ಸಂವಿಧಾನದ ಪ್ರಮುಖ ಲಕ್ಷಣಗಳು
 
ಸಂವಿಧಾನದ ಪ್ರಮುಖ ಲಕ್ಷಣಗಳು
. ಬೃಹತ್ ಸಂವಿಧಾನ :- ಭಾರತದ ಸಂವಿಧಾನ ಅತ್ಯಂತ ದೊಡ್ಡ ಸಂವಿಧಾನವಾಗಿದೆ. 1950 ಜನವರಿ 26 ರಂದು ಭಾರತ ಸಂವಿಧಾನ ಜಾರಿಗೆ ಬಂದಾಗ ಅದು 395 ವಿಧಿಗಳನ್ನು 8 ಅನುಸೂಚಿಗಳನ್ನು, 22 ಭಾಗಗಳನ್ನು ಒಳಗೊಂಡಿತ್ತು. ಪ್ರಸ್ತುತ ಭಾರತ ಸಂವಿಧಾನವು 446 ವಿಧಿಗಳನ್ನು 12 ಅನುಸೂಚಿಗಳನ್ನು, 24 ಭಾಗಗಳನ್ನು ಒಳಗೊಂಡ ಬೃಹತ ಗಾತ್ರದ ಸಂವಿಧಾನವಾಗಿದೆ. ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಮೇರಿಕದ ಸಂವಿಧಾನ ಕೇವಲ 7 ವಿಧಿಗಳನ್ನು ಹೊಂದಿ ಅತ್ಯಂತ ಚಿಕ್ಕ ಸಂವಿಧಾನವಾಗಿದೆ. ಸುಮಾರು 4000 ಪದಗಳನ್ನು ಒಳಗೊಂಡಿದೆ.
2. ವಯಸ್ಕ ಮತದಾನ ಪದ್ಧತಿ :- ಭಾರತ ಸಂವಿಧಾನವು ವಯಸ್ಕ ಮತದಾನ ಪದ್ಧತಿಯನ್ನು ಅಳವಡಿಸಿಕೊಂಡಿದೆ. 18 ವರ್ಷ ತುಂಬಿದ ಸ್ತ್ರೀ ಮತ್ತು ಪುರುಷರು ಮತವನ್ನು ಚಲಾಯಿಸಬಹುದು. 1989 ರಲ್ಲಿ ಸಂವಿಧಾನಕ್ಕೆ 61 ತಿದ್ದುಪಡಿ ತಂದು ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಲಾಯಿತು.
3. ಗಣರಾಜ್ಯ :- ರಾಷ್ಟ್ರದ ಮುಖ್ಯಸ್ಥರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿಸುವ ವ್ಯವಸ್ಥೆಯನ್ನು ಗಣರಾಜ್ಯ ಎಂದು ಕರೆಯಲಾಗುತ್ತದೆ. ಉದಾ. ರಾಷ್ಟ್ರಪತಿ.
4. ಜಾತ್ಯಾತೀತ ರಾಷ್ಟ್ರ :- ಭಾರತದಲ್ಲಿ ಹಲವು ಧರ್ಮ, ಜಾತಿ, ಸಂಸ್ಕøತಿಯ ಜನ ಒಟ್ಟಿಗೆ ಬದುಕುತ್ತಿರುವುದರಿಂದ (ತಾರತಮ್ಯವಿಲ್ಲದೆ) ಭಾರತದಲ್ಲಿ ‘ಸರ್ವಧರ್ಮ ಸಮನ್ವ;ಯ ತತ್ವದ ಅಡಿಯಲ್ಲಿ ಸಂವಿಧಾನವನ್ನು ರಚಿಸಿಕೊಳ್ಳಲಾಗಿದೆ. ನಾವೆಲ್ಲ ಒಂದೇ ಭಾರತೀಯರು ಏಕತೆ, ಸಮಗ್ರತೆ ಮೂಡಿಸುವ ನಿಟ್ಟಿನಲ್ಲಿ ಜಾತ್ಯಾತೀತ ರಾಷ್ಟ್ರವನ್ನು ಕಟ್ಟಿಕೊಳ್ಳಲಾಗಿದೆ.
5. ತುರ್ತು ಪರಿಸ್ಥಿತಿಗಳು :- ಸಂವಿಧಾನದ 18ನೇ ಭಾಗದಲ್ಲಿ ತುರ್ತು ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರ ರಾಷ್ಟ್ರಪತಿಗಿದೆ. 3 ರೀತಿಯ ತುರ್ತು ಪರಿಸ್ಥಿತಿಯನ್ನು ಕಾಣಬಹುದು. 1 ರಾಷ್ಟ್ರೀಯ ತುರ್ತು ಪರಿಸ್ಥಿತಿ 352 ನೇ ವಿಧಿ, 2 ರಾಜ್ಯ ತುರ್ತು ಪರಿಸ್ಥಿತಿ – 356 ನೇ ವಿಧಿ (ರಾಷ್ಟ್ರಪತಿ ಆಡಳಿತ), 3. ಆರ್ಥಿಕ ತುರ್ತು ಪರಿಸ್ಥಿತಿ- 360 ನೇ ವಿಧಿ.
