ಭಾರತದ ಮಣ್ಣುಗಳು(Indian Soils)

 

ಮಣ್ಣು ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾಗಿದೆ. ಭಾರತವು ವಿವಿಧ ಬಗೆಯ ಮಣ್ಣುಗಳನ್ನು
ಒಳಗೊಂಡಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಅವುಗಳು ಉತ್ಪತ್ತಿಯಾಗಿರುವ ಮೂಲ ಶಿಲೆಗಳು
ಮತ್ತು ವಾಯುಗುಣಗಳ ವ್ಯತ್ಯಾಸವೇ ಆಗಿದೆ. ಕೆಲವು ಮಣ್ಣುಗಳು ವಿವಿಧ ಕರ್ತೃಗಳಿಂದ ಸಾಗಿಸಲ್ಪಟ್ಟು
ಸಂಚಯಿತಗೊಂಡಿವೆ. ಮಣ್ಣು ಸಸ್ಯ ಮತ್ತು ಪ್ರಾಣಿಗಳ ‘ಕೊಳೆತ ಜೈವಿಕಾಂಶ’ವನ್ನು ಒಳಗೊಂಡಿದೆ.
ಭಾರತದಲ್ಲಿ ಕಂಡು ಬರುವ ಮಣ್ಣನ್ನು ಆರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದ್ದು, ಅವುಗಳೆಂದರೆ

1) ಮೆಕ್ಕಲು ಮಣ್ಣು


ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣಿಗೆ
ಮೆಕ್ಕಲು ಮಣ್ಣು ಎನ್ನುವರು. ಭಾರತದಲ್ಲಿ ಮೆಕ್ಕಲು ಮಣ್ಣು ಇತರ ಎಲ್ಲಾ ಬಗೆಯ ಮಣ್ಣುಗಳಿಗಿಂತ
ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವುದು. ಈ ಮಣ್ಣು ಸುಮಾರು 7.7 ದಶಲಕ್ಷ ಚ.ಕಿ.ಮೀ
ಪ್ರದೇಶದಲ್ಲಿ ಕಂಡುಬರುವುದು. ಇದು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಸಾ,
ಪಂಜಾಬ, ಹರಿಯಾಣ ಅಸ್ಸಾಂ ರಾಜ್ಯದ ಬ್ರಹ್ಮಪುತ್ರಾ ಕಣಿವೆಯ ಭಾಗವನ್ನು ಆವರಿಸಿದೆ.
ಗೋಧಿ, ಭತ್ತ, ಕಬ್ಬು, ಹತ್ತಿ ಮತ್ತು ಸೆಣಬು ಈ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳಾಗಿವೆ.

2) ಕಪ್ಪು ಮಣ್ಣು


ಕಪ್ಪು ಮಣ್ಣನ್ನು `ರೇಗಾರ್ ಮಣ್ಣು’ ಎಂತಲೂ ಕರೆಯುತ್ತಾರೆ. ಈ ಮಣ್ಣು ಹತ್ತಿ
ಬೆಳೆಗೆ ಬಹು ಸೂಕ್ತವಾಗಿದೆ. ಇದು ಸುಮಾರು 5.45 ಲಕ್ಷ ಚ.ಕಿ.ಮೀ ಪ್ರದೇಶದಲ್ಲಿ ಕಂಡುಬರುತ್ತದೆ. ಈ ಮಣ್ಣು ಅಗ್ನಿ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗಿದೆ.ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಸಹ ಕರೆಯುತ್ತಾರೆ. ಈ ಮಣ್ಣು ಫಲವತ್ತಾಗಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಇದು ಮಹಾರಾಷ್ಟ್ರ, ಗುಜರಾತ್,ಮಧ್ಯಪ್ರದೇಶ, ಆಂಧ್ರ ಪ್ರದೇಶದ ಪಶ್ಚಿಮ ಭಾಗ ಮತ್ತು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಮಣ್ಣು ಕಬ್ಬಿಣ ಸುಣ್ಣ ಹಾಗೂ ಮೆಗ್ನೇಶಿಯಂ ಕಾರ್ಬೋನೇಟ್‍ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ, ಒಣಬೇಸಾಯಕ್ಕೆ ಸೂಕ್ತವಾಗಿದ್ದು ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ, ಹೊಗೆಸೊಪ್ಪು,
ಎಣ್ಣೆ ಕಾಳು, ನಿಂಬೆ, ದ್ರಾಕ್ಷಿ ಈ ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ.

