ಶಿಥಿಲೀಕರಣ

 

ಶಿಲೆಗಳು ಒಡೆದು ಚೂರಾಗುವ ಮತ್ತು ಕ್ಷೀಣಿಸುವ ಸ್ವಾಭಾವಿಕ ಪ್ರಕ್ರಿಯೆಯೇ ಶಿಥಿಲೀಕರಣ. ಇದು ವಾಯುಗೋಲದಲ್ಲಿನ ಉಷ್ನಾಂಶ, ಮಳೆ, ಗಾಳಿ ಮುಂತಾದವುಗಳಿಂದ ನಡೆಯುತ್ತದೆ. ಶಿಥಿಲೀಕರಣದ ವಿಧಗಳೆಂದರೆ:
1. ಭೌತಿಕ ಶಿಥಿಲೀಕರಣ: ಶಿಲೆಗಳು ಯಾವುದೇ ರಾಸಾಯನಿಕ ಬದಲಾವಣೆಯಾಗದೇ ಒಡೆದು ಚೂರಾಗುವ ಮತ್ತು ಕ್ಷೀಣಿಸುವ ಕ್ರಿಯೆಯನ್ನು ಭೌತಿಕ ಶಿಥಿಲೀಕರಣವೆನ್ನುವರು. ಪ್ರಮುಖ ಭೌತಿಕ
ಶಿಥಿಲೀಕರಣದ ಕ್ರಿಯೆಗಳೆಂದರೆ ಕಣವಿಭಜನೆ, ಶಿಲಾವಿಭಜನೆ, ಪದರುವಿಭಜನೆ. ಭೌತಿಕ ಶಿಥಿಲೀಕರಣದ ಕರ್ತೃಗಳಾವುವೆಂದರೆ ಉಷ್ನಾಂಶ, ಮಳೆ, ಹಿಮ ಇತ್ಯಾದಿ.
2. ರಾಸಾಯನಿಕ ಶಿಥಿಲೀಕರಣ : ಈ ವಿಧದ ಶಿಥಿಲೀಕರಣದಲ್ಲಿ ಮಳೆಯ ನೀರು ವಾಯುಮಂಡಲದ ಅನಿಲಗಳೊಡನೆ ವಿಲೀನಗೊಂಡು ಶಿಲೆಗಳನ್ನು ಶಿಥಿಲಗೊಳಿಸುವುದು. ಈ ಶಿಥಿಲೀಕರಣದ ಪ್ರಕ್ರಿಯೆಯಿಂದ ಶಿಲೆಗಳಲ್ಲಿರುವ ಖನಿಜಗಳ ಸಂಯೋಜನೆಯಲ್ಲಿ ಬದಲಾವಣೆಯಾಗುತ್ತವೆ. ರಾಸಾಯನಿಕ ಶಿಥಿಲೀಕರಣದಲ್ಲಿ ಈ ಕೆಳಕಂಡ ನಾಲ್ಕು ವಿಧಗಳಿವೆ.
ಎ) ಆಮ್ಲಜನಕ ಸಂಯೋಜನೆ : ಆಮ್ಲಜನಕದಿಂದ ಕೂಡಿರುವ ಮಳೆಯ ನೀರು ಕೆಲವು ಖನಿಜಗಳ ಮೇಲೆ ಪ್ರಭಾವ ಬೀರುತ್ತವೆ. ಇದರಿಂದ ಶಿಲೆಗಳು ನಶಿಸುತ್ತವೆ. ವಿಶೇಷವಾಗಿ ಕಬ್ಬಿಣವು
ಕಬ್ಬಿಣದ ಆಕ್ಸೈಡ್ ಆಗುವ ಪರಿವರ್ತನೆ.
ಬಿ) ಇಂಗಾಲದ ಸಂಯೋಜನೆ : ಇಂಗಾಲಯುಕ್ತ ಮಳೆನೀರು ಸುಣ್ಣಕಲ್ಲುಗಳ ಮೇಲೆ ಬಿದ್ದಾಗ, ಶಿಲೆಗಳಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟ್‍ಗಳನ್ನು ಮಳೆಯ ನೀರಿನಲ್ಲಿರುವ ಇಂಗಾಲದ ಡೈ-ಆಕ್ಸೈಡ್ ಹೀರಿಕೊಳ್ಳುವುದರಿಂದ ಕ್ಯಾಲ್ಸಿಯಂ ಬೈಕಾರ್ಬೋನೇಟ್ ಆಗಿ ಬದಲಾಗುತ್ತದೆ.
ಸಿ) ಜಲಸಂಯೋಜನೆ : ಈ ಕ್ರಿಯೆಯಲ್ಲಿ ಕೆಲವು ಬಗೆಯ ಖನಿಜಗಳಲ್ಲಿನ ಕಣಗಳು ನೀರನ್ನು ಹೀರುವುದರಿಂದ ಉಬ್ಬಿಕೊಂಡು ಪುಡಿರೂಪದಲ್ಲಿ ಕ್ರಮೇಣ ನಶಿಸುತ್ತವೆ. ಫೆಲ್ಸಫರ್ ಇದು ಹರಳುಗಳಿಂದುಂಟಾದ ಪ್ರಮುಖ ಶಿಲೆಯಾಗಿದೆ.
ಡಿ) ದ್ರಾವಣೀಕರಣ : ಮಳೆಯ ನೀರು ಕೆಲವು ಶಿಲೆಗಳನ್ನು ಕರಗಿಸಿ ದ್ರಾವಣೀಕರಿಸುವುದರಿಂದ ಶಿಥಿಲೀಕರಣವೇರ್ಪಡುವುದು.
ಉದಾ: ಜಿಪ್ಸಂ, ಉಪ್ಪು, ಫಾಸ್ಫೇಟ್ ಇತ್ಯಾದಿ.
3. ಜೈವಿಕ ಶಿಥಿಲೀಕರಣ : ಸಸ್ಯವರ್ಗ, ಪ್ರಾಣಿವರ್ಗ ಮತ್ತು ಮಾನವನಿಂದ ಶಿಲೆಗಳು ಒಡೆದು ಚೂರಾಗುವುದನ್ನು ಜೈವಿಕ ಶಿಥಿಲೀಕರಣ ಎನ್ನುವರು. ಇದರಲ್ಲಿ ಭೌತಿಕ ಹಾಗೂ ರಾಸಾಯನಿಕ ಕ್ರಿಯೆಗಳೆರಡರಿಂದಲೂ ಶಿಥಿಲೀಕರಣವಾಗುತ್ತವೆ.
ಸಸ್ಯವರ್ಗ - ಸಸ್ಯಗಳ ಬೇರುಗಳು ಬೆಳೆದು ದಪ್ಪವಾಗುವುದರಿಂದ ಶಿಲೆಗಳು ಒಡೆದು ಚೂರಾಗುತ್ತವೆ.
ಪ್ರಾಣಿವರ್ಗ - ಬಿಲಗಳಲ್ಲಿ ವಾಸಿಸುವ ಪ್ರಾಣಿಗಳು, ಎರೆಹುಳು, ಮೊಲಗಳು, ಇಲಿಗಳು ಇತ್ಯಾದಿ.
ಮಾನವಜೀವಿ - ಗಣಿಗಾರಿಕೆ, ಕಲ್ಲುಗಣಿ, ಕಟ್ಟಡ ನಿರ್ಮಾಣದ ಕೆಲಸ ಇತ್ಯಾದಿ.