ಹೊಯ್ಸಳರು (ಸಾ.ಶ. 984 - ಸಾ.ಶ. 1346)
 
ಚಾಲುಕ್ಯರು ಕ್ಷೀಣಿಸಿದ ನಂತರ ಕರ್ನಾಟಕದಲ್ಲಿ ತಲೆ ಎತ್ತಿದವರು ಹೊಯ್ಸಳರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಸೊಸೆವೂರು (ಈಗಿನ ಅಂಗಡಿ) ಹಳ್ಳಿಯ ಬಳಿ ಈ ಮನೆತನದ ಮೂಲ ಪುರುಷ ಸಳನು ಜೈನಮುನಿಯಾದ ಸುದತ್ತ ಮುನಿಯ ಆದೇಶದಂತೆ ಹುಲಿಯೊಡನೆ ಕಾದಾಡಿ ಅದನ್ನು ಕೊಂದು ‘ಹೊಯ್‍ಸಳ’ ಎನಿಸಿಕೊಂಡು ಈ ವಂಶದ ಸ್ಥಾಪಕನಾದನು. ಇವರು ಸಾಹಿತ್ಯ, ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪ, ನೀರಾವರಿ ಇವೆಲ್ಲಕ್ಕೂ ವಿಶೇಷವಾಗಿ ಕೊಡುಗೆ ನೀಡಿದವರು. ನೃಪಕಾಮ, ಎರೆಯಂಗ, ಬಲ್ಲಾಳರ ನಂತರ ಹೊಯ್ಸಳರ ಪ್ರಮುಖ ರಾಜನಾದವನು ವಿಷ್ಣುವರ್ಧನ. ಈ ವಂಶದ ಶ್ರೇಷ್ಠ ದೊರೆಯಾದ ಈತನು ಚೋಳರಿಂದ ಗಂಗವಾಡಿಯನ್ನು ಗೆದ್ದು ‘ತಲಕಾಡುಗೊಂಡ’ ಎಂಬ ಬಿರುದು ಪಡೆದನು. ಈ ವಿಜಯದ ನೆನಪಿಗಾಗಿ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯವನ್ನು ಹಾಗೂ ಬೇಲೂರಿನ ಚೆನ್ನಕೇಶವ (ವಿಜಯ ನಾರಾಯಣ) ದೇವಾಲಯವನ್ನು ಕಟ್ಟಿಸಿದನು. ರಾಜ್ಯವನ್ನು ವಿಸ್ತರಿಸಲು ಪ್ರಯತ್ನಿಸಿ ಚಾಲುಕ್ಯರ 6ನೇ ವಿಕ್ರಮಾದಿತ್ಯನಿಂದ ಸೋತನು. ರಾಮಾನುಜಾಚಾರ್ಯರು ತಮ್ಮ ವಿಶಿಷ್ಟಾದ್ವೈತ ತತ್ವವನ್ನು ಚೋಳ ರಾಜ್ಯದಲ್ಲಿ ಪ್ರಚಾರ ಮಾಡಲಾಗದೇ ಬಿಟ್ಟಿದೇವನ (ವಿಷ್ಣುವರ್ಧನ) ಆಶ್ರಯದಲ್ಲಿ ಬಂದು ನೆಲೆ ನಿಂತು ಕರ್ನಾಟಕದಾದ್ಯಂತ ಪ್ರಚಾರ ಮಾಡಿದರು. ಮೂರನೇ ಬಲ್ಲಾಳನ ಕಾಲದಲ್ಲಿ ಈ ರಾಜ್ಯವು ಕ್ಷೀಣಿಸಿತು. ಇದೇ ವೇಳೆಯಲ್ಲೇ ವಿಜಯನಗರ ಸಾಮ್ರಾಜ್ಯವು ಅಧಿಕಾರಕ್ಕೆ ಬಂದಿತು.
