ಮಾರುತಗಳು ಮತ್ತು ವಾಯುರಾಶಿ

 

ಭೂಮಿಯ ಮೇಲ್ಮೈಗೆ ಸಮಾನಾಂತರವಾಗಿ ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಚಲಿಸುವ ವಾಯುವನ್ನು ‘ಮಾರುತ’ಗಳೆನ್ನುವರು. ಮಾರುತಗಳು ಭೂಮಿಯ ದೈನಂದಿನ ಚಲನೆ ಮತ್ತು ಒತ್ತಡದ ಹಂಚಿಕೆಯಲ್ಲಿನ ವ್ಯತ್ಯಾಸಗಳಿಂದ ಉಂಟಾಗುತ್ತವೆ. ಮಾರುತವು ಯಾವ ದಿಕ್ಕಿನಿಂದ ಬೀಸುತ್ತದೆ ಎಂಬುದನ್ನು ತಿಳಿಯಲು ‘ಪವನ ದಿಕ್ಸೂಚಿ’ ಉಪಕರಣವನ್ನು ಬಳಸುವರು.

ಮಾರುತಗಳ ವಿಧಗಳು


ಮಾರುತಗಳನ್ನು ನಾಲ್ಕು ಪ್ರಮುಖ ವಿಧಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ನಿರಂತರ ಮಾರುತಗಳು, ನಿಯತಕಾಲಿಕ ಮಾರುತಗಳು, ಸ್ಥಳೀಯ ಮಾರುತಗಳು, ಆವರ್ತ ಮತ್ತು ಪ್ರತ್ಯಾವರ್ತ ಮಾರುತಗಳು.

1. ನಿರಂತರ ಮಾರುತಗಳು


ಇವುಗಳನ್ನು ‘ನಿತ್ಯ ಮಾರುತ’ ಅಥವಾ ಭೂಮಂಡಲಿಯ ಮಾರುತಗಳೆಂದೂ ಸಹ ಕರೆಯುವರು. ಇವು ವರ್ಷದ ಎಲ್ಲಾ ಕಾಲದಲ್ಲಿಯೂ ಬಹುತೇಕ ಒಂದೇ ದಿಕ್ಕಿನಿಂದ ಬೀಸುತ್ತವೆ. ಈ ಮಾರುತಗಳು ವಾಯುಗುಣ ಬದಲಾವಣೆ, ಮರು ಭೂಮಿಗಳ ನಿರ್ಮಾಣ, ನೌಕಾಯಾನದ ಮಾರ್ಗ ಮೊದಲಾದವುಗಳ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ನಿತ್ಯಮಾರುತಗಳಲ್ಲಿ ಮೂರು ವಿಧಗಳಿದ್ದು ಅವುಗಳೆಂದರೆ : ವಾಣಿಜ್ಯ ಮಾರುತಗಳು, ಪ್ರತಿ ವಾಣಿಜ್ಯ ಮಾರುತಗಳು ಹಾಗೂ ಧ್ರುವೀಯ ಮಾರುತಗಳು.

2. ನಿಯತಕಾಲಿಕ ಮಾರುತಗಳು


ಇವುಗಳನ್ನು ಋತು ಮಾರುತಗಳು ಎಂದೂ ಕರೆಯುವರು. ಇವುಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ತದ್ವಿರುದ್ಧ ದಿಕ್ಕಿನಿಂದ ಬೀಸುತ್ತವೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾಹರಣೆಯಾಗಿವೆ.

3. ಸ್ಥಳಿಯ ಮಾರುತಗಳು


ನಿರಂತರ ಮತ್ತು ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ನಾಂಶ, ಒತ್ತಡ, ತೇವಾಂಶಗಳ ವ್ಯತ್ಯಾಸದ ಪರಿಣಾಮವಾಗಿ ಸ್ಥಳೀಯ ಮಾರುತಗಳುಂಟಾಗುತ್ತವೆ. ಇವುಗಳು ಪರ್ವತಶ್ರೇಣಿಗಳು, ಕಣಿವೆಗಳು ಮತ್ತು ಇತರೆ ಎತ್ತರದ ಸ್ಥಳಗಳನ್ನು ಹಾದುಹೋಗುವುದರಿಂದ ಬದಲಾವಣೆಗೊಂಡು ವಾಯು ಪ್ರವಾಹಗಳುಂಟಾಗುತ್ತವೆ.

4. ಆವರ್ತ ಮತ್ತು ಪ್ರತ್ಯಾವರ್ತ ಮಾರುತಗಳು


ಇವುಗಳು ಅನಿಶ್ಚಿತವಾಗಿ ಬೀಸುತ್ತವೆ. ಸಾಮಾನ್ಯವಾಗಿ ಒತ್ತಡದ ಹಂಚಿಕೆಯಲ್ಲಿನ ಅತಿಹೆಚ್ಚು ವ್ಯತ್ಯಾಸದ ಕಾರಣದಿಂದ ಇವು ಬೀಸಲಾರಂಭಿಸುತ್ತವೆ. ಇವುಗಳು ಬೀಸುವ ಅವಧಿ ಅಲ್ಪಕಾಲಿಕವಾದರೂ ಕೆಲವೊಮ್ಮೆ ಇವು ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿಯಾದವು.
ಎ) ಆವರ್ತ ಮಾರುತಗಳು : ಕೆಲವು ಸನ್ನಿವೇಶಗಳಲ್ಲಿ ಅತ್ಯಂತ ಕಡಿಮೆ ಒತ್ತಡ ಕೇಂದ್ರದ ಸುತ್ತಲೂ ಹೆಚ್ಚು ಒತ್ತಡ ಪರಿಸ್ಥಿತಿಯಿರುವುದು. ಇದರಿಂದ ಮಾರುತಗಳು ಸುತ್ತಲಿನ ಹೆಚ್ಚು ಒತ್ತಡ ವಲಯದಿಂದ ಕಡಿಮೆ ಒತ್ತಡ ಕೇಂದ್ರದ ಕಡೆಗೆ ವೃತ್ತಾಕಾರವಾಗಿ ಬೀಸುತ್ತವೆ. ಇವುಗಳೇ ಆವರ್ತ ಮಾರುತಗಳು.
ಬಿ) ಪ್ರತ್ಯಾವರ್ತ ಮಾರುತಗಳು: ಇವುಗಳಲ್ಲಿನ ಪರಿಸ್ಥಿತಿ ಆವರ್ತ ಮಾರುತಗಳಿಗೆ ತದ್ವಿರುದ್ಧ. ಪ್ರತ್ಯಾವರ್ತ ಮಾರುತಗಳು ತಮ್ಮ ಹೆಚ್ಚು ಒತ್ತಡ ಕೇಂದ್ರದಿಂದ ಕಡಿಮೆ ಒತ್ತಡದ ಸುತ್ತಲಿನ ಪ್ರದೇಶದ ಕಡೆಗೆ ವೃತ್ತಾಕಾರವಾಗಿ ಬೀಸುತ್ತವೆ. ಇದರಿಂದ ಸುತ್ತಮುತ್ತಲಿನ ಕಡೆಗೆ ಮಾರುತಗಳು ನಿಧಾನವಾಗಿ ಬೀಸುತ್ತವೆ.