6. ಕೇಂದ್ರಕ್ಕೆ ಶೇಷಾಧಿಕಾರ :- ಸಂವಿಧಾನದ 248 ನೇ ವಿಧಿಯು ಕೇಂದ್ರ ಸರ್ಕಾರಕ್ಕೆ ಶೇಷಾಧಿಕಾರವನ್ನು ಕೊಟ್ಟಿದೆ. ಶೇಷಾಧಿಕಾರವೆಂದರೆ ಉಳಿಕೆ ಅಧಿಕಾರಕ್ಕೆ (ಮೂರು ಪಟ್ಟಿಯನ್ನು ಹೊರತುಪಡಿಸಿ) ಶೇಷಾಧಿಕಾರ ಎನ್ನುವರು. 1 ಕೇಂದ್ರ ಪಟ್ಟಿ- 99, 2. ರಾಜ್ಯ ಪಟ್ಟಿ- 61, 3 ಸಮವರ್ತಿ ಪಟ್ಟಿ- 52 ವಿಷಯಗಳಿರುತ್ತವೆ.
7. ಲಿಖಿತ ಸಂವಿಧಾನ:- ನಮ್ಮ ಸಂವಿಧಾನ ಬರವಣಿಗೆಯ ರೂಪದಲ್ಲಿರುವುದಕ್ಕೆ ಲಿಖಿತ ಸಂವಿಧಾನವೆಂದು ಕರೆಯಲಾಗುತ್ತದ. ಅಂದರೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮೂಲಭೂತ ಹಕ್ಕು ಕರ್ತವ್ಯಗಳು ಮೊದಲಾದ ಅಂಶಗಳು ಬರವಣಿಗೆಯ ರೂಪದಲ್ಲಿವೆ.
8. ಮೂಲಭೂತ ಹಕ್ಕುಗಳು :- ಸಂವಿಧಾನದ ಭಾಗ 3 ರಲ್ಲಿ 12 ರಿಂದ 35 ನೇ ವಿಧಿಗಳವರೆಗೆ ಮೂಲಭೂತ ಹಕ್ಕುಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಸ್ತುತ 6 ಮೂಲಭೂತ ಹಕ್ಕುಗಳಿವೆ. ಅವುಗಳೆಂದರೆ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಹಕ್ಕು, ಸಂವಿಧಾನ ಪರಿಹಾರ ಹಕ್ಕುಗಳು ಆಸ್ತಿಯ (31ನೇ ವಿಧಿ) ಹಕ್ಕನ್ನು 1978 ರಲ್ಲಿ ಸಂವಿಧಾನಕ್ಕೆ 44ನೇ ತಿದ್ದುಪಡಿ ತರುವ ಮೂಲಕ ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆಯಲಾಗಿದೆ.
9. ಮೂಲಭೂತ ಕರ್ತವ್ಯಗಳು :- ಭಾರತ ಸಂವಿಧಾನದ 4-ಎ ಭಾಗದ 51 ಎ ವಿಧಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಪ್ರಸ್ತಾಪಿಸಲಾಗಿದೆ. ಸಂವಿಧಾನಕ್ಕೆ 1976 ರಲ್ಲಿ 42ನೇ ತಿದ್ದುಪಡಿ ತಂದು ಮೂಲಭೂತ ಕರ್ತವ್ಯಗಳ ಪಟ್ಟಿಯನ್ನು ಸೇರಿಸಲಾಯಿತು.
10. ಎರವಲು ಸಂವಿಧಾನ :- ವಿಶ್ವದ ವಿವಿಧ ಸಂವಿಧಾನಗಳಿಂದ ಭಾರ ಸಂವಿಧಾನಕ್ಕೆ ಹಲವು ಅಂಶಗಳನ್ನು ಎರಲವು ಪಡೆದುಕೊಳ್ಳಲಾಗಿದೆ. ಏಕಪೌರತ್ವ, ಮೂಲಭೂತ ಹಕ್ಕುಗಳು, ಪ್ರಸ್ತಾವನೆ, ಕಾರ್ಯಾಂಗದ ಆಳ್ವಿಕೆ, ಸಂವಿಧಾನ ತಿದ್ದುಪಡಿ, ಮೊದಲಾದ ಅಂಶಗಳು.
11. ರಾಜ್ಯ ನಿರ್ದೇಶಕ ತತ್ವಗಳು :- ಭಾರತ ಸಂವಿಧಾನ ಭಾಗ 4ರಲ್ಲಿ 36 ರಿಂದ 51ನೇ ವಿಧಿಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಪ್ರಸ್ತಾಪಿಸಿವೆ. ಉದಾ : ಸಮಾಜವಾದಿ ತತ್ವಗಳು, ಗಾಂಧಿ ತತ್ವಗಳು, ಉದಾರವಾದಿ ತತ್ವಗಳು.