3) ಕೆಂಪು ಮಣ್ಣು


ಕೆಂಪು ಮಣ್ಣು ಪರ್ಯಾಯ ಪ್ರಸ್ಥಭೂಮಿಯಲ್ಲಿ ಹೆಚ್ಚು ವಿಸ್ತಾರವಾಗಿ ಹರಡಿರುವ
ಮಣ್ಣಿನ ಪ್ರಕಾರವಾಗಿದೆ. ಇದು ಸುಮಾರು 5.20 ಲಕ್ಷ ಚ.ಕಿ.ಮೀ
ಭೂ ಪ್ರದೇಶದಲ್ಲಿ ಕಂಡುಬರುವುದು. ಇದು ದಕ್ಷಿಣದಲ್ಲಿ ಕನ್ಯಾಕುಮಾರಿಯಿಂದ ಉತ್ತರದಲ್ಲಿ
ಮಧ್ಯಪ್ರದೇಶದ ಝಾನ್ಸಿಯವರೆಗೆ ಹಬ್ಬಿದೆ. ಪಶ್ಚಿಮದಲ್ಲಿ ಗುಜರಾತಿನ
ಕಛ್ ಪ್ರದೇಶದಿಂದ ಪೂರ್ವದಲ್ಲಿ ಜಾರ್ಖಂಡನ ರಾಜಮಹಲ್
ಬೆಟ್ಟಗಳವರೆಗೂ ಹರಿಡಿದೆ. ಕೆಂಪು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ರಾಗಿ,
ಹೊಗೆಸೊಪ್ಪು ಮತ್ತು ಎಣ್ಣೆಕಾಳುಗಳು ಹಾಗೂ ನೀರಾವರಿಯ
ಸೌಲಭ್ಯವಿರುವ ಪ್ರದೇಶಗಳಲ್ಲಿ ಭತ್ತ, ಕಬ್ಬು, ಹತ್ತಿ ಮುಂತಾದವುಗಳನ್ನು ಬೆಳೆಯುವರು.

4) ಜಂಬಿಟ್ಟಿಗೆ (ಲ್ಯಾಟ್‍ರೈಟ್) ಮಣ್ಣು


ಜಂಬಿಟ್ಟಿಗೆ ಮಣ್ಣು ಸಾಮಾನ್ಯವಾಗಿ 200 ಸೆಂ.ಮೀಗಳಿಗಿಂತ
ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ನಿರ್ಮಿತಗೊಂಡಿದೆ. ಅಧಿಕ ಮಳೆಯಿಂದ ಮಣ್ಣಿನಲ್ಲಿರುವ ಲವಣಾಂಶಗಳು
ತೊಳೆಸಲ್ಪಟ್ಟು ಕೇವಲ ಕಬ್ಬಿಣದ ಆಕ್ಸೈಡ್ ಮತ್ತು ಅಲ್ಯುಮಿನಿಯಂ ಹೆಚ್ಚಾಗಿರುವುದರಿಂದ ಈ ಮಣ್ಣು ಕೆಂಪು ಬಣ್ಣವನ್ನು ಹೊಂದಿರುವುದು. ಜಂಬಿಟ್ಟಿಗೆ ಮಣ್ಣಿನಲ್ಲಿ ಫಲವತ್ತತೆ ಅತಿ ಕಡಿಮೆ ಸಾರಜನಕ ಮತ್ತು ಲವಣಗಳ ಕೊರತೆಯನ್ನು ಈ ಮಣ್ಣಿನಲ್ಲಿ ಕಾಣಬಹುದು. ಇದು ಭಾರತದಲ್ಲಿ ಸುಮಾರು 2.48 ಲಕ್ಷ ಚ.ಕಿ.ಮೀ
ಪ್ರದೇಶದಲ್ಲಿ ಕಂಡು ಬರುವುದು. ಪಶ್ಚಿಮ ಘಟ್ಟಗಳು, ವಿಂಧ್ಯ, ಸಾತ್ಪುರ ಮತ್ತು ರಾಜಮಹಲ್ ಬೆಟ್ಟಗಳು
ಹಾಗೂ ಪೂರ್ವಾಚಲ ಪ್ರದೇಶಗಳಲ್ಲಿ ಈ ಮಣ್ಣು ವ್ಯಾಪಕವಾಗಿ ಹರಡಿದೆ. ಇದು ಕಾಫಿ ಟೀ
ಮುಂತಾದ ತೋಟಗಾರಿಕೆ ಬೆಳೆಗಳಿಗೆ ಬಹು ಉಪಯುಕ್ತವಾಗಿದೆ.

