ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು) ( Writs embodied in Constitution)

 

• 'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ.

• ರಿಟ್ (Writs): ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands).

• ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ. ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು. ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು.

ರಿಟ್ ಗಳು (ತಡೆಯಾಜ್ಞೆಗಳು)(Writs)


1. ಹೇಬಿಯಸ್ ಕಾರ್ಪಸ್ (Habeas Corpus)


• ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು.

• ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು;
1) ಸ್ವತಃ ಬಾಧಿತ ವ್ಯಕ್ತಿ.
2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ

2. ಮ್ಯಾಂಡಮಾಸ್ (ಆಜ್ಞೆ) (Mandamus)


• ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ. ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ.

3. ಪ್ರೊಹಿಬಿಷನ್ (Prohibition)


• ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ.

4. ಸರ್ಶಿಯೋರರಿ (Certiorari)


• ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ.

5. ಕೊ ವಾರಂಟೋ (Quo-warranto)


• ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ. ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ. ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ.

Contributed By : Spardhaloka