ವಾಯುಮಂಡಲದ ಉಗಮ, ರಚನೆ, ಸಂಯೋಜನೆ
 
ಭೂಮಿಯನ್ನು ಸುತ್ತುವರಿದಿರುವ ಅನಿಲಗಳು, ಧೂಳಿನ ಕಣ ಮತ್ತು ನೀರಾವಿಯ ತೆಳುವಾದ ಪದರವನ್ನು ವಾಯುಗೋಳವೆಂದು ಕರೆಯುತ್ತೇವೆ. ಈ ಅನಿಲದ ಪದರವು ಭೂಮೇಲ್ಮೈ ಮತ್ತು ಬಾಹ್ಯಾಕಾಶಗಳ ನಡುವಿನ ರಕ್ಷಣಾ ವಲಯ. ವಾಯುಗೋಳದ ದಪ್ಪ ಸುಮಾರು 1000 ಕಿ.ಮೀ. ಗಳಿದ್ದು, ಇದು ಭೂಮಿಯ ಎಲ್ಲಾ ಬಗೆಯ ಜೀವಿಗಳಿಗೆ ಅತ್ಯವಶ್ಯವಾಗಿದೆ. ವಾಯುಗೋಳದ ಕೆಲವು ಅನಿಲಗಳು ಮಾನವ ಮತ್ತು ಇತರ ಜೀವಿಗಳ ಉಸಿರಾಟಕ್ಕೆ ಅತ್ಯವಶ್ಯವಾಗಿದೆ. ವಾಯುಗೋಳವು ಸೂರ್ಯನ ಶಾಖವನ್ನು ಹಿಡಿದಿರಿಸಿಕೊಂಡು ಭೂಮಿಯು ಒಂದು ಜೀವಗ್ರಹವಾಗಿರವಂತೆ ಮಾಡಿದೆ
ವಾಯುಮಂಡಲದ ಸಂಯೋಜನೆ
ವಾಯುಗೋಳವು ವಿವಿಧ ಬಗೆಯ ಅನಿಲಗಳು, ಧೂಳಿನ ಕಣಗಳು ಮತ್ತು ನೀರಾವಿಯ ಮಿಶ್ರಣವಾಗಿದೆ. ವಾಯುಗೋಳದ ಮುಖ್ಯ ಅನಿಲಗಳೆಂದರೆ ಸಾರಜನಕ ಶೇ.78.08, ಆಮ್ಲಜನಕ ಶೇ.20.94, ಆರ್ಗಾನ್ ಶೇ.0.93, ಇಂಗಾಲದ ಡೈಆಕ್ಸೈಡ್ ಶೇ.03, ಮತ್ತು ಓಜೋನ್ ಶೇ. 0.000005. ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ.
ವಾಯುಮಂಡಲದ ರಚನೆ
ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪರಿವರ್ತನಾಮಂಡಲ, ಸಮೋಷ್ಣಮಂಡಲ, ಮಧ್ಯಂತರಮಂಡಲ, ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.
1. ಪರಿವರ್ತನಾಮಂಡಲ (Troposphere)
ಇದು ವಾಯುಗೋಳದ ಅತ್ಯಂತ ಕೆಳಪದರ. ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8 ಕಿ.ಮೀ. ಎತ್ತರದವರೆಗೆ ಕಂಡುಬರುವುದು. ಈ ವಲಯದಲ್ಲಿಯೇ ಹವಾಮಾನದ ಮೂಲಾಂಶಗಳಾದ ಉಷ್ನಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಎಲ್ಲಾ ಅಂಶಗಳು ಕಂಡುಬರುತ್ತವೆ. ಹವಾಮಾನದ ಎಲ್ಲಾ ಬದಲಾವಣೆ ಕಂಡುಬರುವುದು ಈ ವಲಯದಲ್ಲಿ ಮಾತ್ರ. ಈ ವಲಯದಲ್ಲಿ ಎತ್ತರಕ್ಕೆ ಹೋದಂತೆ ಉಷ್ನಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತವೆ.
2. ಸಮೋಷ್ಣಮಂಡಲ (Stratosphere)
ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು 50 ಕಿ.ಮೀ.ವರೆಗೆ ಹಬ್ಬಿದೆ. ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ. ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು. ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ. ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿದೆ.
3. ಮಧ್ಯಂತರ ಮಂಡಲ (Mesosphere)
ಇದು ಸಮೋಷ್ಣಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ. ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ನಾಂಶವು ಕಡಿಮೆಯಾಗುವುದು. ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.
4. ಉಷ್ಣತಾಮಂಡಲ (Thermosphere)
ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ. ಈ ಪದರದಲ್ಲಿ ಉಷ್ನಾಂಶವು ತೀವ್ರವಾಗಿ ಹೆಚ್ಚಾಗುತ್ತದೆ. ಈ ಪದರದಲ್ಲಿನ ಅತ್ಯಧಿಕ ಉಷ್ನಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ‘ಆಯಾನುಮಂಡಲ’ವೆಂತಲೂ ಕರೆಯುವರು. ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.
5. ಬಾಹ್ಯಮಂಡಲ (Exosphere)
ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದು ಪದರವಾಗಿದೆ. ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.