5)ಮರುಭೂಮಿ ಮಣ್ಣು


ಅತಿ ಕಡಿಮೆ ಮಳೆ ಮತ್ತು ಅಧಿಕ ಉಷ್ನಂಶದ ಪ್ರದೇಶದಲ್ಲಿ ಮರಳು
ಮಣ್ಣು ನಿರ್ಮಾಣಗೊಳ್ಳುತ್ತದೆ. ಭಾರತದಲ್ಲಿ ಈ ಮಣ್ಣು ಸುಮಾರು 1.4 ಲಕ್ಷ ಚ.ಕಿ.ಮೀ ಪ್ರದೇಶದಲ್ಲಿ
ಹರಡಲ್ಪಟ್ಟಿದೆ. ಸಜ್ಜೆ, ಖರ್ಜೂರ ಇತ್ಯಾದಿಗಳನ್ನು ಬೆಳೆಯಬಹುದು. ಭಾರತದ ವಾಯವ್ಯ ಭಾಗದ
ರಾಜಸ್ತಾನ, ಪಂಜಾಬ ಮತ್ತು ಹರಿಯಾಣ ರಾಜ್ಯಗಳಲ್ಲಿ ಹಾಗೂ ಪಶ್ಚಿಮದ ಗುಜರಾತಿನ ಕಛ್ ಪ್ರದೇಶ
ಹಾಗೂ ಅರಾವಳಿ ಶ್ರೇಣಿಯ ಪಶ್ಚಿಮ ಭಾಗದಲ್ಲಿ ಹಂಚಿಕೆಯಾಗಿದೆ.

6) ಪರ್ವತ ಮಣ್ಣು


ಕೊಳೆತ ಜೈವಿಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಈ ಮಣ್ಣು ಹೊಂದಿದೆ.
ಪರ್ವತಗಳಲ್ಲಿ ನಿರ್ಮಾಣಗೊಂಡ ಈ ಮಣ್ಣು ಇಳಿಜಾರಿನ ಮೈದಾನಕ್ಕೆ ಇಳಿದು ಬರುತ್ತದೆ. ಇದು
ಸಾರಜನಕ ಮತ್ತು ಸಾವಯವ ಅವಶೇಷಗಳನ್ನು ಹೆಚ್ಚಾಗಿ ಒಳಗೊಂಡಿದ್ದು, ಕಾಫಿ, ಚಹಾ, ಸಾಂಬಾರ
ಪದಾರ್ಥಗಳು ಮತ್ತು ಹಣ್ಣುಗಳಿಗೆ ಸೂಕ್ತವಾಗಿದೆ. ಹಿಮಾಲಯದ ಪಾದ ಬೆಟ್ಟಗಳು, ಜಮ್ಮು ಮತ್ತು
ಕಾಶ್ಮೀರ,ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಪರ್ವತ ಪ್ರದೇಶಗಳಲ್ಲಿ
ಈ ಮಣ್ಣು ಹಂಚಲ್ಪಟ್ಟಿದೆ.

