ಭಾರತದ ವಾಯುಗುಣ(Indian Climate)

 

ಭಾರತವು ವೈವಿಧ್ಯಮಯ ವಾಯುಗುಣಗಳಿಗೆ ನೆಲೆಯಾಗಿದೆ. ಇಲ್ಲಿ ದಕ್ಷಿಣದಲ್ಲಿ ಉಷ್ಣವಲಯದ ವಾಯುಗುಣವಿದ್ದರೆ, ಇನ್ನೊಂದೆಡೆ ಉತ್ತರದಲ್ಲಿ ಆಲ್ಪೈನ್ (ಪರ್ವತ
ಮಾದರಿ) ವಾಯುಗುಣ ಕಂಡುಬರುತ್ತದೆ.ಈ ದೇಶದ ವಾಯುಗುಣವು ಹಿಮಾಲಯ ಮತ್ತು ಥಾರ್ ಮರುಭೂಮಿಗಳಿಂದ ಅತ್ಯಂತ ಪ್ರಭಾವಿತವಾಗಿದೆ. ಹಿಮಾಲಯ
ಮತ್ತು ಪಾಕಿಸ್ತಾನದಲ್ಲಿನ ಹಿಂದೂ ಕುಶ್ ಪರ್ವತಗಳು ಮಧ್ಯ ಏಷ್ಯಾದಿಂದ ಬೀಸುವ ಶೀತಲ ಮಾರುತುಗಳನ್ನು ತಡೆಯುವದರಿಂದ, ಭಾರತವು ಇದೇ ಅಕ್ಷಾಂಶದಲ್ಲಿರುವ
ಇತರೆ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಥಾರ್ ಮರುಭೂಮಿಯು, ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳಲ್ಲಿ ಉಂಟಾಗುವ ಭಾರತದ ಬಹುಭಾಗ ಮಳೆಗೆ ಕಾರಣವಾದ ತೇವಾಂಶಭರಿತ ನೈಋತ್ಯ ಮಾರುತಗಳನ್ನು ಭಾರತದೆಡೆಗೆ ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉಷ್ಣವಲಯದ ತೇವಾಂಶಭರಿತ ವಾಯುಗುಣ ಉಷ್ಣವಲಯದ ಮಳೆಬೀಳುವ ವಾಯುಗುಣದ ಪ್ರದೇಶಗಳು ನಿರಂತರ ಬೆಚ್ಚಗಿದ್ದು, ಸಾಮಾನ್ಯವಾಗಿ ಅಲ್ಲಿನ ಉಷ್ಣಾಂಶ 18°C ಗಿಂತ ಕಡಿಮೆಯಾಗುವದಿಲ್ಲ. ಉಷ್ಣವಲಯದ ತೇವಾಂಶಭರಿತ ವಾಯುಗುಣ ಪ್ರದೇಶಗಳು ಅತಿ ಹೆಚ್ಚು ತೇವಾಂಶವನ್ನು ಹೊಂದಿರುತ್ತವೆ. ಮಲಬಾರ್ ತೀರ, ಪಶ್ಚಿಮ ಘಟ್ಟಗಳು, ದಕ್ಷಿಣ ಅಸ್ಸಾಂ ಮತ್ತು ದ್ವೀಪ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಅಂಡಮಾನ್ - ನಿಕೋಬಾರ್ ಗಳಲ್ಲಿ ಇಂತಹ ಹವಾಗುಣ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ವಾರ್ಷಿಕ
ಸರಾಸರಿ 2೦೦೦ ಮಿ.ಮೀ ಗಿಂತಲೂ ಹೆಚ್ಚು ಮಳೆಯಗುತ್ತದೆ. ಇಲ್ಲಿ ಬಹು ಅಂಶ ಮಳೆ ಮೇ ಮತ್ತು ನವೆಂಬರ್ ತಿಂಗಳುಗಳ ಮಧ್ಯ ಉಂಟಾದರೂ ಇದು ಇಲ್ಲಿನ ಸಸ್ಯ ವರ್ಗ ವರ್ಷವಿಡೀ ಹಚ್ಚ ಹಸಿರಾಗಿರುವಷ್ಟು ತೇವಾಂಶವನ್ನು ವದಗಿಸುತ್ತದೆ. ವ್ಯಾಪಕವಾಗಿ ಸುರಿಯುವ ಮಾನ್ಸೂನ್ ಮಳೆಯಿಂದಾಗಿ ಇಲ್ಲಿ ಅತ್ಯಧಿಕ ಜೈವಿಕ ವೈವಿಧ್ಯತೆ ಕಂಡುಬರುತ್ತದೆ. ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣ ಉಷ್ಣವಲಯದ ತೇವಾಂಶಭರಿತ ಪ್ರದೇಶಗಳಿಗಿಂತ ಗಮನಾರ್ಹವಾಗಿ ಒಣ ಹವೆ ಹೊಂದಿದ್ದು,ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣವು ಪಶ್ಚಿಮ ಘಟ್ಟಗಳ ಮಳೆ ನೆರಳು ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಪರ್ಯಾಯ ದ್ವೀಪದ ಬಹುತೇಕ ಭಾಗಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಛಳಿಗಾಲ ಮತ್ತು ಬೇಸಿಗೆ ಕಾಲಗಳು ಅತ್ಯಂತ ವಣ ಹವೆ ಹೊಂದಿದ್ದು, ಬೇಸಿಗೆ ಕಾಲದಲ್ಲಿ ಉಷ್ಣತೆ
ಅತ್ಯಂತ ಹೆಚ್ಚಾಗಿರುತ್ತದೆ. ಮೇ ತಿಂಗಳಿನಲ್ಲಿ ಮೈದಾನ ಪ್ರದೇಶಗಳಲ್ಲಿ ಉಷ್ಣತೆ 5೦°C ಗಿಂತ ಹೆಚ್ಚಾಗುವ ಸಂಭವವಿದ್ದು, ಉಷ್ಣ ಹವೆಯಿಂದಾಗಿ ಹಲವಾರು ಜನರ
ಪ್ರಾಣಕ್ಕೆ ಅಪಾಯವುಂಟಾಗುತ್ತದೆ.ಇಲ್ಲಿ ಮಳೆಗಾಲವು ಜೂನ್ ಮತ್ತು ಸೆಪ್ಟಂಬರ್ ತಿಂಗಳುಗಳ ಮಧ್ಯ ಕಂಡುಬರುತ್ತದೆ. ಈ ಕಾಲದಲ್ಲಿ ಈ ಪ್ರದೇಶದಲ್ಲಿ ಸರಾಸರಿ 750-1500 ಮಿ.ಮೀ ಮಳೆ ಸಂಭವಿಸುತ್ತದೆ. ಸಾಕಷ್ಟು ಮಾನ್ಸೂನ್ ಮಳೆಯ ಕಾರಣ, ಕೋಪೆನ್ ಪದ್ಧತಿಯ ಪ್ರಕಾರ ಈ ಹವಾಮಾನದ ಉಪಮಾದರಿ ಕೇವಲ ಭಾರತದಲ್ಲಿ ಮಾತ್ರ ಕಂಡು ಬರುತ್ತದೆ. ಶಕ್ತಿಶಾಲಿ ಪ್ರತಿಚಕ್ರವಾತ ಮತ್ತು ಮಧ್ಯ ಏಷ್ಯಾದ ಎತ್ತರದ ಪ್ರದೇಶಗಳಿಂದ ಬೀಸುವ ಶೀತಲ ಮಾರುತಗಳಿಂದಾಗಿ ಚಳಿಗಾಲದಲ್ಲಿ ಅತಿ ಕಡಿಮೆ ಮಳೆ ಬೀಳುತ್ತದೆ. ಚಳಿಗಾಲದಲ್ಲಿ ಮೆಡಿಟರೇನಿಯನ್ ಪ್ರದೇಶದಿಂದ ಬೀಸುವ ಆವರ್ತಮಾರುತಗಳಿಂದ(Western Disturbances) ಕೆಲವೊಮ್ಮೆ ಮಳೆ ಮತ್ತು ಹಿಮಪಾತ ಉಂಟಾಗುತ್ತವೆ. ಬೇಸಿಗೆಯಲ್ಲಿ ಬಹುಪಾಲು ಮಳೆ ಪ್ರಬಲ ಗುಡುಗು ಮಿಂಚುಗಳಿಂದ ಕೂಡಿದ ಬಿರುಗಾಳಿ ಮಳೆಯಿಂದಾಗಿ ಸಂಭವಿಸುವುದು. ಮುಖ್ಯವಾಗಿ ಮನ್ಸೂನ್ ಮಾರುತಗಳಿಂದಾಗಿ ಈ ಭಾಗದ ಪಶ್ಚಿಮದಲ್ಲಿ ಮಳೆ ಬೀಳುತ್ತದೆ. ಈ ಪ್ರದೇಶದ ಸಮುದ್ರದಿಂದ ಅತ್ಯಂತ ದೂರ ಇದ್ದು, ಖಂಡಾತರ ಹವಾಮಾನವನ್ನು ಹೊಂದಿದೆ.

ಉಷ್ಣ ಮತ್ತು ಸಮಶೀತೋಷ್ಣವಲಯಗಳನ್ನು ಬೇರ್ಪಡಿಸುವ ಮಕರ
ಸಂಕ್ರಾಂತಿವೃತ್ತವು ದೇಶದ ಮಧ್ಯಭಾಗದಿಂದಹಾದುಹೋಗುತ್ತದಾದರೂ,
ಬಹುತೇಕ ಭಾರತದ ವಾಯುಗುಣ ಉಷ್ಣವಲಯದ ಮಾನ್ಸೂನ ವಾಯುಗುಣವಾಗಿದೆ.
ಭಾರತದವಾರ್ಷಿಕ ವಾಯುಗುಣವನ್ನು ನಾಲ್ಕುಋತುಗಳನ್ನಾಗಿ ವಿಂಗಡಿಸಬಹುದು.ಅವೇನೆಂದರೆ
(1)ಚಳಿಗಾಲ : ಜನವರಿ-ಫೆಬ್ರವರಿ
(2) ಬೇಸಿಗೆಕಾಲ : ಮಾರ್ಚ- ಮೇ
(3) ನೈಋತ್ಯ ಮಾನ್ಸೂನ್ ಅಥವಾ ಮಳೆಗಾಲ
(4) ಈಶಾನ್ಯ ಮಾನ್ಸೂನ್ ಅಥವಾ ನಿರ್ಗಮನ ಮಾನ್ಸೂನ್ ಕಾಲ.

ಮುಖ್ಯ ವಲಯಗಳು


ಕೋಪೆನ್ ಪದ್ಧತಿಯ ಪ್ರಕಾರ ಭಾರತದ ವಾಯುಗುಣವನ್ನು ಆರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು. ಅವೆಂದರೆ
(1)ಉಷ್ಣವಲಯದ ತೇವಾಂಶಭರಿತ ವಾಯುಗುಣ
(2) ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣ
(3) ಉಷ್ಣವಲಯದ ಅರೆ ಶುಷ್ಕ ವಾಯುಗುಣ
(4) ಮರುಬೂಮಿ (ಶುಷ್ಕ) ವಾಯುಗುಣ
(5)ಉಪ ಉಷ್ಣವಲಯದ ಮಳೆಬೀಳುವ ವಾಯುಗುಣ
(6) ಆಲ್ಪೈನ್ (ಪರ್ವತ ಮಾದರಿ) ವಾಯುಗುಣ.

ಬಹುತೇಕ ಉಷ್ಣವಲಯದ ಪ್ರದೇಶಗಳಂತೆ ಭಾರತದ
ವಾಯುಗುಣವೂ ಕೂಡ ಅತ್ಯಂತ ಅಸ್ಠಿರವಾಗಿದ್ದು, ಆಗಾಗ್ಗೆ ಬರ,
ಪ್ರವಾಹ, ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳು
ಸಂಭವಿಸುತ್ತಿರುತ್ತವೆ. ಒಂದು ವ್ಯಾಪಕವಾದ ಒಮ್ಮತಾಭಿಪ್ರಾಯದಂತೆ ಜಾಗತಿಕ
ತಾಪಮಾನದ ಹೆಚ್ಚಳ ಮತ್ತು ಬದಲಾಗುತ್ತಿರುವ
ಸಸ್ಯವಲಯಗಳಿಂದಾಗಿ ಪ್ರಾಕೃತಿಕ ವಿಕೋಪಗಳ ಆವರ್ತನ
ಬದಲಾಗುತ್ತಿದ್ದು ಅವು ಮತ್ತಷ್ಟು ಹಾನಿಕಾರಕವಾಗುವ ಸಂಭವವಿದೆ.