ಹೊಯ್ಸಳರ ಕೊಡುಗೆಗಳು
ಆಡಳಿತ
ಹೊಯ್ಸಳರು ಪ್ರಾಂತ್ಯಾಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಆಡಳಿತವನ್ನು ಯುವರಾಜ, ರಾಣಿ ಮತ್ತು ಅರಸುಮನೆತನದವರಿಗೆ ಕೊಡಲಾಗುತ್ತಿತ್ತು. ನಾಡು ಮತ್ತು ವಿಷಯಗಳ ಆಡಳಿತವನ್ನು ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಹಳ್ಳಿಗಳಲ್ಲಿ ಗೌಡ, ಶಾನುಭೋಗ, ತಳವಾರ ಮುಂತಾದ ಸರಕಾರದ ಪ್ರತಿನಿಧಿಗಳಿರುತ್ತಿದ್ದರು. ಕೃಷಿಗೆ ಬೆಂಬಲ ಸೂಚಿಸುವ ಸಲುವಾಗಿ ಹೊಯ್ಸಳರು ಶಾಂತಿಸಾಗರ, ಬಲ್ಲಾಳರಾಯ ಸಮುದ್ರ, ವಿಷ್ಣು ಸಮುದ್ರ ಮುಂತಾದ ನೂರಾರು ಕೆರೆಗಳನ್ನು ಕಟ್ಟಿಸಿದರು. ಪಟ್ಟಣಗಳಲ್ಲಿ ಕಸುಬುದಾರರ, ವೈಣಿಕರ ಶ್ರೇಣಿಗಳಿದ್ದವು. ಭೂಕಂದಾಯವು ರಾಜ್ಯದ ಬಹುಮುಖ್ಯ ಆದಾಯವಾಗಿತ್ತು. ಸಮಾಜದ ವೈಶಿಷ್ಟ್ಯತೆ ಎಂದರೆ ಅರಸನಿಗೆ ‘ಗರುಡ’ರೆಂಬ ವಿಶೇಷ ಅಂಗರಕ್ಷಕ ದಳವಿರುತ್ತಿತ್ತು. ಅವರು ರಾಜನು ಮರಣ ಹೊಂದಿದಾಗ ತಾವೂ ಪ್ರಾಣತ್ಯಾಗ ಮಾಡುತ್ತಿದ್ದರು.
ಶಿಕ್ಷಣ ಮತ್ತು ಸಾಹಿತ್ಯ
ಹೊಯ್ಸಳರ ಕಾಲದಲ್ಲಿ ಜೈನ, ಬೌದ್ಧ, ಶೈವ, ವೈಷ್ಣವ, ವೀರಶೈವ, ಶ್ರೀ ವೈಷ್ಣವ ಮತಗಳು ಪ್ರಚಲಿತವಾಗಿದ್ದವು ಅಗ್ರಹಾರಗಳು, ಮಠಗಳು, ದೇವಾಲಯಗಳು ಶಿಕ್ಷಣದ ಕೇಂದ್ರಗಳಾಗಿದ್ದವು. ಮೇಲುಕೋಟೆ, ಸಾಲಗಾಮೆ, ಅರಸೀಕೆರೆ ಮುಂತಾದವು ಗಣ್ಯ ಶಿಕ್ಷಣ ಕೇಂದ್ರಗಳಾಗಿದ್ದವು. ವೇದ, ವೇದಶಾಸ್ತ್ರ, ಕನ್ನಡ, ಸಂಸ್ಕೃತಗಳ ಅಧ್ಯಯನವು ನಡೆಯುತ್ತಿತ್ತು. ಕನ್ನಡ ಸಾಹಿತ್ಯವು ವಿಪುಲವಾಗಿ ಬೆಳೆಯಿತು. ರುದ್ರಭಟ್ಟನು ‘ಜಗನ್ನಾಥ ವಿಜಯ’ವನ್ನು ಕವಿಚಕ್ರವರ್ತಿ ಜನ್ನನು ‘ಯಶೋಧರ ಚರಿತೆ’ಯನ್ನು, ಹರಿಹರನು ‘ಗಿರಿಜಾ ಕಲ್ಯಾಣ’ ಎಂಬ ಚಂಪೂಕಾವ್ಯವನ್ನು, ರಾಘವಾಂಕನು ‘ಹರಿಶ್ಚಂದ್ರ ಕಾವ್ಯ’ ಹಾಗೂ ಕೇಶೀರಾಜನು ‘ಶಬ್ದಮಣಿ ದರ್ಪಣ’ವನ್ನು ರಚಿಸಿದ್ದಾರೆ. ಸಂಸ್ಕೃತದಲ್ಲೂ ರಾಮಾನುಜಾಚಾರ್ಯರ ಶ್ರೀಭಾಷ್ಯ, ಪರಾಶರಭಟ್ಟರ ಶ್ರೀ ಗುಣ ರತ್ನಕೋಶ ಮುಂತಾದವುಗಳು ರಚಿತವಾದವು.
ಶಿಲ್ಪಕಲೆ
ಹೊಯ್ಸಳರ ಶಿಲ್ಪಕಲೆ ಜಗದ್ವಿಖ್ಯಾತವಾದುದು. ಬಳಪದ ಮೃದು ಕಲ್ಲಿನಿಂದ ಹೊಯ್ಸಳರು ಅಸಂಖ್ಯಾತ ದೇವಾಲಯಗಳನ್ನು ರಚಿಸಿದರು. ಇವರ ದೇವಾಲಯಗಳಲ್ಲಿ ನಕ್ಷತ್ರಾಕಾರದ ಗರ್ಭಗೃಹ, ಉಪಪೀಠ (ಜಗತಿ), ಭಿತ್ತಿ ಅಲಂಕರಣ, ಶಿಖರ ಹಾಗೂ ಕಂಬಗಳೆಂಬ ಐದು ಲಕ್ಷಣಗಳನ್ನು ನೋಡಬಹುದು.ಬೇಲೂರಿನ ಚೆನ್ನಕೇಶವ ದೇವಾಲಯದ ಕಂಬಗಳ ಚಾಚುಪೀಠಗಳಲ್ಲಿ ಸುಂದರ ಮದನಿಕೆಯರ ವಿಗ್ರಹಗಳಿವೆ. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ದಂಡನಾಯಕ ಕೇತಮಲ್ಲನು ಕಟ್ಟಿಸಿದನು. ಸೋಮದಂಡ ನಾಯಕನು ಕಟ್ಟಿಸಿದ ಸೋಮನಾಥಪುರದ ಕೇಶವ ದೇವಾಲಯವು ಪ್ರಸಿದ್ಧವಾದುದು. ಇದಲ್ಲದೆ ತಲಕಾಡು, ಅರಸೀಕೆರೆ, ಗೋವಿಂದನಹಳ್ಳಿ, ದೊಡ್ಡಗದ್ದವಳ್ಳಿ, ಭದ್ರಾವತಿ, ಶ್ರವಣಬೆಳಗೊಳ ಮುಂತಾದೆಡೆ ಅನೇಕ ದೇವಾಲಯಗಳೂ, ಬಸದಿಗಳೂ ಇವೆ. ಇವೆಲ್ಲವೂ ಅತಿ ಸೂಕ್ಷ್ಮ ಕುಸುರಿ
ಕೆತ್ತನೆಗೆ ಹೆಸರುವಾಸಿಯಾಗಿವೆ. ವಾಸ್ತುಶಿಲ್ಪಗಳಲ್ಲಿ ಅಳಿಸಲಾಗದ ಪ್ರಭಾವ ಬೀರಿವೆ. ಹೊಯ್ಸಳರ ಕಾಲದಲ್ಲಿ ದಾಸೋಜ, ಚಾವಣ, ಜಕಣ, ಮಲ್ಲತಮ್ಮ,
ಕೇದಾರೋಜ ಮುಂತಾದ ಖ್ಯಾತ ಶಿಲ್ಪಿಗಳನ್ನು ಹೆಸರಿಸಬಹುದು.