ಮಣ್ಣಿನ ಸವೆತ :


ಭೂ ಮೇಲ್ಮೈಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ
ಸ್ಥಳಾಂತರ ಹೊಂದುವ ಕ್ರಿಯೆಯನ್ನೇ “ಮಣ್ಣಿನ ಸವೆತ” ಅಥವಾ “ಭೂ ಸವೆತ” ಎನ್ನುತ್ತಾರೆ.

ಮುಖ್ಯ ಕಾರಣಗಳು


1)ಅರಣ್ಯಗಳ ನಾಶ,
2) ಸಾಕು ಪ್ರಾಣಿಗಳನ್ನು ಮೇಯಿಸುವುದು,
3) ಅವೈಜ್ಞಾನಿಕ ಬೇಸಾಯ,
4) ಅಧಿಕ ನೀರಾವರಿ ಬಳಕೆ

ಮಣ್ಣಿನ ಸವೆತದ ಪರಿಣಾಮಗಳು


1) ಮಣ್ಣಿನ ಸವೆತದಿಂದ ನದಿಗಳಲ್ಲಿ ಹೂಳುತುಂಬಿ ಪ್ರವಾಹ ಉಂಟಾಗುತ್ತದೆ.
2) ನದಿಯ ಪಾತ್ರದಲ್ಲಿ
ಹೂಳು ತುಂಬುವುದರಿಂದ ನದಿಗಳು ತಮ್ಮ ಪಾತ್ರವನ್ನು ಬದಲಾಯಿಸುತ್ತವೆ.
3) ಜಲಾಶಯ ಮತ್ತು ಕೆರೆಗಳಲ್ಲಿ ಹೂಳು ತುಂಬುವುದರಿಂದ ನೀರನ್ನು ಸಂಗ್ರಹಿಸುವ ಅವುಗಳ ಸಾಮಥ್ರ್ಯವು ಕಡಿಮೆಯಾಗುವುದು
4) ಭೂಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವುದು. ಇದರಿಂದ
ಸ್ವಾಭಾವಿಕ ಚಿಲುಮೆಗಳು ಬತ್ತಿ ಹೋಗುತ್ತವೆ. ಭಾರತವು ವ್ಯವಸಾಯ ಪ್ರಧಾನವಾದ ರಾಷ್ಟ್ರ ಇದರಿಂದ
ಭೂಸವೆತವು ವ್ಯವಸಾಯದ ಉತ್ಪಾದನೆಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುವುದು. ಆದುದರಿಂದ
ಫಲವತ್ತತೆ ಹಾಗೂ ಉತ್ಪಾದನೆಯನ್ನು ಕಾಪಾಡಲು ಮಣ್ಣಿನ ಸವೆತವನ್ನು ತಡೆಗಟ್ಟುವುದು ಅಗತ್ಯವಾಗಿದೆ.

ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆ


ಮಣ್ಣಿನ ಸವೆತವನ್ನು
ತಡೆಗಟ್ಟುವ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ,
1) ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
2) ಅಡ್ಡ ಬದುಗಳನ್ನು ನಿರ್ಮಿಸುವುದು.
3) ಹಂತ ಹಂತವಾಗಿ ವ್ಯವಸಾಯ ಕ್ಷೇತ್ರಗಳ ನಿರ್ಮಾಣ.
4) ಅರಣ್ಯ ನಾಶವನ್ನು ತಡೆಗಟ್ಟುವುದು ಮತ್ತು ಅರಣ್ಯಗಳ ಬೆಳವಣಿಗೆಯನ್ನು ಪೆÇ್ರೀತ್ಸಾಹಿಸುವುದು.
5) ಪ್ರಾಣಿಗಳನ್ನು ಮೇಯಿಸುವುದನ್ನು ನಿಯಂತ್ರಿಸುವುದು.
6) ನೀರಿನ ಯೋಜಿತ ಬಳಕೆ.
7) ಚೆಕ್ ಡ್ಯಾಮ್‍ಗಳ ನಿರ್ಮಾಣ ಇತ್ಯಾದಿ