ಕರ್ನಾಟಕ - ಕಿರುಪರಿಚಯ (Karnataka - Introduction)
 
• ಕರ್ನಾಟಕ ಎಂಬ ಹೆಸರು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ಇದನ್ನು ಕರುನಾಡು(ಕರ್ + ನಾಡು - ಅಂದರೆ ಕಪ್ಪುಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
• ಭಾರತದ 29 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಇದು ಭಾರತದ ದಕ್ಷಿಣದಲ್ಲಿದ್ದು, ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ.
• ಅತ್ಯಂತ ಉತ್ತರದ ತುದಿಯಾದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಿಂದ ದಕ್ಷಿಣದ ತುದಿಯಾದ ಚಾಮರಾಜನಗರ ಜಿಲ್ಲೆಯವರೆಗೆ ಒಟ್ಟು 750 ಕಿ.ಮೀ. ಉದ್ದವಿದೆ.
• ಕರ್ನಾಟಕ ರಾಜ್ಯವು ಭೂ ಮತ್ತು ಜಲ ಮೇರೆಗಳೆರಡನ್ನೂ ಸಹ ಒಳಗೊಂಡಿರುವುದು. ಪಶ್ಚಿಮಕ್ಕೆ ಅರಬ್ಬೀ ಸಮುದ್ರವಿದ್ದು, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರಪ್ರದೇಶ, ದಕ್ಷಿಣ ಮತ್ತು ಆಗ್ನೇಯಕ್ಕೆ ತಮಿಳುನಾಡು, ನೈಋತ್ಯಕ್ಕೆ ಕೇರಳ, ವಾಯವ್ಯಕ್ಕೆ ಗೋವಾ ರಾಜ್ಯಗಳು ಮೇರೆಗಳಾಗಿವೆ.
• ಕರ್ನಾಟಕ ರಾಜ್ಯವು 1,91,791 ಚದರ ಕಿ.ಮೀ. ವಿಸ್ತಾರವಾಗಿದೆ. ವಿಸ್ತೀರ್ಣದಲ್ಲಿ ಭಾರತದ ಎಂಟನೆಯ ದೊಡ್ಡ ರಾಜ್ಯ ಹಾಗೂ 2011 ರ ಜನಗಣತಿಯ ಪ್ರಕಾರ 6,11,30,704 ಜನಸಂಖ್ಯೆಯನ್ನು ಹೊಂದಿದ್ದು, ಜನಸಂಖ್ಯೆಯಲ್ಲಿ ಒಂಭತ್ತನೆಯ ಸ್ಥಾನವನ್ನು ಹೊಂದಿದೆ.
• ಕರ್ನಾಟಕದ ವಿಸ್ತೀರ್ಣವು ಶೇ. 5.83 ಭಾಗದಷ್ಟಿದೆ.
• 2011ರಲ್ಲಿದ್ದಂತೆ ನಮ್ಮ ರಾಜ್ಯದಲ್ಲಿ 30 ಜಿಲ್ಲೆಗಳಿವೆ. ಈ ಜಿಲ್ಲೆಗಳಲ್ಲಿ ಒಟ್ಟು 176 ತಾಲ್ಲೂಕುಗಳು, 769 ಹೋಬಳಿಗಳು, 347 ಪಟ್ಟಣ-ನಗರಗಳು, 29,340 ಹಳ್ಳಿಗಳಿವೆ.
• ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ ಅತಿ ದೊಡ್ಡದು ಹಾಗೂ ಬೆಂಗಳೂರು ನಗರ ಅತಿ ಚಿಕ್ಕ ಜಿಲ್ಲೆಯಾಗಿದೆ.
• ಬೆಂಗಳೂರು ಕರ್ನಾಟಕದ ರಾಜಧಾನಿ. ಆಡಳಿತ ನಿರ್ವಹಣೆಯ ದೃಷ್ಟಿಯಿಂದ ಕರ್ನಾಟಕವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ; ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳು.