಷಿಣ ಮತ್ತು ಪಶ್ಚಿಮದ ಕಡೆಗೆ ಹೋದಂತೆ ಅಗಲವಾಗಿದೆ. ಸರಾಸರಿ ಎತ್ತರ ಸಮುದ್ರ ಮಟ್ಟಕ್ಕೆ 150ಮೀ.
• ಇದು ತಗ್ಗು ಮತ್ತು ಸಾಧಾರಣಾ ಮೈದಾನ ಪ್ರದೇಶವಾಗಿದ್ದು ಫಲವತ್ತಲ್ಲದ ಮರಳು ಮಣ್ಣಿನಿಂದ ಆವರಿಸಿದೆ. ಬಹಳಷ್ಟು ಜವುಗು ಮತ್ತು ಜವುಳು ಭಾಗಗಳಿವೆ.

ನದಿಗಳು ಮತ್ತು ಸರೋವರಗಳು


ಪ್ರಮುಖ ನದಿಗಳು: ಮಿಸಿಸಿಪ್ಪಿ ಮತ್ತು ಅದರ ಉಪನದಿಗಳು ಉತ್ತರ ಅಮೇರಿಕಾದ ಅತಿ ದೊಡ್ಡ ನದಿ ವ್ಯವಸ್ಥೆಯಾಗಿದ್ದು, ಖಂಡದ ಮೂರನೇ ಎರಡರಷ್ಟು ಭೂಭಾಗದ ಮೂಲಕ ಹರಿಯುತ್ತವೆ. ಮಿಸಿಸಿಪ್ಪಿ ನದಿಯು ಮೆಕ್ಸಿಕೊ ಖಾರಿಯನ್ನು ಸೇರುತ್ತದೆ. ಮಿಸ್ಸೌರಿ ಎಂಬುದು ಇದರ ಪ್ರಮುಖ ಉಪನದಿ. ರೆಡ್ರಿವರ್, ಓಹಾವೊ, ಅರಕಾನ್ಸ್ಸ್, ಟೆನಸ್ಸಿ ಮತ್ತು ಪ್ಲಾಟೆ ಎಂಬುವು ಇತರೆ ಉಪನದಿಗಳು. ಸ್ನೇಕ್, ಫ್ರೇಸರ್, ಕೊಲಂಬಿಯಾ, ಯೂಕಾನ್, ಕೊಲರಾಡೊ, ರಯೊಗ್ರಾಂಡ್, ಮೆಕೆಂಜಿ, ನೆಲ್ಸನ್ ಮತ್ತು ಸೇಂಟ್ ಲಾರೆನ್ಸ್ಗಳು ಉತ್ತರ ಅಮೇರಿಕೆಯ ಇತರ ಪ್ರಮುಖ ನದಿಗಳು.

ಸರೋವರಗಳು: ಉತ್ತರ ಅಮೆರಿಕವು ಅಪಾರ ಸಂಖ್ಯೆಯ ಸಿಹಿನೀರಿನ ಮತ್ತು ಉಪ್ಪು ನೀರಿನ ಸರೋವರಗಳನ್ನು ಹೊಂದಿದೆ. ಹ್ಯೂರಾನ್, ಓಂಟಾರಿಯೊ, ಮಿಚಿಗನ್, ಐರಿ ಮತ್ತು ಸುಪೀರಿಯರ್ಗಳು ಪ್ರಮುಖವಾದ ಸರೋವರಗಳಾಗಿವೆ. ಸುಪೀರಿಯರ್ ಸರೋವರವು ಮಹಾಸರೋವರಗಳಲ್ಲಿ ದೊಡ್ಡದಾಗಿದ್ದು ವಿಶ್ವದ ಅತಿ ದೊಡ್ಡ ಸಿಹಿ ನೀರಿನ ಸರೋವರವಾಗಿದೆ.

ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ


ವಾಯುಗುಣ:
• ಉತ್ತರ ಅಮೆರಿಕವು ಅತಿ ವಿಸ್ತಾರವಾದ ವಿಭಿನ್ನ ಮೇಲ್ಮೈ ಲಕ್ಷಣ ಅಕ್ಷಾಂಶಗಳ ವಿಸ್ತರಣೆಗಳಿಂದಾಗಿ ವಿಭಿನ್ನವಾದ ವಾಯುಗುಣವನ್ನು ಹೊಂದಿದೆ.
• ಅಲಾಸ್ಕ ಮತ್ತು ಗ್ರೀನ್ಲ್ಯಾಂಡ್ ಹೆಪ್ಪುಗಟ್ಟುವ ಹವಾಗುಣ ಪರಿಸ್ಥಿತಿಗಳನ್ನು (ಟಂಡ್ರಾ ಮಾದರಿ) ಹೊಂದಿದ್ದರೆ, ಅಮೆರಿಕ ಸಂಯುಕ್ತಸಂಸ್ಥಾನದ ನೈರುತ್ಯದಲ್ಲಿರುವ ಮರುಭೂಮಿಗಳು ಸುಡುವ ಶಾಖವನ್ನು ಹೊಂದಿವೆ.
• ಈ ಖಂಡದ ಕೇಂದ್ರ ಮತ್ತು ದಕ್ಷಿಣ ಪ್ರದೇಶಗಳು ಹರಿಕೇನ್ ಮತ್ತು ಟಾರ್ನಾಡೊಗಳಂತಹ ಬಿರುಗಾಳಿಯುಕ್ತ ಪ್ರದೇಶಗಳಾಗಿವೆ.
ಸ್ವಾಭಾವಿಕ ಸಸ್ಯವರ್ಗ:
• ಸೂಚಿಪರ್ಣ ಅರಣ್ಯ: ಈ ಸಸ್ಯವರ್ಗದ ಪಟ್ಟಿಗಳು ಮುಖ್ಯವಾಗಿ ವಾಯುಗುಣ ಪ್ರದೇಶಗಳನ್ನು ಅನುಸರಿಸುತ್ತವೆ. ಅವುಗಳೆಂದರೆ ಟಂಡ್ರಾ ಮಾದರಿಯ ಸಸ್ಯವರ್ಗವು ಉತ್ತರ ಮೇರುವೃತ್ತ (ಆಕ್ರ್ಟಿಕ್ ವೃತ್ತ)ದೊಳಗೆ ಕಂಡುಬರುತ್ತದೆ. ಅದರಲ್ಲೂ ಮುಖ್ಯವಾಗಿ ಕೆನಡ, ಅಲಾಸ್ಕ ಮತ್ತು ಗ್ರೀನ್ಲ್ಯಾಂಡ್ಗಳಲ್ಲಿ ಕಂಡುಬರುತ್ತದೆ.
• ಇಲ್ಲಿ ಚಳಿಗಾಲವು ದೀರ್ಘ ಮತ್ತು ಹೆಪ್ಪುಗಟ್ಟುವ ಸ್ಥಿತಿಯನ್ನೂ ಹಾಗೂ ಬೇಸಿಗೆಯು ಅತಿಕಡಿಮೆ ಅವಧಿಯನ್ನು ಹೊಂದಿದೆ. ಇಲ್ಲಿ ಕಂಡುಬರುವ ಸಸ್ಯವರ್ಗಗಳೆಂದರೆ ಪಾಚಿ ಮತ್ತು ಹಾವಸೆಗಳು ಮಾತ್ರ. ಹಿಮಜಿಂಕೆ, ಕಾರಿಬೊ ಮತ್ತು ಹಿಮಕರಡಿಗಳು ಇಲ್ಲಿ ಕಂಡು ಬರುತ್ತವೆ.
• ಟಂಡ್ರಾ ಪಟ್ಟಿಯ ದಕ್ಷಿಣಭಾಗವು ತಂಪಾದ ಸಮಶೀತೋಷ್ಣ ವಿಧದ ವಾಯುಗುಣ ಪ್ರದೇಶದಲ್ಲಿದೆ. ಇದು ವಾಸ್ತವವಾಗಿ ಸೂಚಿಪರ್ಣ ಅರಣ್ಯದ ಪಟ್ಟಿಯಾಗಿದ್ದು ಅದನ್ನು ಟೈಗಾ ಎಂದು ಕರೆಯಲಾಗಿದೆ. ಸೂಚಿಪರ್ಣ ಅರಣ್ಯಗಳಲ್ಲಿ ಪೈನ್,
ಫರ್, ಸ್ಪ್ರೂಸ್, ಲಾರ್ಚ್ ಮುಂತಾದ ಮರಗಳು ಕಂಡುಬರುತ್ತವೆ.