12. ಸಂಸದೀಯ ಸರ್ಕಾರ ಪದ್ಧತಿ :- ಕಾರ್ಯಾಂಗವು ಶಾಸಕಾಂಗಕ್ಕೆ ಹೊಣೆಗಾರಿಕೆಯಾಗಿರುವ ವ್ಯವಸ್ಥೆಗೆ ಸಂಸದೀಯ ಸರ್ಕಾರ ಪದ್ಧತಿ ಎಂದು ಕರೆಯಲಾಗುತ್ತದೆ. ಉದಾ: ಭಾರತ, ಬ್ರಿಟನ್,
13. ಸ್ವಾತಂತ್ರ್ಯ ನ್ಯಾಯಾಂಗ :- ಭಾರತದ ಸಂವಿಧಾನದಲ್ಲಿ ಸ್ವಾತಂತ್ರ್ಯ ನ್ಯಾಯಾಂಗ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಗಿದೆ. ಕಾರಣ ನ್ಯಾಯಾಂಗವು ಯಾವುದೇ ಆಮಿಷಗಳಿಗೆ ಒಳಗಾಗದೆ ಸ್ವತಂತ್ರವಾಗಿ, ನಿರ್ಭಯವಾಗಿ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲಿ ಎಂಬ ಉದ್ದೇಶವಾಗಿದೆ.
14. ಏಕಪೌರತ್ವ :- ಭಾರತ ತನ್ನ ಪ್ರಜೆಗಳಿಗೆ ರಾಷ್ಟ್ರೀಯ ಪೌರತ್ವವನ್ನು ಮಾತ್ರ ನೀಡಿರುವುದಕ್ಕೆ ಏಕಪೌರತ್ವ ಎನ್ನಲಾಗುತ್ತದೆ. ನಮ್ಮ ಸಂವಿಧಾನದ ಉದ್ದೇಶ ರಾಷ್ಟ್ರದ ಸಮಗ್ರತೆ, ಐಕ್ಯತೆ ಕಾಪಾಡುವು ದಾಗಿದೆ. ಸಂವಿಧಾನದ ಭಾಗ 2 ರಲ್ಲಿ 5 ರಿಂದ 11 ನೇ ವಿಧಿಗಳಲ್ಲಿ ಪೌರತ್ವವನ್ನು ಪ್ರಸ್ತಾಪಿಸಲಾಗಿದೆ.
15. ಅಖಿಲ ಭಾರತ ಸೇವೆಗಳು :- ಭಾರತ ಸಂವಿಧಾನ ರಾಷ್ಟ್ರದ ಆಡಳಿತದಲ್ಲಿ ದಕ್ಷತೆ ತರುವ ಉದ್ದೇಶದಿಂದ ಅಖಿಲ ಭಾರತ ಸೇವೆಗಳನ್ನು ಸೃಷ್ಟಿಸಿದೆ. ಉದಾ: ಐ.ಎ.ಎಸ್. ಐ.ಪಿ.ಎಸ್. ಐ.ಎಫ್. ಎಸ್. ಮೊದಲಾದವುಗಳು.
16. ಪಂಚಾಯತ ರಾಜ್ ವ್ಯವಸ್ಥೆ :- 1993 ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ತರುವ ಮೂಲಕ ಪಂಚಾಯತ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಅಂದರೆ 3 ಹಂತದ ಪಂಚಾಯತ ವ್ಯವಸ್ಥೆಗೆ ಅವಕಾಶ ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಜಿಲ್ಲಾ ಪಂಚಾಯತ.
17. ಸಂಯುಕ್ತ ವ್ಯವಸ್ಥೆ :- ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರ ಹಂಚಿಕೆಯಾಗಿರುವುದಕ್ಕೆ ಸಂಯುಕ್ತ ಪದ್ಧತಿ ಎನ್ನಲಾಗುತ್ತದೆ. ಉದಾ: ಕೇಂದ್ರಪಟ್ಟಿ – 99 ವಿಷಯಗಳು, ರಾಜ್ಯಪಟ್ಟಿ- 61 ವಿಷಯಗಳು ಹಾಗೂ ಸಮವರ್ತಿ ಪಟ್ಟಿಯ 52 ವಿಷಯಗಳಿಗೆ ಸಂಬಂಧಿಸಿದಂತೆ ಕಾಯ್ದೆಗಳನ್ನು ರೂಪಿಸುವ ಅಧಿಕಾರ ಹೊಂದಿದೆ.
18. ದ್ವಿಸದನ ಶಾಸಕಾಂಗ :- ಕೇಂದ್ರ ದ್ವಿ-ಸದನ ಶಾಸಕಾಂಗಕ್ಕೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯಸಭೆ (ಮೇಲ್ಮನೆ), ಲೋಕಸಭೆ (ಕೆಳಮನೆ) ಎಂದು ಕರೆಯುತ್ತಾರೆ. ರಾಜ್ಯಸಭೆ ರಾಜ್ಯಗಳನ್ನು ಪ್ರತಿನಿಧಿಸಿದರೆ, ಲೋಕಸಭೆ ಜನತೆಯನ್ನು ಪ್ರತಿನಿಧಿಸುವುದರ ಜೊತೆಗೆ ಹೆಚ್ಚು ಅಧಿಕಾರ ಹೊಂದಿದೆ.