ಪ್ರಮುಖ ಖನಿಜಗಳು ಮತ್ತು ಕೈಗಾರಿಕೆಗಳು


• ಉತ್ತರ ಅಮೆರಿಕವು ಅಪಾರ ಸಂಪನ್ಮೂಲಗಳ ಕೊಡುಗೆಗೆ ಒಳಗಾಗಿದೆ. ಅದರ ನೈಸರ್ಗಿಕ ಸಂಪನ್ಮೂಲಗಳೆಂದರೆ ವೈವಿಧ್ಯಮಯ ಮಣ್ಣುಗಳು, ವಿಸ್ತಾರವಾದ ಹುಲ್ಲುಗಾವಲು, ಖನಿಜ, ಶಕ್ತಿ ಸಂಪನ್ಮೂಲಗಳು ಮತ್ತು ಅರಣ್ಯ ಸಂಪತ್ತುಗಳಾಗಿದೆ.ಉತ್ತರ ಅಮೆರಿಕ ಭೂಖಂಡವು ವಿವಿಧ ಬೆಲೆಬಾಳುವ ಖನಿಜಗಳ ಅಧಿಕ ನಿಕ್ಷೇಪವನ್ನುಹೊಂದಿದೆ.
• ಇದಲ್ಲದೆ ಕಬ್ಬಿಣದ ಅದಿರು, ತಾಮ್ರ, ನಿಕಲ್, ಬೆಳ್ಳಿ ಮತ್ತು ಸತುಗಳು ಇತರ ಪ್ರಮುಖವಾದ ಖನಿಜ ನಿಕ್ಷೇಪಗಳಾಗಿವೆ.
• ಉತ್ತರ ಅಮೆರಿಕದಲ್ಲಿ ಪ್ರಪ್ರಥಮ ಖನಿಜ ಗಣಿಯೆಂದರೆ ಚಿನ್ನದ ಗಣಿಯಾಗಿದೆ. ಕ್ಯಾಲಿಫೋರ್ನಿಯ ಮತ್ತು ಯೂಕಾನ್ ಕಣಿವೆಗಳು ಚಿನ್ನದ ಗಣಿಗಳ ಪ್ರಮುಖ ಪ್ರದೇಶಗಳಾಗಿವೆ.
• ಸುಪೀರಿಯರ್ ಸರೋವರ ಮತ್ತು ಅದನ್ನು ಸುತ್ತುವರಿದಿರುವ ಪ್ರದೇಶಗಳು ಅಪಾರ ಪ್ರಮಾಣದ ಕಬ್ಬಿಣದ ಅದಿರಿನ ನಿಕ್ಷೇಪಕ್ಕೆ ಪ್ರಖ್ಯಾತಿ ಪಡೆದಿವೆ.
• ಮೆಕ್ಸಿಕೊ ವಿಶ್ವದ ಪ್ರಮುಖ ಬೆಳ್ಳಿ ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆ.
• ಅಮೆರಿಕ ಸಂಯುಕ್ತ ಸಂಸ್ಥಾನವು ಜಗತ್ತಿನಲ್ಲಿ ಅತ್ಯಂತ ಹೆಚ್ಚು ತಾಮ್ರ ಉತ್ಪಾದಿಸುವ ರಾಷ್ಟ್ರವಾಗಿದೆ.
• ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದ ಅತ್ಯಧಿಕ ಕಲ್ಲಿದ್ದಲನ್ನು ರಫ್ತು ಮಾಡುತ್ತಿರುವ ದೇಶವಾಗಿದೆ.
• ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳಲ್ಲಿ ಮೃದು ಮರಗಳನ್ನು ಕಾಗದ, ಕಾರ್ಡ್ಬೋರ್ಡ್ ಮತ್ತು ನ್ಯೂಸ್ಪ್ರಿಂಟ್ಕಾಗದಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.

ಜನಸಂಖ್ಯೆ


• ಬಹುತೇಕ ಉತ್ತರ ಅಮೆರಿಕನ್ನರು ಯುರೋಪಿಯನ್ನರು, ಅಮೆರಿಕನ್ ಇಂಡಿಯನ್ಸ್ ಮತ್ತು ಆಫ್ರಿಕನ್ನರಾಗಿದ್ದಾರೆ. ಅವರಲ್ಲಿ ಬಹುತೇಕ ಜನರು ಸ್ಪ್ಯಾನಿಷ್,ಇಂಗ್ಲಿಷ್,ಫ್ರೆಂಚ್ ಭಾಷೆಗಳನ್ನು ಮಾತನಾಡುತ್ತಾರೆ.
• ಉತ್ತರ ಅಮೆರಿಕದ ಪೂರ್ವಭಾಗಗಳಲ್ಲಿ ಅತಿ ಹೆಚ್ಚಿನ ಜನಸಾಂದ್ರತೆಯನ್ನು ಕಾಣಬಹುದು. ಇಲ್ಲಿ ಹೆಚ್ಚಿನ ನಗರೀಕರಣವಿದೆ. ಉದಾ: ನ್ಯೂಯಾರ್ಕ್, ವಾಷಿಂಗ್ಟನ್, ಚಿಕಾಗೊ ಇತ್ಯಾದಿ.